Site icon Vistara News

Shivamogga politics : ಯುಗಾದಿ, ರಂಜಾನ್‌ಗೆ ಶುಭ ಕೋರಿ ಫ್ಲೆಕ್ಸ್‌ ಹಾಕಿಸಿದ ಆಯನೂರು, ಹರಕು ಬಾಯಿ ಮುಚ್ಚಲಿ ಅಂದಿದ್ದು ಯಾರಿಗೆ?

Ayanur manjunath flex

#image_title

ಶಿವಮೊಗ್ಗ: ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಶಿವಮೊಗ್ಗದಲ್ಲಿ ರಾಜಕೀಯ (Shivamogga politics) ಹೊಸ ಹೊಸ ರೂಪಗಳನ್ನು ಪಡೆಯುತ್ತಿದೆ. ಒಂದು ಕಡೆ ಅಗ್ರೆಸಿವ್‌ ಹಿಂದುತ್ವದ ಪ್ರಚಾರ ನಡೆಯುತ್ತಿದ್ದರೆ, ಇನ್ನೊಂದು ಕಡೆ ಅದನ್ನು ತಣ್ಣಗಾಗಿಸುವ ಪ್ರಯತ್ನವೂ ನಡೆಯುತ್ತಿದೆ. ಆದರೆ, ವಿಚಿತ್ರವೆಂದರೆ ಇವೆರಡೂ ವಿದ್ಯಮಾನಗಳು ಬಿಜೆಪಿಯೊಂದರಲ್ಲೇ ನಡೆಯುತ್ತಿದೆ.

ಒಂದು ಕಡೆ ಕೆ.ಎಸ್‌. ಈಶ್ವರಪ್ಪ ಮತ್ತು ಇತರ ನಾಯಕರು ತೀವ್ರಗಾಮಿ ಹಿಂದುತ್ವದ ಪ್ರತಿಪಾದನೆ ಮಾಡಿ ತಮ್ಮ ವೋಟ್‌ ಬ್ಯಾಂಕ್‌ ಭದ್ರ ಮಾಡಿಕೊಳ್ಳಲು ಯತ್ನಿಸುತ್ತಿದ್ದರೆ, ಮತ್ತೊಂದು ಕಡೆ ಬಿಜೆಪಿ ನಾಯಕ, ಮೇಲ್ಮನೆ ಸದಸ್ಯ ಆಯನೂರು ಮಂಜುನಾಥ್‌ ಹಿಂದು-ಮುಸ್ಲಿಂ ಭಾಯಿ ಭಾಯಿ ಅನ್ನುತ್ತಿದ್ದಾರೆ. ಅವರು ಯುಗಾದಿ ಮತ್ತು ರಂಜಾನ್‌ಗೆ ಜತೆಯಾಗಿ ಫ್ಲೆಕ್ಸ್‌ ಹಾಕಿಸುವ ಮೂಲಕ ಗಮನ ಸೆಳೆದಿದ್ದಾರೆ. ಫ್ಲೆಕ್ಸ್‌ನಲ್ಲಿ ಬರೆದಿರುವ ಪದಗಳು ಇನ್ನಷ್ಟು ಕುತೂಹಲ ಕೆರಳಿಸಿವೆ.

ಶಿವಮೊಗ್ಗ ನಗರದಲ್ಲಿ ಹಾಕಲಾದ ಫ್ಲೆಕ್ಸ್‌

ಯುಗಾದಿ ಹಾಗು ರಂಜಾನ್ ಹಬ್ಬಕ್ಕೆ ಶುಭಾಶಯ ಕೋರಿ‌ ಎಂಎಲ್ ಸಿ ಆಯನೂರು ಮಂಜುನಾಥ್ ಹಾಕಿಸಿರುವ ಫ್ಲೆಕ್ಸ್‌ನಲ್ಲಿ ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರನ್ನೇ ಟಾರ್ಗೆಟ್‌ ಮಾಡಿದ್ದಾರಾ ಎಂಬ ಪ್ರಶ್ನೆಯೂ ಕಾಡುತ್ತಿದೆ.

ಹರಕು ಬಾಯಿಗಳಿಗೆ ಹೊಲಿಗೆ ಬೀಳಲಿ/
ಮುರಿದ ಮನಸ್ಸುಗಳ ಬೆಸುಗೆಯಾಗಲಿ/
ಶಿವಮೊಗ್ಗದಲ್ಲಿ ಶಾಂತಿ ಸೌಹಾರ್ದತೆ ನೆಲೆಸಲಿ
ಎಂದು ಫ್ಲೆಕ್ಸ್ ನಲ್ಲಿ ಬರೆಯಲಾಗಿದ್ದು, ಇದು ಕೆ.ಎಸ್‌. ಈಶ್ವರಪ್ಪ ಅವರನ್ನೇ ಟಾರ್ಗೆಟ್‌ ಮಾಡಿಬರೆದಿದ್ದು ಎಂಬ ಅಭಿಪಾಯವಿದೆ.

