Site icon Vistara News

MLA training: ಶಾಸಕರ ತರಬೇತಿಗೆ ಗಣ್ಯರ ಆಹ್ವಾನದ ಬಗ್ಗೆ ಆಕ್ಷೇಪ; ತಿರುಗೇಟು ನೀಡಿದ ಸ್ಪೀಕರ್‌ ಖಾದರ್

UT Khader

#image_title

ಮಂಗಳೂರು: ರಾಜ್ಯ ವಿಧಾನಸಭೆಗೆ (Karnataka Assembly) ಆಯ್ಕೆಯಾದ 70 ಮಂದಿ ನೂತನ ಶಾಸಕರಿಗಾಗಿ ವಿಧಾನಸಭಾ ಸಚಿವಾಲಯದಿಂದ (Assembly secretariat) ಆಯೋಜನೆಯಾಗಿರುವ ಮೂರು ದಿನಗಳ ತರಬೇತಿ ಶಿಬಿರಕ್ಕೆ (MLA training) ಆಹ್ವಾನಿಸಿರುವ ವ್ಯಕ್ತಿಗಳ ವಿಚಾರದಲ್ಲಿ ಎದ್ದಿರುವ ವಿವಾದಕ್ಕೆ ಸಂಬಂಧಿಸಿ ಸ್ಪೀಕರ್‌ ಯು.ಟಿ. ಖಾದರ್‌ (U.T Khader) ಅವರು ತಮ್ಮ ಸ್ಪಷ್ಟ ಅಭಿಪ್ರಾಯವನ್ನು ತಿಳಿಸಿದ್ದಾರೆ. ಯಾವುದೇ ವಿಚಾರದ ಬಗ್ಗೆ ಈಗಲೇ ಪೂರ್ವಗ್ರಹಪೀಡಿತ ಚರ್ಚೆ ಸರಿಯಲ್ಲ ಎಂದು ಟೀಕಾಕಾರರಿಗೆ ಉತ್ತರಿಸಿದ್ದಾರೆ.

ಶಾಸಕರ ತರಬೇತಿಗೆ ಧಾರ್ಮಿಕ ಮತ್ತು ಆಧ್ಯಾತ್ಮಿಕ ಗುರುಗಳನ್ನು (Religious and spiritual leaders) ಆಹ್ವಾನಿಸಿರುವುದಕ್ಕೆ ಹಲವು ಪ್ರಗತಿಪರ ಚಿಂತಕರು ಮತ್ತು ಕಾಂಗ್ರೆಸ್‌ ಪಕ್ಷದೊಳಗಿನ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜತೆಗೆ ಕೆಲವರು ಸಾಮಾಜಿಕ ಜಾಲತಾಣದಲ್ಲೂ ವಿರೋಧದ ಮಾತು ಆಡಿದ್ದಾರೆ.

ಜೂನ್ 26ರಿಂದ 28ರವರೆಗೆ ನೆಲಮಂಗಲದಲ್ಲಿರುವ ಕ್ಷೇಮವನ ಪ್ರಕೃತಿ ಚಿಕಿತ್ಸಾಲಯದಲ್ಲಿ ಈ ತರಬೇತಿ ನಡೆಯಲಿದ್ದು, ಶಿಬಿರಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಆರ್ಟ್‌ ಆಫ್ ಲಿವಿಂಗ್‌ನ ರವಿಶಂಕರ್ ಗುರೂಜಿ, ರಾಜಯೋಗಿನಿ ಬ್ರಹ್ಮಕುಮಾರಿ ಆಶಾ ದೀದಿ, ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ಹಾಗೂ ಜಮಾತೆ ಇಸ್ಲಾಮಿ ಹಿಂದ್‌ನ ಮುಹಮ್ಮದ್ ಕುಂಙ ಅವರನ್ನು ಪ್ರೇರಣೆಗಾಗಿ ಆಹ್ವಾನಿಸಲಾಗಿದೆ.

