Site icon Vistara News

Modi Birthday | ವಿಜಯನಗರದಲ್ಲಿ ಬಿಜೆಪಿಯಿಂದ ಸೇವಾ ಪಾಕ್ಷಿಕ; ವಿವಿಧ ಸಾಮಾಜಿಕ ಕಾರ್ಯಕ್ಕೆ ಚಾಲನೆ

vijayanagara bjp

ವಿಜಯನಗರ (ಹೊಸಪೇಟೆ): ಪ್ರಧಾನಮಂತ್ರಿ ನರೇಂದ್ರ‌ ಮೋದಿ (Modi Birthday) ಜನ್ಮದಿನಾಚರಣೆ ಪ್ರಯುಕ್ತ ಸೆ. 17ರಂದು ಬಿಜೆಪಿ ವತಿಯಿಂದ ಜಿಲ್ಲೆಯಲ್ಲಿ ಸೇವಾ ಪಾಕ್ಷಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಅನಂತಪದ್ಮನಾಭ ತಿಳಿಸಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಸೂಚನೆ ಮೇರೆಗೆ ಈ ಚಟುವಟಿಕೆಯನ್ನು ಹಮ್ಮಿಕೊಂಡಿದ್ದು, ಬಡವರ, ಕಾರ್ಮಿಕರ, ರೈತರ ಪರ ಅನೇಕ ಯೋಜನೆಗಳನ್ನು ಜಾರಿಗೆ ತಂದ ಮೋದಿ ದೀರ್ಘಾಯುಷ್ಯಕ್ಕಾಗಿ ಈ ಬಾರಿ ಸೇವಾ ಪಾಕ್ಷಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 8 ವರ್ಷಗಳ ಕಾಲ‌ ದೇಶದ ಅತ್ಯುತ್ತಮ ಪ್ರಧಾನಿಯಾಗಿ ಹಾಗೂ 12 ವರ್ಷಗಳ ಕಾಲ ಗುಜರಾತ್ ಸಿಎಂ ಆಗಿ ಅವರು ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಈ ಬಾರಿ ಅವರ ಜನ್ಮದಿನಾಚರಣೆಯನ್ನು ವಿಶೇಷವಾಗಿ ಆಚರಿಸುವ ನಿಟ್ಟಿನಲ್ಲಿ ದೇಶಾದ್ಯಂತ ಬಿಜೆಪಿ ವತಿಯಿಂದ ವಿವಿಧ ಸೇವಾ ಚಟುವಟಿಕೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಸೆ. 17ರಿಂದ ಆರಂಭವಾಗುವ ಸೇವಾ ಚಟುವಟಿಕೆಯು ಅ. 2ರ ಗಾಂಧೀಜಿ ಮತ್ತು ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರ ಜಯಂತಿವರೆಗೆ ನಡೆಯಲಿವೆ. ಸೆ. 25ರಂದು ಬಿಜೆಪಿ ಸಂಸ್ಥಾಪಕರಾದ ಪಂಡಿತ್ ದೀನ ದಯಾಳ ಉಪಾಧ್ಯಾಯರ ಜಯಂತಿ ಸಹ ಇದೆ. ಈ ವೇಳೆ ಬಿಜೆಪಿ ಕಾರ್ಯಕರ್ತರಿಂದ ರಕ್ತದಾನ ಶಿಬಿರಗಳು ನಡೆಯಲಿವೆ. ಇದಲ್ಲದೆ ವಿಕಲಚೇತನರಿಗೆ ಕೃತಕ ಅಂಗಾಂಗ ಜೋಡಣೆ ಶಿಬಿರ ಇರಲಿದೆ. ಸೆ. 18ರಂದು ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ಸ್ವಚ್ಛತಾ ದಿನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಆಜಾದಿ ಕಾ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪ್ರತಿ ಜಿಲ್ಲೆಯಲ್ಲಿ 75 ಕೆರೆಗಳ ನಿರ್ಮಾಣಕ್ಕೆ ನಿರ್ದೇಶನ‌ ನೀಡಿದೆ. ಕೆಲ ಜಿಲ್ಲೆಗಳಲ್ಲಿ ಈಗಾಗಲೇ ಅಮೃತ ಸರೋವರ ಅಡಿ ಕೆರೆಗಳ‌ ನಿರ್ಮಾಣವಾಗಿದೆ. ಈ ಸಮಯದಲ್ಲಿ ನಮ್ಮ ಕಾರ್ಯಕರ್ತರು ನದಿ, ಕೆರೆ, ಹಳ್ಳ, ಬಾವಿಗಳನ್ನೂ ಸೇರಿ‌ ನೀರಿನ ಮೂಲಗಳ ಸ್ಥಳಗಳಲ್ಲಿ ಸ್ವಚ್ಚತಾ ಅಭಿಯಾನ ಸೇರಿದಂತೆ ಸಸಿ ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ | Modi Birthday | ಮೋದಿ ಜನ್ಮದಿನಕ್ಕೆ ಬಿಜೆಪಿ ಸೇವಾ ಸಂಕಲ್ಪ; ಸೆ.17ರಿಂದ ದಿನಕ್ಕೊಂದು ಸೇವಾ ಕಾರ್ಯ

