Site icon Vistara News

Modi in Bengaluru| ಮೋದಿ ಭೇಟಿ ವೇಳೆ ಪ್ರಮುಖ ರಸ್ತೆಗಳಲ್ಲಿ ಸಂಚಾರಕ್ಕೆ ಬ್ರೇಕ್‌: ಉದ್ಯೋಗಕ್ಕೆ ತೆರಳಲು ಜನರ ಪರದಾಟ

traffic

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಳೂರು ಭೇಟಿಯ ಶುಕ್ರವಾರ ವೇಳೆ ಪ್ರಮುಖ ರಸ್ತೆಗಳಲ್ಲಿ ಸಂಚಾರ ಬಂದ್‌ ಮಾಡಲಾಗಿತ್ತು, ರೈಲುಗಳ ಸಂಚಾರಕ್ಕೂ ನಿರ್ಬಂಧ ವಿಧಿಸಲಾಗಿತ್ತು. ಹೀಗಾಗಿ ಉದ್ಯೋಗ, ವ್ಯವಹಾರ ಮತ್ತಿತರ ಕಾರಣಗಳಿಗಾಗಿ ಹೊರಟವರು ಸಂಕಷ್ಟಕ್ಕೆ ಸಿಲುಕಿದರು.

ಬೆಂಗಳೂರಿನಲ್ಲಿ ವಿಮಾನ ನಿಲ್ದಾಣ ಟರ್ಮಿನಲ್‌ ೨ ಉದ್ಘಾಟನೆ, ಕೆಂಪೇಗೌಡ ಪ್ರತಿಮೆ ಅನಾವರಣ, ವಂದೇ ಭಾರತ್‌ ರೈಲಿಗೆ ಚಾಲನೆ, ಕಾಶಿ ಯಾತ್ರಾ ರೈಲಿಗೆ ಚಾಲನೆ, ವಿಧಾನಸೌಧದ ಎದುರು ಕನಕ ಮತ್ತು ವಾಲ್ಮೀಕಿ ಪ್ರತಿಮೆಗಳಿಗೆ ಪುಷ್ಪಾರ್ಚನೆ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮೋದಿ ಆಗಮಿಸಿದ್ದರು. ಅವರು ಎಚ್‌ಎಎಲ್‌ ವಿಮಾನ ನಿಲ್ದಾಣದಿಂದ ಮೆಜೆಸ್ಟಿಕ್‌ನಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಆಗಮಿಸಿದ್ದರು. ಅಲ್ಲಿಂದ ಅದೇ ದಾರಿಯಲ್ಲಿ ಮರಳಿ ಮುಂದೆ ವಿಮಾನ ನಿಲ್ದಾಣಕ್ಕೆ ತೆರಳಿದ್ದರು.

ಪ್ರಧಾನಿ ಮೋದಿ ಅವರು ಸಂಚರಿಸುವ ದಾರಿಯಲ್ಲಿ ಬೆಳಗ್ಗೆ ಎಂಟರಿಂದ ಮಧ್ಯಾಹ್ನ ೧೨ ಗಂಟೆವರೆಗೆ ವಾಹನ ಸಂಚಾರವನ್ನು ತಡೆ ಹಿಡಿಯಲಾಗಿತ್ತು. ಸಿಟಿಒ ಜಂಕ್ಷನ್, ಪೊಲೀಸ್ ತಿಮ್ಮಯ್ಯ ಜಂಕ್ಷನ್, ರಾಜಭವನ ರಸ್ತೆ, ಬಸವೇಶ್ವರ ವೃತ್ತ, ಅರಮನೆ ರಸ್ತೆ, ರೇಸ್​ಕೋರ್ಸ್ ರಸ್ತೆ, ಸ್ಯಾಂಕಿರಸ್ತೆ, ಕ್ವೀನ್ಸ್ ರಸ್ತೆ, ಬಳ್ಳಾರಿ ರಸ್ತೆ, ಏರ್​ಪೋರ್ಟ್ ಎಲಿವೇಟೆಡ್ ಕಾರಿಡಾರ್​ ರಸ್ತೆ, ಶೇಷಾದ್ರಿ ರಸ್ತೆ-ಮಹಾರಾಣಿ ಕಾಲೇಜು ಬ್ರಿಡ್ಜ್-ರೇಲ್ವೆ ಸ್ಟೇಷನ್ ಪ್ರವೇಶ ದ್ವಾರ, ಕೆ.ಜಿ.ರಸ್ತೆ-ಶಾಂತಲಾ ಜಂಕ್ಷನ್​ನಿಂದ ಮೈಸೂರು ಬ್ಯಾಂಕ್ ವೃತ್ತದವರೆಗೆ, ವಾಟಾಳ್ ನಾಗರಾಜ್ ರಸ್ತೆ-ಕೋಡೆ ಅಂಡರ್​ಪಾಸ್​ನಿಂದ ಪಿಎಫ್​ವರೆಗೆ, ಏರ್​ಪೋರ್ಟ್​ ರಸ್ತೆ ಸುತ್ತಲಿನ ಪ್ರದೇಶದ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಹೇರಲಾಗಿತ್ತು. ರಾಜಭವನ, ಪ್ಯಾಲೇಸ್ ರೋಡ್​, ರೇಸ್​​ ಕೋರ್ಸ್ ರೋಡ್​​​, ಸ್ಯಾಂಕಿ, ಕ್ವೀನ್ಸ್ ರಸ್ತೆ, ಶೇಷಾದ್ರಿ ರಸ್ತೆಯಲ್ಲಿ ಸಂಚಾರಕ್ಕೆ ತಡೆ ಒಡ್ಡಲಾಗಿತ್ತು.

