Site icon Vistara News

Modi In Karnataka : ರೈತರ ಸಂಕಟಗಳಿಗೆ ಮೋದಿ, ಬೊಮ್ಮಾಯಿ ಕಾರಣ; 11 ಪ್ರಶ್ನೆಗಳಿಗೆ ಉತ್ತರಿಸಲು ಸಿದ್ದರಾಮಯ್ಯ ಸವಾಲು

india slips in global hunger index and CM Siddaramaiah criticized Modi

ಬೆಂಗಳೂರು, ಕರ್ನಾಟಕ: ಬೆಂಗಳೂರು-ಮೈಸೂರು ದಶಪಥ ಎಕ್ಸ್‌ಪ್ರೆಸ್‌ವೇಗೆ (bangalore mysore expressway) ಪ್ರಧಾನಿ ನೇರಂದ್ರ ಮೋದಿ (Narendra Modi) ಅವರು ಚಾಲನೆ ನೀಡುತ್ತಿರುವ ಹೊತ್ತಿನಲ್ಲೇ ರಾಜ್ಯ ಕಾಂಗ್ರೆಸ್‌ ಪ್ರಶ್ನೆಗಳ ಸುರಿಮಳೆಗೈದಿದೆ. ವಿಧಾನಸಭೆಯ ಪ್ರತಿಪಕ್ಷ ನಾಯಕರಾಗಿರುವ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ (siddaramaiah) ಅವರು ಮೋದಿ ಅವರಿಗೆ ಪ್ರಶ್ನೆಗಳನ್ನು ಕೇಳಿದ್ದು, ಆ ಮೂಲಕ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಅವರು ಈ ವರೆಗೆ 7 ಬಾರಿ ಈ ರೀತಿಯ ಪ್ರಶ್ನೆಗಳನ್ನು ಮೋದಿ ಅವರಿಗೆ ಕೇಳಿದ್ದರು. ಈಗ 11 ಪ್ರಶ್ನೆಗಳನ್ನು ಒಳಗೊಂಡಿರುವ 8ನೇ ಕಂತಿನ ಪ್ರಶ್ನೆಗಳನ್ನು ಕೇಳಿದ್ದಾರೆ. ಈವರೆಗೂ ಪ್ರಧಾನಿ ಮೋದಿ ಅವರು ಈ ಯಾವ ಪ್ರಶ್ನೆಗಳಿಗೆ ಉತ್ತರ ನೀಡಿಲ್ಲ!(Modi In Karnataka:)

ಸಿದ್ದರಾಮಯ್ಯ ಅವರು ಕೇಳಿದ ಪ್ರಶ್ನೆಗಳೇನು?

ಪ್ರಧಾನಿ ನರೇಂದ್ರ ಮೋದಿಯವರೆ ಕರ್ನಾಟಕದ ರೈತರ ಬದುಕು ನರಕರೂಪಿಯಾಗುತ್ತಿದೆ. ಕೇಂದ್ರ, ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಗಳು ರಾಕ್ಷಸ ರೀತಿಯಲ್ಲಿ ಕಾಡುತ್ತಿವೆ. 2023 ಬರುತ್ತಿದ್ದಂತೆಯೆ ರೈತರು ಬೆಳೆದ ಎಲ್ಲ ಕೃಷಿ ಉತ್ಪನ್ನಗಳ ಬೆಲೆಗಳು ಪಾತಾಳಕ್ಕೆ ಕುಸಿಯುತ್ತಿವೆ. ನೀವು ಮೈಸೂರು ಮಂಡ್ಯ ಭಾಗಕ್ಕೆ ಬರುತ್ತಿರುವುದರಿಂದ ಆ ಭಾಗದ ಸಮಸ್ಯೆಗಳ ಕುರಿತಾದ ಸಮಸ್ಯೆಗಳೇನು ಎಂಬ ಕುರಿತು ಮಾಹಿತಿ ತರಿಸಿಕೊಳ್ಳಿ ಹಾಗೂ ರೈತರೊಂದಿಗೆ, ಪತ್ರಕರ್ತರೊಂದಿಗೆ ಮಾತನಾಡಿದರೆ ಈ ಸಮಸ್ಯೆಗಳು ತಿಳಿಯುತ್ತವೆ. ಆದರೆ ನಿಮ್ಮದೇನಿದ್ದರೂ ಹೇಳುವುದಷ್ಟೆ ಆಗಿದೆ, ಕೇಳಿಸಿಕೊಂಡು ಅಭ್ಯಾಸವೇ ಇಲ್ಲವೆ?

