ಬೆಂಗಳೂರು: ಬೆಂಗಳೂರಿನಲ್ಲೊಂದು ಕುತೂಹಲಕಾರಿ ಘಟನೆ ನಡೆದಿದೆ. ಬಸವನಗುಡಿಯ ಬಿಎಂಎಸ್ ಕಾಲೇಜು ಬಳಿ ನೋ ಪಾರ್ಕಿಂಗ್ ಜಾಗದಲ್ಲಿ ಪಾರ್ಕ್ ಮಾಡಿದ್ದ ಜೀಪ್ (Vehicle lock) ಒಂದಕ್ಕೆ ಪೊಲೀಸರು ವೀಲ್ ಲಾಕ್ ಮಾಡಿದರು. ಈ ವಾಹನ ಯಾರದ್ದು ಎಂದು ನೋಡಿದರೆ ಎದುರುಗಡೆ ಶಾಸಕರ ವಾಹನ ಎಂದು ಬೋರ್ಡ್ ಇತ್ತು!
ಪೊಲೀಸರು ಶಾಸಕರ ವಾಹನಕ್ಕೇ ವೀಲ್ ಲಾಕ್ ಮಾಡುವಷ್ಟು ಪವರ್‌ಫುಲ್ಲಾ ಎಂದು ಅಚ್ಚರಿ ಆಯ್ತಾ? ಈ ಜೀಪಿನ ಹಿಂದೆ ಏನೇನೋ ಕಥೆ ಇದ್ದ ಹಾಗೆ ಕಾಣಿಸುತ್ತಿದೆ. ʻಶಾಸಕರ ವಾಹನʼ ಎಂದು ಹಾಕಿದ ಬೋರ್ಡ್‌ನಲ್ಲಿ ಶಾಸಕರ ಹೆಸರು: ಬಿ.ಬಿ. ನಿಂಗಯ್ಯ, ಮೂಡಿಗೆರೆ ಶಾಸಕರು ಎಂದಿತ್ತು. ನಿಜವೆಂದರೆ ಕಾಂಗ್ರೆಸ್‌ನ ನಾಯಕರಾಗಿರುವ ಬಿ.ಬಿ. ನಿಂಗಯ್ಯ ಈಗ ಶಾಸಕರಲ್ಲ. ಅವರು ೨೦೧೩ರಿಂದ ೧೮ರವರೆಗೆ ಶಾಸಕರಾಗಿದ್ದರು. ಅಂದರೆ ೧೪ನೇ ವಿಧಾನಸಭೆಯಲ್ಲಿ. ಆ ಬಳಿಕ ಅವರು ಬಿಜೆಪಿಯ ಎಂ.ಪಿ. ಕುಮಾರಸ್ವಾಮಿ ಅವರ ಎದುರು ಸೋತರು. ಹೀಗಾಗಿ ಅವರು ಮಾಜಿ ಶಾಸಕ.
ಆದರೆ, ಬಸವನಗುಡಿಗೆ ಬಂದಿರುವ ವಾಹನದಲ್ಲಿ ಶಾಸಕರ ವಾಹನ ಎಂದೇ ಇದೆ. ಸಣ್ಣದಾಗಿ ೧೪ನೇ ವಿಧಾನಸಭೆ ಎಂದಿದೆ. ಹಾಗಿದ್ದರೆ ಇದು ಬಿ.ಬಿ. ನಿಂಗಯ್ಯ ಅವರಿಗೇ ಸೇರಿದ ವಾಹನವೇ ಎನ್ನುವುದು ಸ್ಪಷ್ಟವಿಲ್ಲ. ಅಥವಾ ಬೇರೆ ಯಾರಾದರೂ ಅವರ ಹೆಸರು ಬಳಸಿಕೊಂಡು ಈ ರೀತಿ ಮಾಡಿದರೇ? ಅವರ ಕಾರನ್ನು ಯಾರಾದರೂ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಯೇ ಎನ್ನುವ ಪ್ರಶ್ನೆಗಳ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ರಾಮಲಿಂಗಾ ರೆಡ್ಡಿ ಮೊಮ್ಮಗಳಾ?!
ಈ ನಡುವೆ ವಾಹನವನ್ನು ಲಾಕ್ ಹಾಕಿದ್ದಕ್ಕೆ ಪ್ರತಿಯಾಗಿ ಪೊಲೀಸರ ಬಳಿ ಬಂದಿದ್ದು ಒಬ್ಬ ಯುವತಿ. ಆಕೆ ರಾಮಲಿಂಗಾ ರೆಡ್ಡಿ ಹೆಸರು ಹೇಳಿ ಕಾರು ಬಿಟ್ಟುಕಳಿಸುವಂತೆ ಮನವಿ ಮಾಡಿದ್ದಾಳಂತೆ.
ಯುವತಿ ಯಾರಿಗೋ ಫೋನ್ ಮಾಡಿ ಸ್ಥಳದಲ್ಲಿದ್ದ ಪಿಎಸ್ಐಗೆ ಮೊಬೈಲ್ ನೀಡಿದ್ದಳು. ಫೋನ್ ನಲ್ಲಿ ಮಾತನಾಡಿದ ವ್ಯಕ್ತಿ ಬಿಟ್ಟು ಕಳಿಸುವಂತೆ ಹೇಳಿದ್ದನಂತೆ. ಆಕೆ ರಾಮಲಿಂಗಾ ರೆಡ್ಡಿ ಮೊಮ್ಮಗಳು, ಬಿಟ್ಟುಬಿಡಿ ಅಂದನಂತೆ ಆ ವ್ಯಕ್ತಿ. ಆದರೆ, ಇನ್ಸ್ ಪೆಕ್ಟರ್ ಜೊತೆ ಮಾತನಾಡಿ ಎಂದು ಅವರಿಗೆ ಹೇಳಿ ಕಳುಹಿಸಿದ್ದರು ಪಿಎಸ್‌ಐ. ಪೊಲೀಸರು ಈಗ ಈ ವಾಹನದ ಮೂಲ ಕತೆ ಹುಡುಕಲು ಹೊರಟಿದ್ದಾರೆ.
ಇದನ್ನೂ ಓದಿ | Motivational story | ಬೀಜ ಒಂದೇ ಇರಬಹುದು, ಅದಕ್ಕೆ ಲಕ್ಷಾಂತರ ಬೀಜ ಸೃಷ್ಟಿಸುವ ತಾಕತ್ತಿದೆ!