Site icon Vistara News

ವಿಧಾನ ಪರಿಷತ್‌ ಚುನಾವಣೆ ಮತದಾನ ಆರಂಭ: 10.25% ಮತ ಚಲಾವಣೆ

ವಿಧಾನ ಪರಿಷತ್‌

ಬೆಂಗಳೂರು: ವಿಧಾನ ಪರಿಷತ್ತಿನ 2 ಶಿಕ್ಷಕರ ಕ್ಷೇತ್ರ ಹಾಗೂ 2 ಪದವೀಧರರ ಕ್ಷೇತ್ರಗಳಿಗೆ ಸೋಮವಾರ ಬೆಳಗ್ಗೆ 8ರಿಂದ ಮತದಾನ ಆರಂಭವಾಗಿದೆ. ಸಂಜೆ 5ರ ವರೆಗೆ ಮತದಾನ ನಡೆಯಲಿದೆ. ವಾಯವ್ಯ ಶಿಕ್ಷಕರ ಕ್ಷೇತ್ರ ಹಾಗೂ ಪಶ್ಚಿಮ ಶಿಕ್ಷಕರ ಕ್ಷೇತ್ರ, ದಕ್ಷಿಣ ಪದವೀಧರರ ಕ್ಷೇತ್ರ, ವಾಯವ್ಯ ಪದವೀಧರರ ಕ್ಷೇತ್ರ ಚುನಾವಣೆ ನಡೆದಿದೆ. ಮತದಾನ ಪ್ರಕ್ರಿಯೆ ಸುಗಮವಾಗಿ ನಡೆಯುತ್ತಿದ್ದು, ಬೆಳಗ್ಗೆ 10 ಗಂಟೆ ವೇಳೆಗೆ 10.25% ಮತದಾನವಾಗಿತ್ತು.

ಹುಬ್ಬಳ್ಳಿಯಲ್ಲಿ ಮತದಾನ ಪ್ರಕ್ರಿಯೆ ಶುರುವಾಗಿದ್ದು, ಶಿಕ್ಷಕ ಮತದಾರರು 7 ಅಭ್ಯರ್ಥಿಗಳ ಹಣೆಬರಹ ಬರೆಯಲಿದ್ದಾರೆ. ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡ ಪಶ್ಚಿಮ ಶಿಕ್ಷಕರ ಕ್ಷೇತ್ರ ಚುನಾವಣೆಯಲ್ಲಿ ಬಿಜೆಪಿಯಿಂದ ಬಸವರಾಜ ಹೊರಟ್ಟಿ, ಕಾಂಗ್ರೆಸ್‌ನಿಂದ ಬಸವರಾಜ ಗುರಿಕಾರ, ಜೆಡಿಎಸ್‌ನ ಶ್ರೀಶೈಲ ಗಡದಿನ್ನಿ ಸೇರಿದಂತೆ ಏಳು ಜನ ಅಖಾಡದಲ್ಲಿದ್ದಾರೆ.

ನಾಲ್ಕು ಜಿಲ್ಲೆಗಳಲ್ಲಿ 76 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. ಇವರಲ್ಲಿ 10,983 ಪುರುಷ ಹಾಗೂ 6,990 ಮಹಿಳೆಯರು ಸೇರಿ ಒಟ್ಟು 17,973 ಮತದಾರರು ಮತಹಕ್ಕು ಹೊಂದಿದ್ದಾರೆ. ಧಾರವಾಡ -21, ಉತ್ತರ ಕನ್ನಡ-15, ಹಾವೇರಿ-26, ಗದಗ- 14 ಸೇರಿದಂತೆ ಹೆಚ್ಚುವರಿಯಾಗಿ ಒಂದು ಮತಗಟ್ಟೆ ಸ್ಥಾಪನೆ ಮಾಡಲಾಗಿದೆ.

