Site icon Vistara News

Mobile Clinic | ಹಳ್ಳಿಗಾಡಿನಲ್ಲಿ ಸಂಚರಿಸಲಿದೆ ಶಾರದಾದೇವಿ ಕಣ್ಣಿನ ಆಸ್ಪತ್ರೆ

ಬೆಂಗಳೂರು: ಕರ್ನಾಟಕದ ಹಳ್ಳಿಗಾಡಿನಲ್ಲಿ ವಾಸಿಸುತ್ತಿರುವ ಮಕ್ಕಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸೇರಿದಂತೆ ಐದು ಲಕ್ಷಕ್ಕೂ ಹೆಚ್ಚಿನ ಜನರಿಗೆ ಶಾರದಾದೇವಿ ಸಂಚಾರಿ ಕಣ್ಣಿನ ಆಸ್ಪತ್ರೆಯು (Mobile clinic) ಕಣ್ಣಿನ ಆರೋಗ್ಯಕ್ಕೆ ಸಂಬಂಧಿಸಿದ ಸೇವೆಗಳನ್ನು ಒದಗಿಸಲಿದೆ.

ಇನ್ಫೊಸಿಸ್‌ ಲಿಮಿಟೆಡ್‌ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ಹಾಗೂ ಸಾಮಾಜಿಕ ಅಭಿವೃದ್ಧಿ ಚಟುವಟಿಕೆಯನ್ನು ನಿಭಾಯಿಸುವ ಇನ್ಫೊಸಿಸ್‌ ಪ್ರತಿಷ್ಠಾನವು ಶ್ರೀ ಶಾರದಾದೇವಿ ಸಂಚಾರಿ ಕಣ್ಣಿನ ಆಸ್ಪತ್ರೆ ಆರಂಭಿಸಲು ಶ್ರೀ ರಾಮಕೃಷ್ಣ ಸೇವಾಶ್ರಮದ ಜತೆಗೂಡುತ್ತಿರುವುದಾಗಿ ತಿಳಿಸಿದೆ.

ರಾಜ್ಯದ ಹಳ್ಳಿಗಾಡಿನ ಜನರಿಗೆ ಸೇವೆ ಒದಗಿಸಲು ಅತ್ಯಂತ ವಿಭಿನ್ನವಾದ, ಸಂಪೂರ್ಣ ಸುಸಜ್ಜಿತವಾದ ಸಂಚಾರಿ ಕಣ್ಣಿನ ಆಸ್ಪತ್ರೆ ಇದಾಗಿರಲಿದೆ. ಇನ್ಫೊಸಿಸ್ ಪ್ರತಿಷ್ಠಾನ ಹಾಗೂ ಶ್ರೀ ರಾಮಕೃಷ್ಣ ಸೇವಾಶ್ರಮ ಹೀಗೆ ಒಗ್ಗೂಡುತ್ತಿರುವುದರ ಹಿಂದೆ ತುಮಕೂರು, ಅನಂತಪುರ, ಚಿತ್ರದುರ್ಗ ಮತ್ತು ರಾಯಚೂರು ಜಿಲ್ಲೆಗಳ ದೂರದ ಊರುಗಳಲ್ಲಿನ ಮಕ್ಕಳು, ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ಐದು ಲಕ್ಷಕ್ಕೂ ಹೆಚ್ಚಿನ ಜನರಿಗೆ ಗುಣಮಟ್ಟದ, ಕಣ್ಣಿನ ಆರೋಗ್ಯಕ್ಕೆ ಸಂಬಂಧಿಸಿದ ಸೇವೆಗಳನ್ನು ಒದಗಿಸುವ ಉದ್ದೇಶ ಇದೆ.

ಕ್ಯಾಟರಾಕ್ಟ್, ಕಣ್ಣಿನಲ್ಲಿ ಗಡ್ಡೆ, ಕಣ್ಣೀರು ಸೋರುವಿಕೆ, ಗ್ಲಾಕೊಮಾ, ಮಧುಮೇಹದಿಂದಾಗಿ ದೃಷ್ಟಿಗೆ ಹಾನಿ, ಮೆಳ್ಳೆಗಣ್ಣು, ಕಣ್ಣಿನ ಕ್ಯಾನ್ಸರ್ ಹಾಗೂ ಕಿವಿ, ಮೂಗು ಮತ್ತು ಗಂಟಲಿಗೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ಇತರ ಸಾಮಾನ್ಯ ಕಾಯಿಲೆಗಳ ತಪಾಸಣೆಯ ಸೌಲಭ್ಯವನ್ನು ಈ ಸಂಚಾರಿ ಆಸ್ಪತ್ರೆ ನೀಡಲಿದೆ. ಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ಕೂಡ ಈ ಹಿಂದೆ ಇನ್ಫೊಸಿಸ್ ಪ್ರತಿಷ್ಠಾನವು ನೆರವು ಒದಗಿಸಿತ್ತು. 2021ರಲ್ಲಿ ಈ ಆಸ್ಪತ್ರೆಗೆ ಹೊಸ ವಿಭಾಗವನ್ನು ನಿರ್ಮಿಸಲು ಸಹಾಯ ನೀಡಿತ್ತು. ಇದುವರೆಗೆ ಆಸ್ಪತ್ರೆಯು ಸಹಸ್ರಾರು ಜನರಿಗೆ ಶಸ್ತ್ರಚಿಕಿತ್ಸೆಯ ಸೌಲಭ್ಯ ಒದಗಿಸಿದೆ.

