ಬೆಂಗಳೂರು: ಭಾರತ್ ಗೌರವ್ ಕಾಶಿ ಯಾತ್ರಾ ರೈಲು ಸಂಚಾರ ಸೌಲಭ್ಯವನ್ನು ಪಡೆದ ಮೊದಲ ರಾಜ್ಯವಾದ ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ (Modi In Bengaluru) ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಈ ರೈಲು ಸೇವೆಯು ಕಾಶಿಯನ್ನು ಕರ್ನಾಟಕಕ್ಕೆ ಹತ್ತಿರವಾಗಿಸುತ್ತದೆ. ಯಾತ್ರಿಗಳು ಮತ್ತು ಪ್ರವಾಸಿಗರು ಕಾಶಿ, ಅಯೋಧ್ಯಾ ಹಾಗೂ ಪ್ರಯಾಗ್ ರಾಜ್‌ಗೆ ಭೇಟಿ ನೀಡುವುದು ಸುಲಭವಾಗುತ್ತದೆ ಎಂದರು.
ಪ್ಯಾಕೇಜ್ ಟೂರ್
ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಕಾಶಿ ದರ್ಶನ ರೈಲು ಪ್ಯಾಕೇಜ್ ಟೂರ್‌ಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದು, ಕಾಶಿಯ ಸಮಗ್ರ ನೋಟವನ್ನು ರಾಜ್ಯದ ಜನರು ಕಡಿಮೆ ವೆಚ್ಚದಲ್ಲಿ ವೀಕ್ಷಣೆ ಮಾಡುವ ಅವಕಾಶ ನೀಡುವ ಪ್ರಮುಖ ಉದ್ದೇಶದಿಂದ ಈ ರೈಲು ಪ್ರವಾಸವನ್ನು ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಆಯೋಜಿಸಲಾಗಿದೆ.
ಮೋದಿಗೆ ಕಿನ್ನಾಳ ಕಲೆಯ ಕಾಮಧೇನು ಉಡುಗೊರೆ
ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲಿ ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ ವಿಶೇಷ ರೈಲಿಗೆ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯ ಪ್ರಮುಖ ಕಲೆಯಾಗಿರುವ “ಕಿನ್ನಾಳ ಕಲೆ” ಮೂಲಕ ಸ್ಥಳೀಯ ಕಲಾವಿದರು ಸಿದ್ಧಪಡಿಸಿದ್ದ ಕಾಮಧೇನುವನ್ನು ಉಡುಗೊರೆಯಾಗಿ ನೀಡಲಾಯಿತು.
ಪ್ರಧಾನಿ ನರೇಂದ್ರ ಮೋದಿಯವರು ಕಿನ್ನಾಳ ಕಲೆಯಿಂದ ರೂಪುಗೊಂಡಿರುವ ಕಾಮಧೇನುವನ್ನು ಸಂತೋಷದಿಂದ ಸ್ವೀಕರಿಸಿದಲ್ಲದೆ, ಅದರ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು. ವಿಜಯನಗರ ಸಾಮ್ರಾಜ್ಯದ ಅವಧಿಯ ಈ ಕಲೆ ಇನ್ನಷ್ಟು ಪ್ರಚಾರ ಪಡೆದುಕೊಳ್ಳಲಿ ಎನ್ನುವುದು ನಮ್ಮ ಆಶಯ ಎಂದು ತಿಳಿಸಿದ ಸಚಿವೆ ಶಶಿಕಲಾ ಜೊಲ್ಲೆ, ಸ್ಥಳೀಯ ಕಲೆಗೆ ಉತ್ತೇಜನ ನೀಡುವ ಸಲುವಾಗಿ ಇದನ್ನು ಉಡುಗೊರೆಯಾಗಿ ನೀಡುತ್ತಿರುವುದಾಗಿ ತಿಳಿಸಿದರು.
ಇದನ್ನೂ ಓದಿ | Modi in Bengaluru | ಎಂಟೇ ವರ್ಷದಲ್ಲಿ ದೇಶದ ವಿಮಾನ ನಿಲ್ದಾಣಗಳ ಸಂಖ್ಯೆ ಡಬಲ್: ನರೇಂದ್ರ ಮೋದಿ