Site icon Vistara News

MLC Election Results: ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿದ ಕಾಂಗ್ರೆಸ್‌ ಅಭ್ಯರ್ಥಿ ಡಾ.ಚಂದ್ರಶೇಖರ್ ಪಾಟೀಲ್

MLC Election

ಕಲಬುರಗಿ: ವಿಧಾನ ಪರಿಷತ್‌ಗೆ ಈಶಾನ್ಯ ಪದವೀಧರ ಕ್ಷೇತ್ರದಿಂದ ನಡೆದ ಚುನಾವಣೆಯಲ್ಲಿ (North East Graduate Constituency) ಎರಡನೇ ಬಾರಿ ಕಾಂಗ್ರೆಸ್‌ ಅಭ್ಯರ್ಥಿ ಡಾ.ಚಂದ್ರಶೇಖರ್ ಪಾಟೀಲ್ ಗೆಲುವು ಕಂಡಿದ್ದಾರೆ. ಇವರು 4,651 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ ವಿರುದ್ಧ ಜಯ ಸಾಧಿಸುವ ಮೂಲಕ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದಾರೆ.

ಎರಡನೇ ಪ್ರಾಶಸ್ತ್ಯ ಮತದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಚಂದ್ರಶೇಖರ ಪಾಟೀಲ್ ಗೆಲುವು ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಡಾ.ಚಂದ್ರಶೇಖರ ಪಾಟೀಲ್‌ಗೆ 43,484 ಮತ ಬಂದಿದ್ದರೆ, ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ 38,833 ಮತಗಳು ಗಳಿಸಿದ್ದಾರೆ. ಈ ಮೂಲಕ 4,651 ಮತಗಳ ಅಂತರದಿಂದ ಡಾ.ಚಂದ್ರಶೇಖರ್ ಪಾಟೀಲ್ ಕ್ಷೇತ್ರದಲ್ಲಿ ವಿಜಯಪತಾಕೆ ಹಾರಿಸಿದ್ದಾರೆ. ಒಟ್ಟಾರೆ 1,09,031 ಮತ ಚಲಾವಣೆಯಾಗಿದ್ದು, ಇದರಲ್ಲಿ 96,519 ಮತಗಳು ಪುರಸ್ಕೃತಗೊಂಡಿದ್ದು, 12,513 ಮತಗಳು ತಿರಸ್ಕೃತಗೊಂಡಿವೆ.

ಇದನ್ನೂ ಓದಿ | MLC Election Results: ದಕ್ಷಿಣ ಶಿಕ್ಷಕರ ಕ್ಷೇತ್ರ; ಮೊದಲ ಪ್ರಾಶಸ್ತ್ಯ ಮತದಲ್ಲೇ ಮೈತ್ರಿ ಅಭ್ಯರ್ಥಿ ವಿವೇಕಾನಂದ ಭರ್ಜರಿ ಗೆಲುವು

ಫಲಿತಾಂಶದ ಬಗ್ಗೆ ಕಾಂಗ್ರೆಸ್‌ನ ನೂತನ ಪರಿಷತ್ ಸದಸ್ಯ ಡಾ.ಚಂದ್ರಶೇಖರ್ ಪಾಟೀಲ್ ಮಾತನಾಡಿ, ಇದು ನನ್ನ ಗೆಲುವಲ್ಲಾ, ಏಳು ಜಿಲ್ಲೆಯ ಪದವಿಧರರ ಗೆಲುವು. ನನ್ನ ಗೆಲುವಿಗೆ ಶಿಕ್ಷಕರು, ಪದವೀಧರರು ಕಾರಣ. ಕಲ್ಯಾಣ‌ ಕರ್ನಾಟಕ ಭಾಗದ ನಿರುದ್ಯೋಗ ಸಮಸ್ಯೆ ಬಗೆಹರಿಸಲು ಶ್ರಮಿಸುವೆ. ಹಳೆ ಪಿಂಚಣಿ ಯೋಜನೆ ಜಾರಿಗೆ ತರಲು ಪ್ರಯತ್ನ ಮಾಡುವೆ. ನಾನು ರಾಜಕಾರಣಿ ಮನೆತನದವನು, ಶಿಕ್ಷಣ ಸಂಸ್ಥೆ ನಡೆಸುತ್ತಿದ್ದೇನೆ. ನನಗೂ ಶಿಕ್ಷಕರ ಸಮಸ್ಯೆ ಕಷ್ಟ ಏನು ಅಂತ ಗೊತ್ತಿದೆ. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇತ್ತು, ಕೆಲಸ‌ ಮಾಡಲು ಸಹಕರಿಸಲಿಲ್ಲ.. ಈಗ ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದೆ. ಅತಿಥಿ ಉಪನ್ಯಾಸಕರ ಕಾಯಮಾತಿಗೆ ಹಿರಿಯರ ಜತೆ ಮಾತನಾಡುವೆ ಎಂದು ತಿಳಿಸಿದ್ದಾರೆ.

ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ಧನಂಜಯ ಸರ್ಜಿಗೆ ಗೆಲುವು; ರಘುಪತಿ ಭಟ್‌ ಬಂಡಾಯ ವಿಫಲ

ಮೈಸೂರು: ವಿಧಾನ ಪರಿಷತ್‌ಗೆ (MLC Election Results) ನೈರುತ್ಯ ಪದವೀಧರ ಕ್ಷೇತ್ರದಿಂದ (Graduate constituency) ನಡೆದ ಚುನಾವಣೆಯಲ್ಲಿ ಬಿಜೆಪಿ (BJP) ಅಭ್ಯರ್ಥಿ ಡಾ. ಧನಂಜಯ ಸರ್ಜಿಗೆ ಭರ್ಜರಿ ಗೆಲುವು ದೊರೆತಿದೆ. ಕಾಂಗ್ರೆಸ್ (Congress) ಅಭ್ಯರ್ಥಿ ಆಯನೂರು ಮಂಜುನಾಥ್‌ಗೆ ಹೀನಾಯ ಸೋಲಾಗಿದೆ. ಬಿಜೆಪಿಯಿಂದ ಬಂಡಾಯ ಎದ್ದು ಸ್ಪರ್ಧಿಸಿದ್ದ ಮಾಜಿ ಶಾಸಕ ರಘುಪತಿ ಭಟ್‌ (Raghupathi Bhat) ಅವರ ಉಮೇದುವಾರಿಕೆ ವಿಫಲವಾಗಿದೆ.

ಬಿಜೆಪಿಯ ಧನಂಜಯ ಸರ್ಜಿಗೆ 37,627 ಮತಗಳು ಲಭ್ಯವಾಗಿವೆ. ಕಾಂಗ್ರೆಸ್‌ನ ಆಯನೂರು ಮಂಜುನಾಥ್‌ಗೆ 13,516 ಮತಗಳು ಲಭ್ಯವಾಗಿವೆ. ಕಾಂಗ್ರೆಸ್ ವಿರುದ್ಧ ಬಿಜೆಪಿ ಅಭ್ಯರ್ಥಿ ಧನಂಜಯ ಸರ್ಜಿಗೆ 24,111 ಮತಗಳ ಅಂತರದ ಭರ್ಜರಿ ಗೆಲುವು ಪ್ರಾಪ್ತವಾಗಿವೆ. ಈ ಮೂಲಕ ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಸತತ ಏಳನೇ ಬಾರಿ ಬಿಜೆಪಿ ಗೆಲುವಿನ ನಗೆ ಬೀರಿದೆ.

ಚಲಾವಣೆಯಾಗಿದ್ದ ಒಟ್ಟು ಮತಗಳು 66497. ಈ ಪೈಕಿ ಸಿಂಧುವಾದ ಮತಗಳು 61382. ಕುಲಗೆಟ್ಟ ಮತಗಳು 5115. ಗೆಲುವಿಗಾಗಿ ನಿಗದಿಪಡಿಸಿದ್ದ ಕೋಟಾ ಮತಗಳು 30,692. ನಿಗದಿಪಡಿಸಿದ್ದ ಕೋಟಾ ಮತಗಳಿಗಿಂತ ಹೆಚ್ಚಿನ ಪ್ರಮಾಣದ ಮೊದಲ ಪ್ರಾಶಸ್ತ್ಯ ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದ್ದಾರೆ ಬಿಜೆಪಿಯ ಧನಂಜಯ ಸರ್ಜಿ.

ಇದನ್ನೂ ಓದಿ | MLC Election Results: ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಭೋಜೇಗೌಡ ಜಯಭೇರಿ

ಬಿಜೆಪಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್‌ಗೆ 7,039 ಮತಗಳು ಲಭ್ಯವಾಗಿವೆ. ಇವರ ಪರವಾಗಿ ಶಿವಮೊಗ್ಗದಿಂದ ಮಾಜಿ ಸಚಿವ ಈಶ್ವರಪ್ಪ ಕೂಡ ಬಂದು ಮತ ಯಾಚಿಸಿದ್ದರು. ಆದರೆ ಬಿಜೆಪಿ ಮತ ಗಳಿಕೆಯಲ್ಲಿ ಯಾವುದೇ ಕನ್ನ ಕೊರೆಯಲು ಇವರು ವಿಫಲರಾಗಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಇವರಿಗೆ ಪಕ್ಷ ಟಿಕೆಟ್‌ ನೀಡಿರಲಿಲ್ಲ. ವಿಧಾನ ಪರಿಷತ್ತಿಗೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ರಘುಪತಿ ಭಟ್‌ಗೆ ಅದೂ ಸಿಕ್ಕಿರಲಿಲ್ಲ. ಇದೀಗ ಬಂಡಾಯವೂ ವಿಫಲವಾಗಿದೆ. ಹಿಜಾಬ್‌ ಮುಂತಾದ ಪ್ರಕರಣಗಳಲ್ಲಿ ಆಕ್ರಮಣಕಾರಿ ನಿಲುವು ತಾಳಿದ್ದ ರಘುಪತಿ ಭಟ್‌ ಅವರ ಈ ತೀವ್ರ ನಿಲುವೇ ಅವರನ್ನು ಬಿಜೆಪಿ ಕೈಬಿಡಲು ಕಾರಣವಾಯಿತಾ ಎಂಬ ಮಾತು ಇದೀಗ ಕೇಳಿ ಬರುತ್ತಿದೆ.

Exit mobile version