Site icon Vistara News

Mobile robbery | ರಾತ್ರಿ ದರೋಡೆ ಮಾಡುತ್ತಿದ್ದ ಐವರ ಗ್ಯಾಂಗ್‌ ಸೆರೆ, ಹೈದ್ರಾಬಾದ್‌, ಚೆನ್ನೈಗೆ ಮೊಬೈಲ್‌ ರವಾನೆ

bengalore robbery

ಬೆಂಗಳೂರು: ರಾತ್ರಿ ಕೆಲಸ ಮುಗಿಸಿಕೊಂಡೋ, ಇನ್ಯಾವುದೋ ಕಾರ್ಯಕ್ಕಾಗಿಯೋ ರಾತ್ರಿ ವೇಳೆ ರಸ್ತೆಯಲ್ಲಿ ಒಬ್ಬರೇ ಸಂಚರಿಸುವ ವೇಳೆ ದಾಳಿ ನಡೆಸಿ ಮೊಬೈಲ್ ದೋಚುತ್ತಿದ್ದ (Mobile robbery) ತಂಡವೊಂದನ್ನು ಪೊಲೀಸರು ಬಂಧಿಸಿದ್ದಾರೆ. ಇಲ್ಲಿ ಕಳ್ಳತನವಾದ ಮೊಬೈಲ್‌ ಹೈದ್ರಾಬಾದ್‌, ಚೆನ್ನೈಗಳಲ್ಲಿ ಸ್ಪೇರ್‌ ಪಾರ್ಟ್ಸ್‌ಗಳಾಗಿ ಮಾರಾಟವಾಗುತ್ತಿದ್ದ ಅಂಶವೂ ಬೆಳಕಿಗೆ ಬಂದಿದೆ.

ರಸ್ತೆಯಲ್ಲಿ ಒಂಟಿಯಾಗಿ ನಡೆದು ಹೋಗುತ್ತಿದ್ದವರನ್ನೇ ಟಾರ್ಗೆಟ್ ಮಾಡುತ್ತಿದ್ದ ಈ ತಂಡ ಮೊಬೈಲ್ ರಾಬರಿ ಮಾಡುತ್ತಿತ್ತು. ಮಹಮ್ಮದ್ ಉಸ್ಮಾನ್, ಮಹಮ್ಮದ್ ಹುಸೇನ್, ತಬ್ರೇಜ್ ಖಾನ್, ಜುನೈದ್ ಮತ್ತು ಇರ್ಫಾನ್ ಪಾಷ ಬಂಧಿತ ಆರೋಪಿಗಳಾಗಿದ್ದಾರೆ.

೭೪ ರಾಬರಿ ಪ್ರಕರಣ

ಈ ಐವರ ತಂಡವು ಬರೋಬ್ಬರಿ 74 ರಾಬರಿ ಮಾಡಿರುವ ಬಗ್ಗೆ ವಿಚಾರಣೆ ವೇಳೆ ಬಯಲಿಗೆ ಬಂದಿದೆ. ಕಬ್ಬನ್ ಪಾರ್ಕ್, ಅಶೋಕನಗರ, ಮಾಗಡಿ ರೋಡ್, ಸುದ್ದಗುಂಟೆ ಪಾಳ್ಯ, ಹೈಗ್ರೌಂಡ್ಸ್, ಶ್ರೀರಾಮಪುರ ಸೇರಿ ನಗರದ ಹಲವು ಭಾಗಗಳಲ್ಲಿ ರಾಬರಿ ಮಾಡಿದ್ದರು.

ಪ್ರತಿ ಮೊಬೈಲ್‌ಗೆ ೪ ಸಾವಿರ ರೂ.

ಹೀಗೆ ರಾಬರಿ ಮಾಡಿ ತಂದ ಪ್ರತಿ ಮೊಬೈಲ್‌ಗೆ ೪ ಸಾವಿರ ರೂಪಾಯಿ ತನಕ ಪಡೆದು ಮಾರಾಟ ಮಾಡುತ್ತಿದ್ದರು. ಇವರೆಲ್ಲರೂ ಲಾಡ್ಜ್‌ಗಳಲ್ಲಿ ಉಳಿದುಕೊಂಡು ಈ ಕೃತ್ಯ ಎಸಗುತ್ತಿದ್ದರು. ಪ್ರತಿ ಬಾರಿ ಕೃತ್ಯಕ್ಕೆ ಬರುವಾಗಲೂ ಇಬ್ಬರು ಹೊಸ ಹುಡುಗರನ್ನು ತಮ್ಮೊಂದಿಗೆ ಕರೆದೊಯ್ಯುತ್ತಿದ್ದರ ಈ ತಂಡವು ಅವರಿಗೆ ಒಂದು ಮೊಬೈಲ್‌ಗೆ ೫೦೦ ರೂಪಾಯಿ ಕೊಡುತ್ತಿದ್ದುದಾಗಿ ವಿಚಾರಣೆ ವೇಳೆ ತಿಳಿಸಿದ್ದಾರೆ.