ಶಿವಮೊಗ್ಗ ನಗರದ ಮೇಲೆ ಕಣ್ಣಿಟ್ಟಿರುವ ಆಯನೂರು

ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಕೆ.ಎಸ್.‌ ಈಶ್ವರಪ್ಪ ಅವರು ಹಾಲಿ ಶಾಸಕರಾಗಿದ್ದಾರೆ. ಅವರೇ ಮತ್ತೊಮ್ಮೆ ಸ್ಪರ್ಧೆ ಮಾಡುವ ಆಸಕ್ತಿ ಹೊಂದಿದ್ದಾರೆ. ತಮಗೆ ವಯಸ್ಸಿನ ಕಾರಣಕ್ಕೆ ಟಿಕೆಟ್‌ ಕೈತಪ್ಪುವುದಾದರೆ ಪುತ್ರ, ಜಿಪಂ ಮಾಜಿ ಸದಸ್ಯ ಇ. ಕಾಂತೇಶ್‌ ಅವರಿಗೆ ಟಿಕೆಟ್‌ ನೀಡುವಂತೆ ಕಸರತ್ತು ನಡೆಸಿದ್ದಾರೆನ್ನಲಾಗಿದೆ. ಈ ಮಧ್ಯೆ ಶಿವಮೊಗ್ಗ ನಗರದ ಮೇಲೆ ಕಣ್ಣಿಟ್ಟಿರುವ ಆಯನೂರು ಮಂಜುನಾಥ್‌ ಅವರು ವರಿಷ್ಠರ ಮುಂದೆ ತಮ್ಮ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ನಾನೂ ಆಕಾಂಕ್ಷಿ ಎನ್ನುವುದನ್ನು ಸ್ಪಷ್ಟವಾಗಿ ಗೊತ್ತು ಮಾಡುತ್ತಿರುವ ಮಂಜುನಾಥ್‌ ಫ್ಲೆಕ್ಸ್‌ನಲ್ಲಿ ಕೂಡಾ ʻಈ ಬಾರಿ ಮಂಜುನಾಥ್‌ʼ ಎಂದೇ ಬರೆಸಿದಾರೆ.

ಕೆಲವು ದಿನಗಳ ಹಿಂದಷ್ಟೇ ಅವರು ಅವರು ನೈರುತ್ಯ ಪದವೀಧರ ಕ್ಷೇತ್ರದ ಪದವೀಧರರಿಗೆ ಬಹಿರಂಗ ಪತ್ರ ಬರೆದು, ತಾನೂ ವಿಧಾನಸಭೆಗೆ ಸ್ಪರ್ಧಿಸುವ ಆಸಕ್ತಿ ಹೊಂದಿದ್ದಾಗಿ ಹೇಳಿಕೊಂಡಿದ್ದರು. ವಿವಿಧ ಸಮೂಹಗಳ ಹಿತರಕ್ಷಣೆಗಾಗಿ ಹೋರಾಟ ಮಾಡಿದ್ದರೂ, ಸದನದಲ್ಲಿ ಗಟ್ಟಿ ಧ್ವನಿಯಲ್ಲಿ ಪ್ರತಿನಿಧಿಸುವ ಪ್ರಯತ್ನ ಮಾಡಿದ್ದರೂ ಅದಕ್ಕೆ ತಕ್ಕ ಫಲ ಸಿಕ್ಕಿಲ್ಲ. ಪರಿಷತ್ತಿನಲ್ಲಿನ ತಮ್ಮ ಮಾತುಗಳು, ವಿಧಾನಸಭೆಯಲ್ಲಿ ಗಂಭೀರ ಚರ್ಚೆಗೆ ಒಳಪಡಲಿಲ್ಲ. ಈ ಹಿನ್ನೆಲೆಯಲ್ಲಿ ತಮಗೆ ಅವಕಾಶ ದೊರೆತಲ್ಲಿ ಮುಂಬರುವ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ. ಅದಕ್ಕೆ ಎಲ್ಲರ ಬೆಂಬಲ, ಸಹಕಾರ ಇರಲಿ ಎಂದು ಆಯನೂರು ಮಂಜುನಾಥ್‌ ಪತ್ರದಲ್ಲಿ ವಿವರಿಸಿದ್ದರು.

ಪ್ರಜಾತಂತ್ರದ ನಾಲ್ಕೂ ಮನೆಗಳಾಗಿರುವ ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನ ಪರಿಷತ್ ಸದಸ್ಯರಾಗಿ ಆಯನೂರು ಮಂಜುನಾಥ್ ಕಾರ್ಯನಿರ್ಹವಣೆ ಮಾಡಿದ್ದಾರೆ. ಹಾಲಿ ಪರಿಷತ್‌ ಸದಸ್ಯರಾಗಿದ್ದು, ಪುನಃ ವಿಧಾನಸಭೆ ಪ್ರವೇಶಕ್ಕೆ ಚಿಂತನೆ ನಡೆಸುತ್ತಿದ್ದು, ಅದಕ್ಕಾಗಿ ಅವರು ಶಿವಮೊಗ್ಗ ನಗರ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ರಾಜ್ಯ ನಾಯಕರು ಮತ್ತು ಇತರರು ಇವರಿಗೆ ಅವಕಾಶ ಮಾಡಿಕೊಡುತ್ತಾರಾ ನೋಡಬೇಕು. ಏನೇ ಇದ್ದರೂ ಶಿವಮೊಗ್ಗದಲ್ಲಿ ಆಯನೂರು ರೆಬೆಲ್‌ ಆಗುವುದಂತೂ ಬಹುತೇಕ ಖಚಿತ.

ಇದನ್ನೂ ಓದಿ : Karnataka Election: ವಿಧಾನಸಭೆಗೆ ಸ್ಪರ್ಧಿಸುವೆನೆಂದು ಪತ್ರ ಬರೆದ ಎಂಎಲ್‌ಸಿ ಆಯನೂರು ಮಂಜುನಾಥ್;‌ ಈಶ್ವರಪ್ಪಗೆ ಅಡ್ಡಗಾಲು?

Exit mobile version