ಬಾಗಲಕೋಟೆ ಜಿಲ್ಲೆ

ಬಾಗಲಕೋಟೆ, ವಿಜಯಪುರ, ಬೆಳಗಾವಿ ಜಿಲ್ಲಾ ವ್ಯಾಪ್ತಿಯ ಕ್ಷೇತ್ರಗಳನ್ನೊಳಗೊಂಡ ಪಶ್ಚಿಮ ಶಿಕ್ಷಕರ ಕ್ಷೇತ್ರ ಚುನಾವಣೆಯಲ್ಲಿ ಒಟ್ಟು 5173 ಮತದಾರರು ಮತ ಹಕ್ಕು ಹೊಂದಿದ್ದಾರೆ. ಪದವೀಧರ ಕ್ಷೇತ್ರದಲ್ಲಿ 33,651 ಮತದಾರರು ಮತ ಹಕ್ಕು ಹೊಂದಿದ್ದು, ಜಿಲ್ಲೆಯಲ್ಲಿ ಒಟ್ಟು 32 ಮತಗಟ್ಟೆಗಳು ಹಾಗೂ 16 ಹೆಚ್ಚುವರಿ ಸೇರಿ ಒಟ್ಟು 48 ಮತಗಟ್ಟೆಗಳು ಇವೆ. 11 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್, 23 ಕಡೆ ವಿಡಿಯೋಗ್ರಫಿ ವ್ಯವಸ್ಥೆ ಇದ್ದು, ಚುನಾವಣೆ ಕರ್ತವ್ಯಕ್ಕೆ 290 ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ | MLC Election | ರಂಗೇರಿದೆ ಪಶ್ಚಿಮ ಶಿಕ್ಷಕರ ಕ್ಷೇತ್ರ: ಹೊರಟ್ಟಿ ಮೂಲಕ ಖಾತೆ ತೆರೆಯುವುದೆ ಬಿಜೆಪಿ?

ವಿಜಯಪುರದಲ್ಲಿ ಶಿಕ್ಷಕರ ಕ್ಷೇತ್ರದ ಒಟ್ಟು 6,928 ಮತದಾರರು ಮತಹಕ್ಕು ಹೊಂದಿದ್ದು, ಇವರಲ್ಲಿ ಪುರುಷರು 4985, ಮಹಿಳೆಯರು ಸೇರಿ ಒಟ್ಟು 20,823 ಮತಹಕ್ಕು ಹೊಂದಿದ್ದಾರೆ. ಪದವೀಧರರ ಕ್ಷೇತ್ರದ ಕಣದಲ್ಲಿ 11 ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ.

ವಿಜಯಪುರ ಜಿಲ್ಲೆ

ವಿಜಯಪುರ ಜಿಲ್ಲೆಯಲ್ಲಿ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಪುರುಷ ಮತದಾರರರು 15,722, ಮಹಿಳಾ ಮತದಾರರು 5,100, ಹಾಗೂ ಇತರೆ ಒಂದು ಒಟ್ಟು 20,823 ಮತಹಕ್ಕು ಹೊಂದಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಒಟ್ಟು ಮತಗಟ್ಟೆಗಳ ಸಂಖ್ಯೆ 47 ಇದ್ದು, ಸಾಮಾನ್ಯ ಮತಗಟ್ಟೆಗಳು 29, ಸೂಕ್ಷ್ಮ ಮತಗಟ್ಟೆಗಳು 15, ಅತೀ ಸೂಕ್ಷ್ಮ ಮತಗಟ್ಟೆಗಳು 3 ಎಂದು ಗುರುತಿಸಲಾಗಿದೆ. ಎಸ್ಪಿ ಹಾಗೂ ಎಎಸ್ಪಿ ನೇತೃತ್ವದಲ್ಲಿ ಭದ್ರತೆ ನೀಡಿದ್ದು, 3 ಡಿವೈಎಸ್ಪಿ, 11 ಇನ್ಸಪೆಕ್ಟರ್, 16 ಸಬ್ ಇನ್ಸಪೆಕ್ಟರ್ ಸೇರಿದಂತೆ 12 ಡಿಎಆರ್ ತುಕಡಿ, 3 ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದೆ.

