Site icon Vistara News

MLA Training: ಶಾಸಕರ ತರಬೇತಿಗೆ ಗುರುರಾಜ ಕರ್ಜಗಿ ಬದಲು ಮುಖ್ಯಮಂತ್ರಿ ಚಂದ್ರು?

Mukhyamantri Chandru Gururaj karjagi

#image_title

ಮಂಗಳೂರು: ರಾಜ್ಯ ವಿಧಾನಸಭೆಗೆ (Karnataka Assembly) ಆಯ್ಕೆಯಾದ 70 ಮಂದಿ ನೂತನ ಶಾಸಕರಿಗಾಗಿ ವಿಧಾನಸಭಾ ಸಚಿವಾಲಯದಿಂದ (Assembly secretariat) ಆಯೋಜನೆಯಾಗಿರುವ ಮೂರು ದಿನಗಳ ತರಬೇತಿ ಶಿಬಿರದ (MLA training) ಆಹ್ವಾನಿತರಲ್ಲಿ ಸಣ್ಣ ಬದಲಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಶಿಬಿರಕ್ಕೆ ಆಹ್ವಾನಿತರಾಗಿದ್ದ ಶಿಕ್ಷಣ ತಜ್ಞ ಪ್ರೊ. ಗುರುರಾಜ ಕರ್ಜಗಿ ಅವರ ಬದಲು ಚಿತ್ರ ನಟ ಮುಖ್ಯಮಂತ್ರಿ ಚಂದ್ರು (Mukhyamantri chandru) ಅವರ ಹೆಸರು ಪ್ರಸ್ತಾಪಿಸಲಾಗಿದೆ ಎನ್ನಲಾಗಿದೆ.

ಸ್ಪೀಕರ್‌ ಯು.ಟಿ. ಖಾದರ್‌ (Speaker UT Khader) ಅವರ ನೇತೃತ್ವದಲ್ಲಿ ಜೂನ್ 26ರಿಂದ 28ರವರೆಗೆ ನೆಲಮಂಗಲದಲ್ಲಿರುವ ಕ್ಷೇಮವನ ಪ್ರಕೃತಿ ಚಿಕಿತ್ಸಾಲಯದಲ್ಲಿ ಈ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ. ಶಿಬಿರಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಆರ್ಟ್‌ ಆಫ್ ಲಿವಿಂಗ್‌ನ ರವಿಶಂಕರ್ ಗುರೂಜಿ, ರಾಜಯೋಗಿನಿ ಬ್ರಹ್ಮಕುಮಾರಿ ಆಶಾ ದೀದಿ, ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ಹಾಗೂ ಜಮಾತೆ ಇಸ್ಲಾಮಿ ಹಿಂದ್‌ನ ಮುಹಮ್ಮದ್ ಕುಂಙ ಅವರನ್ನು ಆಹ್ವಾನಿಸಲಾಗಿತ್ತು.

ಆದರೆ, ಈ ಆಹ್ವಾನಿತರ ಬಗ್ಗೆ ಪ್ರಗತಿಪರ ಸಾಹಿತಿಗಳು ಮತ್ತು ಕೆಲವು ಕಾಂಗ್ರೆಸ್‌ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಸ್ಪೀಕರ್‌ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಗತಿಪರರು ಪತ್ರ ಬರೆದಿದ್ದರು. ಸ್ಪೀಕರ್‌ ಅವರ ನಿರ್ಧಾರದಲ್ಲಿ ಮುಖ್ಯಮಂತ್ರಿಗಳು ಮಧ್ಯಪ್ರವೇಶ ಮಾಡಲಾಗದು ಎಂಬ ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಈ ಪತ್ರವನ್ನು ಸ್ಪೀಕರ್‌ ಅವರಿಗೆ ಪತ್ರವನ್ನು ರವಾನಿಸಿ ಪರಿಶೀಲಿಸುವಂತೆ ಮನವಿ ಮಾಡಿದ್ದರು.

