Site icon Vistara News

Modi in Bengaluru| ಬೆಂಗಳೂರಿಗೆ ಬರಲಿರುವ ಮೋದಿಗೆ ಸಿದ್ದರಾಮಯ್ಯರ 10 ಪ್ರಶ್ನೆಗಳು ಮತ್ತು ಕೆಲವು ಸಲಹೆಗಳು!

Modi siddaramaiah

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಬರುವಾಗಲೆಲ್ಲ ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳುವ ಪರಿಪಾಠವನ್ನು ಇಟ್ಟುಕೊಂಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ಬಾರಿಯೂ ಹತ್ತು ಪ್ರಶ್ನೆ ಕೇಳಿದ್ದಾರೆ ಮತ್ತು ಕೆಲವು ಸಲಹೆಗಳನ್ನು ನೀಡಿದ್ದಾರೆ.
ಚುನಾವಣಾ ಪ್ರಚಾರಕ್ಕಾಗಿ ಬಂದಾಗ ನೀಡಿದ ಭರವಸೆಗಳೆಲ್ಲ ಏನಾದವು? ರಾಜ್ಯ ಸರ್ಕಾರದ ೪೦% ಕಮಿಷನ್‌ ಬಗ್ಗೆ ಪತ್ರ ಬರೆಯಲಾಗಿತ್ತು, ಅದರ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಕೇಳಿರುವ ಸಿದ್ದರಾಮಯ್ಯ, ಇನ್ಸ್‌ಪೆಕ್ಟರ್‌ ವರ್ಗಾವಣೆಗೆ ೭೦-೮೦ ಲಕ್ಷ ರೂ. ಕೊಡಬೇಕು ಎಂಬ ಎಂಟಿಬಿ ನಾಗರಾಜ್‌ ಹೇಳಿಕೆ, ಮೀಸಲಾತಿ ಹೆಚ್ಚಳ ಮತ್ತಿತರ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಅಯೋಧ್ಯೆಯಲ್ಲಿ ಮಹರ್ಷಿ ವಾಲ್ಮೀಕಿಯವರ ಪ್ರತಿಮೆ ಸ್ಥಾಪನೆಯ ಸಲಹೆಯನ್ನೂ ನೀಡಿದ್ದಾರೆ.