ಬಹುಕಾಲದಿಂದ ಮೂಲಭೂತ ಆರೋಗ್ಯ ಸೇವೆಗಳೂ ಸಿಗದೆ ಇದ್ದವರಿಗೆ ಗುಣಮಟ್ಟದ ಕಣ್ಣಿನ ಆರೋಗ್ಯ ಸೇವೆ ಒದಗಿಸಲು ಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಜತೆ ಕೈಜೋಡಿಸುತ್ತಿರುವುದು ನಮಗೆ ಸಂತಸದ ವಿಚಾರ. ಸಂಚಾರಿ ಕಣ್ಣಿನ ಆಸ್ಪತ್ರೆಯಂತಹ ತಾಂತ್ರಿಕವಾಗಿ ಮುಂದಿರುವ ಸೌಲಭ್ಯಗಳನ್ನು ಹಿಂದುಳಿದಿರುವ ವರ್ಗಗಳ ಜನರ ಮನೆಬಾಗಿಲಿಗೆ ತಲುಪಿಸುವ ಮೂಲಕ ನಾವು ಸಮುದಾಯದ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯದಲ್ಲಿ ಸಾಧ್ಯವಾದಷ್ಟು ಪರಿಣಾಮಕಾರಿ ನೆರವು ಒದಗಿಸುವ ಉದ್ದೇಶವನ್ನು ಹೊಂದಿದ್ದೇವೆ ಎಂದು ಇನ್ಫೊಸಿಸ್ ಪ್ರತಿಷ್ಠಾನದ ಟ್ರಸ್ಟಿ ಸುನೀಲ್ ಕುಮಾರ್ ಧಾರೇಶ್ವರ ಹೇಳಿದ್ದಾರೆ.

ದೇಶದಲ್ಲಿ ಸರಿಸುಮಾರು ಪ್ರತಿ ಒಂದು ಲಕ್ಷ ಜನರಿಗೆ ಒಬ್ಬರು ನೇತ್ರತಜ್ಞರು ಲಭ್ಯವಿದ್ದಾರೆ. ನಮ್ಮಲ್ಲಿ ಕಣ್ಣಿನ ಆರೋಗ್ಯಕ್ಕೆ ಸಂಬಂಧಿಸಿದ ಸೇವೆಗಳನ್ನು ಉತ್ತಮಪಡಿಸಬೇಕಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಜನರಿಗೆ, ವಿದ್ಯಾರ್ಥಿಗಳಿಗೆ, ಮಕ್ಕಳಿಗೆ ತೀರ ಮೂಲಭೂತವಾದ ಕಣ್ಣಿನ ಆರೋಗ್ಯ ಸೇವೆಗಳು ಕೂಡ ಸಿಗುತ್ತಿಲ್ಲ. ಪಾವಗಡವು (ತುಮಕೂರು ಜಿಲ್ಲೆ) ಗ್ರಾಮೀಣ ಪ್ರದೇಶಗಳನ್ನು ಹೆಚ್ಚು ಹೊಂದಿದೆ, ಆರೋಗ್ಯ ಸೇವೆಗಳು ಇಲ್ಲಿ ಹೆಚ್ಚು ಲಭ್ಯವಿಲ್ಲ. ಕರ್ನಾಟಕದ ಮೊದಲ ಅತ್ಯಾಧುನಿಕ ಸಂಚಾರಿ ಕಣ್ಣಿನ ಆಸ್ಪತ್ರೆಯು ‍ಪಾವಗಡದ ಸಹಸ್ರಾರು ಮಂದಿಗೆ ನೆರವಾಗಲಿದೆ. ರಾಜ್ಯದ ಇತರ ದುರ್ಗಮ ಪ್ರದೇಶಗಳಲ್ಲಿ ಸೇವೆಗಳ ಅಗತ್ಯ ಇರುವವರನ್ನು ತಲುಪಲು ಸಾಧ್ಯವಾಗಲಿದೆ ಎಂದು ಭಾವಿಸುತ್ತೇವೆ ಎಂದು ಪಾವಗಡದ ಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಸ್ವಾಮಿ ಜಪಾನಂದ ಹೇಳಿದ್ದಾರೆ.

ಇದನ್ನೂ ಓದಿ | Kidnap Mystery | ಇದು Low BP ಕಿಡ್ನ್ಯಾಪ್‌ ಸ್ಟೋರಿ; ಮುಂದೇನಾಯ್ತು?

Exit mobile version