ಇದೀಗ ಸ್ಪೀಕರ್‌ ಅವರು ಆಹ್ವಾನಿತರ ಪಟ್ಟಿಯಲ್ಲಿ ಒಂದು ಬದಲಾವಣೆ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ಅವರ ಬದಲಿಗೆ ಮುಖ್ಯಮಂತ್ರಿ ಚಂದ್ರು ಅವರನ್ನು ಕರೆಯಲು ನಿರ್ಧರಿಸಲಾಗಿದೆ ಎಂಬ ಮಾಹಿತಿ ಇದೆ.

ಇದನ್ನೂ ಓದಿ: MLA training: ಶಾಸಕರ ತರಬೇತಿಗೆ ಗಣ್ಯರ ಆಹ್ವಾನದ ಬಗ್ಗೆ ಆಕ್ಷೇಪ; ತಿರುಗೇಟು ನೀಡಿದ ಸ್ಪೀಕರ್‌ ಖಾದರ್

ತರಬೇತಿ ಶಿಬಿರಕ್ಕೆ ಆಹ್ವಾನ ನೀಡಿರುವ ಧಾರ್ಮಿಕ ಹಾಗೂ ಆಧ್ಯಾತ್ಮಕ ಗುರುಗಳು ಬಿಜೆಪಿ ಸಿದ್ಧಾಂತಕ್ಕೆ ಹತ್ತಿರವಾಗಿದ್ದವರು ಎನ್ನುವುದು ಪ್ರಗತಿಪರರ ಆಕ್ಷೇಪ. ಶಿಕ್ಷಣ ತಜ್ಞ ಗುರುರಾಜ್ ಕರ್ಜಗಿ ಅವರು ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳ ವಿರುದ್ಧವಾಗಿಯೇ ಮಾತನಾಡಿದ್ದರು. ಅವರನ್ನು ಏಕೆ ಆಹ್ವಾನಿಸಿದ್ದು ಸರಿಯಲ್ಲ ಎಂಬ ವಾದವನ್ನು ಮಂಡಿಸಿದ್ದರು. ಆಹ್ವಾನಿತರಲ್ಲಿ ಎಲ್ಲರೂ ಸಮಾಜದಲ್ಲಿ ದೊಡ್ಡ ಸ್ಥಾನದಲ್ಲಿ ಇರುವುದರಿಂದ ಅವರನ್ನು ಬದಲಾಯಿಸುವುದು ಕಷ್ಟ. ಆದರೆ, ಪ್ರಗತಿಪರರ ಮಾತಿಗೆ ಬೆಲೆ ಕೊಟ್ಟಂತಾಗಬೇಕು ಎಂಬ ಕಾರಣಕ್ಕೆ ಗುರುರಾಜ ಕರ್ಜಗಿ ಅವರನ್ನು ಕೈಬಿಡಲು ನಿರ್ಧರಿಸಲಾಯಿತೇ ಎಂಬ ಪ್ರಶ್ನೆ ಉದ್ಭವವಾಗಿದೆ. ಆದರೆ, ಈ ಸ್ಥಾನಕ್ಕೆ ಮುಖ್ಯಮಂತ್ರಿ ಚಂದ್ರು ಅವರ ಹೆಸರನ್ನು ಯಾರು ಸೂಚಿಸಿದರು ಎಂಬುದು ಸ್ಪಷ್ಟವಿಲ್ಲ.

ಚಿತ್ರನಟರಾಗಿರುವ ಮುಖ್ಯಮಂತ್ರಿ ಚಂದ್ರು ಅವರು 1985ರಿಂದಲೇ ರಾಜಕೀಯದಲ್ಲಿದ್ದು, ಜನತಾದಳ, ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷದಲ್ಲಿ ಸೇವೆ ಸಲ್ಲಿಸಿದ್ದರು. ಈಗ ಅವರು ಆಮ್‌ ಆದ್ಮಿ ಪಾರ್ಟಿ ನಾಯಕರಾಗಿದ್ದಾರೆ.

Exit mobile version