Site icon Vistara News

ನನ್ನ ಸೋಲಿಗಾಗಿ ಪತ್ನಿ ಹರಕೆ ಹೊತ್ತಿದ್ದರು ಎಂದ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ!

ಬಸವರಾಜ ಹೊರಟ್ಟಿ

ಹುಬ್ಬಳ್ಳಿ: ನಾನು ಕಳೆದ ನಾಲ್ಕು ದಶಕಗಳಿಂದ ಸಕ್ರಿಯ ರಾಜಕಾರಣದಲ್ಲಿರುವುದರಿಂದ ಕುಟುಂಬಕ್ಕೆ ಸಮಯ ಕೊಡಲು ಆಗುತ್ತಿಲ್ಲ. ಹೀಗಾಗಿ ಈ ಬಾರಿಯ ಚುನಾವಣೆಯ ಸಂದರ್ಭದಲ್ಲಿ ನನ್ನ ಪತ್ನಿಯೇ ನಾನು ಸೋಲಬೇಕೆಂದು ಹರಕೆ ಹೊತ್ತಿದ್ದಳು. ಆದರೆ ಆಕೆಯ ಪ್ರಾರ್ಥನೆ ಈಡೇರಲಿಲ್ಲ ಎಂದು ಎಂಟನೇ ಬಾರಿಗೆ ವಿಧಾನ ಪರಿಷತ್‌ಗೆ ಆಯ್ಕೆಯಾಗಿರುವ ಬಸವರಾಜ ಹೊರಟ್ಟಿ ಹೇಳಿದ್ದಾರೆ.

೧೯೮೦ ರಿಂದ ವಿಧಾನ ಪರಿಷತ್‌ ಚುನಾವಣೆಯಲ್ಲಿ ಸ್ಪರ್ಧಿಸುತ್ತಾ ಬಂದಿರುವ ಅವರು ಸತತವಾಗಿ ಎಂಟು ಬಾರಿ ಗೆದ್ದಿದ್ದಾರೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅವರು ಪಕ್ಷ ಬದಲಾಯಿಸಿದ್ದು, ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಆಯ್ಕೆಯಾಗಿದ್ದಾರೆ. “ಈ ಬಾರಿಯೂ ನನ್ನ ಹೆಂಡತಿಯ ಬಯಕೆ ಈಡೇರಲಿಲ್ಲ, ಶಿಕ್ಷಕರ ಆಶೀರ್ವಾದದಿಂದ ಮತ್ತೆ ಗೆದ್ದು ಬಂದಿದ್ದೇನೆʼʼ ಎಂದವರು ತಮ್ಮ ಗೆಲುವಿಗೆ ಪರೋಕ್ಷವಾಗಿ ಹರ್ಷ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಪತ್ರಕರ್ತರ ಜತೆಗೆ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನನ್ನ ಲಕ್ಕಿ ಅಂಬಾಸೆಡರ್ ಕಾರು ಕೂಡ ನಾನು ಇರುವವರೆಗೆ ನನ್ನ ಜತೆಗೆ ಇರುತ್ತದೆʼʼ ಎಂದವರು ಹೇಳಿದ್ದಾರೆ. ಇನ್ನು ‌ಶಿಕ್ಷಣ ಇಲಾಖೆಯಲ್ಲಿನ ಸಮಸ್ಯೆ ಗೊಂದಲಗಳಿಗೆ ಅಧಿಕಾರಿಗಳೇ ಕಾರಣ. ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಜವಾಬ್ದಾರಿ ನಿಭಾಯಿಸಿದ್ದರೆ ಪಠ್ಯಪುಸ್ತಕ ವಿವಾದವು ಸೃಷ್ಟಿಯಾಗುತ್ತಿರಲಿಲ್ಲ ಎಂದವರು ತಿಳಿಸಿದ್ದಾರೆ.