ಮಾತೆತ್ತಿದರೆ ಭಾರತದ ಪರಂಪರೆಯ ಬಗ್ಗೆ ಮಾತನಾಡುತ್ತೀರಿ. ಭಾರತದ ಪ್ರಾಚೀನ ಜನಪರ ಪರಂಪರೆಯ ಶ್ರೀಮಂತಿಕೆ ಇರುವುದು ಕೇವಲ ಹೇಳುವ ಧಾಷ್ಟ್ಯದ ಗುಣದಲ್ಲಿ ಅಲ್ಲ. ಕೇಳಿಸಿಕೊಳ್ಳುವುದರಲ್ಲಿ ಇದೆ. ಉಪನಿಷತ್ ಅಂದರೇನೆ ಗುರು ಶಿಷ್ಯ ಇಬ್ಬರೂ ಒಟ್ಟಿಗೆ ಕೂತು ನಡೆಸುವ ಸಂವಾದ ಎಂದು ಅರ್ಥ.

ಮೋದಿ ಮಾಧ್ಯಮ, ರೈತರೊಂದಿಗೆ ಸಂವಾದ ಮಾಡಿ

ಹಾಗಾಗಿಯೆ ಸಹನಾವವತ್ತು, ಸಹನೌಭುನಕ್ತು ಎಂದು ಹೇಳುವ ಮಂತ್ರವು ಮಾ ವಿದ್ವಿಷಾವ ಹೈ ಎಂದು ಮುಗಿಯುತ್ತದೆ. ಇಲ್ಲಿ ಸ್ವ ಎಂಬುದಿಲ್ಲ, ಸಹ ಎಂಬ ಮಾತು ಇದೆ. ನನ್ನನ್ನು ಪೋಷಿಸು ಎಂದು ಕೇಳುವ ಬದಲು ನಮ್ಮನ್ನು ಕಾಪಾಡು ಎಂದು ಪ್ರಾರ್ಥಿಸುವ ಉಪನಿಷತ್ ಮಂತ್ರವು ನಮ್ಮಲ್ಲಿ ದ್ವೇಷ ಬಾರದೆ ಇರಲಿ ಎಂದು ಕೋರುತ್ತದೆ. ಇದರ ಲವಲೇಶ ಅಂಶವಾದರೂ ನಿಮ್ಮಲ್ಲಿ ಮತ್ತು ನಿಮ್ಮ ಪಕ್ಷದಲ್ಲಿ ಪಾಲನೆಯಾಗುತ್ತದೆಯೆ? ಹಾಗಿದ್ದ ಮೇಲೂ ಭಾರತೀಯ ಪರಂಪರೆ, ಸನಾತನ ಧರ್ಮ ಎಂದು ನೀವು ಮತ್ತು ನಿಮ್ಮ ಪಕ್ಷದವರು ಹೇಳುವುದರಲ್ಲಿ ಅರ್ಥ ಇದೆಯೇ?

ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಟ್ವೀಟ್

ಆದ್ದರಿಂದ ತಾವು ಮಾಧ್ಯಮಗಳೊಂದಿಗೆ, ರೈತರೊಂದಿಗೆ, ರೈತ ಸಂಘಟನೆಗಳೊಂದಿಗೆ ಕೂತು ಮುಕ್ತ ಸಂವಾದ ಮಾಡಿ ಅವರ ಸಂಕಷ್ಟವೇನೆಂದು ನಿಮಗೆ ಅರ್ಥವಾದರೂ ಆಗಬಹುದು. ಅದಕ್ಕೂ ಮೊದಲು;

  1. ಅರಿಶಿಣ; ಮಂಡ್ಯ, ಮೈಸೂರಿನ ಕೆಲವು ಕಡೆ ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ರೈತರು ವ್ಯಾಪಕವಾಗಿ ಅರಿಶಿಣ ಬೆಳೆಯುತ್ತಾರೆ. ಸರ್ಕಾರದ ತೋಟಗಾರಿಕೆ ಇಲಾಖೆಯ ಲೆಕ್ಕಾಚಾರದ ಪ್ರಕಾರ ಒಂದು ಎಕರೆಯಲ್ಲಿ ಅರಿಶಿಣ ಬೆಳೆಯಲು ಕನಿಷ್ಠ 143325 ರೂಪಾಯಿಗಳಷ್ಟು ಖರ್ಚು ತಗಲುತ್ತದೆ. ರಾಜ್ಯ ಅರಿಶಿಣ ಬೆಳೆಗಾರರ ಒಕ್ಕೂಟದ ಪ್ರಕಾರ 2.83 ಲಕ್ಷ ರೂಪಾಯಿಗಳಷ್ಟು ಖರ್ಚು ಬರುತ್ತದೆ. ಡಾ. ಸ್ವಾಮಿನಾಥನ್ ವರದಿಯ ಪ್ರಕಾರ ಲಾಭ ಸೇರಿಸಿದರೆ ಇದರ ದುಪ್ಪಟ್ಟು ಬೆಲೆ ಸಿಗಬೇಕು. ಒಂದು ಎಕರೆಯಲ್ಲಿ ಸಾಧಾರಣವಾಗಿ 24 ಕ್ವಿಂಟಾಲ್ ಅರಿಶಿಣ ಸಿಗುತ್ತದೆ ಎಂದರೆ 15-20 ಸಾವಿರ ರೂಪಾಯಿಗಳಷ್ಟು ಪ್ರತಿ ಕ್ವಿಂಟಾಲ್ ಅರಿಶಿಣಕ್ಕೆ ಬೆಲೆ ಸಿಕ್ಕರೆ ರೈತ ಉಳಿದುಕೊಳ್ಳುತ್ತಾನೆ. ಆದರೆ ಈಗ 6000ರೂಗಳಿಗಿಂತಲೂ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ಎಂಎಸ್‍ಪಿಯಲ್ಲೂ ಖರೀದಿಸುತ್ತಿಲ್ಲ. ಇದರಿಂದಾಗಿ ಲಕ್ಷಾಂತರ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಗೆ ಒಂದು ಬೆಳೆ/ ಉತ್ಪನ್ನ ಎಂದು ಘೋಷಿಸಿದ್ದೀರಿ, ಘೋಷಣೆಗಳಿಂದ ನಮ್ಮ ರೈತರ ಹೊಟ್ಟೆ ತುಂಬುವುದಿಲ್ಲ ಎಂಬುದಕ್ಕೆ ಇಂದು ರೈತರು ಎದುರಿಸುತ್ತಿರುವ ಸಂಕಷ್ಟಗಳೆ ಕಾರಣ.

ಇದನ್ನೂ ಓದಿ : Modi in Karnataka: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ದೇಶಕ್ಕೆ ಸಮರ್ಪಣೆ ಮಾಡಿದ ನರೇಂದ್ರ ಮೋದಿ

