Site icon Vistara News

Teachers Day | ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವಂತೆ ಸರ್ಕಾರಿ ಶಾಲೆ ಕಟ್ಟಿದ ಈರಪ್ಪ ರೇವುಡಿ

teacher irappa revudi

ಗದಗ: ಖಾಸಗಿ ಶಾಲೆಗಳ‌ ಪ್ರಭಾವಕ್ಕೆ ಕನ್ನಡ ಮಾಧ್ಯಮ ಶಾಲೆಗಳೇ ಮುಚ್ಚುತ್ತಿವೆ. ಅದರಲ್ಲೂ ಸರಕಾರಿ ಶಾಲೆಗಳ ಮೇಲೆ ಪೋಷಕರಿಗೆ ನಂಬಿಕೆಯೇ ಇಲ್ಲದಂತಾಗಿದೆ. ಇಂತಹ ಸ್ಥಿತಿಯಲ್ಲಿ ಸರಕಾರಿ ಶಾಲೆಗಳನ್ನು ಖಾಸಗಿ ಶಾಲೆಗಿಂತಲೂ ಮಿಗಿಲಾಗಿ ಅಭಿವೃದ್ಧಿ ಪಡಿಸಲು ಹಲವು ಶಿಕ್ಷಕರು ತೆರೆ ಮರೆಯಲ್ಲಿ ಪ್ರಯತ್ನಿಸಿ ಸಫಲಗೊಂಡಿದ್ದಾರೆ. ಅಂತಹವರನ್ನು ಗುರುತಿಸಿ ಸರಕಾರ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಅದರಲ್ಲೊಬ್ಬರು ಗದಗ ಜಿಲ್ಲೆ ಗಜೇಂದ್ರಗಡ ಶಿಕ್ಷಕ ಈರಪ್ಪ ರೇವುಡಿ ಕೂಡ ಒಬ್ಬರು. ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಈರಪ್ಪ ರೇವುಡಿ, ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕನ್ನಡ ವಿಷಯದ ಶಿಕ್ಷಕರು. ಮಕ್ಕಳೊಂದಿಗೆ ಮಕ್ಕಳಾಗಿ ಕಲಿಕೆಯಲ್ಲಿ ತೊಡಗಿಕೊಳ್ಳುವ ಶಿಕ್ಷಕ ಈರಪ್ಪ ಅವರು ಹಿಂದುಳಿದ ತಾಲೂಕು ಗಜೇಂದ್ರಗಡ ಭಾಗದಲ್ಲಿ ಅವರ ಸಾಧನೆಯಿಂದಲೇ ಚಿರಪರಿಚಿತರು. ಎಲ್ಲರೂ ಹುಬ್ಬೇರಿಸುವಂತೆ ತಮ್ಮ ಸರಕಾರಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿಸಿದ್ದಾರೆ. ಶಾಲೆಯಲ್ಲಿ ಮಕ್ಕಳ ಪರಿಪೂರ್ಣ ಹಾಜರಾತಿ ಇರುವುದಕ್ಕೆ ಮೊದಲ ಆದ್ಯತೆ ನೀಡುತ್ತಾರೆ. ಬಡ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ಸ್ವಂತ ಹಣದಿಂದ ನೀಡುವುದು, ಪಾಠಕ್ಕೆ ಸಂಬಂಧಿಸಿ ಸಹ ಸಂಬಂಧ ಕಲ್ಪಿಸಿ ಮಕ್ಕಳ ಮನೋವಿಜ್ಞಾನ ಅಧ್ಯಯನ ಮಾಡಿ ಪಾಠ ಬೋಧನೆಗೆ ಪ್ರಾಮುಖ್ಯ ನೀಡಿದ್ದಾರೆ.

ಮಕ್ಕಳ ಜತೆಗೆ ಉತ್ತಮ ಬಾಂಧವ್ಯ

ಮಕ್ಕಳ ವೈಯಕ್ತಿಕ ಸಮಸ್ಯೆಯನ್ನು ಅರಿತು ಪರಿಹರಿಸುವುದು, ಪಾಠದ ಜೊತೆಗೆ ವಿವಿಧ ಪಾಠಕ್ಕೆ ಸಂಬಂಧಿಸಿದಂತೆ ಚಟುವಟಿಕೆಗಳನ್ನು ತಯಾರಿಸುತ್ತಾರೆ. ಅದನ್ನು ಮಕ್ಕಳಿಗೆ ತಿಳಿಯುವಂತೆ ಬೋಧಿಸುವುದು. ಪುಸ್ತಕಗಳ ಕೊರತೆಯಿಂದ ಗ್ರಂಥಾಲಯ ಸೊರಗಿದ್ದ ಸಂದರ್ಭದಲ್ಲಿ ಗ್ರಂಥಾಲಯಕ್ಕೆ 500 ಪುಸ್ತಕಗಳನ್ನು ಸ್ವಂತ ಹಣದಿಂದ ನೀಡಿ ಪುನರುಜ್ಜೀವನಗೊಳಿಸಿದರು. ಹೀಗಾಗಿ ಮಕ್ಕಳಿಗೆ ಈರಪ್ಪ ಶಿಕ್ಷಕರೆಂದರೆ ವಿಶೇಷ ಪ್ರೀತಿ.