ಇದನ್ನೂ ಓದಿ | ಪೊಲೀಸ್ ಠಾಣೆ ತಲುಪಿದ ನಿರ್ಮಾಪಕರ ವಲಯದ ಚುನಾವಣೆ ಪ್ರಕ್ರಿಯೆ!

ಒಂದೇ ದಿನದಲ್ಲಿ ೫-೬ ಮೊಬೈಲ್ ದರೋಡೆ

ಈ ತಂಡವು ಒಂದೇ ದಿನದಲ್ಲಿ ಐದರಿಂದ ಆರು ಮೊಬೈಲ್‌ಗಳನ್ನು ದರೋಡೆ ಮಾಡುತ್ತಿತ್ತು. ಬೆಂಗಳೂರಿನಲ್ಲಿ ಕದ್ದ ಮೊಬೈಲ್‌ಗಳನ್ನು ಜೆಜೆ ನಗರಕ್ಕೆ ಸಾಗಿಸುತ್ತಿದ್ದರು. ಅಲ್ಲಿಂದ ಈ ಮೊಬೈಲ್‌ಗಳು ಬೇರೆ ರಾಜ್ಯಗಳಿಗೆ ಸಾಗಾಟ ಆಗುತಿತ್ತು.

ಹೈದ್ರಾಬಾದ್‌ನಲ್ಲಿ ಸ್ಪೇರ್‌ ಪಾರ್ಟ್ಸ್!

ಬೆಂಗಳೂರಿನಲ್ಲಿ ರಾಬರಿ ಮಾಡಿದ ಮೊಬೈಲ್‌ಗಳು ಬೇರೆ ಬೇರೆ ರಾಜ್ಯಗಳಿಗೆ ಸಾಗಿಸುವುದರ ಜತೆ ಜತೆಗೆ ಇನ್ನು ಕೆಲವು ಮೊಬೈಲ್‌ಗಳು ಹೈದ್ರಾಬಾದ್, ಚೆನ್ನೈಗಳಿಗೆ ಸಾಗಾಟವಾಗುತ್ತಿತ್ತು. ಅಲ್ಲಿ ಸ್ಪೇರ್‌ ಪಾರ್ಟ್ಸ್‌ಗಳಾಗಿ ಮಾರಾಟವಾಗುತ್ತಿದ್ದ ಅಂಶ ತನಿಖೆ ವೇಳೆ ಗೊತ್ತಾಗಿದೆ.

ಪ್ರಮುಖ ಆರೋಪಿ ಪತ್ತೆಗೆ ಶೋಧ

ಈ ಐವರ ತಂಡದ ರೂವಾರಿಯೊಬ್ಬ ಇದ್ದು, ಆತನ ಬಗ್ಗೆ ವಿಚಾರಣೆ ವೇಳೆ ಆರೋಪಿಗಳು ಬಾಯಿಬಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಆತನ ಬಂಧನಕ್ಕೆ ಜಾಲ ಬೀಸಿರುವ ಪೊಲೀಸರು ಶೋಧ ಕಾರ್ಯ ನಡೆಸುತ್ತಿದಾರೆ. ಅಲ್ಲದೆ, ಈ ಜೆಜೆನಗರ ಮೂಲದ ಸಂಪೂರ್ಣ ಸಿಂಡಿಕೇಟ್ ಡೀಲರ್ ಅನ್ನು ಕೂಡಾ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.‌

ಇದನ್ನೂ ಓದಿ | ಪ್ರಚೋದನಕಾರಿ ಪೋಸ್ಟ್‌ ಹಾಕಿದ್ರೆ ವರ್ಷಗಟ್ಟಲೆ ಕೋರ್ಟ್‌ಗೆ ಅಲೆಯುತ್ತೀರ: ಮಂಗಳೂರು ಪೊಲೀಸ್‌ ಎಚ್ಚರಿಕೆ

Exit mobile version