ಶಿಕ್ಷಣ ಇಲಾಖೆಯನ್ನು ಸುಧಾರಿಸಲು ಹರಿ ಬ್ರಹ್ಮರಿಂದಲೂ ಸಾಧ್ಯವಿಲ್ಲ. ಒಂದು ಸಮಸ್ಯೆ ಮುಗಿಯುವುದರೊಳಗಾಗಿ ಮತ್ತೊಂದು ಸಮಸ್ಯೆ ಬಂದಿರುತ್ತದೆ. ಯಾರೇ ಸಚಿವರಾದರೂ ಇಲಾಖೆಯನ್ನು ಸುಧಾರಿಸುವುದು ದೊಡ್ಡ ಸವಾಲು. ಮಕ್ಕಳ ಕಲಿಕಾ ಮಟ್ಟ ಸುಧಾರಿಸಲು ಸರ್ಕಾರ ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಬೇಕು. ಮಕ್ಕಳ ವಿಷಯದಲ್ಲಿ ಯಾರು ಕಮರ್ಷಿಯಲ್ ಆಗಬಾರದು. ಇದೀಗ ಪಠ್ಯಪುಸ್ತಕ, ಸಮವಸ್ತ್ರ ಸರಿಯಾಗಿ ಮಕ್ಕಳಿಗೆ ತಲುಪುತ್ತಿಲ್ಲ. ಅದನ್ನು ಸರ್ಕಾರ ಮತ್ತು ಅಧಿಕಾರಿಗಳು ಕಾಲಕಾಲಕ್ಕೆ ತಲುಪಿಸುವ ಕೆಲಸ ಮಾಡಬೇಕು ಎಂದಿದ್ದಾರೆ.

ಇದನ್ನೂ ಓದಿ | ಚುನಾವಣೆಗೆ ʻನಮ್ಮ ಕ್ಲಿನಿಕ್‌ʼ ಟ್ರಂಪ್‌ ಕಾರ್ಡ್‌: ರಾಜ್ಯಾದ್ಯಂತ ತಲೆಯೆತ್ತಲಿವೆ ಸರ್ಕಾರಿ ಚಿಕಿತ್ಸಾಲಯ

ಪಾಲಕರು ಇಂದು ತಮ್ಮ ಮಕ್ಕಳು ನೂರಕ್ಕೆ ನೂರು ಅಂಕಗಳಿಸಬೇಕೆಂದು ಅವರನ್ನು ಓದಿಸುತ್ತಾರೆ. ಇದರ ಜತೆಗೆ ಮಕ್ಕಳಿಗೆ ಸಂಸ್ಕಾರ ಕೊಡಿಸುವ ಕೆಲಸವು ಆಗಬೇಕು. ಶಿಕ್ಷಣ ಸಂಸ್ಥೆಗಳು ದುಡ್ಡು ಮಾಡುವ ಸಂಸ್ಥೆಗಳಾಗುತ್ತಿವೆ. ತಾವು ಶಿಕ್ಷಣ ಸಚಿವರಾಗಿದ್ದಾಗ ನೀತಿಪಾಠದ ಬೋಧನೆಯಿತ್ತು ಎಂದವರು ಸ್ಮರಿಸಿದ್ದಾರೆ.

ವರ್ಗಾವಣೆ ನೀತಿ ಸರಿಯಾಗಿ ಅನುಷ್ಠಾನವಾಗಬೇಕಿದೆ. ಆದರೆ ಈಚೆಗೆ ಸರ್ಕಾರಗಳು ತೇಪೆ ಹಚ್ಚುವ ಕೆಲಸ ಮಾಡುತ್ತಿವೆ. ಪ್ರತಿ ವರ್ಷ ಶಿಕ್ಷಕರ ನೇಮಕ ಆಗಬೇಕಿದ್ದು, ಹಾಗಿದ್ದಲ್ಲಿ ಮಾತ್ರ ಅನುಕೂಲವಾಗಲಿದೆ. ಕೆಲ ಅಧಿಕಾರಿಗಳಿಂದ ಅತಿಥಿ ಶಿಕ್ಷಕರ ಕೆಟ್ಟ ಪದ್ಧತಿ ಬಂದಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತರಲು ಸಾಧ್ಯವಿಲ್ಲವಾದರೂ ಸರ್ಕಾರಿ ಶಾಲಾ ಕಟ್ಟಡಗಳ ಸುರಕ್ಷತೆ, ವರ್ಗಾವಣೆ ಸಹಿತ ಮೂರು ವಿಷಯಗಳ ಕುರಿತು ಮುಂದಿನ ಅಧಿವೇಶನದಲ್ಲಿ ಪ್ರಸ್ತಾಪಿಸುವುದಲ್ಲದೇ ಅದಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಹೇಳಿದ್ದಾರೆ.

