Site icon Vistara News

MLC Election | ವಾಯವ್ಯ ಪದವೀಧರ ಕ್ಷೇತ್ರದಲ್ಲಿ ನಿರಾಣಿಗೆ ಪೈಪೋಟಿ ನೀಡಬಹುದೆ ಸಂಕ?

northwest mlc election

ಅನಿಲ್ ಕಾಜಗಾರ, ಬೆಳಗಾವಿ
ಪ್ರಭಾವಿ ರಾಜಕೀಯ ನಾಯಕ ಮತ್ತು ಸಾಮಾನ್ಯ ಕಾರ್ಯಕರ್ತನ ನಡುವಿನ ಹೋರಾಟ ಎಂದೇ ಬಿಂಬಿತವಾಗಿರುವ ವಾಯವ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ (MLC election) ಬಿಜೆಪಿಯ ಅಬ್ಬರ ಜೋರಾಗಿದೆ.
ಹಾಲಿ ಸದಸ್ಯ ಹಣಮಂತ ನಿರಾಣಿ ಎದುರು ಕಾಂಗ್ರೆಸ್ ಸಾಮಾನ್ಯ ಕಾರ್ಯಕರ್ತ ಸುನೀಲ ಸಂಕ ಕಣಕ್ಕಿಳಿಸಿರುವುದು ಅಚ್ಚರಿಯ ಸುದ್ದಿ. ಕ್ಷೇತ್ರದಲ್ಲಿ ಅತಿ ಹೆಚ್ಚು ಮತ ಹೊಂದಿರುವ ಬೆಳಗಾವಿ ಜಿಲ್ಲೆಯ ಹೊಂದಾಣಿಕೆ ರಾಜಕಾರಣ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಹಿಮ್ಮೇಳದಲ್ಲಿದೆ ಎನ್ನುವುದು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುವ ಗುಸುಗುಸು.

ಮೂರು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ವಾಯವ್ಯ ಪದವೀಧರ ಕ್ಷೇತ್ರಕ್ಕೆ ಇದೇ 12ರಂದು ಚುನಾವಣೆ ನಡೆಯಲಿದೆ. ಬಿಜೆಪಿಯಿಂದ ಹಾಲಿ ಸದಸ್ಯ ಹಣಮಂತ ನಿರಾಣಿ ಕಣದಲ್ಲಿದ್ದರೆ, ರಾಜಕೀಯ ಹಿನ್ನೆಲೆಯಿಲ್ಲದ ಸಾಮಾನ್ಯ ಕಾರ್ಯಕರ್ತ ಸುನೀಲ್ ಸಂಕಗೆ ಕಾಂಗ್ರೆಸ್ ಮಣೆ ಹಾಕಿದೆ. ಈ ಭಾಗದಲ್ಲಿ ಸಂಘಟನೆ ಇಲ್ಲದ ಕಾರಣಕ್ಕೆ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಆದರೆ ರಾಷ್ಟ್ರೀಯ ಪಕ್ಷಗಳ ಇಬ್ಬರು ಅಭ್ಯರ್ಥಿಗಳು ಸೇರಿ ಕಣದಲ್ಲಿ ಒಟ್ಟು 11 ಅಭ್ಯರ್ಥಿಗಳಿದ್ದಾರೆ. ಮತದಾನಕ್ಕೆ ದಿನಗಣನೆ ಆರಂಭವಾಗಿದ್ದು, ಅಭ್ಯರ್ಥಿಗಳು ಗೆಲುವಿಗಾಗಿ ಕೊನೆಯ ಕಸರತ್ತಿನಲ್ಲಿ ತೊಡಗಿದ್ದಾರೆ.

ಅಭ್ಯರ್ಥಿಗಳ್ಯಾರು, ಹಿನ್ನೆಲೆ ಏನು?

