ಬೆಂಗಳೂರು: ಪುನರ್ ಅಭಿವೃದ್ಧಿಪಡಿಸಿದ ಬೆಳಗಾವಿ ರೈಲು ನಿಲ್ದಾಣ ಉದ್ಘಾಟನೆ, ಲೋಂಡಾ, ಬೆಳಗಾವಿ, ಫಟಪ್ರಭಾ ಮಾರ್ಗದ ಡಬ್ಲಿಂಗ್ ಲೋಕಾರ್ಪಣೆ ಮಾಡಲು ಪ್ರಧಾನಿ ನರೇಂದ್ರ ಮೋದಿ (Modi at Belagavi) ಅವರು ಸೋಮವಾರ ಬೆಳಗಾವಿಗೆ ಆಗಮಿಸಿದ್ದು, ೧೦.೭ ಕಿ.ಮೀ. ಉದ್ದದ ಮೆಗಾ ರೋಡ್ ಶೋ ನಡೆಸಿದ್ದಾರೆ. ಬೆಳಗಾವಿಯ ಎಪಿಎಂಸಿ ಬಳಿಯ ಕೆಎಸ್‌ಆರ್‌ಪಿ ಮೈದಾನದಿಂದ ರಸ್ತೆಯುದ್ದಕ್ಕೂ ಜನರತ್ತ ಕೈಬೀಸುತ್ತಾ ಬರುತ್ತಿರುವ ಪ್ರಧಾನಿ ಮೋದಿಯತ್ತ ಜನರೂ ಉದ್ಘೋಷ, ಜಯಘೋಷಗಳನ್ನು ಕೂಗಿ ಸಂತಸ ವ್ಯಕ್ತಪಡಿಸಿದರು. ದಾರಿಯುದ್ದಕ್ಕೂ ಮೋದಿ ಮೇಲೆ ಪುಷ್ಪ ವೃಷ್ಟಿಯೇ ಸುರಿದಿದೆ.
ಬಿಗಿ ಭದ್ರತೆ ನಡುವೆ ನಡೆದ ಮೋದಿ ರೋಡ್ ಶೋದಲ್ಲಿ ರಸ್ತೆಗಳ ಇಕ್ಕೆಲಗಳಲ್ಲಿ ಸಾರ್ವಜನಿಕರು ಕಿಕ್ಕಿರಿದು ನಿಂತಿದ್ದರು. ಒಂದು ಕಡೆ ಮೋದಿ ವಾಹನ ಸಾಗುತ್ತಿದ್ದರೆ, ಅವರ ಭದ್ರತಾ ಪಡೆಗಳು ಓಡೋಡಿ ಬರುತ್ತಿದ್ದರು. ಹಾಗೆಯೇ ಬ್ಯಾರಿಕೇಡ್ ಆಚೆ ನಿಂತ ಕೆಲವು ಜನರೂ ಸಹ ಕಾರು ಸಾಗುತ್ತಿದ್ದಂತೆ ಆ ಕಡೆಯಿಂದ ಓಡೋಡಿ ಬರುತ್ತಲೇ ಇದ್ದರು. ಅಷ್ಟರ ಮಟ್ಟಿಗೆ ಮೋದಿ ಮೇಲಿನ ಪ್ರೀತಿ, ಅಕ್ಕರೆಯನ್ನು ಅಲ್ಲಿನ ಜನ ತೋರಿದರು. ಕೆಲವರು ಸೆಲ್ಫೀ ತೆಗೆದುಕೊಂಡರೆ, ಮತ್ತೆ ಕೆಲವರು ವಿಡಿಯೊಗಳನ್ನು ಮಾಡಿಕೊಳ್ಳುತ್ತಿದ್ದರು. ಈಗಾಗಲೇ ಲಕ್ಷಾಂತರ ಮಂದಿ ರಸ್ತೆಯ ಇಕ್ಕೆಲಗಳಲ್ಲಿ ಜಮಾವಣೆಗೊಂಡಿದ್ದಾರೆ.
ಬೆಳಗಾವಿಯ ಎಪಿಎಂಸಿ ಬಳಿಯ ಕೆಎಸ್‌ಆರ್‌ಪಿ ಮೈದಾನದಿಂದ ಆರಂಭವಾಗಿರುವ ರೋಡ್ ಶೋ ಮಾಲಿನಿ ಸಿಟಿ ಮೈದಾನದವರೆಗೆ ಸುಮಾರು ೧೦.೭ ಕಿ.ಮೀ.ವರೆಗೆ ನಡೆಯಿತು. ಕೆಎಸ್‌ಆರ್‌ಪಿ ಮೈದಾನದಿಂದ ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತ, ಧರ್ಮವೀರ ಸಂಭಾಜಿ ವೃತ್ತ, ರಾಮಲಿಂಗಖಿಂಡ ಬೀದಿ, ಕಪಿಲೇಶ್ವರ ಮಂದಿರ ಬಳಿ ಮೇಲ್ಸೇತುವೆ, ಶಹಾಪುರ ರಸ್ತೆ, ಶಿವಚರಿತ್ರೆ ಮುಂಭಾಗದ ರಸ್ತೆ, ಹಳೆಯ ಪಿಬಿ ರಸ್ತೆ ಮೂಲಕವಾಗಿ ಬಿ.ಎಸ್.ಯಡಿಯೂರಪ್ಪ ಮಾರ್ಗವಾಗಿ ಮಾಲಿನಿ ಸಿಟಿ ಮೈದಾನವರೆಗೆ ಮೋದಿ ಜನರತ್ತ ಕೈ ಬೀಸುತ್ತಾ ಸಾಗಿದರು.
ಇದನ್ನೂ ಓದಿ: Shivamogga Airport: ಬಿ.ಎಸ್. ಯಡಿಯೂರಪ್ಪ ಜನ್ಮದಿನಕ್ಕೆ ಶುಭ ಕೋರಿದ ಪ್ರಧಾನಿ ಮೋದಿ: ಮೊಬೈಲ್ ಫ್ಲಾಷ್ ಲೈಟ್ ಮೂಲಕ ಗೌರವ
ಗಮನ ಸೆಳೆದ ವಿವಿಧ ರಾಜ್ಯಗಳ ಕಲಾವಿದರು
ದೇಶದ 29 ರಾಜ್ಯ 8 ಕೇಂದ್ರಾಡಳಿತ ಪ್ರದೇಶಗಳ ತಲಾ 12 ಜನ ಕಲಾವಿದರು ಅಲ್ಲಿನ ಸ್ಥಳೀಯ ವೇಷಭೂಷಣ ಧರಿಸಿ ಪ್ರದರ್ಶನ ನೀಡಿದರು. ಸುಮಾರು 400 ಕಲಾವಿದರು ಭಾಗಿಯಾಗಿದ್ದು, ಗಮನ ಸೆಳೆದರು. ಜತೆಗೆ ಮಹನೀಯರ ಸಾಹಸಗಾಥೆ ಬಿಂಬಿಸುವ ಲೈವ್ ಪ್ರದರ್ಶನ, ಮೋದಿ ಆಡಳಿತದಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್ ಹಾಗೂ ಕೆಲವು ಯಶೋಗಾಥೆಗಳು ಸೇರಿದಂತೆ ಜತೆಗೆ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಬೆಳವಡಿ ಮಲ್ಲಮ್ಮ, ಶಿವಾಜಿ ಮಹಾರಾಜರ ಸಾಹಸಗಾಥೆ ಪ್ರದರ್ಶನವೂ ನಡೆಯಿತು.