2025ರ ವೇಳೆಗೆ ಭಾರತವು ಕ್ಷಯರೋಗ ಮುಕ್ತವಾಗಬೇಕೆಂಬ ಪ್ರಧಾನಿ ಮೋದಿಯವರ ಸಂಕಲ್ಪವಾಗಿದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರು, ಜನಪ್ರತಿನಿಧಿಗಳು, ಪದಾಧಿಕಾರಿಗಳು 5 ಜನ ರೋಗಿಗಳಿಗೆ ಈ ಬಗ್ಗೆ ಮಾಹಿತಿ ನೀಡಿ, ಚಿಕಿತ್ಸೆ ಕೊಡಿಸಿ, ಮಾರ್ಗದರ್ಶನ ಮಾಡಿ ಪೂರಕ ಬೆಂಬಲ ಕೊಡಲಿದ್ದೇವೆ. ಪ್ರಧಾನಿ ಮೋದಿ ಕೈಗೊಂಡ ಜನ ಕಲ್ಯಾಣ ಯೋಜನೆಗಳ ಕುರಿತ ಪುಸ್ತಕ ಪ್ರದರ್ಶನ, ಮೋದಿ ಜೀವನ ಮತ್ತು ಗುರಿ ಕುರಿತಾದ ಪ್ರದರ್ಶನ ಇರಲಿದೆ ಎಂದು ವಿವರಿಸಿದರು.

ಸೆ. 25ರಂದು ದೀನದಯಾಳ ಉಪಾಧ್ಯಾಯರ ಜಯಂತಿ ದಿನ ಅವರ ಜೀವನ ಕುರಿತು ಚರ್ಚೆ, ಸಂವಾದ ಕಾರ್ಯಕ್ರಮ ಇರಲಿದೆ. ಸೆ. 25ರಂದು ನಡೆಯುವ ಪ್ರಧಾನಿಯವರ ಮನ್ ಕಿ ಬಾತ್ ಅನ್ನು ಅಂದು ಬೂತ್ ಮಟ್ಟದಲ್ಲಿ ಸಾಮೂಹಿಕವಾಗಿ ಆಲಿಸುವ ವ್ಯವಸ್ಥೆ ಮಾಡಲಾಗಿದೆ. ಇನ್ನು ಅ. 2ರಂದು ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯಂದು ಸ್ವದೇಶಿ, ಖಾದಿ, ಸ್ವಚ್ಛತೆ, ಆತ್ಮನಿರ್ಭರತೆ ಹಾಗೂ ಶುಚಿತ್ವದ ಕುರಿತು ಅಭಿಯಾನ ಇರಲಿದೆ ಎಂದರು.

