ಬೆಂಗಳೂರು: ವಿಧಾನ ಪರಿಷತ್ ಚುನಾವಣೆ (MLC Election) ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಿದ ಬೆನ್ನಲ್ಲೇ ಕಾಂಗ್ರೆಸ್ ತನ್ನ 8 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನಾಮಪತ್ರ ಸಲ್ಲಿಕೆಗೆ ನಾಳೆ (ಮೇ 3) ಕಡೆ ದಿನವಾಗಿರುವುದರಿಂದ ಅಭ್ಯರ್ಥಿಗಳನ್ನು ಘೋಷಿಸಿದ್ದು, ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ, ಹಾಲಿ ಸಚಿವ ಎನ್.ಎಸ್.ಭೋಸರಾಜು ಸೇರಿ 8 ಮಂದಿಗೆ ಟಿಕೆಟ್ ನೀಡಲಾಗಿದೆ.
ಜೂನ್ 13ರಂದು ನಡೆಯುವ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಎನ್. ಎಸ್. ಬೋಸರಾಜು, ವಸಂತ ಕುಮಾರ್, ಯತೀಂದ್ರ ಸಿದ್ದರಾಮಯ್ಯ, ಕೆ.ಗೋವಿಂದರಾಜು, ಐವನ್ ಡಿಸೋಜಾ, ಬಿಲ್ಕಿಸ್ ಬಾನೋ, ಜಗದೇವ ಗುತ್ತೇದಾರ್ ಸೇರಿ ಏಳು ಅಭ್ಯರ್ಥಿಗಳು ಇದ್ದಾರೆ. ಹಾಗೆಯೇ ಜಗದೀಶ್ ಶೆಟ್ಟರ್ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆಯುವ ಉಪಚುನಾವಣೆಗೆ ಬಸನಗೌಡ ಬಾದರ್ಲಿ ಅವರಿಗೆ ಟಿಕೆಟ್ ನೀಡಲಾಗಿದೆ.
ಜಾತಿವಾರು ಅಭ್ಯರ್ಥಿಗಳ ಆಯ್ಕೆ
ವಸಂತ ಕುಮಾರ್ – ಎಸ್ಸಿ
ಯತೀಂದ್ರ – ಕುರುಬ
ಗೋವಿಂದರಾಜು – ಒಕ್ಕಲಿಗ
ಐವನ್ ಡಿಸೋಜಾ – ಕ್ರಿಶ್ಚಿಯನ್
ಬಿಲ್ಕಿಸ್ ಬಾನೋ -ಮುಸ್ಲಿಂ
ಭೋಸರಾಜು – ಕ್ಷತ್ರಿಯ
ಜಗದೇವ ಗುತ್ತೇದಾರ್ – ಈಡಿಗ
7 ಅಭ್ಯರ್ಥಿಗಳ ಪೈಕಿ ಒಬಿಸಿ 3, ಅಲ್ಪಸಂಖ್ಯಾತ – 2, ದಲಿತ -1, ಒಕ್ಕಲಿಗ -1 ಟಿಕೆಟ್ ಸಿಕ್ಕಿದೆ. ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಹೈಕಮಾಂಡ್ ಪಾರುಪತ್ಯ ಕಂಡುಬಂದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೋಟಾದಡಿಯಲ್ಲಿ ವಸಂತ ಕುಮಾರ್, ಜಗದೇವ್ ಗುತ್ತೇದಾರ್, ಹೈಕಮಾಂಡ್ ಕೋಟಾದಡಿ ಎನ್.ಎಸ್ ಬೋಸರಾಜು, ಸಿಎಂ ಸಿದ್ದರಾಮಯ್ಯ ಕೋಟಾದಡಿ ಯತೀಂದ್ರ ಸಿದ್ದರಾಮಯ್ಯ, ಗೋವಿಂದರಾಜು, ಐವನ್ ಡಿಸೋಜಾ, ಡಿ.ಕೆ. ಶಿವಕುಮಾರ್ ಕೋಟಾದಲ್ಲಿ ಬಸವನಗೌಡ ಬಾದರ್ಲಿ ಅಯ್ಕೆಯಾಗಿದ್ದಾರೆ.