ವಿಜಯಪುರ ನಗರದ ಗಾಂಧಿ ವೃತ್ತದ ಬಳಿಯ ಸರ್ಕಾರಿ ಪಿಯು‌ ಕಾಲೇಜಿನಲ್ಲಿ ಮತದಾನ ಪ್ರಕ್ರಿಯೆ ಶುರುವಾಗಿದ್ದು, ಸರದಿ ಸಾಲಿನಲ್ಲಿ ನಿಂತು ಶಿಕ್ಷಕರು ಹಾಗೂ ಪದವೀಧರರು ಮತದಾನ ಮಾಡುತ್ತಿದ್ದಾರೆ.ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಚಂದ್ರಶೇಖರ ಲೋಣಿ ಮತಗಟ್ಟೆಯಲ್ಲಿ ಮೊದಲ ಮತದಾನ ಮಾಡುತ್ತಿದ್ದಾರೆ.

ಹಾಸನ ಜಿಲ್ಲೆ

ಹಾಸನದಲ್ಲಿ ಪುರುಷ ಮತದಾರರು-13,960, ಮಹಿಳಾ ಮತದಾರರು-10,291 ಹಾಗೂ ಇತರೆ‌-1 ಇದ್ದು ಒಟ್ಟು 24,252 ಮತದಾರರು ಮತಹಕ್ಕನ್ನು ಹೊಂದಿದ್ದಾರೆ. ಮತದಾನ ಮಾಡಲು ಜಿಲ್ಲೆಯಲ್ಲಿ ಒಟ್ಟು 27 ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದ್ದು, ಚುನಾವಣೆ ಕರ್ತವ್ಯಕ್ಕೆ 150 ಮತಗಟ್ಟೆ ಸಿಬ್ಬಂದಿ, 33 ಮೈಕ್ರೋ ಅಬ್ಸರ್ವರ್ ಬಳಕೆ ಮಾಡಲಾಗಿದೆ. ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಸೇರಿ ಒಟ್ಟು 19 ಅಭ್ಯರ್ಥಿಗಳು ಕಣದಲ್ಲಿ ಸ್ಪರ್ಧಿಸಲಿದ್ದಾರೆ. ಮತಕೇಂದ್ರಗಳ 100 ಮೀಟರ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ನಿಷೇಧಾಜ್ಞೆ ಜಾರಿ ಆಗಿದೆ.

ಹಾಸನ ಜಿಲ್ಲೆಯಲ್ಲಿ ಮತದಾನ ಪ್ರಕ್ರಿಯೆ ಆರಂಭಗೊಂಡಿದ್ದು, ಚನ್ನರಾಯಪಟ್ಟಣ ತಾಲೂಕು ಕೇಂದ್ರದಲ್ಲಿ ಜೆಡಿಎಸ್ ಶಾಸಕ ಸಿ.ಎನ್.‌ ಬಾಲಕೃಷ್ಣರಿಂದ ಪ್ರಚಾರ ಶುರುವಾಗಿದ್ದು, ಬೂತ್‌ನ ಮುಂದೆ ನಿಂತು ಮನವಿ ಮಾಡುತ್ತಿದ್ದಾರೆ. ಇತ್ತ ಕಾಂಗ್ರೆಸ್‌ನ ಮಾಜಿ ಎಂಎಲ್‌ಸಿ ಎಂ. ಎ. ಗೋಪಾಸ್ವಾಮಿ ಕಡೆ ಹಂತದ ಪ್ರಯತ್ನ ನಡೆಸಿದ್ದಾರೆ.

