ಮುಂಬೈ: ಬೆಳಗಾವಿ ಗಡಿ ವಿವಾದಕ್ಕೆ (Border Dispute) ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರದ ವಿರುದ್ಧವೇ ಮಹಾ ವಿಕಾಸ್ ಅಘಾಡಿ (ಶಿವಸೇನೆ-ಉದ್ಧವ್ ಬಣ, ಎನ್‌ಸಿಪಿ, ಕಾಂಗ್ರೆಸ್ ಕೂಟ) ಶಾಸಕರು ನಾಗ್ಪುರದ ವಿಧಾನಭವನದಲ್ಲಿ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ. ಜತೆಗೆ, ಕರ್ನಾಟಕ ಸರ್ಕಾರದ ವಿರುದ್ಧವೂ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.
ಮಹಾರಾಷ್ಟ್ರ ಸರ್ಕಾರವು ದುರ್ಬಲವಾಗಿದ್ದು, ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರದ ವಿರುದ್ಧ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಅಘಾಡಿ ಶಾಸಕರು ಆರೋಪಿಸಿದರು. ಕಪ್ಪು ಪಟ್ಟಿ ಧರಿಸಿರುವ ಶಾಸಕರು, ವಿಧಾನ ಭವನದ ಮೆಟ್ಟಿಲು ಮೇಲೆ ಕುಳಿತುಕೊಂಡು ಪ್ರತಿಭಟನೆ ನಡೆಸಿದರು. ‘ಇ.ಡಿ’ ಸರ್ಕಾರ ಎಂದು ಟೀಕಿಸುತ್ತಿರುವ ಶಾಸಕರು, ಗಡಿ ವಿಷಯದಲ್ಲಿ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಘೋಷಣೆ ಕೂಗಿದರು. ಶಿವಸೇನೆಯ ನಾಯಕ ಆದಿತ್ಯ ಠಾಕ್ರೆ ಅವರು ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದಾರೆ.
ಪ್ರತಿಭಟನೆ ವೇಳೆ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆ ಮತ್ತು ಡಿಸಿಎಂ ದೇವೇಂದ್ರ ಫಡ್ನವಿಸ್ ವಿರುದ್ಧ ಘೋಷಣೆಗಳನ್ನು ಶಾಸಕರು ಕೂಗಿದರು.
ಇದನ್ನೂ ಓದಿ | Border Dispute | ಭಾರತಕ್ಕೆ ಚೀನಾ ಪ್ರವೇಶಿಸಿದಂತೆ, ನಾವು ಕರ್ನಾಟಕಕ್ಕೆ ನುಗ್ಗುತ್ತೇವೆ; ಗಡಿ ವಿವಾದದ ಉರಿ ಹೆಚ್ಚಿಸಿದ ಸಂಜಯ್ ರಾವತ್