ಗೋವಿಂದರಾಜು ಅವರು ಮೂರನೇ ಬಾರಿ ಅವಕಾಶ ಪಡೆಯುವಲ್ಲಿ ಸಕ್ಸಸ್ ಆಗಿದ್ದಾರೆ.ಇನ್ನು ಮಹಿಳಾ ಕೋಟಾದಡಿ ಹಲವರು ತೀವ್ರ ಪೈಪೋಟಿ ನಡೆಸಿದ್ದರು. ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರ್ ನಾಥ್, ಕಮಲಾಕ್ಷಿ ರಾಜಣ್ಣ, ಪದ್ಮಾವತಿ ಮತ್ತಿತರರು ಸ್ಪರ್ಧೆಯಲ್ಲಿದ್ದರು. ಆದರೆ, ಶಿವಮೊಗ್ಗದ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷೆ ಬಿಲ್ಕಿಸ್ ಬಾನೋ ಅವರಿಗೆ ಮಣೆ ಹಾಕಿದೆ.
ವಿಧಾನಸಭೆಯಿಂದ ವಿಧಾನಪರಿಷತ್‌ನ 11 ಸ್ಥಾನಗಳಿಗೆ ಜೂನ್ 13ರಂದು ಮತದಾನ ನಡೆಯಲಿದೆ. ಸಂಖ್ಯಾಬಲದ ಆಧಾರದಲ್ಲಿ ಕಾಂಗ್ರೆಸ್ ಗೆಲ್ಲಬಹುದಾದ ಏಳು ಸ್ಥಾನಗಳಿಗೆ ನೂರಾರು ಮಂದಿ ಆಕಾಂಕ್ಷಿಗಳು ಇದ್ದರು. ಕಾಂಗ್ರೆಸ್‌ಗೆ ಲಭಿಸುವ ಏಳು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಕಗ್ಗಂಟಾದ ಹಿನ್ನೆಲೆಯಲ್ಲಿ ಶಾರ್ಟ್ ಲಿಸ್ಟ್ ಮಾಡಿಕೊಂಡು ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ದೆಹಲಿಗೆ ತೆರಳಿ, ಹೈ ಕಮಾಂಡ್ ನಾಯಕರೊಂದಿಗೆ ಚರ್ಚಿಸಿದ್ದರು. ಇದೀಗ ಕಾಂಗ್ರೆಸ್ ಹೈಕಮಾಂಡ್ 7 ಅಭ್ಯರ್ಥಿಗಳನ್ನು ಫೈನಲ್ ಮಾಡಿದೆ.
ಇದನ್ನೂ ಓದಿ | Assembly Election Results 2024: ಅರುಣಾಚಲ ಪ್ರದೇಶದಲ್ಲಿ ಬಿಜೆಪಿ, ಸಿಕ್ಕಿಂನಲ್ಲಿ SKMಗೆ ಪ್ರಚಂಡ ಗೆಲುವು
ಬಿಜೆಪಿಯಿಂದ ಸಿ.ಟಿ.ರವಿ, ಎನ್.ರವಿಕುಮಾರ್ ಸೇರಿ ಮೂವರಿಗೆ ಟಿಕೆಟ್
ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್‌ಗೆ (MLC Election) ನಡೆಯವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಜೂನ್ 3 ಕೊನೆಯ ದಿನವಾಗಿದೆ. ಹೀಗಾಗಿ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಮಾಜಿ ಸಚಿವ ಸಿ.ಟಿ.ರವಿ, ಎಂಎಲ್‌ಸಿ ಎನ್.ರವಿಕುಮಾರ್ ಹಾಗೂ ಮಾಜಿ ಶಾಸಕ ಎಂ.ಜಿ.ಮುಳೆ ಅವರನ್ನು ಬಿಜೆಪಿ ಅಭ್ಯರ್ಥಿಗಳನ್ನಾಗಿ ಘೋಷಿಸಲಾಗಿದೆ.
