ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ಅನೇಕ ಜನಸ್ನೇಹಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಗುರುವಾರ ತಿಳಿಸಿದ್ದಾರೆ. ಈ ವೇಳೆ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಸೇರಿ ಇನ್ನಿತರ ಕಾರ್ಯ ಮಾಡಬಾರದು ಎಂದು ತಿಳಿಸಿದ್ದಾರೆ.
ವಿಧಾನಸೌಧದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರವಿಕುಮಾರ್, ಮೋದಿಯವರು ಬಡವರ, ದಲಿತರ ಮತ್ತು ಶೋಷಿತರ, ಮಹಿಳೆಯರ, ಅಂಗವಿಕಲರ ಹಾಗೂ ಪರಿಸರದ ಪರ ಎಂಬುದರ ಹಿನ್ನೆಲೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.
ಮೋದಿ ಅವರ ಕಾರ್ಯದ ಪರಿಚಯ ಮಾಡಿಕೊಡಲು ಅವರ ಬಗೆಗಿನ ಮೋದಿ @20 ಡ್ರೀಮ್ ಮೀಟ್ ಡೆಲಿವರಿ ಪುಸ್ತಕ ಬಿಡುಗಡೆ ಮಾಡಲಾಗುವುದು. ಅವರ ಸಾಧನೆಗಳ ಪ್ರದರ್ಶಿನಿ ಏರ್ಪಡಿಸಲಾಗುತ್ತದೆ. ಯುವ ಮೋರ್ಚಾ ವತಿಯಿಂದ ಎಲ್ಲ ಜಿಲ್ಲೆಗಳಲ್ಲಿ ಒಟ್ಟು 11 ಸಾವಿರ ಯೂನಿಟ್ ರಕ್ತದಾನ ನಡೆಯಲಿದೆ. ದೇಶದಲ್ಲಿ ಇದೊಂದು ಗಿನ್ನೆಸ್ ದಾಖಲೆ ಆಗಬೇಕು ಎಂಬ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಇದನ್ನೂ ಓದಿ | Modi Birthday | ಮೋದಿ ಜನ್ಮದಿನಕ್ಕೆ ಬಿಜೆಪಿ ಸೇವಾ ಸಂಕಲ್ಪ; ಸೆ.17ರಿಂದ ದಿನಕ್ಕೊಂದು ಸೇವಾ ಕಾರ್ಯ!
ಸಸಿ ನೆಡುವುದರ ಜತೆಗೆ ಸಸಿಯನ್ನು ದತ್ತು ಪಡೆಯಲಾಗುವುದು. ಅರಳಿ ಮರದ ಸಸಿಗಳನ್ನು ನೆಡಲಾಗುತ್ತದೆ. ದಿವ್ಯಾಂಗರಿಗೆ ಅಗತ್ಯ ಉಪಕರಣ ನೀಡಲಾಗುವುದು. ಕ್ಯಾಚ್ ದಿ ರೈನ್ ಅಡಿಯಲ್ಲಿ ನೀರು ಮರುಪೂರಣ ಅಭಿಯಾನ, ವೋಕಲ್ ಫಾರ್ ಲೋಕಲ್ ಧ್ಯೇಯವಾಕ್ಯದಡಿ ಸ್ಥಳೀಯ ವಸ್ತುಗಳ ಬಳಕೆಗೆ ಅಭಿಯಾನ ರೂಪಿಸುತ್ತೇವೆ ಎಂದರು.
ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಒಂದು ಜೊತೆ ಖಾದಿ ಡ್ರೆಸ್ ಖರೀದಿ, ಖಾದಿ ಕರ್ಚೀಪ್, ಖಾದಿ ಟವೆಲ್ ಬಳಕೆ ಅಭಿಯಾನ ಮಾಡಲಿದ್ದೇವೆ. ನಷ್ಟದಲ್ಲಿದ್ದ ಖಾದಿ ಇಲಾಖೆಯು ನಮ್ಮ ಅಭಿಯಾನದ ಫಲವಾಗಿ ಲಾಭ ಪಡೆಯುವಂತಾಗಿದೆ ಎಂದು ರವಿಕುಮಾರ್ ವಿವರಿಸಿದರು.