  1. ನೀವು ನಿಮ್ಮ ಅತ್ಯಾಪ್ತರಾದ ಅದಾನಿ, ಅಂಬಾನಿ, ಧಮಾನಿ ಮುಂತಾದವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದುಬಿಟ್ಟಿರಿ, ದೆಹಲಿಯಲ್ಲಿ ರೈತರು ವೀರೋಚಿತ ಹೋರಾಟ ನಡೆಸಿದ ಕಾರಣ ಕೇಂದ್ರ ಸರ್ಕಾರ ಮಾಡಿದ್ದ ಕಾಯ್ದೆಗಳನ್ನು ವಾಪಸ್ಸು ಪಡೆದಿದ್ದೀರಿ. ಆದರೆ ಬಿಜೆಪಿ ಆಡಳಿತದ ಕರ್ನಾಟಕ ಮುಂತಾದ ರಾಜ್ಯಗಳಲ್ಲಿ ಈ ಕಾಯ್ದೆಗಳನ್ನು ಹಾಗೆಯೆ ಉಳಿಸಿಕೊಳ್ಳುವಂತೆ ಒತ್ತಡ ಹಾಕಿ ಈ ಮನೆಹಾಳು ಕಾಯ್ದೆಗಳನ್ನು ಹಾಗೆ ಉಳಿಸಿದ್ದೀರಿ. ಈ ಕಾಯ್ದೆಗಳಿಂದ ಆಗಿರುವ ಭೀಕರ ಹಾನಿಯ ಬಗ್ಗೆ ನಿಮಗೆ ತಿಳುವಳಿಕೆ ಇದೆಯೆ?
  2. ಕೊಬ್ಬರಿ; 18000 ರಿಂದ 20000 ರೂಪಾಯಿಗಳಿಗೆ ಮಾರಾಟವಾಗುತ್ತಿದ್ದ ಕೊಬ್ಬರಿ ಬೆಲೆ ಈಗ ಕೇವಲ 9000 ಕ್ಕೆ ಕುಸಿದು ಹೋಗಿದೆ. ಕಣ್ಣುಮುಂದೆಯೆ 10000 ರೂಪಾಯಿಗಳಷ್ಟು ಬೆಲೆ ರೈತರ ಕೈಬಿಟ್ಟು ಹೋಗುತ್ತಿದೆ. ದೇಶದ ತೆಂಗಿನಲ್ಲಿ ಕರ್ನಾಟಕದ ಪಾಲು ಶೇ.31 ರಷ್ಟಿದೆ. 13 ಲಕ್ಷ ಎಕರೆಗಳಲ್ಲಿ ತೆಂಗು ಬೆಳೆಯಲಾಗುತ್ತದೆ. ಬೆಲೆ ಪಾತಾಳಕ್ಕೆ ಕುಸಿದರೂ ಸರ್ಕಾರ ನಿಷ್ಕ್ರಿಯವಾಗಿದೆ. ಎಂಎಸ್ಪಿಗಿಂತಲೂ 2500 ರೂಪಾಯಿಗಳಷ್ಟು ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ಹೀಗಿದ್ದರೂ ನೀವು ಮೌನವಾಗಿದ್ದೀರಿ. ತೆಂಗು ಬೆಳೆಗಾರರ ಸಂಕಷ್ಟಕ್ಕೆ ನೀವು ಎಪಿಎಂಸಿಗಳನ್ನು ದುರ್ಬಲಗೊಳಿಸಿದ್ದು ಕಾರಣ ಅಲ್ಲವೆ?
