ಬೆಂಗಳೂರು: ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-೨ರಲ್ಲಿ ನಿರ್ಮಾಣಗೊಂಡಿರುವ ನಗರ ಸಂಸ್ಥಾಪಕರ ಪ್ರತಿಮೆಗಳಲ್ಲಿಯೇ ಅತಿ ಎತ್ತರದ ಕಂಚಿನ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನಾಡಪ್ರಭು ಕೆಂಪೇಗೌಡ ಅವರ ೧೦೮ ಅಡಿ ಎತ್ತರದ ಪ್ರಗತಿಯ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ (Modi in Bengaluru) ಲೋಕಾರ್ಪಣೆಗೊಳಿಸಿದರು. ಇದರ ಜತೆಗೆ ೨೩ ಎಕರೆ ವಿಸ್ತೀರ್ಣವುಳ್ಳ ಥೀಮ್ ಪಾರ್ಕ್ ಅನ್ನು ಸಹ ಪ್ರಧಾನಿ ಉದ್ಘಾಟಿಸಿದರು.
ಒಟ್ಟು 64 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಪ್ರಗತಿಯ ಪ್ರತಿಮೆಯು ಅನೇಕ ವಿಶೇಷತೆಯನ್ನೊಳಗೊಂಡಿದೆ. ಇದು 108 ಅಡಿ ಎತ್ತರವನ್ನು ಹೊಂದಿದ್ದು, 218 ಟನ್ ತೂಕವಿದೆ. ಅಲ್ಲದೆ, ಕೆಂಪೇಗೌಡರ ಕೈಯಲ್ಲಿರುವ ಖಡ್ಗದ ತೂಕವೇ 4 ಟನ್ ಇದೆ. ಈ ಪ್ರತಿಮೆ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಸೇರಿದೆ. ಇನ್ನು ಇದರ ಸುತ್ತಮುತ್ತ 23 ಎಕರೆ ಪ್ರದೇಶದಲ್ಲಿ ಕೆಂಪೇಗೌಡ ಥೀಮ್ ಪಾರ್ಕ್ ನಿರ್ಮಿಸಲಾಗಿದ್ದು, ಇದೆಲ್ಲವೂ ಸೇರಿ 87 ಕೋಟಿ ರೂ. ವೆಚ್ಚವಾಗಿದೆ. ಈ ಎಲ್ಲ ಮಾಹಿತಿಯನ್ನು ಪಡೆದುಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು, ಪರಿವೀಕ್ಷಣೆ ಮಾಡಿದರು.
ಪ್ರತಿಮೆ ಬಳಿ ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪೇಗೌಡ ಅವರ ಪಾದಕ್ಕೆ ಜಲಾಭಿಷೇಕ ಮಾಡಿ, ಬಳಿಕ ಪುಷ್ಪಾರ್ಚನೆ ಮಾಡಿದರು. ಅಲ್ಲದೆ, ಕೆಂಪೇಗೌಡರ ಭವ್ಯ ಪ್ರತಿಮೆಗೆ ನವಿಸಿದರು. ಲೋಕಾರ್ಪಣೆಗೊಳ್ಳುತ್ತಿದ್ದಂತೆ ಮೋದಿ, ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಸೇರಿದ್ದ ಎಲ್ಲರೂ ಚಪ್ಪಾಳೆ ತಟ್ಟುವ ಮೂಲಕ ನೂತನ ಪ್ರತಿಮೆಯನ್ನು ಸಾರ್ವಜನಿಕ ಮುಕ್ತ ಮಾಡಿದರು.
ಥೀಮ್ ಪಾರ್ಕ್‌ಗೆ ಮೃತ್ತಿಕೆ ಅರ್ಪಿಸಿದ ಮೋದಿ
ರಾಜ್ಯದ 24 ಪುಣ್ಯ ಸ್ಥಳಗಳಿಂದ ಮೃತ್ತಿಕೆಯನ್ನು ತರಲಾಗಿದ್ದು, ಅವುಗಳನ್ನು ಈ ವೇಳೆ ಥೀಮ್ ಪಾರ್ಕ್‌ಗೆ ಅರ್ಪಿಸಲಾಯಿತು. ಸಂಗ್ರಹಿಸಲಾಗಿರುವ ಮೃತ್ತಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸಾಂಕೇತಿಕವಾಗಿ ಅರ್ಪಿಸಿದರು. ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೆಂಪೇಗೌಡ ಅವರ ಪ್ರತಿಮೆಯನ್ನು ನೀಡಿ ಗೌರವಿಸಲಾಯಿತು.
ಇದನ್ನೂ ಓದಿ | Modi in Bengaluru ವಿಧಾನ ಸೌಧದ ಆವರಣದಲ್ಲಿ ಕನಕ, ವಾಲ್ಮೀಕಿ ಪ್ರತಿಮೆಗಳಿಗೆ ನಮನ ಸಲ್ಲಿಸಿದ ಮೋದಿ
೨೦೨೦ರಲ್ಲಿ ಸಿಕ್ಕಿತ್ತು ಚಾಲನೆ
ಕೆಂಪೇಗೌಡ ಅವರ ಕಂಚಿನ ಪ್ರತಿಮೆ ನಿರ್ಮಾಣಕ್ಕೆ 2020ರ ಜೂನ್ 26ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕ ಪ್ರತಿಮೆಯ ಕೆಲಸಕ್ಕೆ ಮತ್ತಷ್ಟು ಚುರುಕು ದೊರೆತಿತ್ತು. ಈ ಪ್ರತಿಮೆಗೆ 98 ಟನ್ ಕಂಚು ಮತ್ತು 120 ಟನ್ ಉಕ್ಕು ಬಳಕೆ ಮಾಡಲಾಗಿದೆ. ನಿರ್ಮಾಣಕ್ಕೆ 2 ವರ್ಷ 5 ತಿಂಗಳ ಸಮಯ ತೆಗೆದುಕೊಂಡಿದ್ದು, 85 ಎಂಜಿನಿಯರ್ಗಳು ಕೆಲಸ ಮಾಡಿದ್ದಾರೆ.