ತರಬೇತಿ ಶಿಬಿರಕ್ಕೆ ಆಹ್ವಾನ ನೀಡಿರುವ ಧಾರ್ಮಿಕ ಹಾಗೂ ಆಧ್ಯಾತ್ಮಕ ಗುರುಗಳು ಬಿಜೆಪಿ ಸಿದ್ಧಾಂತಕ್ಕೆ ಹತ್ತಿರವಾಗಿದ್ದವರು ಎನ್ನುವುದು ಕೆಲವರ ಆಕ್ಷೇಪ. ಶಿಕ್ಷಣ ತಜ್ಞ ಗುರುರಾಜ್ ಕರ್ಜಗಿ ಅವರು ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳ ವಿರುದ್ಧವಾಗಿಯೇ ಮಾತನಾಡಿದ್ದರು. ಅವರನ್ನು ಏಕೆ ಆಹ್ವಾನಿಸಿದ್ದು ಸರಿಯಲ್ಲ ಎಂಬ ವಾದವನ್ನು ಮಂಡಿಸಲಾಗುತ್ತಿದೆ. ಡಾ. ಕೆ. ಮರುಳಸಿದ್ದಪ್ಪ ಸೇರಿದಂತೆ ಹಲವು ಪ್ರಗತಿಪರ ಸಾಹಿತಿಗಳು, ಚಿಂತಕರು ಸ್ಪೀಕರ್‌ ಖಾದರ್‌ ಅವರಿಗೇ ಪತ್ರ ಬರೆದು ಮರುಚಿಂತನೆ ನಡೆಸುವಂತೆ ಕೋರಿದ್ದಾರೆ.

ಇದೆಲ್ಲ ವಿಚಾರಗಳಿಗೆ ಸಂಬಂಧಿಸಿದಂತೆ ಸ್ಪೀಕರ್‌ ಯು.ಟಿ ಖಾದರ್‌ ಅವರು ಪ್ರತಿಕ್ರಿಯೆ ನೀಡಿದ್ದು, ತರಬೇತಿ ಶಿಬಿರ ನೋಡಿದ ಬಳಿಕ ಅದರ ಅಭಿಪ್ರಾಯ ಹೇಳಲಿ. ಯಾವುದೇ ವಿಚಾರದ ಬಗ್ಗೆ ಈಗಲೇ ಪೂರ್ವಗ್ರಹಪೀಡಿತ ಚರ್ಚೆ ಸರಿಯಲ್ಲ ಎಂದು ಹೇಳಿದರು.

ಎಲ್ಲ ಹಿರಿಯ ನಾಯಕರು ತರಬೇತಿ ನೀಡಲಿದ್ದಾರೆ

ಮಂಗಳೂರಿನಲ್ಲಿ ಮಾತನಾಡಿದ ಅವರು, ಹೊಸ ಶಾಸಕರಿಗೆ ತರಬೇತಿ ನೀಡಲು ವಿವಿಧ ವಿಷಯ ಇಟ್ಟುಕೊಂಡಿದ್ದೇವೆ. ಎಚ್.ಕೆ.ಪಾಟೀಲ್, ಕೃಷ್ಣ ಬೈರೇಗೌಡ, ಟಿ.ಬಿ. ಜಯಚಂದ್ರ, ಸುರೇಶ್ ಕುಮಾರ್ ಸೇರಿ ಸಂಸದೀಯ ಪಟುಗಳು ತರಬೇತಿ ಕೊಡ್ತಾರೆ. ಮಾಜಿ ಸ್ಪೀಕರ್‌ಗಳು, ಸಿಎಂ ಆಗಿರುವ ಸಿದ್ದರಾಮಯ್ಯ, ಮಾಜಿ ಸಿಎಂಗಳಾದ ಎಚ್‌.ಡಿ. ಕುಮಾರಸ್ವಾಮಿ, ಬಿ.ಎಸ್‌. ಯಡಿಯೂರಪ್ಪ ಅವರು ಕೂಡಾ ಸಂವಿಧಾನಿಕ ನಡೆಗಳ ಬಗ್ಗೆ ತರಬೇತಿ ಕೊಡ್ತಾರೆ. ಹಿರಿಯರು ತಮ್ಮ ರಾಜಕೀಯ ಜೀವನದ ಬಗ್ಗೆಯೂ ಹೇಳ್ತಾರೆ ಎಂದರು.