ಇದನ್ನೂ ಓದಿ | 2022-23ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಘೋಷಣೆ, ಇಲ್ಲಿದೆ ಪಟ್ಟಿ

ಸಹಾಯ ಮನೋಭಾವ

ಶಾಲಾ ಕಟ್ಟಡವನ್ನು ಸ್ವಂತ ಹಣದಲ್ಲಿ ರಿಪೇರಿ ಮಾಡಿಸಿದ್ದಾರೆ. ಶಾಲೆಗೆ ಗಾರ್ಡನ್ ನಿರ್ಮಾಣ ಮಾಡಿಸಿ ಹೈಟೆಕ್ ಟಚ್ ನೀಡಿದ್ದಾರೆ. ಗ್ರಾಮದಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಹೋಗುವ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ, ಶಾಲೆಗೆ ಸ್ವಂತ ಹಣದಿಂದ ಒಂದು ಪ್ರಾರ್ಥನಾ ಮಂದಿರ ನಿರ್ಮಾಣ, ವಿವಿಧ ಕ್ಷೇತ್ರಗಳಲ್ಲಿ ನೈಪುಣ್ಯ ಪಡೆದ ಹಿರಿಯ ನಾಗರಿಕರನ್ನು ಶಾಲೆಗೆ ಕರೆತಂದು ಮಕ್ಕಳಿಗೆ ಶೈಕ್ಷಣಿಕ ಮಾರ್ಗದರ್ಶನ ನೀಡುತ್ತಿರುವುದು ವಿಶೇಷ. ಬಡ ಹಾಗೂ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಶೈಕ್ಷಣಿಕವಾಗಿ ದತ್ತು ಪಡೆದು ಕಲಿಕೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಸ್ವಂತ ಖರ್ಚಿನಲ್ಲಿ ಶಾಲೆಗೆ ಕಂಪ್ಯೂಟರ್, ಪ್ರಿಂಟರ್, ಸ್ಮಾರ್ಟ್ ಕ್ಲಾಸ್ ನಿರ್ಮಾಣ. ಸಭಾ ಭವನ ನಿರ್ಮಾಣದ ಜತೆಗೆ ನಲಿ ಕಲಿ ತರಗತಿಗೆ ಬೇಕಾಗುವ ಕಲಿಕೋಪಕರಣಗಳನ್ನು ಮಕ್ಕಳಿಗೆ ಪ್ರತಿವರ್ಷ ಒದಗಿಸುತ್ತಿದ್ದಾರೆ.

ಸರಕಾರಿ ಸಂಸ್ಥೆಗಳೊಂದಿಗೆ ಉತ್ತಮ ಸಂಬಂಧ

ಸಾಧನೆಯ ಹಾದಿಯಲ್ಲಿ ಶಿಕ್ಷಕ ಈರಪ್ಪ

ರೋಣ ಹಾಗೂ ಗಜೇಂದ್ರಗಡ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷನಾಗಿ ಸುಮಾರು 450ಕ್ಕಿಂತ ಹೆಚ್ಚು ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಕನ್ನಡ ನೆಲ ಜಲ ಭಾಷೆ ಉಳಿವಿಗಾಗಿ ಅನೇಕ ಕನ್ನಡಪರ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಇವರ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕಳಕಳಿಯನ್ನು ಗುರುತಿಸಿ ಮಾಧ್ಯಮ ಸಂಸ್ಥೆಗಳು, ಇತರೆ ಸಂಸ್ಥೆಗಳು ಹಲವು ಪ್ರಶಸ್ತಿ ನೀಡಿ ಗೌರವಿಸಿವೆ. 2019-20ನೇ ಸಾಲಿನಲ್ಲಿ ಉತ್ತರ ಕರ್ನಾಟಕದ ಸಾಧಕರು ಎಂಬ ಪ್ರಶಸ್ತಿ ಪಡೆದಿದ್ದಾರೆ. ಇಂಥ ಈರಪ್ಪ ಅವರಿಗೆ ಸರ್ಕಾರ, ಶಿಕ್ಷಣ ಇಲಾಖೆ ಗುರುತಿಸಿ ರಾಜ್ಯದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿದೆ.

ಇದನ್ನೂ ಓದಿ | Award | ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ; ಯಾವ ಜಿಲ್ಲೆಯ ಯಾರಿಗೆ ಗರಿ, ಶಿಕ್ಷಕರ ವೈಶಿಷ್ಟ್ಯವೇನು?

Exit mobile version