ಬೆಂಗಳೂರು: ಗ್ಯಾರಂಟಿ ಯೋಜನೆಯಿಂದ ಯಾವುದೇ ರೀತಿಯ ಅಭಿವೃದ್ಧಿ ಕುಂಠಿತ ಆಗುವುದಿಲ್ಲ. ಇರುವ ಅಭಿವೃದ್ಧಿ ಆಗುತ್ತದೆ. ಜತೆಗೆ ಶಾಸಕರ ಅನುದಾನವನ್ನೂ ಕೊಡುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇನ್ನೂ ಹೆಚ್ಚಿನ ಅನುದಾನ ಬೇಕಾದರೆ ಮುಂದಿನ ಬಜೆಟ್ವರೆಗೆ ಕಾಯಲು ಸಿದ್ದರಾಮಯ್ಯ ಹೇಳಿದ್ದಾರೆ ಎಂಬುದನ್ನು ಬೆಂಗಳೂರಿನ ಸರ್ವಜ್ಞ ನಗರ ಶಾಸಕ, ಇಂಧನ ಸಚಿವ ಕೆ.ಜೆ. ಜಾರ್ಜ್ (KJ George) ಅವರು ಪವರ್ ಪಾಯಿಂಟ್ ವಿತ್ ಎಚ್ಪಿಕೆ (Power Point with HPK) ಸಂದರ್ಶನದಲ್ಲಿ ಸ್ಪಷ್ಟಪಡಿಸಿದರು.
ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ (Hariprakash Konemane) ಅವರು ನಡೆಸಿಕೊಡುವ “ಪವರ್ ಪಾಯಿಂಟ್ ವಿತ್ ಎಚ್ಪಿಕೆ” ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಇಂಧನ ಸಚಿವ ಕೆ.ಜೆ. ಜಾರ್ಜ್, ನಮಗೆ ಸಿದ್ದರಾಮಯ್ಯ ಅವರಂತಹ ದಕ್ಷ ಮುಖ್ಯಮಂತ್ರಿ ಇದ್ದಾರೆ. ಅವರು 14 ಬಾರಿ ಬಜೆಟ್ ಮಂಡಿಸಿದವರಿದ್ದಾರೆ. ಹಣವನ್ನು ತೆಗೆದಿಟ್ಟೇ ಅವರು ಮುಂದಿನ ಕೆಲಸವನ್ನು ಮಾಡುವವರು. ನಮ್ಮದು ನುಡಿದಂತೆ ನಡೆಯುವ ಸರ್ಕಾರವಾಗಿದೆ. ಜನರ ಸಮಸ್ಯೆಗಳನ್ನು ಪರಿಹಾರ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಶಾಸಕರ ಟೀಂ ವರ್ಕ್ ಮಾಡುತ್ತದೆ ಎಂದು ಹೇಳಿದರು.
ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ಹೆಸರು ಕೇಳಿಬಂದಾಗ ನಾನು ಕೂಡಲೇ ರಾಜೀನಾಮೆ ಕೊಡುತ್ತೇನೆ ಎಂದೆ. ಆದರೆ, ಆಗ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು, ಆಗ ರಾಜ್ಯ ಉಸ್ತುವಾರಿಯಾಗಿದ್ದ ದಿಗ್ವಿಜಯ ಸಿಂಗ್ ಅವರು ರಾಜೀನಾಮೆ ಕೊಡಬೇಡಿ ಎಂದು ಹೇಳಿದ್ದರು. ಆಗ ನಾನು ಇಲ್ಲ ರಾಜೀನಾಮೆ ಕೊಡುತ್ತೇನೆ ಎಂದೇ ಹೇಳಿದೆ. ನಾನು ಮಾಡದೇ ಇರುವ ಕೆಲಸಕ್ಕೆ, ನಾನು ಗೃಹ ಸಚಿವ ಸ್ಥಾನವನ್ನು ಬಿಟ್ಟು ಆರು ತಿಂಗಳು ಕಳೆದ ಮೇಲೆ ಒಂದು ಎಫ್ಐಆರ್ ದಾಖಲಾದರೆ ಹೇಗೆ ಮಂತ್ರಿಯಾಗಿ ಉಳಿಯಲು ಸಾಧ್ಯ ಎಂದು ಪ್ರಶ್ನೆ ಮಾಡಿದ್ದೆ. ಆದರೆ, ಎಲ್ಲರೂ ರಾಜೀನಾಮೆ ಕೊಡಬೇಡಿ ಎಂದೇ ಹೇಳಿದರು. ಆದರೆ, ನನಗೆ ನನ್ನ ಪ್ರಾಮಾಣಿಕತೆಯ ಬಗ್ಗೆ ನಂಬಿಕೆ ಇತ್ತು. ಅದು ಪ್ರೂವ್ ಆದ ಬಳಿಕವೇ ಮತ್ತೆ ಸಂಪುಟಕ್ಕೆ ಬರುತ್ತೇನೆ ಎಂದು ಸ್ಪಷ್ಟವಾಗಿ ಹೇಳಿದೆ. ಹೀಗಾಗಿ ಕ್ಲೀನ್ ಚಿಟ್ ಸಿಕ್ಕಿದ ನಂತರವೇ ಮತ್ತೆ ನನ್ನನ್ನು ಸಂಪುಟಕ್ಕೆ ತೆಗೆದುಕೊಂಡರು ಎಂದು ಅಂದಿನ ಘಟನಾವಳಿಗಳನ್ನು ಸ್ಮರಿಸಿದರು.