ಅನಿಲ್ ಸುತಾರ್‌ರಿಂದ ನಿರ್ಮಾಣ
ಪ್ರತಿಮೆಯ ಹಿಂದಿರುವ ವಾಸ್ತುಶಿಲ್ಪಿಗಳು ಪದ್ಮವಿಭೂಷಣ ರಾಮ ಸುತಾರ್ ಆರ್ಟ್ಸ್ ಆ್ಯಂಡ್ ಕ್ರಿಯೇಷನ್ಸ್ ಸಂಸ್ಥೆಯವರಾಗಿದ್ದಾರೆ. ರಾಮಸುತಾರ್ ಅವರ ಪುತ್ರ ಅನಿಲ್ ಸುತಾರ್ ಪ್ರತಿಮೆಯ ವಿನ್ಯಾಸ ಮಾಡಿದ್ದಾರೆ. ಮೊದಲು ಇವರು ತಯಾರಿಸಿದ್ದ ಪ್ರತಿಮೆಯ ಮಾದರಿಯನ್ನು ಆದಿಚುಂಚನಗಿರಿ ಶ್ರೀಗಳು ಹಾಗೂ ಐಟಿಬಿಟಿ ಸಚಿವ ಅಶ್ವತ್ಥನಾರಾಯಣ ಅವರು ವೀಕ್ಷಿಸಿ ಒಪ್ಪಿಗೆ ಸೂಚಿಸಿದ್ದರು. ಬಳಿಕ 9 ಅಡಿಗಳ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿತ್ತು. ಇದನ್ನೂ ಶ್ರೀಗಳ ನೇತೃತ್ವದ ಸಮಿತಿ ಪರಿವೀಕ್ಷಿಸಿ ಸಮ್ಮತಿಸಿದ ಬಳಿಕವೇ ಅಸಲಿ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ.
ಪ್ಲಾಸ್ಟರ್ ಆಫ್ ಪ್ಯಾರೀಸ್‌ನಲ್ಲಿ ನಿರ್ಮಾಣವಾಗಿದ್ದ ಮಾದರಿ ಪ್ರತಿಮೆ
ಮೊದಲು ಪ್ಲಾಸ್ಟರ್ ಆಫ್ ಪ್ಯಾರೀಸ್‌ನಲ್ಲಿ ಪ್ರತಿಮೆ ಮಾಡಿ, ಆ ಬಳಿಕ ಕಂಚಿನ ಎರಕ ಹೊಯ್ಯಲಾಗಿದೆ. ಎಲ್ಲ ಭಾಗಗಳೂ ಬೇರೆ ಸ್ಥಳಗಳಲ್ಲಿ ತಯಾರಾಗಿದ್ದು, ಬಳಿಕ ಬೆಂಗಳೂರಿಗೆ ತಂದು ಸೇರಿಸಲಾಗಿದೆ. ಈ ಪ್ರತಿಮೆ ನಿರ್ಮಾಣಕ್ಕೆ ಮುನ್ನ ಕೆಂಪೇಗೌಡರ ಕಾಲದ ಇತಿಹಾಸದ ವರ್ಣಚಿತ್ರಗಳನ್ನು ಅಧ್ಯಯನ ಮಾಡಲಾಗಿದೆ. ಅವರು ಉಡುಪು ಧರಿಸುತ್ತಿದ್ದ ರೀತಿ, ಉದ್ದೇಶ ಹಾಗೂ ಸಾಧನೆ ಎಲ್ಲವನ್ನೂ ಶಿಲ್ಪಿಗಳು ಅಧ್ಯಯನ ನಡೆಸಿದ್ದಾರೆ. ಹೀಗಾಗಿ ಕೆಂಪೇಗೌಡರ ಪ್ರತಿಮೆ ನೈಜವೆನ್ನಿಸುವಂತೆ ಬಂದಿದೆ. ಈ ಪ್ರತಿಮೆಯನ್ನು ನಿರ್ಮಿಸಿದ ಸುತಾರ ಸಂಸ್ಥೆಯೇ ಗುಜರಾತ್‌ನ ಏಕತಾ ಪ್ರತಿಮೆ ಹಾಗೂ ಕರ್ನಾಟಕ ವಿಧಾನಸೌಧದ ಮುಂಭಾಗದ ಮಹಾತ್ಮ ಗಾಂಧಿ ಪ್ರತಿಮೆಯನ್ನೂ ನಿರ್ಮಿಸಿದೆ.
ಇದನ್ನೂ ಓದಿ | Modi in Bengaluru | ಕೆಂಪೇಗೌಡ ವಿಮಾನ ನಿಲ್ದಾಣದ 2ನೇ ಟರ್ಮಿನಲ್ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