Site icon Vistara News

ನಿರ್ಜನ ಪ್ರದೇಶದಲ್ಲಿ Mobile ಲೂಟಿ ಮಾಡುತ್ತಿದ್ದ ಗ್ಯಾಂಗ್‌ ಅರೆಸ್ಟ್‌, 78 ಲಕ್ಷ ಮೌಲ್ಯದ 515 ಮೊಬೈಲ್‌ಗಳು ವಶಕ್ಕೆ

mobile theft

ಬೆಂಗಳೂರು: ಸಿಸಿಬಿ ಪೊಲೀಸರು ನಡೆಸಿದ ಅತಿ ದೊಡ್ಡ ಕಾರ್ಯಾಚರಣೆಯಲ್ಲಿ ನಗರದ ನಿರ್ಜನ ಪ್ರದೇಶದಲ್ಲಿ ಒಂಟಿಯಾಗಿ ಸಂಚರಿಸುವವರ ಕೈಯಿಂದ ಮೊಬೈಲ್‌ ಲೂಟಿ ಮಾಡುತ್ತಿದ್ದ ಗ್ಯಾಂಗನ್ನು ಬಂಧಿಸಿದ್ದಾರೆ. ರಾಜಧಾನಿಯಲ್ಲಿ ಮೊಬೈಲ್‌ ಸ್ನ್ಯಾಚಿಂಗ್‌ ಹೆಚ್ಚಾಗುತ್ತಿದ್ದಂತೆಯೇ ಕಾರ್ಯಾಚರಣೆಗಿಳಿದ ಸಿಸಿಬಿ ಬಹು ಸಾಹಸದಿಂದ ಈ ಸುಲಿಗೆಕೋರರನ್ನು ಹಿಡಿದುಹಾಕಿದೆ. ಇಬ್ಬರನ್ನು ಬಂಧಿಸಿರುವ ಪೊಲೀಸರು ಒಟ್ಟು ೫೧೫ ಮೊಬೈಲ್‌ಗಳನ್ನು ವಶಕ್ಕೆ ಪಡೆದಿದೆ. ಇದರ ಒಟ್ಟಾರೆ ಮೌಲ್ಯ ೭೮ ಲಕ್ಷ ರೂ.!

ಬಂಧಿತರನ್ನು ಅಫ್ಝಲ್‌ ಪಾಷಾ ಮತ್ತು ಇಝಾರ್‌ ಎಂದು ಗುರುತಿಸಲಾಗಿದೆ. ಇದೊಂದು ದೊಡ್ಡ ಗ್ಯಾಂಗ್‌ ಆಗಿದ್ದು, ಇವರಿಬ್ಬರೇ ಕಿಂಗ್‌ ಪಿನ್‌ಗಳು ಎನ್ನಲಾಗಿದೆ. ಈ ಜಾಲದಲ್ಲಿ ಇನ್ನೂ ಹಲವರಿದ್ದಾರೆ. ಅವರಲ್ಲಿ ಕೆಲವರನ್ನು ಇತ್ತೀಚೆಗೆ ಪೊಲೀಸರು ಸೆರೆ ಹಿಡಿದಿದ್ದರು. ಅವರ ಮೂಲಕ ಮಾಹಿತಿ ಪಡೆದು ಇದೀಗ ಅಫ್ಝಲ್‌ ಪಾಷಾ ಮತ್ತು ಇಝಾರ್‌ ಅವರನ್ನು ಬಂಧಿಸಿದ್ದಾರೆ. ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು ಈ ಬಗ್ಗೆ ಮಾಹಿತಿ ನೀಡಿದರು.

ಈ ಇಬ್ಬರು ಇತರ ಕೆಲವರ ಜತೆ ಸೇರಿಕೊಂಡು ನಗರದಲ್ಲಿ ಮೊಬೈಲ್ ಗಳನ್ನು ದೋಚಿ ನಂತರ ಅದನ್ನು ಹೈದರಾಬಾದ್, ಮುಂಬೈ ಸೇರಿದಂತೆ ಹಲವೆಡೆ ಮಾರಾಟ ಮಾಡುತ್ತಿದ್ದರು. ಮೊಬೈಲ್‌ ಖರೀದಿಸಿದವರು ಇದನ್ನು ಬಿಡಿ ಭಾಗಗಳಾಗಿ ಪರಿವರ್ತಿಸಿ ಮಾರುತ್ತಿದ್ದರು ಎಂದು ಹೇಳಲಾಗಿದೆ.

