Site icon Vistara News

Modi in Bengaluru | ವಿಧಾನ ಸೌಧದ ಆವರಣದಲ್ಲಿ ಕನಕ, ವಾಲ್ಮೀಕಿ ಪ್ರತಿಮೆಗಳಿಗೆ ನಮನ ಸಲ್ಲಿಸಿದ ಮೋದಿ

kanaka11

ಬೆಂಗಳೂರು: ಐದು ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಉದ್ದೇಶದೊಂದಿಗೆ ಬೆಂಗಳೂರಿಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಶಕ್ತಿ ಸೌಧ ವಿಧಾನಸೌಧದ ಆವರಣಕ್ಕೆ ಆಗಮಿಸಿದ್ದಾರೆ. ಅವರು ಇಲ್ಲಿನ ಶಾಸಕರ ಭವನದ ಮುಂದೆ ಇರುವ ಕನಕ ಮತ್ತು ವಾಲ್ಮೀಕಿ ಪ್ರತಿಮೆಗಳಿಗೆ ಪುಚ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ಇಂದು ಕನಕ ಜಯಂತಿ ಹಬ್ಬವೂ ಇರುವುದರಿಂದ ಮೋದಿ ಅವರಿಗೆ ವಿಶೇಷ ಅವಕಾಶವೊಂದು ದಕ್ಕಿದಂತಾಗಿದೆ.

ಅಲ್ಲಿಂದ ಮುಂದೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಅವರು ಸಾಗಲಿದ್ದು, ಅಲ್ಲಿ ಮೈಸೂರು-ಚೆನ್ನೈ ನಡುವೆ ಸಂಚರಿಸಲಿರುವ ವಂದೇ ಭಾರತ್‌ ರೈಲಿಗೆ ಚಾಲನೆ ನೀಡಲಿದ್ದಾರೆ. ಜತೆಗೆ ಬೆಂಗಳೂರಿನಿಂದ ಹೊರಡುವ ಕಾಶಿ ಯಾತ್ರೆಗೂ ಚಾಲನೆ ನೀಡಲಿದ್ದಾರೆ. ಅದಾದ ಬಳಿಕ ಅವರು ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್‌ ಉದ್ಘಾಟನೆ, ಕೆಂಪೇಗೌಡ ಪ್ರತಿಮೆ ಅನಾವರಣಕ್ಕಾಗಿ ಅಲ್ಲಿಗೆ ಸಾಗುವರು.

ವಾಲ್ಮೀಕಿ ಮಹರ್ಷಿಗಳ ಪ್ರತಿಮೆ

ವಿಧಾನಸೌಧ ಸುತ್ತಮುತ್ತ ಖಾಕಿ ಸರ್ಪಗಾವಲು
ಮೋದಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಿಧಾನ ಸೌಧದ ಸುತ್ತ ಭಾರಿ ಭದ್ರತೆ ವ್ಯವಸ್ಥೆಗೊಳಿಸಲಾಗಿತ್ತು. ಮೋದಿ ತೆರಳುವ ಮಾರ್ಗದಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದ್ದು, ಮಾರ್ಗದುದ್ದಕ್ಕೂ ಪೊಲೀಸ್ ಬಿಗಿ ಭದ್ರತೆ ಇದೆ.

ವಾಲ್ಮೀಕಿ ತಪೋವನ

ಚಾಲುಕ್ಯ ಸರ್ಕಲ್‌ನಿಂದ ವಿಧಾನಸೌಧ, ಎಂಎಸ್‌ ಬಿಲ್ಡಿಂಗ್‌ನಿಂದ ವಿಧಾನಸೌಧ, ಪ್ಯಾಲೆಸ್ ರಸ್ತೆಯಿಂದ ವಿಧಾನಸೌಧದ ರಸ್ತೆಗಳು ಬಂದ್ ಆಗಿವೆ. ಶಾಸಕ ಭವನಕ್ಕೆ ಆಹ್ವಾನಿತ ಗಣ್ಯರಿಗೆ ಮಾತ್ರ ಪ್ರವೇಶ ನೀಡಲಾಗಿತ್ತು.

ಸಂತ ಕನಕದಾಸರ ಸನ್ನಿಧಿ

ಕೇಸರಿಮಯ ರಸ್ತೆ
ಮೋದಿ ತೆರಳುವ ಮಾರ್ಗದಲ್ಲಿ ರಸ್ತೆಗಳು ಸಂಪೂರ್ಣ ಕೇಸರಿಮಯವಾಗಿವೆ. ವಿಧಾನಸೌಧ ಸುತ್ತಮುತ್ತ ಬಿಜೆಪಿ ಬಾವುಟಗಳು ಹಾರುತ್ತಿವೆ. ಮೋದಿ ಸ್ವಾಗತಕ್ಕೆ ಹಲವಾರು ಕಲಾ ತಂಡಗಳು ಭಾಗವಹಿಸಿವೆ. ಮಂಡ್ಯ ಜಿಲ್ಲೆಯ ಚಿಕ್ಕರಸಿನಕೆರೆ ಕಲಾತಂಡ, ಕಾಲಭೈರವೇಶ್ವರ ಜಾನಪದ ಕಲಾ ತಂಡದಿಂದ ಕುಣಿತ, ವೀರಗಾಸೆ ಹಾಗೂ ಪೂಜಾ ಕುಣಿತ ಗಮನ ಸೆಳೆದವು.

Exit mobile version