ಡಿ.ಕೆ. ಶಿವಕುಮಾರ್ ಅವರು ಜ್ಯೂನಿಯರ್ ಅಲ್ಲ
ಡಿ.ಕೆ. ಶಿವಕುಮಾರ್ ಅವರು ಜ್ಯೂನಿಯರ್ ಅಲ್ಲ. ಅವರು ಭಾರಿ ಅನುಭವವಂತರು. ಸಿದ್ದರಾಮಯ್ಯ ಹೇಗೆ ಮಾಸ್ ಲೀಡರ್ ಆಗಿದ್ದಾರೋ ಹಾಗೇ ಡಿಕೆಶಿ ಸಹ ಪಕ್ಷ ಸಂಘಟನೆ ಮಾಡುವುದರಲ್ಲಿ ನಿಸ್ಸೀಮರು. ಇಂದು ಕಾಂಗ್ರೆಸ್ ಅಧಿಕಾರಕ್ಕೆ ಬರುವಲ್ಲಿ ಅವರ ಪಾತ್ರ ದೊಡ್ಡದಿದೆ. ಅವರಿಗೆ ಬೆಂಗಳೂರು ಅಭಿವೃದ್ಧಿ ಸಚಿವ ಸ್ಥಾನ ನೀಡಿರುವುದರಲ್ಲಿ ಯಾವುದೇ ತಪ್ಪು ಕಾಣುತ್ತಿಲ್ಲ. ಅವರು ಬೆಂಗಳೂರು ಅಭಿವೃದ್ಧಿ ವಿಷನ್ ಹಾಕಿಕೊಂಡಿದ್ದಾರೆ. ಅವರಿಗೆ ಸಮಯ ಕೊಡಬೇಕು ಎಂದು ಕೆ.ಜೆ. ಜಾರ್ಜ್ ಹೇಳಿದರು.
ಬೆಂಗಳೂರು ಅಭಿವೃದ್ಧಿ ಸಚಿವ ಸ್ಥಾನಕ್ಕೆ ನಾನೇ ಉತ್ಸಾಹ ತೋರಿಲ್ಲ. ಬೆಂಗಳೂರು ಅಭಿವೃದ್ಧಿ ಮಾಡಬೇಕೆಂದರೆ ನಾಲ್ಕೈದು ವರ್ಷ ಸತತವಾಗಿ ಕೆಲಸ ಮಾಡಬೇಕು. ನಾನಾಗೇ ಇಂತಹ ಖಾತೆ ಕೊಡಿ ಎಂದು ಕೇಳಿರಲಿಲ್ಲ. ನನಗೆ ಕೊಟ್ಟ ಖಾತೆಯನ್ನು ನಿರ್ವಹಣೆ ಮಾಡುತ್ತಿದ್ದೇನೆ ಎಂದು ಕೆ.ಜೆ. ಜಾರ್ಜ್ ಹೇಳಿದರು.
ಇದನ್ನೂ ಓದಿ: Power Point with HPK : ಭಾಷಣದ ಉತ್ಸಾಹದಲ್ಲಿ ಸಿದ್ದರಾಮಯ್ಯ ನಂಗೂ – ನಿಂಗೂ ಫ್ರೀ ಅಂದ್ರು: ಕೆ.ಜೆ. ಜಾರ್ಜ್
ಎಲ್ಲ ಕಡೆ ಮೂಲ ಸೌಕರ್ಯ
ಭಾರತಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಶೈಕ್ಷಣಿಕ, ಆರೋಗ್ಯ, ಮೂಲಭೂತ ಸೌಲಭ್ಯ ಏನೇನೂ ಇರಲಿಲ್ಲ. ಈಗ ಶಾಲೆ, ಕಾಲೇಜು, ಯೂನಿವರ್ಸಿಟಿ, ನೀರಾವರಿ ಸೇರಿದಂತೆ ಹಲವಾರು ಕಾರ್ಯಗಳನ್ನು ನಾವು ಮಾಡಿಕೊಂಡಿದ್ದೇವೆ. ಈಗಲೂ ಹಲವಾರು ಮೂಲಭೂತ ಸೌಲಭ್ಯಗಳ ಕೊರತೆ ಇರುವುದು ನಿಜ. ಅದನ್ನು ನಾವು ಸರಿಪಡಿಸಬೇಕಿದೆ. ಅದನ್ನು ಸರಿಪಡಿಸದೇ ಇದ್ದರೆ ನಾವು ವಿಫಲವಾದಂತೆ ಲೆಕ್ಕ. ಇಂದು ಇವುಗಳನ್ನು ಮಾಡಲು ನಮಗೆ ಶಕ್ತಿ ಇದೆ. ನಾವೀಗ ಮೂಲ ಸೌಕರ್ಯ ಇಲ್ಲದ ಕಡೆ ಯೋಜನೆ ಮಾಡುವ ಕಾರ್ಯವನ್ನು ಮಾಡಬೇಕು ಎಂದು ಕೆ.ಜೆ. ಜಾರ್ಜ್ ಹೇಳಿದರು.