  3. ಅಡಿಕೆ; ರಾಜ್ಯದಲ್ಲಿ ಸುಮಾರು 9 ಲಕ್ಷ ರೈತರು ಲಕ್ಷಾಂತರ ಎಕರೆ ಭೂಮಿಯಲ್ಲಿ ಅಡಿಕೆ ಬೆಳೆಯುತ್ತಿದ್ದಾರೆ. ಕೆಲವು ತಿಂಗಳ ಹಿಂದೆ 60000 ರೂಪಾಯಿಗಳಿಗೆ ಪ್ರತಿ ಕ್ವಿಂಟಾಲ್ ಅಡಿಕೆ ಮಾರಾಟವಾಗುತ್ತಿತ್ತು. ಈಗ 40 ಸಾವಿರ ರೂಪಾಯಿಗಳಿಗೆ ಕುಸಿದಿದೆ. ಅಡಿಕೆ ಬೆಳೆಯುವ ಜಿಲ್ಲೆಗಳ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ನಿಮ್ಮ ಬಿಜೆಪಿ ಸರ್ಕಾರಗಳು ತಂದೊಡ್ಡಿವೆ. ನಮ್ಮ ರೈತರು ಬೆಳೆಯುವ ಅಡಿಕೆಯ ಬೆಲೆ ಕುಸಿಯುತ್ತಿದೆ, ಆದರೂ ನಿಮ್ಮ ನೇತೃತ್ವದ ಕೇಂದ್ರ ಸರ್ಕಾರ 65000 ಟನ್ ಅಡಿಕೆಯನ್ನು ವಿದೇಶಗಳಿಂದ ಜನವರಿಯವರೆಗೆ ಆಮದು ಮಾಡಿಕೊಂಡಿದೆ. ನಿಮ್ಮ ಸರ್ಕಾರಗಳಿಂದ ಇದುವರೆಗೆ ಅಡಿಕೆ ಬೆಳೆಗೆ ಬಂದಿರುವ ಹಳದಿ ರೋಗ, ಎಲೆಚುಕ್ಕಿ ರೋಗಕ್ಕೆ ಔಷಧ ಕಂಡುಹಿಡಿಯಲಾಗಿಲ್ಲ. ಅಡಿಕೆ ಬೆಳೆಗಾರರ ಸಂಕಷ್ಟಕ್ಕೆ ನೀವೆ ನೇರವಾಗಿ ಕಾರಣ ಅಲ್ಲವೆ?
  4. ನಿಮ್ಮ ಪಕ್ಷದ ಮಾಡಾಳ್ ವಿರೂಪಾಕ್ಷಪ್ಪನವರ ಮನೆಯಲ್ಲಿ 8 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣ ಒಂದೇ ಕಂತಿನಲ್ಲಿ ಸಿಕ್ಕಿದೆ. ಒಬ್ಬ ಎಂಎಲ್‍ಎ ಬಳಿಯೆ ಇಷ್ಟೊಂದು ಹಣ ಸಿಕ್ಕಿದೆಯೆಂದರೆ ಇನ್ನು ಮಂತ್ರಿಗಳ ಬಳಿ ಎಷ್ಟಿರಬಹುದು? 40 ಪರ್ಸೆಂಟ್ ಭ್ರಷ್ಟಾಚಾರಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕೆ? ಈ ಎಂಎಲ್‍ಎ ಕರ್ನಾಟಕದ ಹೆಮ್ಮೆಯ ಪರಂಪರೆಯ ಉತ್ಪನ್ನವಾದ ಮೈಸೂರು ಸ್ಯಾಂಡಲ್ ಸೋಪಿಗೆ ಕಲಬೆರಕೆ ಮಾಡಲು ಪ್ರಯತ್ನಿಸಿದ್ದಾರೆ. ಅದಕ್ಕೋಸ್ಕರವೆ ಈ ಕಮಿಷನ್ ದಂಧೆ ನಡೆದಿದೆ. ಇಂಥ ಕಳ್ಳತನದ ಮಾಹಿತಿ ನಿಮಗೆ ಇರಲಿಲ್ಲವೆ? ನಿಮ್ಮ ಸಿಬಿಐ, ಇಡಿಗಳು ಏನು ಮಾಡುತ್ತಿವೆ? ಈ ಮಾಡಾಳು ವಿರೂಪಾಕ್ಷಪ್ಪ ಅಡಿಕೆ ಬೆಳೆಯುವ ರೈತರ ಮನೆಗಳಲ್ಲಿ ಇಷ್ಟು ಹಣ ಸಾಮಾನ್ಯ ಎನ್ನುವಂತೆ ಮಾತನಾಡಿದ್ದಾರೆ. ಇಷ್ಟೊಂದು ನಗದನ್ನು ಇಟ್ಟುಕೊಳ್ಳಲು ನಿಮ್ಮ ಪಾರ್ಟಿಯವರಿಗೆ ಮಾತ್ರ ಅನುಮತಿ ನೀಡಲಾಗಿದೆಯೆ?
  5. ಮೆಣಸು; ಈ ಹಿಂದೆ ಕ್ವಿಂಟಾಲಿಗೆ 90000 ರೂವರೆಗೆ ಇದ್ದ ಮೆಣಸಿನ ಬೆಲೆ ಈಗ 40 ಸಾವಿರ ರೂಪಾಯಿಗೆ ಕುಸಿದಿದೆ. ಇದಕ್ಕೆ ಕಾರಣ ಏನು? ಇದಕ್ಕೆ ನಿಮ್ಮ ಸರ್ಕಾರದ ರೈತ ವಿರೋಧಿ ನೀತಿಗಳೆ ಕಾರಣವಲ್ಲವೆ?
  6. ಕಬ್ಬು; ವರ್ಷ ಪೂರ್ತಿ ಪ್ರಕೃತಿಯೊಂದಿಗೆ ಸೆಣಸಿ ಕಬ್ಬು ಬೆಳೆಯುವ ರೈತರಿಗೆ ನಿಮ್ಮ ನೇತೃತ್ವದ ಕೇಂದ್ರ ಸರ್ಕಾರ ಕಬ್ಬಿನ ಎಫ್‍ಆರ್‍ಪಿ ದರಗಳನ್ನು ಪ್ರತಿ ಟನ್ನಿನ ಮೇಲೆ 3000ರೂ ಆಸುಪಾಸಿನಲ್ಲಿಟ್ಟಿದೆ. ಆದರೆ ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ನಿಗೆ 6500 ರೂಗಳಿಗೂ ಹೆಚ್ಚು ಸಂಪಾದಿಸುತ್ತಿವೆ. ಅವುಗಳ ಲಾಭದಲ್ಲಿ ರೈತರಿಗೆ ಯಾವುದೆ ಲಾಭವಿಲ್ಲ. 25 ಲಕ್ಷ ರೈತರು 35 ಲಕ್ಷ ಎಕರೆ ಪ್ರದೇಶದಲ್ಲಿ 6.5 ಕೋಟಿಗೂ ಹೆಚ್ಚು ಟನ್ ಕಬ್ಬು ಬೆಳೆಯುತ್ತಿದ್ದಾರೆ. ಕಬ್ಬು ಬೆಳೆಯುವ ರೈತರೂ ಸಂಕಷ್ಟದಲ್ಲಿದ್ದಾರೆ. ಮಂಡ್ಯದಲ್ಲಿ ಸಕ್ಕರೆ ಕಾರ್ಖಾನೆಯನ್ನು ಪ್ರಾರಂಭಿಸಿ ಎಂದು ನಾನು ಕಳೆದ ಮೂರೂವರೆ ವರ್ಷಗಳಿಂದ ಒತ್ತಾಯಿಸುತ್ತಿದ್ದೇನೆ. ಆದರೂ ರಾಜ್ಯದ ಬಿಜೆಪಿ ಸರ್ಕಾರಗಳು ಪ್ರಾರಂಭಿಸಿಲ್ಲ.
