Site icon Vistara News

Modi in Bengaluru| ಸರ್ಕಾರಿ ದುಡ್ಡಲ್ಲಿ ಕೆಂಪೇಗೌಡ ಪ್ರತಿಮೆ ನಿರ್ಮಾಣ ಮಾಡಿದ್ದೇ ಅಪರಾಧ ಎಂದ ಡಿಕೆಶಿ

The Lokayukta has testified to BJP's corruption; DK Sivakumar tease

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್‌ನಲ್ಲಿ ಸ್ಥಾಪನೆಯಾಗಿರುವ ಕೆಂಪೇಗೌಡರ ಬೃಹತ್‌ ಪ್ರತಿಮೆಯನ್ನು ಸರ್ಕಾರಿ ಹಣದಲ್ಲಿ ನಿರ್ಮಿಸಿರುವುದು ದೊಡ್ಡ ಅಪರಾಧ ಎಂದು ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಅದನ್ನು ವಿಮಾನ ನಿಲ್ದಾಣದ ವತಿಯಿಂದಲೇ ನಿರ್ಮಿಸಬಹುದಾಗಿತ್ತು ಎನ್ನುವುದು ಅವರ ಅಭಿಪ್ರಾಯ. ಬಿಜೆಪಿ ಸರಕಾರ ಕೆಂಪೇಗೌಡ ಪ್ರತಿಮೆಯ ಸ್ಥಾಪನೆಯ ಕ್ರೆಡಿಟ್‌ ಮತ್ತು ಚುನಾವಣೆ ದೃಷ್ಟಿಯಲ್ಲಿ ಲಾಭವಾಗಿ ಪರಿವರ್ತಿಸಿಕೊಳ್ಳುತ್ತಿದೆ ಎಂಬ ನೆಲೆಯಲ್ಲಿ ಡಿಕೆ ಶಿವಕುಮಾರ್‌ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ʻʻಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾವು ಜಾಗ ಕೊಟ್ಟಿದ್ದೇವೆ. ದುಡ್ಡೂ ಕೊಟ್ಟಿದ್ದೇವೆ. ನಾಲ್ಕು ಸಾವಿರ ಎಕರೆಗೂ ಹೆಚ್ಚು ಭೂಮಿ ನೀಡಲಾಗಿದೆ. ಇದರಲ್ಲಿ 2000 ಎಕರೆ ಜಮೀನನ್ನು ಎಕರೆಗೆ ಕೇವಲ ಆರು ಲಕ್ಷಕ್ಕೆ ಕೊಟ್ಟಿದ್ದೇವೆ. ಅವರಿಗೆ ಹೇಳಿದ್ದರೆ ಅವರೇ ಪ್ರತಿಮೆ ನಿರ್ಮಾಣ ಮಾಡುತ್ತಿದ್ದರು. ಇದನ್ನು ಸರ್ಕಾರದ ದುಡ್ಡಿನಲ್ಲಿ ಕಟ್ಟುವಂತಹ ಅಗತ್ಯತೆ ಏನಿತ್ತು? ನಾನು ಫೌಂಡೇಶನ್ ಹಾಕಲು ಹೋದಾಗಲೇ ಈ ಮಾತು ಹೇಳಿದ್ದೆʼʼ ಎಂದು ಡಿ.ಕೆ. ಶಿವಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ.

ಸರ್ಕಾರವೇ ದುಡ್ಡು ಖರ್ಚು ಮಾಡಿ ಪ್ರತಿಮೆ ಸ್ಥಾಪನೆ ಮಾಡುವ ವಿಚಾರದಲ್ಲಿ ಮುಖ್ಯ ಕಾರ್ಯದರ್ಶಿಗಳು ಯಾಕೆ ಸುಮ್ಮನಿದ್ದಾರೆ ಎಂದು ಪ್ರಶ್ನಿಸಿದ ಡಿ.ಕೆ. ಶಿವಕುಮಾರ್‌, ಸರ್ಕಾರದ ವೆಚ್ಚದಲ್ಲಿ ಪ್ರತಿಮೆ ನಿರ್ಮಾಣ ಮಾಡಿ, ಈಗ ಬಿಜೆಪಿಯವರು ಈಗ ಪಕ್ಷದ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದರು.

ಮುಕುಡಪ್ಪ ಹೇಳಿಕೆ ವಿಚಾರ
ಕೆಪಿಎಸ್‌ಸಿಯ ಮಾಜಿ ಅಧ್ಯಕ್ಷ ಕೆ. ಮುಕುಡಪ್ಪ ಅವರು ಸಿದ್ದರಾಮಯ್ಯ ಅವರ ಬಗ್ಗೆ ನೀಡಿದ ಹೇಳಿಕೆ ಬಗ್ಗೆ ಕೇಳಿದಾಗ ಪ್ರತಿಕ್ರಿಯಿಸಲು ನಿರಾಕರಿಸಿದರು ಡಿ.ಕೆ. ಶಿವಕುಮಾರ್‌.
ʻʻನನಗೆ ಸಿದ್ದರಾಮಯ್ಯನವರ ವಿಚಾರದಲ್ಲಿ ಯಾರು ಏನು ಮಾತನಾಡಿದ್ದಾರೋ ಗೊತ್ತಿಲ್ಲ. ನನಗೆ ಯಾರೂ ಹೇಳಿಲ್ಲ. ಇದು ಯಾರೇ ಮಾಡಿದರೂ ಅದು ಅವರ ಖಾಸಗಿ ವಿಚಾರ. ಆ ವಿಚಾರದಲ್ಲಿ ಏನು ಮಾತನಾಡಿದ್ದಾರೋ ಗೊತ್ತಿಲ್ಲ. ಆದರೆ, ಒಂದು ಮಾತ್ರ ಹೇಳಬಲ್ಲೆ, ನಮ್ಮ ನಾಯಕರನ್ನು ಡಿಫೇಮ್ ಮಾಡಲು ತಂತ್ರಗಳು ನಡೆಯುತ್ತಲೇ ಇವೆʼʼ ಎಂದರು.

ಇದನ್ನೂ ಓದಿ | Modi in Bengaluru | ಬೆಳಗ್ಗೆ 8ರಿಂದಲೇ ಬೆಂಗಳೂರು ರೈಲು ನಿಲ್ದಾಣಕ್ಕೆ ರೈಲು ಬರಲ್ಲ, ಪ್ರಯಾಣಿಕರೂ ಬರುವಂತಿಲ್ಲ

Exit mobile version