ಸಿದ್ದರಾಮಯ್ಯ ಅವರು ಮೋದಿಗೆ ಕೇಳಿದ ಹತ್ತು ಪ್ರಶ್ನೆಗಳು

  1. ನಾಲ್ಕು ವರ್ಷಗಳ ಹಿಂದೆ ನೀವು ಚುನಾವಣಾ ಪ್ರಚಾರಕ್ಕಾಗಿ ರಾಜ್ಯಕ್ಕೆ ಬಂದಾಗ ನೀಡಿದ್ದ ಭರವಸೆಗಳೆಲ್ಲಾ ಏನಾಗಿವೆ?
  2. ಸರ್ಕಾರದ 40% ಕಮಿಷನ್‍ನಿಂದಾಗಿ ಸಂಕಟ ಪಡುತ್ತಿರುವ ಹಲವರು ನಿಮಗೆ ಅನೇಕ ಪತ್ರಗಳನ್ನು ಬರೆದರು. ಸಾಮಾಜಿಕ ಮಾಧ್ಯಮಗಳ ಮೂಲಕ ಮನವಿ ಮಾಡಿದರು. ನಿಮ್ಮದೇ ಪಕ್ಷದ ಕಾರ್ಯಕರ್ತ ಸಂತೋಷ್ ಪಾಟೀಲ್ 40% ಲಂಚದ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡರು. ಮತ್ತೊಬ್ಬ ಗುತ್ತಿಗೆದಾರ ಬಸವರಾಜು ಎನ್ನುವವರು ಸರ್ಕಾರದ ಲಂಚಾವತಾರದಿಂದ ಬೇಸತ್ತು ದಯಾ ಮರಣ ಕೋರಿ ನಿಮಗೆ ಪತ್ರ ಬರೆದರು. ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟ (ರುಪ್ಸಾ) 40% ಸರ್ಕಾರದ ಕಿರುಕುಳಗಳನ್ನು ನೇರವಾಗಿ ಪ್ರಸ್ತಾಪಿಸಿ ಪತ್ರ ಬರೆಯಿತು. ಗುತ್ತಿಗೆದಾರರ ಸಂಘದವರು ಸರ್ಕಾರವನ್ನು ಎದುರು ಹಾಕಿಕೊಂಡು ಪತ್ರಗಳನ್ನು ಬರೆದರು. ಸ್ವತಃ ವಿರೋಧ ಪಕ್ಷದ ನಾಯಕನಾಗಿ ನಾನೆ ಈ ಕುರಿತು ಬರೆದಿದ್ದೇನೆ. ಈ ಎಲ್ಲ ಪತ್ರಗಳ ಮೇಲೆ ಯಾವ ಕ್ರಮ ಕೈಗೊಂಡಿದ್ದೀರಿ?
  1. ಇನ್ಸ್‌ಪೆಕ್ಟರ್ ಹುದ್ದೆಗೆ 60-70 ಲಕ್ಷ ರೂ. ಕೊಟ್ಟು ಬರಬೇಕಾಗಿದೆ ಎಂದು ಸಚಿವ ಎಂ.ಟಿ.ಬಿ ನಾಗರಾಜ್ ಅವರು ಬಹಿರಂಗವಾಗಿ ಹೇಳಿದ್ದಾರೆ. ಪೊಲೀಸರು ಲಂಚ ತಿಂದು ಕುಳಿತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರೇ ಒಪ್ಪಿಕೊಂಡಿದ್ದಾರೆ. ಪಿಎಸ್‍ಐ ನೇಮಕಾತಿ ಹಗರಣದಲ್ಲಿ ಹಿರಿಯ ಐಪಿಎಸ್ ಅಧಿಕಾರಿಗಳೂ ಸಿಕ್ಕಿ ಬಿದ್ದಿದ್ದಾರೆ. ಸಚಿವ ಎಸ್.ಟಿ.ಸೋಮಶೇಖರ್ ಅವರ ಮೇಲಿನ ಲಂಚ ಪ್ರಕರಣದ ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ಹೈಕೋರ್ಟ್ ಸೂಚನೆ ನೀಡಿದೆ. ಹೈಕೋರ್ಟ್ ಸೂಚನೆ ವಿರುದ್ಧ ಸಚಿವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಸುಪ್ರೀಂ ಕೋರ್ಟು ಕೂಡ ಅವರ ನೆರವಿಗೆ ಬರಲಿಲ್ಲ. ಆರೋಗ್ಯ ಸಚಿವ ಸುಧಾಕರ್ ಅವರು ಕೊರೋನ ಪಿಡುಗಿನ ಸಂದರ್ಭದಲ್ಲಿ ಭ್ರಷ್ಟಾಚಾರ ಎಸಗಿದ್ದಾರೆ. ಸಚಿವ ಸುಧಾಕರ್, ಶಿವರಾಮ್ ಹೆಬ್ಬಾರ್, ಬಿ.ಸಿ.