  7. ಹಾಲು; ನಿಮ್ಮ ಸರ್ಕಾರಗಳ ಕಾರ್ಪೊರೇಟ್ ಪರ ನೀತಿಯಿಂದಾಗಿ ಗುಜರಾತಿನಲ್ಲಿ ರೈತರ ನಿಯಂತ್ರಣದಲ್ಲಿ, ಉಸ್ತುವಾರಿಯಲ್ಲಿ ಅಮುಲ್ ಎಂಬ ಹಾಲು ಉತ್ಪಾದಕರ ಸಹಕಾರ ಸಂಸ್ಥೆಯನ್ನು ರೈತರಿಂದ ದೂರ ಮಾಡಿ ಅದನ್ನು ಹಾಳು ಮಾಡುತ್ತಿದ್ದೀರಿ. ಹಾಗೆಯೆ ಕರ್ನಾಟಕದ ಕೆಎಂಎಫ್ ಅನ್ನೂ ಸಹ ಕಾರ್ಪೊರೇಟ್ ಹಿತಾಸಕ್ತಿಗಳ ನಿಯಂತ್ರಣಕ್ಕೆ ಕೊಡುವ ಹುನ್ನಾರ ನಡೆಸುತ್ತಿದ್ದೀರಿ. ಇಂದು ನಮ್ಮ ರಾಜ್ಯದ 25 ಲಕ್ಷ ಹೈನುಗಾರ ಕುಟುಂಬಗಳಿಗೆ ನಿಮ್ಮ ಬಿಜೆಪಿ ಸರ್ಕಾರಗಳ ನೀತಿಗಳಿಂದ ಸಂಕಷ್ಟ ಬಂದೊದಗಿದೆ. ನಮ್ಮ ಸರ್ಕಾರ ಇದ್ದಾಗ ನಾವು ಲೀಟರ್‍ಗೆ 5 ರೂ ಪ್ರೋತ್ಸಾಹ ಧನ ಕೊಡುತ್ತಿದ್ದೆವು. ಆಗ 45 ಲಕ್ಷ ಲೀಟರುಗಳಿಂದ 73 ಲಕ್ಷ ಲೀಟರ್‍ಗಳಿಗೆ ಹಾಲಿನ ಉತ್ಪಾದನೆ ಹೆಚ್ಚಾಗಿತ್ತು. ಬಿಜೆಪಿ ಸರ್ಕಾರ ಹಾಲು ಉತ್ಪಾದಕರಿಗೆ ಯಾವ ಅನುಕೂಲಗಳನ್ನೂ ಮಾಡಲಿಲ್ಲ. ಈ ತಿಂಗಳಲ್ಲಿ 99 ಲಕ್ಷ ಲೀಟರುಗಳಿಗೆ ಹೆಚ್ಚಾಗಬೇಕಾಗಿದ್ದ ಹಾಲಿನ ಉತ್ಪಾದನೆ 71 ಲಕ್ಷ ಲೀಟರುಗಳಿಗೆ ಕುಸಿದಿದೆ. ರೈತರಿಗೆ ಪ್ರತಿದಿನ 11 ಕೋಟಿ ರೂಪಾಯಿಗಳಷ್ಟು ನಷ್ಟ ಸಂಭವಿಸುತ್ತಿದೆ ಇದಕ್ಕೆ ಬಿಜೆಪಿ ಸರ್ಕಾರವಲ್ಲದೆ ಯಾರು ಹೊಣೆ?
  8. ಈರುಳ್ಳಿ; ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕದಲ್ಲಿ ವ್ಯಾಪಕವಾಗಿ ಈರುಳ್ಳಿ ಬೆಳೆÀಯುತ್ತಾರೆ. ಈರುಳ್ಳಿ ಬೆಳೆಗೆ ಬೆಲೆ ಇಲ್ಲದೆ ರೈತರು ಬೆಂಕಿ ಹಚ್ಚುತ್ತಿರುವ ಫೋಟೊಗಳು ಮಾಧ್ಯಮಗಳಲ್ಲಿ ವರದಿಯಾಗಿವೆ. ಇತ್ತೀಚೆಗೆ ಈರುಳ್ಳಿ ಬೆಳೆಗಾರ ರೈತರೊಬ್ಬರಿಗೆ ಕೇವಲ 2 ರೂಪಾಯಿ ಚೆಕ್ ಕೊಡಲಾಗಿತ್ತು. ಬೆಲೆ ಕುಸಿತವಾದಾಗ ಮಧ್ಯಪ್ರವೇಶಿಸಬೇಕಾದ ಕೇಂದ್ರ ರಾಜ್ಯ ಸರ್ಕಾರಗಳು ಮೌನ ವಹಿಸಿವೆ. ಹಣ್ಣು, ತರಕಾರಿ ಬೆಳೆಯುವ ರೈತರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಇದಕ್ಕೆ ನೀವೆ ಕಾರಣರಲ್ಲವೆ?