ಸ್ವಚ್ಛತಾ ಅಭಿಯಾನದಡಿ ಪ್ರತಿ ಜಿಲ್ಲೆಗಳಲ್ಲಿ 75 ಕೆರೆಗಳನ್ನು ಅಮೃತ ಸರೋವರ ಯೋಜನೆಯಡಿ ನಿರ್ಮಿಸಲಾಗುತ್ತದೆ. ಕೆರೆಗಳ ಶುದ್ಧೀಕರಣ ನಡೆಯಲಿದೆ. ಸೆ.17ರಿಂದ ಅ.2ರವರೆಗೆ ಸೇವಾ ಪಾಕ್ಷಿಕ ನಡೆಯಲಿದ್ದು, ಮುಖ್ಯಮಂತ್ರಿ ಸೇರಿ ಜನಪ್ರತಿನಿಧಿಗಳೆಲ್ಲರೂ ಭಾಗವಹಿಸಲಿದ್ದಾರೆ. ಕ್ಷಯರೋಗ ಮುಕ್ತ ಅಭಿಯಾನಕ್ಕೆ ಪ್ರಧಾನಿಯವರು ಕರೆ ಕೊಟ್ಟಿದ್ದು, ಕ್ಷಯರೋಗಕ್ಕೆ ಸಿಲುಕಿದವರಿಗೆ ಜನಪ್ರತಿನಿಧಿಗಳು ಔಷಧಿ ಮತ್ತಿತರ ಸೌಲಭ್ಯ ನೀಡಿ ನೆರವಾಗಲಿದ್ದಾರೆ. 2025ಕ್ಕೆ ಕ್ಷಯಮುಕ್ತ ಭಾರತ ಮಾಡಲಾಗುತ್ತದೆ. ಮೋದಿಯವರ ಭಾವಚಿತ್ರಕ್ಕೆ ಹಾಲು ಎರೆಯುವುದು, ಭಾವಚಿತ್ರಕ್ಕೆ ಪೂಜೆ, ಹೋಮ-ಹವನ ಮಾಡಬಾರದು ಎಂದು ಅವರು ಪಕ್ಷದ ಪರವಾಗಿ ತಿಳಿಸಿದರು.
ರಾಜ್ಯ ಮುಖ್ಯ ವಕ್ತಾರ ಎಂ.ಜಿ. ಮಹೇಶ್ ಮಾತನಾಡಿ, ರಾಜ್ಯದ ಕಾಡುಕುರುಬರ ಸಮಸ್ಯೆಗೆ ಕೇಂದ್ರದ ಸಚಿವ ಸಂಪುಟವು ಶಾಶ್ವತವಾದ ಪರಿಹಾರ ಒದಗಿಸಿದೆ. ಇದು ನೆನೆಗುದಿಗೆ ಬಿದ್ದ ಸಮಸ್ಯೆಯಾಗಿತ್ತು. ನರೇಂದ್ರ ಮೋದಿಯವರ ಈ ಉತ್ತಮ ನಡೆಗೆ ಕರ್ನಾಟಕ ಬಿಜೆಪಿ ಅಭಿನಂದನೆಗಳನ್ನು ಸಲ್ಲಿಸುತ್ತದೆ ಎಂದು ತಿಳಿಸಿದರು.
ಬೆಂಗಳೂರಿಗೆ ಸಂಬಂಧಿಸಿದ ಟೋಯಿಂಗ್ ವಿಚಾರದಲ್ಲಿ ಹೈಕೋರ್ಟ್ ತೀರ್ಮಾನಕ್ಕೆ ಸರ್ಕಾರವು ಮೇಲ್ಮನವಿ ಸಲ್ಲಿಸಬೇಕು. ಟೋಯಿಂಗ್ ಮೂಲಕ ಆಗುತ್ತಿರುವ ಶ್ರೀಸಾಮಾನ್ಯನ ಮೇಲಿನ ದಬ್ಬಾಳಿಕೆ, ಸುಲಿಗೆಗಳಿಂದ ಬೆಂಗಳೂರಿನ ಜನರನ್ನು ಪಾರು ಮಾಡಬೇಕು. ಮೇಲ್ಮನವಿ ಮೂಲಕ ಕೋರ್ಟಿನಿಂದ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್‍ನವರು ಮೂರು ದಿನಗಳ ಹಿಂದೆ ಭ್ರಷ್ಟಾಚಾರಕ್ಕೆ ಸಂಬಂಧಿಸಿ ಕಾಲ್ ಸೆಂಟರ್ ಆರಂಭಿಸಿದ್ದಾರೆ. 1,800 ಭ್ರಷ್ಟಾಚಾರದ ಪ್ರಕರಣಗಳು ಬಂದಿವೆ ಎಂದೂ ಅವರು ಹೇಳಿಕೊಂಡಿದ್ದಾರೆ. ಕಾಂಗ್ರೆಸ್ಸಿಗರ ಭ್ರಷ್ಟಾಚಾರ ಪ್ರಕರಣಗಳು ಲೋಕಾಯುಕ್ತ ಮತ್ತು ಇತರ ಸಂಸ್ಥೆಗಳಲ್ಲಿವೆ. ಕಾಂಗ್ರೆಸಿಗರು ತಮ್ಮ ಭ್ರಷ್ಟಾಚಾರವನ್ನು ಶುದ್ಧ ಮಾಡಬೇಕು. ಸಿದ್ದರಾಮಯ್ಯನವರ ಮೇಲೆ 50ಕ್ಕೂ ಹೆಚ್ಚು ಕೇಸುಗಳಿವೆ. ತಾವು ಮೊದಲು ಮಾದರಿ ಆಗಬೇಕು ಎಂದು ಆಗ್ರಹಿಸಿದರು.
ಬಿಜೆಪಿ ರಾಜ್ಯ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಕೆ.ಎಸ್. ನವೀನ್, ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಡಾ. ಸಂದೀಪ್ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ | Cheetah | ಪ್ರಧಾನಿ ನರೇಂದ್ರ ಮೋದಿ ಜನ್ಮದಿನದಂದೇ ಭಾರತಕ್ಕೆ ಬರಲಿವೆ ಎಂಟು ಚೀತಾಗಳು!