ಹಾವೇರಿ ಜಿಲ್ಲೆ

ಹಾವೇರಿಯಲ್ಲಿ ಮತದಾನ ಆರಂಭಗೊಂಡಿದ್ದು, 26 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ. ಮತ ಚಲಾಯಿಸಲಿರುವ 3,249 ಪುರುಷ ಹಾಗೂ 1,374 ಮಹಿಳಾ ಮತದಾರರು ಸೇರಿ 4,623 ಮತದಾರರು ಮತ ಹಕ್ಕು ಹೊಂದಿದ್ದಾರೆ. ಶಿಗ್ಗಾಂವಿ ತಾಲೂಕಿನಲ್ಲಿ 280 ಪುರುಷರು ಹಾಗೂ 127 ಮಹಿಳೆಯರು ಸೇರಿ 407 ಮತ ಚಲಾಯಿಸಲು ಅರ್ಹರಾಗಿದ್ದಾರೆ. ಸವಣೂರ ತಾಲೂಕಿನಲ್ಲಿ 207 ಪುರುಷರು ಹಾಗೂ 69 ಮಹಿಳೆಯರು ಸೇರಿ 276 ಮತದಾರರು ಹಾಗೂ ಹಾನಗಲ್ ತಾಲೂಕಿನಲ್ಲಿ 493 ಪುರುಷರು ಹಾಗೂ 168 ಮಹಿಳೆಯರು ಸೇರಿ 661 ಮತದಾರರು ಮತ ಚಲಾಯಿಸುತ್ತಿದ್ದಾರೆ. ಶಾಂತಿಯುತವಾಗಿ ಮತದಾನ ಆರಂಭವಾಗಿದೆ.

ಮಂಡ್ಯ ಜಿಲ್ಲೆ

ಮಂಡ್ಯ ಜಿಲ್ಲೆಯಲ್ಲಿ ಮತದಾನಕ್ಕೆ ಸಕಲ ಸಿದ್ದತೆ ಆಗಿದ್ದು, ಜಿಲ್ಲೆಯಲ್ಲಿ ಒಟ್ಟು ಪದವೀಧರ ಮತದಾರರ ಸಂಖ್ಯೆ-47,302, ಮಂಡ್ಯ-15,925, ಕೆ.ಆರ್. ಪೇಟೆ-3,326, ನಾಗಮಂಗಲ-2,959, ಪಾಂಡವಪುರ-3,705, ಮದ್ದೂರು-10,360, ಶ್ರೀರಂಗಪಟ್ಟಣ-3,307, ಮಳವಳ್ಳಿ-7,720 ಮಂದಿ ಮತದಾರರು ಮತ ಹಕ್ಕು ಹೊಂದಿದ್ದಾರೆ.

45 ಕೇಂದ್ರಗಳಲ್ಲಿ ಮತದಾನ ಪ್ರಕ್ರಿಯೆ ನಡೆದಿದ್ದು, ಮಂಡ್ಯ 15, ಕೆ.ಆರ್.ಪೇಟೆ 3 ನಾಗಮಂಗಲ 3 ಮತಕೇಂದ್ರಗಳು ಇವೆ. ಪಾಂಡವಪುರ 4, ಮದ್ದೂರು 10, ಶ್ರೀರಂಗಪಟ್ಟಣ 3, ಮಳವಳ್ಳಿಯಲ್ಲಿ 7 ಮತ ಕೇಂದ್ರಗಳ ಸ್ಥಾಪನೆ ಮಾಡಲಾಗಿದೆ. ಮತಕೇಂದ್ರಗಳ ಸುತ್ತ ಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, 4 ಡಿಎಸ್ಪಿ, 15 ಸಿಪಿಐ, 20 ಪಿಸಿಐ, 45 ಎಎಸ್ಐ, 183 ಪೊಲೀಸ್ ಕಾನ್‌ಸ್ಟೇಬಲ್‌ ಸೇರಿ 9 ಡಿಎಆರ್ ತುಕಡಿ ನಿಯೋಜನೆ ಮಾಡಲಾಗಿದೆ.

ಮೈಸೂರಿನಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರಿಂದ ಮತದಾನ ಮಾಡಿದ್ದು, ರಾಮಕೃಷ್ಣನಗರದ ರಾಮಕೃಷ್ಣ ವಿದ್ಯಾ ಕೇಂದ್ರದಲ್ಲಿ ಸಂಸದ ಪ್ರತಾಪ್ ಸಿಂಹ ಮತ ಚಲಾಯಿಸಿದ್ದಾರೆ.

ಇದನ್ನೂ ಓದಿ | ಬೆಳಗಾವಿ: ವಾಯುವ್ಯ ಪದವೀಧರ, ಶಿಕ್ಷಕರ ಕ್ಷೇತ್ರಕ್ಕೆ ಇಂದು ಮತದಾನ

Exit mobile version