Site icon Vistara News

Modi in Bangalore : ನಾಳೆ ಬೆಂಗಳೂರಲ್ಲಿ ಮೋದಿ ರೋಡ್‌ ಶೋ ಕ್ಯಾನ್ಸಲ್; ಬಿಜೆಪಿ ಧ್ವಜಕ್ಕಿಲ್ಲ ಅವಕಾಶ!

PM Narendra modi and chandrayaana 3 success meet and bjp flag

ಬೆಂಗಳೂರು: ಚಂದ್ರಯಾನ – 3ರ (Chandrayaan 3) ಯಶಸ್ಸನ್ನು ಇಸ್ರೋ (ISRO) ವಿಜ್ಞಾನಿಗಳ ಜತೆಗೆ ಸಂಭ್ರಮಿಸುವ ಸಲುವಾಗಿ ದಕ್ಷಿಣ ಆಫ್ರಿಕಾದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಶನಿವಾರ (ಆಗಸ್ಟ್‌ 26) ನೇರವಾಗಿ ಬೆಂಗಳೂರಿಗೆ (Modi in Bangalore) ಆಗಮಿಸಲಿದ್ದು, ಈ ವೇಳೆ ರೋಡ್‌ ಶೋದಲ್ಲಿ ಪಾಲ್ಗೊಳ್ಳಲಿದ್ದಾರೆ‌ ಎಂದೇ ಹೇಳಲಾಗಿತ್ತು. ಆದರೆ, ಈಗ ಮೋದಿ ರೋಡ್‌ ಶೋ ರದ್ದಾಗಿದೆ ಎಂದು ತಿಳಿದು ಬಂದಿದೆ. ಹಾಗಂತ ಮೋದಿ ಅವರು ಈ ಮಾರ್ಗವಾಗಿಯೇ ಬರಲಿದ್ದಾರೆ. ಈ ವೇಳೆ ಎಲ್ಲಿಯೂ ಬಿಜೆಪಿ ಧ್ವಜ ಕಾಣುವಂತಿಲ್ಲ. ತ್ರಿವರ್ಣ ಧ್ವಜ ಮಾತ್ರವೇ ಕಾಣಬೇಕು. ಹೀಗಂತ ಖಡಕ್‌ ಆದೇಶ ಬಂದಿದೆ.

ಬುಧವಾರ (ಆಗಸ್ಟ್‌ 23) ಸಂಜೆ 6.04ರ ಹೊತ್ತಿಗೆ ಚಂದ್ರಯಾನದ ಲ್ಯಾಂಡರ್‌ ಚಂದ್ರನ ದಕ್ಷಿಣ ಧ್ರುವವನ್ನು ಸಾಫ್ಟ್‌ ಲ್ಯಾಂಡಿಂಗ್‌ ಮಾಡಿತ್ತು. ಬ್ರಿಕ್ಸ್‌ ಶೃಂಗಸಭೆಗಾಗಿ (BRICS Summit 2023) ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜೊಹಾನ್ಸ್‌ಬರ್ಗ್‌ನಿಂದಲೇ ಚಂದ್ರಯಾನ ಸಂಬಂಧ ಇಸ್ರೋ ಲೈವ್‌ ವೀಕ್ಷಿಸಿದ್ದರಲ್ಲದೆ, ಸಾಫ್ಟ್‌ ಲ್ಯಾಂಡಿಂಗ್‌ ಆದ ಬಳಿಕ ತೆರೆಯ ಮೇಲೆ ಬಂದು ವಿಜ್ಞಾನಿಗಳ ತಂಡಕ್ಕೆ ಶುಭಾಶಯ ತಿಳಿಸಿದ್ದರು. ದಕ್ಷಿಣ ಆಫ್ರಿಕಾದಿಂದ ನವ ದೆಹಲಿಗೆ ಬರಬೇಕಿದ್ದ ಅವರು ನೇರವಾಗಿ ಬೆಂಗಳೂರಿಗೆ ಧಾವಿಸುತ್ತಿದ್ದು, ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲಿದ್ದಾರೆ. ಈ ಮಧ್ಯೆ ದಾರಿಯಲ್ಲಿ ರೋಡ್‌ ಶೋ ನಡೆಸಲು ತೀರ್ಮಾನ ಮಾಡಲಾಗಿತ್ತು. ಮುಂದಿನ ಲೋಕಸಭಾ ಚುನಾವಣೆಯ ತಯಾರಿಯ ಭಾಗವಾಗಿ ರಾಜ್ಯ ಬಿಜೆಪಿ ಈ ತೀರ್ಮಾನವನ್ನು ಕೈಗೊಂಡಿತ್ತು. ಆದರೆ, ಪ್ರಧಾನಿ ಕಚೇರಿಯಿಂದ ಇನ್ನೂ ಈ ಬಗ್ಗೆ ಅನುಮತಿ ಸಿಕ್ಕಿಲ್ಲ ಎಂದೇ ಹೇಳಲಾಗುತ್ತಿದೆ. ಹಾಗಾಗಿ ಸದ್ಯಕ್ಕೆ ಮೋದಿ ರೋಡ್‌ ಶೋ ಇಲ್ಲ ಎನ್ನಲಾಗುತ್ತಿದೆ. ಹಾಗಂತ ಮೋದಿ ಈಗ ಹೇಳಲಾದ ಮಾರ್ಗದ ಮೂಲಕವೇ ತೆರಳಲಿದ್ದಾರೆ. ಆದರೆ, ಈ ವೇಳೆ ಎಲ್ಲಿಯೂ ಸಹ ಬಿಜೆಪಿಯ ಧ್ವಜವನ್ನು ಕಟ್ಟಬಾರದು ಎಂಬ ಆದೇಶ ಬಂದಿದೆ.