ವಾಯವ್ಯ ಪದವೀಧರ ಕ್ಷೇತ್ರದ ಚುನಾವಣೆ ಘೋಷಣೆಗೂ ಮುನ್ನವೇ ಬಿಜೆಪಿ ಹಾಗೂ ಕಾಂಗ್ರೆಸ್ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿದ್ದವು. ಹಣಮಂತ ನಿರಾಣಿ ಎರಡನೇ ಬಾರಿಗೆ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರೆ, ಕಾಂಗ್ರೆಸ್‍ನಲ್ಲಿ ಟಿಕೆಟ್‍ಗೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಮಾಜಿ ಸಚಿವ ವೀರಕುಮಾರ್ ಪಾಟೀಲ, ಮಾಜಿ ಶಾಸಕ ಕಾಕಾಸಾಹೇಬ್ ಪಾಟೀಲ, ಯುವ ಮುಖಂಡ ಕಿರಣ್ ಸಾಧುನವರ ಕಾಂಗ್ರೆಸ್ ಟಿಕೆಟ್‍ಗೆ ಲಾಬಿ ನಡೆಸಿದ್ದರು. ಆದರೆ ಕಾಂಗ್ರೆಸ್ ಮಾತ್ರ ಸಾಮಾನ್ಯ ಕಾರ್ಯಕರ್ತ ಸುನೀಲ ಸಂಕಗೆ ಟಿಕೆಟ್ ಘೋಷಣೆ ಮಾಡಿದ್ದು, ಕಾಂಗ್ರೆಸ್ ವಲಯದಲ್ಲೇ ಅಚ್ಚರಿಗೆ ಕಾರಣವಾಗಿತ್ತು.

ಸಂಕ ಕುಟುಂಬ ಮೂರು ತಲೆಮಾರುಗಳಿಂದ ಕಾಂಗ್ರೆಸ್ ಜೊತೆಗಿದೆ. ನ್ಯಾಯವಾದಿಯೂ ಆಗಿರುವ ಸುನೀಲ ಸಂಕ ಕಳೆದ ಎರಡು ವರ್ಷಗಳಿಂದ ಪದವೀಧರ ಕ್ಷೇತ್ರದಲ್ಲಿ ಸುತ್ತಾಡಿ ಚುನಾವಣೆಗೆ ಸಿದ್ಧತೆ ಮಾಡಿಕೊಂಡಿದ್ದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಸತೀಶ ಜಾರಕಿಹೊಳಿಗೂ ಈ ಚುನಾವಣೆ ಪ್ರತಿಷ್ಠೆಯಾಗಿದೆ. ಕಾಂಗ್ರೆಸ್ ಚುನಾವಣೆ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಅವರಿಗೂ ಸಂಕ ಗೆಲ್ಲಿಸುವ ಜವಾಬ್ದಾರಿ ನೀಡಲಾಗಿದೆ. ಆದರೆ ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಸುನೀಲ ಸಂಕ ಪ್ರಭಾವಿ ಅಲ್ಲ. ಇನ್ನು ಎರಡೂವರೆ ದಶಕಗಳಿಂದ ಸಕ್ರಿಯ ರಾಜಕಾರಣದಲ್ಲಿರುವ ಸಚಿವ ಮುರಗೇಶ ನಿರಾಣಿಗೂ ಈ ಚುನಾವಣೆ ಪ್ರತಿಷ್ಠೆಯಾಗಿದೆ. ಸಹೋದರ ಹಣಮಂತ ನಿರಾಣಿಯನ್ನು ಗೆಲ್ಲಿಸಲು ಪಣತೊಟ್ಟಿರುವ ಅವರು, ಮೂರು ಜಿಲ್ಲೆಯ ಬಿಜೆಪಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ.

ಜಾತಿ ಲೆಕ್ಕಾಚಾರ
ಹಾಲಿ ಪರಿಷತ್ ಸದಸ್ಯರೂ ಆಗಿರುವ ಹಣಮಂತ ನಿರಾಣಿ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಸೇರಿದ್ದು, ಗೆಲುವಿನ ಓಟ ಮುಂದುವರಿಸುವ ತವಕದಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿಗೆ ಠಕ್ಕರ್ ಕೊಡಲೆಂದೇ ರಣತಂತ್ರ ರೂಪಿಸಿರುವ ಕಾಂಗ್ರೆಸ್ ಕೂಡ ಪಂಚಮಸಾಲಿ ಸಮಾಜದ ಸುನೀಲ ಸಂಕಗೆ ಟಿಕೆಟ್ ನೀಡಿದೆ. ಬೆಳಗಾವಿ, ವಿಜಯಪುರ, ಬಾಗಲಕೋಟೆ ವ್ಯಾಪ್ತಿ ಹೊಂದಿರುವ ವಾಯವ್ಯ ಪದವೀಧರ ಕ್ಷೇತ್ರದಲ್ಲಿ ಲಿಂಗಾಯತ ಪಂಚಮಸಾಲಿ ಮತಗಳು ಅಧಿಕ ಪ್ರಮಾಣದಲ್ಲಿವೆ. ಈ ಕಾರಣಕ್ಕೆ ಉಭಯ ಪಕ್ಷಗಳು ಪಂಚಮಸಾಲಿ ಸಮಾಜಕ್ಕೆ ಮಣೆ ಹಾಕಿವೆ.

ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡಬೇಕೆಂದು ಕಳೆದೊಂದು ವರ್ಷಗಳಿಂದ ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ನಡೆಯತ್ತಿದೆ. ಆದರೆ ಬಿಜೆಪಿ ಸರ್ಕಾರ ಮಾತ್ರ ಪಂಚಮಸಾಲಿ ಸಮಾಜದ ಬೇಡಿಕೆಗೆ ಸ್ಪಂದಿಸುತ್ತಿಲ್ಲ. ಸಚಿವರಾಗಿರುವ ಮುರುಗೇಶ ನಿರಾಣಿ ಕೂಡ ಮೀಸಲಾತಿ ಹೋರಾಟದಲ್ಲಾಗಲಿ, ಮೀಸಲಾತಿ ಕೊಡಿಸಲು ಸರ್ಕಾರ ಮಟ್ಟದಲ್ಲಿ ಪ್ರಭಾವ ಬೀರುತ್ತಿಲ್ಲ ಎಂಬ ಬೇಸರ ಪಂಚಮಸಾಲಿ ಸಮಾಜಕ್ಕಿದೆ. ಮೀಸಲಾತಿ ಹೋರಾಟ ಈ ಚುನಾವಣೆಯಲ್ಲಿ ಬಿಜೆಪಿ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ | ಪರಿಷತ್‌ ಚುನಾವಣೆಯಲ್ಲಿ ನಿರಾಣಿ, ಶಹಾಪುರ ಗೆಲುವು ಖಚಿತ ಎಂದ ಬಿಎಸ್‌ವೈ, ಭರ್ಜರಿ ಪ್ರಚಾರ

ಬಿಜೆಪಿ ಉತ್ಸಾಹ – ಕಾಂಗ್ರೆಸ್ ನಿರುತ್ಸಾಹ!
ರಾಜಕೀಯ ಪ್ರಭಾವ, ಕ್ಷೇತ್ರದ ಮೇಲೆ ಹಿಡಿತ, ಸರ್ಕಾರ ತಮ್ಮದೇ ಇದ್ದರೂ ಬಿಜೆಪಿ ಅಭ್ಯರ್ಥಿ ಹಣಮಂತ ನಿರಾಣಿ ಮಾತ್ರ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಅಲ್ಲದೆ ಚುನಾವಣೆಯಲ್ಲಿ ಬಿಜೆಪಿ ನಾಯಕರು ತೋರುತ್ತಿರುವ ಉತ್ಸಾಹ ಕಾಂಗ್ರೆಸ್ ನಾಯಕರಲ್ಲಿ ಕಾಣುತ್ತಿಲ್ಲ. ಚುನಾವಣೆ ಮುನ್ನವೇ ಬೆಳಗಾವಿಗೆ ಆಗಮಿಸಿದ್ದ ಮಾಜಿ ಸಿಎಂ ಬಿಎಸ್‍ವೈ ಹಾಗೂ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮೂರು ಜಿಲ್ಲೆಯ ಬಿಜೆಪಿ ಶಾಸಕರು, ಮಾಜಿ ಶಾಸಕರ ಜೊತೆಗೆ ಸಭೆ ನಡೆಸಿದ್ದರು. ಮನಸ್ತಾಪ, ಭಿನ್ನಾಭಿಪ್ರಾಯಗಳನ್ನು ಶಮನಗೊಳಿಸಿದ್ದರು. ನಂತರ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೂಡ ಬೆಳಗಾವಿಗೆ ಆಗಮಿಸಿ ಮೂರು ಜಿಲ್ಲೆಗಳ ನಾಯಕರ ಸಭೆ ನಡೆಸಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವಂತೆ ಸೂಚನೆ ನೀಡಿದ್ದರು.

ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಕೂಡ ಆಗಮಿಸಿದ್ದರು. ಅಲ್ಲದೆ ಮೂರು ದಿನಗಳ ಕಾಲ ಬಿಎಸ್‍ವೈ, ನಳಿನ್‍ಕುಮಾರ್ ಕಟೀಲ್ ವಾಯವ್ಯ ಕ್ಷೇತ್ರದ ಪ್ರಚಾರದಲ್ಲಿ ತೊಡಗಿದ್ದರು. ಶನಿವಾರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕೂಡ ವಾಯವ್ಯ ಕ್ಷೇತ್ರದ ಪ್ರಚಾರದಲ್ಲಿ ತೊಡಗಲಿದ್ದಾರೆ. ಆದರೆ ಕಾಂಗ್ರೆಸ್ ನಾಯಕರು ಮಾತ್ರ ಈ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ನಾಯಕರಾದ ಎಂ.ಬಿ.ಪಾಟೀಲ್‌, ಈಶ್ವರ ಖಂಡ್ರೆ ಮೊದಲಾದವರು ಆಗಮಿಸಿದ್ದರು. ಬಳಿಕ ಡಿಕೆಶಿ ಪ್ರಚಾರಕ್ಕೆ ಒಮ್ಮೆಯೂ ಬಂದಿಲ್ಲ. ಮೂರು ದಿನಗಳ ಹಿಂದೆ ಬೆಳಗಾವಿಗೆ ಆಗಮಿಸಿದ್ದ ಸಿದ್ದರಾಮಯ್ಯ ಬೆಳಗಾವಿಯಲ್ಲಷ್ಟೇ ಪ್ರಚಾರ ಸಭೆ ನಡೆಸಿ ತೆರಳಿದ್ದಾರೆ. ಕಾಂಗ್ರೆಸ್ ನಾಯಕರ ನಿರುತ್ಸಾಹ ಅಭ್ಯರ್ಥಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ನಿರಾಣಿಗೆ ಸುಲಭದ ತುತ್ತಾಗ್ತಾರಾ ಸಂಕ?
ವಾಯವ್ಯ ಪದವೀಧರ ಕ್ಷೇತ್ರ 3 ಜಿಲ್ಲೆಗಳ ವ್ಯಾಪ್ತಿಯ 33 ವಿಧಾನಸಭೆ ಕ್ಷೇತ್ರಗಳನ್ನು ಹೊಂದಿದೆ. 33 ವಿಧಾನಸಭೆ ಕ್ಷೇತ್ರಗಳ ಪೈಕಿ ಬಿಜೆಪಿ 22 ಕಾಂಗ್ರೆಸ್ 10 ಹಾಗೂ ಜೆಡಿಎಸ್‌ನ ಒಬ್ಬ ಶಾಸಕರಿದ್ದಾರೆ. ಬೆಳಗಾವಿಯ 18 ವಿಧಾನಸಭೆ ಕ್ಷೇತ್ರಗಳಲ್ಲಿ 13 ಬಿಜೆಪಿ 5 ಕಾಂಗ್ರೆಸ್, ವಿಜಯಪುರದ 8 ವಿಧಾನಸಭೆ ಕ್ಷೇತ್ರಗಳಲ್ಲಿ 4 ಬಿಜೆಪಿ, 3 ಕಾಂಗ್ರೆಸ್ 1 ಜೆಡಿಎಸ್ ಹಾಗೂ ಬಾಗಲಕೋಟದ 7 ವಿಧಾನಸಭೆ ಕ್ಷೇತ್ರಗಳ ಪೈಕಿ 5 ಬಿಜೆಪಿ ಹಾಗೂ ಇಬ್ಬರು ಕಾಂಗ್ರೆಸ್ ಶಾಸಕರಿದ್ದಾರೆ.

ಪಕ್ಷಗಳ ಬಲಾಬಲ ನೋಡುವುದಾದರೆ ಬಿಜೆಪಿ ಅಭ್ಯರ್ಥಿ ಹಣಮಂತ ನಿರಾಣಿಗೆ ಕಾಂಗ್ರೆಸ್ ಅಭ್ಯರ್ಥಿ ಸುನೀಲ ಸಂಕ ಸುಲಭದ ತುತ್ತಾಗುವುದರಲ್ಲಿ ಅನುಮಾನವೇ ಇಲ್ಲ ಎನ್ನಲಾಗುತ್ತಿದೆ. ಹಣಮಂತ ನಿರಾಣಿ ಹಾಗೂ ಸುನೀಲ್ ಸಂಕ ಹಾಗೂ ಪಕ್ಷೇತರರು ಸೇರಿ 11 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ನೇರಸ್ಪರ್ಧೆ ಇದ್ದು, ಉಳಿದವರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಹ ಸ್ಥಿತಿ ಇದೆ.

ಮತದಾರರ ಜಿಲ್ಲಾವಾರು ವಿವರ

ಜಿಲ್ಲೆಪುರುಷಮಹಿಳೆಇತರೆಒಟ್ಟು
ಬೆಳಗಾವಿ33,99114,1310145,124
ವಿಜಯಪುರ15,7225,1000120,823
ಬಾಗಲಕೋಟೆ24,3279,3220233,651
ಒಟ್ಟು ಮತದಾರರು71,04028,5540499,598
Exit mobile version