  9. ನಿಮ್ಮ ಸರ್ಕಾರದ ರೈತ ವಿರೋಧಿ, ಕಾರ್ಮಿಕ ವಿರೋಧಿ, ಸಣ್ಣ ಕೈಗಾರಿಕೆಗಳ ವಿರೋಧಿ, ಯುವಜನರ ವಿರೋಧಿ, ಸಣ್ಣ ಪುಟ್ಟ ವ್ಯಾಪಾರಿಗಳ ವಿರೋಧಿಯಾದ ನೀತಿಗಳಿಂದಾಗಿ ರಾಜ್ಯದ ಜನರ ಬದುಕು ಮೂರಾಬಟ್ಟೆಯಾಗುತ್ತಿದೆ. ಇಷ್ಟೆಲ್ಲ ಸಂಕಷ್ಟಗಳಿಗೆ ಕಾರಣರಾದ ನೀವು ಅದು ಯಾವ ಮುಖ ಇಟ್ಟುಕೊಂಡು ರಾಜ್ಯದಲ್ಲಿ ಓಡಾಡುತ್ತೀರಿ?
  10. ಮೊದಲು ಸಂಕಷ್ಟಕ್ಕೆ ಸಿಲುಕಿರುವ ರೈತರು, ಕಾರ್ಮಿಕರು, ದಲಿತರು, ಮಹಿಳೆಯರು, ಯುವಜನರು, ಸಣ್ಣ ಮತ್ತು ಗೃಹ ಕೈಗಾರಿಕೋದ್ಯಮಿಗಳು, ಸಣ್ಣ ಪುಟ್ಟ ವ್ಯಾಪಾರಿಗಳ ಸಂಕಷ್ಟಗಳನ್ನು ನಿವಾರಿಸಿ ಆ ನಂತರ ಓಟು ಕೇಳಲು ಬನ್ನಿ. 10 ವರ್ಷಗಳಿಂದ ನಿಮ್ಮ ಬಣ್ಣದ ಮಾತುಗಳನ್ನು ಕೇಳಿ ಟೋಪಿ ಹಾಕಿಸಿಕೊಂಡು ಆಗಿದೆ. ನಮ್ಮ ಜನರ ಮೈಯಲ್ಲಿ ನೀವು ಇರಿಯಲು ಒಂದಿಂಚೂ ಜಾಗವನ್ನೂ ಉಳಿಸಿಲ್ಲ. ಜನರ ಬದುಕು ಸುಧಾರಣೆಯಾಗಬೇಕಾಗಿದೆಯೇ ಹೊರತು ನಿಮ್ಮ ಬೂದಿ ಬಣ್ಣದ ಮಾತುಗಳಲ್ಲ. ಮಂತ್ರಕ್ಕೆ ಮಾವಿನ ಕಾಯಿ ಉದುರುವುದಿಲ್ಲ ಎಂದು ನಮ್ಮ ಹಿರಿಯರು ಗಾದೆ ಮಾಡಿರುವುದು ನಿಮ್ಮಂತವರನ್ನು ನೋಡಿಯೆ ತಾನೆ?

ಹಿಂದಿನ 7 ಕಂತುಗಳ ಪ್ರಶ್ನೆಗಳನ್ನೂ ಸೇರಿಸಿ ಪ್ರಾಮಾಣಿಕವಾಗಿ ಉತ್ತರ ಕೊಡುತ್ತೀರೆಂದು ರಾಜ್ಯದ ಜನರು ಆಶಿಸುತ್ತಿದ್ದಾರೆ. ನಾನೂ ಕೂಡ ಕಾಯುತ್ತಿದ್ದೇನೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.

Exit mobile version