ಒಟ್ಟು 11 ಕ್ಷೇತ್ರಗಳ ಪೈಕಿ ಬಿಜೆಪಿ ಸಂಖ್ಯಾಬಲದ ಆಧಾರದ ಮೇಲೆ ಮೂರು ಸ್ಥಾನಗಳಲ್ಲಿ ಮಾತ್ರ ಗೆಲ್ಲಲು ಸಾಧ್ಯವಿದೆ. ಹೀಗಾಗಿ ಮೂರು ಅಭ್ಯರ್ಥಿಗಳನ್ನು ಘೋಷಿಸಿದ್ದು, ಎನ್. ರವಿ ಕುಮಾರ್ ಅವರಿಗೆ ಮತ್ತೊಮ್ಮೆ ಅವಕಾಶ ಸಿಕ್ಕಿದೆ. ಇನ್ನು ಲೋಕಸಭೆ ಚುನಾವಣೆಯಲ್ಲಿ ಚಿಕ್ಕಮಗಳೂರು ಟಿಕೆಟ್ ಆಕಾಂಕ್ಷಿಯಾಗಿದ್ದ ಸಿ.ಟಿ. ರವಿ ಅವರಿಗೆ ಪರಿಷತ್ ಟಿಕೆಟ್ ಒಲಿದಿದೆ. ಆದರೆ, ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಮಂಡ್ಯ ಲೋಕಸಭಾ ಟಿಕೆಟ್ ತ್ಯಾಗ ಮಾಡಿದ್ದ ಸುಮಲತಾ ಅಂಬರೀಶ್ಗೆ ಅವಕಾಶ ಸಿಕ್ಕಿಲ್ಲ.
ಇನ್ನು ಮಾಜಿ ಶಾಸಕ ಎಂ.ಜಿ ಮುಳೆ ಅವರು ಮರಾಠ ಸಮುದಾಯದ ಪ್ರಭಾವಿ ನಾಯಕರಾಗಿದ್ದು, ಈ ಮೊದಲು ಜೆಡಿಎಸ್‌ನಲ್ಲಿ ಶಾಸಕರಾಗಿದ್ದರು. ಕಳೆದ ಬಾರಿ ಬಸವಕಲ್ಯಾಣ ಉಪಚುನಾವಣೆ ವೇಳೆ ಬಿಜೆಪಿ ಸೇರ್ಪಡೆಗೊಂಡಿದ್ದರು. ಇದೀಗ ಅವರಿಗೆ ಬಿಜೆಪಿ ಪರಿಷತ್ ಟಿಕೆಟ್ ಸಿಕ್ಕಿದೆ.
ವಿಧಾನ ಪರಿಷತ್ತಿನ ದ್ವೈವಾರ್ಷಿಕ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ.
— BJP Karnataka (@BJP4Karnataka) June 2, 2024
ಅಭಿನಂದನೆಗಳು. pic.twitter.com/VmF22g1BhU
ಇದನ್ನೂ ಓದಿ | PM Narendra Modi: ಎಕ್ಸಿಟ್ ಪೋಲ್ ರಿಸಲ್ಟ್ ಬೆನ್ನಲ್ಲೇ ಪ್ರಧಾನಿ ಮೋದಿ ಬ್ಯಾಕ್ ಟು ಬ್ಯಾಕ್ ಮೀಟಿಂಗ್
ಹೈಕಮಾಂಡ್ ನಾಯಕರಿಗೆ ಸಿ.ಟಿ.ರವಿ ಧನ್ಯವಾದ
ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಕ್ಕೆ ಮಾಜಿ ಸಚಿವ ಸಿ.ಟಿ.ರವಿ ಅವರು ಹೈಕಮಾಂಡ್ ನಾಯಕರಿಗೆ ಧನ್ಯವಾದ ತಿಳಿಸಿದ್ದಾರೆ. ಕರ್ನಾಟಕ ವಿಧಾನಪರಿಷತ್ತಿನ ದೈವಾರ್ಷಿಕ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಕ್ಕೆ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳಾದ ಬಿ.ಎಲ್.ಸತೋಷ್, ,ಕೇಂದ್ರ ಗೃಹ ಸಚಿವರಾದ ಅಮಿತ್ ಶಾ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರ ಸಂಸದೀಯ ಮಂಡಳಿ ಸದಸ್ಯರಾದ ಬಿ.ಎಸ್.ಯಡಿಯೂರಪ್ಪ, ರಾಜ್ಯ ಕೋರ್ ಕಮಿಟಿಯ ಎಲ್ಲಾ ನನ್ನ ಸಹೋದ್ಯೋಗಿ ಬಂಧುಗಳಿಗೆ ಹೃತ್ಪೂರ್ವಕ ಧನ್ಯವಾದಗಳು. ಹಾಗೆಯೇ ವಿಧಾನಪರಿಷತ್ತಿಗೆ ಅಭ್ಯರ್ಥಿಗಳಾಗಿ ಆಯ್ಕೆಯಾದ ಎನ್. ರವಿಕುಮಾರ್ ಹಾಗೂ ಎಂ.ಜಿ. ಮೂಳೆಯವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.