ನಿರ್ಜನ ಪ್ರದೇಶವೇ ಟಾರ್ಗೆಟ್‌
ನಿರ್ಜನ ಪ್ರದೇಶದಲ್ಲಿ ಓಡಾಡುವ ವ್ಯಕ್ತಿಗಳನ್ನೇ ಟಾರ್ಗೆಟ್ ಮಾಡುವ ಆರೋಪಿಗಳು ಅವರ ಮೊಬೈಲ್ ಗಳನ್ನು ಕಸಿಯುತ್ತಿದ್ದರು. ಯಾರಾದರೂ ಪ್ರತಿರೋಧ ತೋರಿದರೆ, ವಿರೋಧ ವ್ಯಕ್ತಪಡಿಸಿದರೆ ಅವರ ಮೇಲರ ಹಲ್ಲೆಯನ್ನು ನಡೆಸುತ್ತಿದ್ದರು. ಇವರಿಬ್ಬರೇ ಅಲ್ಲ, ಇಲ್ಲಿನ ಏಳೆಂಟು ಜನ ಹುಡುಗರ ಗ್ಯಾಂಗ್‌ನೊಂದಿಗೆ ಕಾರ್ಯಾಚರಣೆಗೆ ಇಳಿದು ಮೊಬೈಲನ್ನು ದೋಚುತ್ತಿದ್ದರು ಎನ್ನಲಾಗಿದೆ.

ಹಲವು ಠಾಣೆಗಳ ಪ್ರಕರಣ
ಚಾಮರಾಜಪೇಟೆ, ಉಪ್ಪಾರಪೇಟೆ, ಮಾಗಡಿ ರಸ್ತೆ, ವೈಟ್ ಫೀಲ್ಡ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಈ ಕಿರಾತಕರು ಅಮಾಯಕರ ಮೊಬೈಲ್‌ ಫೋನ್‌ಗಳನ್ನು ಕಸಿಯುತ್ತಿದ್ದರು. ಈ ಬಗ್ಗೆ ಆಯಾ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣಗಳೇ ದಾಖಲಾಗುತ್ತಿಲ್ಲ
ಈ ಮೊಬೈಲ್‌ ಸ್ನ್ಯಾಚಿಂಗ್‌ ತಂಡದ ಕೈಯಿಂದ ೫೧೫ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವೆಲ್ಲವೂ ಬೆಂಗಳೂರಿನಲ್ಲೇ ಕಸಿದುಕೊಂಡ ಮೊಬೈಲ್‌ಗಳಾಗಿವೆ. ಆದರೆ, ಅಚ್ಚರಿ ಎಂದರೆ, ಈ ನಿಗದಿತ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿರುವುದು ಕೇವಲ ೩೦೦ ಮೊಬೈಲ್‌ ದರೋಡೆ ಪ್ರಕರಣಗಳು ಮಾತ್ರ. ಅಂದರೆ, ಬಹುತೇಕರು ಮೊಬೈಲ್‌ ಕಸಿದುಕೊಂಡಿದ್ದರೂ ದೂರು ನೀಡಿರುವುದಿಲ್ಲ ಎಂದು ಪ್ರತಾಪ್‌ ರೆಡ್ಡಿ ತಿಳಿಸಿದರು.

ಬಂಧಿತ ಅಫ್ಝಲ್‌ನ ಖದರ್‌ ನೋಡಿ

Mobile robbery | ರಾತ್ರಿ ದರೋಡೆ ಮಾಡುತ್ತಿದ್ದ ಐವರ ಗ್ಯಾಂಗ್‌ ಸೆರೆ, ಹೈದ್ರಾಬಾದ್‌, ಚೆನ್ನೈಗೆ ಮೊಬೈಲ್‌ ರವಾನೆ

ಗ್ಯಾಂಗ್‌ ಕಾರ್ಯಾಚರಣೆ ಹೇಗೆ?
ಹೈದರಾಬಾದಿ ಗ್ಯಾಂಗ್‌ ಎಂದು ಕರೆಯಲಾಗುವ ಈ ತಂಡದ ಕಾರ್ಯಾಚರಣೆ ಕುತೂಹಲಕಾರಿಯಾಗಿದೆ. ಈ ತಂಡ ಸ್ಥಳೀಯವಾಗಿ ಕೆಲವು ಯುವಕರನ್ನು ಗೊತ್ತು ಮಾಡಿಕೊಂಡು ಮೊಬೈಲನ್ನು ಕಳವು ಮಾಡುತ್ತದೆ. ಪ್ರಧಾನ ಸಂಚುಕೋರರು ಹೋಟೆಲ್‌ನಲ್ಲಿ ರೂಂ ಮಾಡಿಕೊಂಡಿರುತ್ತಾರೆ. ಯುವಕರು ಕದ್ದ ಮೊಬೈಲ್‌ ತಂದುಕೊಟ್ಟರೆ ಅವರಿಗೆ ೫೦೦ ರೂ. ಸಿಗುತ್ತದೆ. ಈ ಸಂಚುಕೋರರು ಅದನ್ನು ಸರಾಸರಿ ೪೦೦೦ ರೂ.ಗಳಿಗೆ ಮಾರಾಟ ಮಾಡುತ್ತಾರೆ. ಖರೀದಿಸಿದವರು ಅದರ ಬಿಡಿ ಭಾಗಗಳನ್ನು ತೆಗೆದು ಮಾರಾಟ ಮಾಡುತ್ತಾರೆ. ಒಂದು ದಿನದಲ್ಲಿ ಐದರಿಂದ ಆರು ಮೊಬೈಲ್‌ಗಳನ್ನು ಕದಿಯುವ ರೀತಿಯಲ್ಲಿ ಇದು ಕಾರ್ಯಾಚರಣೆ ನಡೆಸುತ್ತಿತ್ತು.

Exit mobile version