ಇಂಥದ್ದೊಂದು ಆದೇಶ ಬಂದಿರುವುದು ರಾಜ್ಯ ಕಾಂಗ್ರೆಸ್‌ ಸರ್ಕಾರದಿಂದ ಅಲ್ಲ. ಸ್ವತಃ ಪ್ರಧಾನ ಮಂತ್ರಿ ಕಾರ್ಯಾಲಯದಿಂದ ಎಂಬುದು ವಿಶೇಷ. ನರೇಂದ್ರ ಮೋದಿ ಅವರ ಸ್ವಾಗತಕ್ಕೆ ಬಿಜೆಪಿ ಸಕಲ ಸಿದ್ಧತೆ ಮಾಡಿಕೊಂಡಿದೆ. ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬರಲಿರುವ ನರೇಂದ್ರ ಮೋದಿ, ನೇರವಾಗಿ ಪೀಣ್ಯದಲ್ಲಿರುವ ಇಸ್ರೋ ಕಚೇರಿಗೆ ತೆರಳಿ ಅಲ್ಲಿ ವಿಜ್ಞಾನಿಗಳ ಜತೆ ಚಂದ್ರಯಾನ- 3ರ (Chandrayaan 3) ಯಶಸ್ಸನ್ನು ಸಂಭ್ರಮಿಸಲಿದ್ದಾರೆ. ಬಳಿಕ ರೋಡ್‌ ಶೋ ನಡೆಸಲಿದ್ದಾರೆ.

ಮೋದಿ ಕಾರ್ಯಕ್ರಮ ಹೇಗಿರುತ್ತದೆ?

ರೋಡ್‌ ಶೋಗೆ ಇನ್ನೂ ಸಿಕ್ಕಿಲ್ಲ ಅನುಮತಿ

ಎಚ್‌ಎಎಲ್ ವಿಮಾನ ನಿಲ್ದಾಣ ಬಳಿ ಹಾಗೂ ಜಾಲಹಳ್ಳಿ ಬಳಿ ಪ್ರಧಾನಿ ನರೇಂದ್ರ ಮೋದಿ ಅವರು ತೆರಳುವ ಮಾರ್ಗದಲ್ಲಿ ಅವರನ್ನು ವೀಕ್ಷಿಸಲು ಸಾರ್ವಜನಿಕರಿಗೆ ಸ್ಥಳಾವಕಾಶವನ್ನು ಕಲ್ಪಿಸಲಾಗಿದೆ. ಮಾರ್ಗದುದ್ದಕ್ಕೂ ಜನರು ವೀಕ್ಷಣೆ ಮಾಡಬಹುದು. ಆದರೆ, ಎಲ್ಲಿಯೂ ಸಹ ಬಿಜೆಪಿ ಧ್ವಜವನ್ನು ಬಳಕೆ ಮಾಡುವಂತಿಲ್ಲ. ಎಲ್ಲರೂ ತ್ರಿವರ್ಣ ಧ್ವಜವನ್ನಷ್ಟೇ ಹಿಡಿಯಬೇಕು. ಈ ಬಗ್ಗೆ ಪ್ರಧಾನಿ ಕಚೇರಿಯಿಂದ ಸ್ಪಷ್ಟ ಸೂಚನೆ ಬಂದಿದೆ.

ಇದನ್ನೂ ಓದಿ: Weather Report : ರಾಜ್ಯದಲ್ಲಿ ತಗ್ಗಿದ ಮಳೆ ಪ್ರಮಾಣ; ಸ್ವಲ್ಪ ಕಡೆ ವರುಣ ಸಾಧಾರಣ, ಬೆಂಗಳೂರಲ್ಲಿಂದು ಹೇಗಿದೆ?

ಪಕ್ಷದ ಕಾರ್ಯಕ್ರಮ ಎನ್ನುವಂತಾಗದಿರಲು ಎಚ್ಚರಿಕೆ

ಇದು ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷದ ಕಾರ್ಯಕ್ರಮ ಎನ್ನುವಂತೆ ಆಗಬಾರದು. ಇದು ದೇಶಕ್ಕೆ ಸಂಬಂಧಪಟ್ಟ ವಿಷಯ ಆಗಿರುವುದರಿಂದ ದೇಶಭಕ್ತಿಯಿಂದ ಇದರ ಸಂಭ್ರಮ ಆಗಬೇಕು. ಜನರಲ್ಲಿ ಸಹ ತಪ್ಪು ಭಾವನೆ ಮೂಡಬಾರದು. ಈ ನಿಟ್ಟಿನಲ್ಲಿ ಬಿಜೆಪಿ ಬಾವುಟವನ್ನು ಎಲ್ಲಿಯೂ ಕಟ್ಟದಂತೆ, ರಾರಾಜಿಸದಂತೆ ಸೂಚನೆ ನೀಡಲಾಗಿದ್ದು, ಎಲ್ಲರೂ ತ್ರಿವರ್ಣ ಧ್ವಜವನ್ನು ಮಾತ್ರವೇ ಬಳಸುವಂತೆ ಸೂಚನೆ ಬಂದಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಘಟಕಕ್ಕೆ ಕೇಂದ್ರ ಬಿಜೆಪಿ ಸ್ಪಷ್ಟ ಸೂಚನೆಯನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಈ ಸ್ಥಳಗಳಿಗೆ ಆಗಮಿಸಿದ ಕಾರ್ಯಕರ್ತರು, ಸಾರ್ವಜನಿಕರಿಗೆ ತ್ರಿವರ್ಣ ಧ್ವಜ ನೀಡಲು ನಿರ್ಧಾರ ಮಾಡಲಾಗಿದೆ.

Exit mobile version