ಒಂದೂವರೆ ಗಂಟೆ ಕಾಲ ತಮ್ಮ ರಾಜಕೀಯ ಜೀವನದ ನೆನಪುಗಳ ಸುರುಳಿ ಬಿಚ್ಚಿಟ್ಟ ಅವರು, ನಾನು ಪರಿಷತ್ ಸದಸ್ಯನಾಗಿ ಯಾವುದೇ ಅಧಿಕಾರವನ್ನು ಕೇಳುವುದಿಲ್ಲ, ತಮ್ಮ ಮೇಲೆ ನಂಬಿಕೆಯಿಟ್ಟು ಯಾವುದೇ ಹುದ್ದೆ ನೀಡಿದರೂ ಸಮರ್ಥವಾಗಿ ನಿಭಾಯಿಸುವೆ. ಸಭಾಪತಿ ಹುದ್ದೆಯನ್ನು ನೀಡಿದರೆ ಒಪ್ಪಿಕೊಳ್ಳುವೆ. ಮಂತ್ರಿಗಿರಿಗಾಗಿ ಯಾವುದೇ ಲಾಬಿ ಮಾಡುವುದಿಲ್ಲ, ಕೊಟ್ಟಿಲ್ಲವೆಂದರೂ ಶಿಕ್ಷಕರ ಸಮಸ್ಯೆ ಆಲಿಸುತ್ತಾ ವಾರಕ್ಕೆರಡು ಸಭೆ ಕರೆಯುವೆ. ಸಭಾಪತಿ ಹುದ್ದೆಯಲ್ಲಿದ್ದರೂ ಉತ್ತಮವಾಗಿ ಕಾರ್ಯ ಮಾಡಬಹುದು, ನನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿ ಎಂದೂ ನಡೆಯುವುದಿಲ್ಲ ಎಂದರು.

ಕಳೆದ ಅವಧಿಯಲ್ಲಿ ತಾವು ಸಭಾಪತಿ ಹುದ್ದೆಯಲ್ಲಿದ್ದಾಗ ಶಿಕ್ಷಣ ವ್ಯವಸ್ಥೆಯ ಸಮಸ್ಯೆಗಳ ಕುರಿತು ಸರ್ಕಾರಕ್ಕೆ 112 ಪತ್ರಗಳನ್ನು ಬರೆದಿದ್ದೆ. ಅದರ ಪೈಕಿ ಕೇವಲ ಒಂದು ಪತ್ರಕ್ಕೆ ಉತ್ತರ ಬಂದಿದೆ. ಯಾವುದೇ ಸಚಿವರು ಉತ್ತರಿಸಲಿಲ್ಲ ಎಂದವರು ಹೇಳಿದರು. ಸಂವಾದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಹೊರಟ್ಟಿಯವರನ್ನು ಇದೇ ವೇಳೆ ಸನ್ಮಾನಿಸಲಾಯಿತು. ಪತ್ರಕರ್ತರ ಸಂಘದ ಅಧ್ಯಕ್ಷ ಲೋಚನೇಶ ಹೂಗಾರ, ಪ್ರಧಾನ ಕಾರ್ಯದರ್ಶಿ ಸುಶಿಲೇಂದ್ರ ಕುಂದರಗಿ, ರಾಜ್ಯ ಸಮಿತಿ ಸದಸ್ಯ ಗಣಪತಿ ಗಂಗೊಳ್ಳಿ ಉಪಸ್ಥಿತರಿದ್ದರು.

ಇದನ್ನೂ ಓದಿ | ಸರ್ಕಾರಕ್ಕೆ ಮತ್ತೊಂದು ಪತ್ರ ಕಂಟಕ: ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ 75 ಗಣ್ಯರ ಮನವಿ

Exit mobile version