ರಾಜ್ಯಕ್ಕೆ ಮೋದಿ ಕೊಡುಗೆ
ಮೋದಿಯವರು ದೇಶದ ಪ್ರಧಾನಿ ಆದ ನಂತರ ಕರ್ನಾಟಕಕ್ಕೆ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಕಳೆದ 8 ವರ್ಷಗಳಲ್ಲಿ ರಾಜ್ಯಕ್ಕೆ ಒಟ್ಟು 1.29 ಲಕ್ಷ ಕೋಟಿ ರೂಪಾಯಿ ಕೊಡುಗೆ ನೀಡಿದ್ದಾರೆ. ನರೆಗಾ ಯೋಜನೆಗೆ 27 ಸಾವಿರ ಕೋಟಿ ರೂ., ಕೃಷಿಗೆ 19 ಸಾವಿರ ಕೋಟಿ ರೂ., ಪಿಎಂ ಕಿಸಾನ್ ಅಡಿ 8 ಸಾವಿರ ಕೋಟಿ ರೂ. ದೊರೆತಿದೆ. ಈ ಎಲ್ಲ ಯೋಜನೆಗಳಿಂದ ರಾಜ್ಯದ ಒಟ್ಟು 4.17 ಕೋಟಿ ಫಲಾನುಭವಿಗಳಿಗೆ ತಲುಪಲಾಗಿದೆ. ಮಹಿಳಾ ಸುರಕ್ಷತೆಗಾಗಿ ಬೇಟಿ ಬಚಾವೊ ಬೇಟಿ ಪಢಾವೊ ಯೋಜನೆ, ಉಜ್ವಲ ಯೋಜನೆ, ಮೀನುಗಾರರಿಗೆ ಕೆಸಿಸಿ ಕಾರ್ಡ್ ವಿತರಣೆ, ಆಯುಷ್ಮಾನ್ ಭಾರತ್ ಯೋಜನೆ ಸೇರಿದಂತೆ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ ಎಂದು ವಿವರಿಸಿದರು.

ವಿಜಯನಗರ ನೂತನ ಜಿಲ್ಲೆ ಘೋಷಣೆ ಮಾಡಿದ್ದು ಬಿಜೆಪಿ ಸರ್ಕಾರ. ನೂತನ ಜಿಲ್ಲೆಯ ಅಭಿವೃದ್ಧಿಗಾಗಿ ಈಗಾಗಲೇ ಸಾವಿರ ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಜಿಲ್ಲಾ ಮಟ್ಟದ ಕಚೇರಿಗಳು ಆರಂಭವಾಗಿವೆ. ಮೂಲ‌ ಸೌಕರ್ಯಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಇನ್ನೂ ಐದಾರು ವರ್ಷಗಳಲ್ಲಿ ನೂತ‌ನ ಜಿಲ್ಲೆಯನ್ನು ಅಭಿವೃದ್ಧಿ ಜಿಲ್ಲೆಯನ್ನಾಗಿ ಮಾಡುವುದು ಬಿಜೆಪಿ ಸರ್ಕಾರದ ಗುರಿಯಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಮಾಧ್ಯಮ ಸಂಚಾಲಕ ಸತ್ಯನಾರಾಯಣ, ಜಿಲ್ಲಾ ಮಾಧ್ಯಮ ಸಹ ಸಂಚಾಲಕ ಬಸವರಾಜ ಕರ್ಕಿಹಳ್ಳಿ, ಹೊಸಪೇಟೆ ಬಿಜೆಪಿ ಮಂಡಲ ಅಧ್ಯಕ್ಷ ಕಾಸಿಟ್ಟಿ ಉಮಾಪತಿ, ಮಂಡಲ ಮಾಧ್ಯಮ ಸಂಚಾಲಕಿ ಅನುರಾಧಾ ಇದ್ದರು.

ಇದನ್ನೂ ಓದಿ | Modi Birthday | ಮೋದಿ ಫೋಟೊಗೆ ಹಾಲಿನ ಅಭಿಷೇಕ, ಹೋಮ-ಹವನ ನಡೆಸುವಂತಿಲ್ಲ: ಹಾಗಾದರೆ ಏನು ಮಾಡಲಾಗುತ್ತದೆ?

Exit mobile version