ಇವೆಲ್ಲವೂ ರಾಜಧಾನಿಯ ಪ್ರಮುಖ ರಸ್ತೆಗಳಾಗಿದ್ದು, ಬಹುತೇಕ ಮಂದಿ ತಮ್ಮ ಉದ್ಯೋಗಕ್ಕಾಗಿ ಓಡಾಡುವ ಸ್ಥಳಗಳು. ಈ ರಸ್ತೆಗಳನ್ನು ಮುಚ್ಚಿದ್ದರಿಂದ ಜನರು ತಮ್ಮ ಕೆಲಸದ ಸ್ಥಳಗಳಿಗೆ ತೆರಳಲು ಪರದಾಡಿದರು. ಪೊಲೀಸ್‌ ಇಲಾಖೆ ಪರ್ಯಾಯ ದಾರಿಗಳನ್ನು ಸೂಚಿಸಿದ್ದರೂ ಅವುಗಳು ಒಂದಲ್ಲ ಒಂದು ಕಡೆ ಪ್ರಧಾನ ರಸ್ತೆಗಳಿಗೆ ಕನೆಕ್ಟ್‌ ಆಗುತ್ತಿದ್ದುದರಿಂದ ಅಲ್ಲೂ ವಾಹನಗಳು ಮುಂದೆ ಹೋಗುತ್ತಿರಲಿಲ್ಲ. ಕೆಲವು ಕಡೆ ಪರ್ಯಾಯ ರಸ್ತೆಗಳಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಯಿತು.

ರೈಲುಗಳು ವಿಳಂಬ
ಬೆಂಗಳೂರಿನ ಪ್ರಧಾನ ರೈಲ್ವೇ ನಿಲ್ದಾಣದಲ್ಲೇ ಮೋದಿ ಕಾರ್ಯಕ್ರಮವಿದ್ದುದರಿಂದ ಬೆಳಗ್ಗೆ ಎಂಟರಿಂದ ಮಧ್ಯಾಹ್ನ ೧೨ ಗಂಟೆವರೆಗೆ ಯಾವುದೇ ರೈಲುಗಳ ಆಗಮನ ಹಾಗೂ ನಿರ್ಗಮನಕ್ಕೆ ಅವಕಾಶವಿರಲಿಲ್ಲ. ಹೀಗಾಗಿ ಬೆಂಗಳೂರಿಗೆ ಬರುತ್ತಿದ್ದ ರೈಲುಗಳೆಲ್ಲ ಸುಮಾರು ೪ ಗಂಟೆ ತಡವಾಗಿ ಆಗಮಿಸಿದವು. ಬೆಂಗಳೂರಿನಿಂದ ಹೊರ ಹೋಗಬೇಕಾದ ಟ್ರೇನುಗಳು ಹೊರಡಲೇ ಇಲ್ಲ. ಇದರಿಂದ ರೈಲು ಪ್ರಯಾಣಿಕರು ಭಾರಿ ಸಮಸ್ಯೆ ಅನುಭವಿಸಿದರು.

ಮೆಟ್ರೋ ರೈಲಿನಲ್ಲಿ ಜನಜಂಗುಳಿ
ಈ ನಡುವೆ, ವಾಹನಗಳ ಸಂಚಾರಕ್ಕೆ ತೊಂದರೆಯಾಗಬಹುದು, ಬೈಕ್‌, ಕಾರು ಕೊಂಡೊಯ್ಯುವುದು ಕಷ್ಟ ಎಂಬ ಕಾರಣಕ್ಕಾಗಿ ಹೆಚ್ಚಿನವರು ಮೆಟ್ರೋ ರೈಲಿನಲ್ಲಿ ಪ್ರಯಾಣಿಸಲು ಮುಂದಾಗಿದ್ದರು. ಆದರೆ, ರಜಾ ದಿನವೆಂಬ ಕಾರಣಕ್ಕಾಗಿ ಮೆಟ್ರೋ ರೈಲಿನ ಸಂಚಾರವೂ ನಿಧಾನ ಗತಿಯಲ್ಲಿತ್ತು. ಬಳಿಕ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ರೈಲುಗಳ ಸಂಚಾರ ಸಂಖ್ಯೆಯನ್ನು ಹೆಚ್ಚಿಸಲಾಯಿತು. ಬೆಳಗ್ಗೆ ೮ರಿಂದ ಮಧ್ಯಾಹ್ನ ೧೨ ಗಂಟೆವರೆಗೆ ಮೆಟ್ರೋ ರೈಲು ತುಂಬಿ ತುಳುಕುತ್ತಿತ್ತು. ಈ ನಡುವೆ, ಸಂಚಾರ ದಟ್ಟಣೆಯಲ್ಲಿ ಸಿಕ್ಕಿಹಾಕಿಕೊಂಡವರು ಕಾರ್ಯಕ್ರಮ ಆಯೋಜಕರಿಗೆ ಒಂದಿಷ್ಟು ಶಾಪ ಹಾಕಿದರು.

Exit mobile version