ಬೆಂಗಳೂರು: ವಿಜಯಪುರ ಮಹಾನಗರ ಪಾಲಿಕೆ ಹಾಗೂ ಕೊಳ್ಳೇಗಾಲ ನಗರಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿರುವುದು ಮುಂದಿನ ವಿಧಾನಸಭಾ ಚುನಾವಣೆಯ ದಿಕ್ಸೂಚಿಯಾಗಿದೆ. ಇದರಿಂದ ರಾಜ್ಯದ ಜನತೆ ಬಿಜೆಪಿ ಪರ ಎಂಬುವುದು ಮತ್ತೊಮ್ಮೆ ಸಾಬೀತಾಗಿದ್ದು, ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೇರಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿಜಯಪುರ ನಗರ ಪಾಲಿಕೆಯ ಒಟ್ಟು 35 ವಾರ್ಡ್‌ಗಳಲ್ಲಿ ನಮ್ಮ ಪಕ್ಷವು 17 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಪಾಲಿಕೆಯ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲಿದೆ. ಇನ್ನು ಕೊಳ್ಳೆಗಾಲ ನಗರಸಭೆ ಉಪಚುನಾವಣೆಯಲ್ಲಿ ಒಟ್ಟು 7 ವಾರ್ಡ್‌ಗಳಲ್ಲಿ 6 ಸ್ಥಾನಗಳಲ್ಲಿ ಪಕ್ಷವು ಗೆಲುವು ಸಾಧಿಸಿದೆ. ಅಲ್ಲದೇ ರಾಜ್ಯದ ವಿವಿಧೆಡೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಧೂಳಿಪಟವಾಗಿ, ಹೀನಾಯವಾಗಿ ಸೋತಿವೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ನಡೆಸಿದರೂ ಕರ್ನಾಟಕದ ಜನತೆ ಎಂದೆಂದಿಗೂ ಬಿಜೆಪಿ ಪರ ಎನ್ನುವುದಕ್ಕೆ ಈ ಚುನಾವಣಾ ಫಲಿತಾಂಶವೇ ಸಾಕ್ಷಿಯಾಗಿದೆ. ವಿಜಯಶಾಲಿಗಳಾದ ಎಲ್ಲ ಬಿಜೆಪಿ ಅಭ್ಯರ್ಥಿಗಳಿಗೆ ಅಭಿನಂದನೆಗಳು. ಚುನಾವಣೆಯಲ್ಲಿ ಶ್ರಮಿಸಿದ ಶಾಸಕರು, ಸಂಸದರು, ಜನಪ್ರತಿನಿಧಿಗಳು, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಬಿಜೆಪಿ ಮೇಲೆ ನಂಬಿಕೆ ಇರಿಸಿದ ಮತದಾರರಿಗೆ ಧನ್ಯವಾದಗಳನ್ನು ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ | ಕೊಳ್ಳೇಗಾಲ ನಗರಸಭೆ ಬೈ ಎಲೆಕ್ಷನ್, ವಿಜಯಪುರ ಪಾಲಿಕೆ ಗೆಲುವು ಮುಂದಿನ ಚುನಾವಣೆಗೆ ದಿಕ್ಸೂಚಿ: ಸಿಎಂ