ಇದನ್ನೂ ಓದಿ: Karnataka Assembly: ಶಾಸಕರಿಗೆ ತರಬೇತಿ ಶಿಬಿರ: ವೀರೇಂದ್ರ ಹೆಗ್ಗಡೆ, ಕರಜಗಿ, ಕುಂಞ‌, ಶ್ರೀಶ್ರೀ ಉಪಸ್ಥಿತಿಗೆ ಕಾಂಗ್ರೆಸ್‌ ವಿರೋಧ

ಅಧ್ಯಾತ್ಮಿಕ ವ್ಯಕ್ತಿಗಳಿಂದ ಪ್ರೇರಣೆ

ಧಾರ್ಮಿಕ ಗುರುಗಳು ಮತ್ತು ಆಧ್ಯಾತ್ಮಿಕ ವ್ಯಕ್ತಿಗಳನ್ನು ನಾವು ಆಹ್ವಾನಿಸಿರುವುದು ಒತ್ತಡರಹಿತ ಕೆಲಸದ ಬಗ್ಗೆ ತಿಳಿಸಲು, ಸಮಾಜದ ಒಳಿತಿನ ಚಿಂತನೆಯನ್ನು ಹೆಚ್ಚಿಸಲು ಎಂದು ಖಾದರ್‌ ಹೇಳಿದರು.

ಈಗ ತರಬೇತಿ ಶಿಬಿರಕ್ಕೆ ಆಹ್ವಾನಿಸಿರುವ ಗಣ್ಯರಲ್ಲಿ ಕೆಲವರು ಬರುವ ಬಗ್ಗೆ ಇನ್ನೂ ದೃಢಪಟ್ಟಿಲ್ಲ. ರವಿಶಂಕರ್‌ ಗುರೂಜಿ ಅವರು ಊರಲ್ಲೇ ಇಲ್ಲ, ಅಮೆರಿಕದಲ್ಲಿದ್ದಾರೆ. ನಾನು ಭೇಟಿ ಆದ ತಕ್ಷಣ ಅವರು ತರಬೇತಿ ಶಿಬಿರಕ್ಕೆ ಬರ್ತಾರೆ ಅಂತ ಅಲ್ಲʼʼ ಎಂದು ಹೇಳಿದ ಅವರು, ಇದರ ಬಗ್ಗೆ ಯಾವುದೇ ವಿಚಾರ ಇದ್ದರೂ ಈಗಲೇ ಮಾತನಾಡುವುದು ಪ್ರಜಾಪ್ರಭುತ್ವದ ನಡೆ ಅಲ್ಲ. ತರಬೇತಿ ಶಿಬಿರ ನೋಡಿದ ಬಳಿಕ ಅದರ ಅಭಿಪ್ರಾಯ ಹೇಳಲಿ ಎಂದು ಹೇಳಿದರು. ಸಾಮಾಜಿಕ ಜಾಲತಾಣದಲ್ಲಿ ಏನೇನೋ ಬರೆಯುವುದು ಅವರವರ ವ್ಯಕ್ತಿತ್ವಕ್ಕೆ ಬಿಟ್ಟ ವಿಚಾರ ಎಂದು ಹೇಳಿದರು ಖಾದರ್‌.

ʻʻನಾನು ಆರೋಗ್ಯ ಸಚಿವ ಆದಾಗಿನಿಂದಲೂ‌ ಶ್ರೀ ಶ್ರೀ ರವಿಶಂಕರ್‌ ಅವರನ್ನು ಭೇಟಿ ಮಾಡುತ್ತಾ ಇದ್ದೇನೆ. ಅವರ ಜತೆ ಮಾನವೀಯವಾದ ಉತ್ತಮ ಸಂಬಂಧ ಹೊಂದಿದ್ದೇನೆ. ಆತ್ಮೀಯತೆ ಇದೆʼʼ ಎಂದು ಅವರು ಹೇಳಿದರು.

Exit mobile version