ಪಾಟೀಲ್, ಗೋಪಾಲಯ್ಯ, ಬೈರತಿ ಬಸವರಾಜ್, ಶ್ರೀರಾಮುಲು, ಆನಂದ್ ಸಿಂಗ್, ಪ್ರಭು ಚೌಹಾಣ್ ಹೀಗೆ ಸಾಲು ಸಾಲು ಸಚಿವರ ಮೇಲೆ ಲಂಚ, ದುರಾಡಳಿತ, ಅಕ್ರಮಗಳು ಸೇರಿ ರಾಶಿ ರಾಶಿ ಆರೋಪಗಳು ಕೇಳಿ ಬಂದಿವೆ. ಅನೇಕ ಸಚಿವರು ಸಿಡಿ ಪ್ರಕರಣಗಳಲ್ಲಿ ತಡೆಯಾಜ್ಞೆ ಪಡೆದಿದ್ದಾರೆ. ಗೋವುಗಳ ಮೇವು ಸರಬರಾಜಿಗೂ ಲಂಚ ಕೇಳಿ ದಾಖಲೆ ಮಾಡಿದ ಆರೋಪಗಳು ಬಂದರೂ ಮಾಮೂಲಿಯಂತೆ ದಿವ್ಯ ಮೌನಕ್ಕೆ ಜಾರಿದ್ದ ನಿಮಗೆ ಚುನಾವಣೆ ಕಾರಣಕ್ಕೆ ರಾಜ್ಯ ಮತ್ತೆ ಮತ್ತೆ ನೆನಪಾಗುತ್ತಿದೆ. ಇದನ್ನು ನಾವು ಯಾವ ಮಾತುಗಳಲ್ಲಿ ವಿವರಿಸಬೇಕು ಹೇಳಿ?
  2. ಸಿಬಿಐ, ಇಡಿ, ಐಟಿ ಮುಂತಾದ ಕೇಂದ್ರ ತನಿಖಾ ಸಂಸ್ಥೆಗಳ ಮೂಲಕ ಜನರ ಧ್ವನಿ ಅಡಗಿಸುವ ಯತ್ನ ನಡೆಯುತ್ತಿದೆ. ಆದರೆ ರಾಜ್ಯ ಸರ್ಕಾರದಲ್ಲಿರುವ ಎಷ್ಟು ಮಂದಿ ಸಚಿವರು ಮತ್ತು ರಾಜ್ಯ ಬಿಜೆಪಿಯಲ್ಲಿರುವ ಎಷ್ಟು ನಾಯಕರುಗಳ ವಿರುದ್ಧ ಈ ತನಿಖಾ ಸಂಸ್ಥೆಗಳು ಕೇಸು ದಾಖಲಿಸಿಕೊಂಡು ತನಿಖೆ ನಡೆಸಿವೆ?
  3. ರಾಜ್ಯದ ಕಾನೂನು ಸುವ್ಯವಸ್ಥೆ, ಆಡಳಿತ ಕುಸಿದಿದ್ದರೆ ರಾಜ್ಯದ ಹಣದುಬ್ಬರ ಶೇ. 7.62ಕ್ಕೆ ಏರಿಕೆಯಾಗಿದೆ. ರಾಜ್ಯದ ನಿರುದ್ಯೋಗ ಪ್ರಮಾಣ ಶೇ. 38.7ಕ್ಕೆ ಏರಿಕೆಯಾಗಿದೆ. ಕೃಷಿ ವೆಚ್ಚ ರಾಕೆಟ್ ವೇಗದಲ್ಲಿ ಏರುತ್ತಿದೆ, ಈ ವೆಚ್ಚದ ಅರ್ಧದಷ್ಟು ಕೂಡ ಬೆಂಬಲ ಬೆಲೆ ಮೂಲಕ ರೈತರಿಗೆ ಸಿಗುತ್ತಿಲ್ಲ. ಬೆಳೆ ಹಾನಿಗೆ ಪರಿಹಾರ ಸೂಕ್ತವಾಗಿ ಸಿಕ್ಕಿಲ್ಲ. ಬೆಳೆ ಸಾಲಕ್ಕೆ ರೈತರ ಪರದಾಟ ನಿಂತಿಲ್ಲ. ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಹೇಳಿ ಡಬ್ಬಲ್ ಎಂಜಿನ್ ಸರ್ಕಾರ ಟೋಪಿ ಹಾಕಿದೆ. ನೀವು ಹಿಂದಿನ ಬಾರಿ ರಾಜ್ಯಕ್ಕೆ ಬರುವ ವೇಳೆಯಲ್ಲಿ ನಿಮ್ಮನ್ನು ಖುಷಿಪಡಿಸಲೆಂದು ಮಾಡಿದ್ದ ರಸ್ತೆಗಳು ಎರಡು ದಿನವೂ ಬಾಳಿಕೆ ಬರಲಿಲ್ಲ.
  4. ಬಿಜೆಪಿ ಸರ್ಕಾರಗಳ ವೈಫಲ್ಯಗಳ ಕುರಿತಂತೆ ನಾವು ಇದುವರೆಗೂ 73 ಪ್ರಶ್ನೆಗಳನ್ನು “ನಿಮ್ಮ ಬಳಿ ಉತ್ತರ ಇದೆಯೇ?” ಎಂದು ಕೇಳಿದ್ದೇವೆ. ಒಂದಕ್ಕೂ ಉತ್ತರಿಸಲು ಸರ್ಕಾರದಿಂದ ಸಾಧ್ಯವಾಗಿಲ್ಲ ಏಕೆ?
  5. ರಾಜ್ಯದ ಆರ್ಥಿಕತೆಗೆ ನೆರವಾಗುವ ಮಹದಾಯಿ, ಕೃಷ್ಣಾ ಮೇಲ್ದಂಡೆ, ಮೇಕೆದಾಟು ಯೋಜನೆಗಳನ್ನು ಜಾರಿ ಮಾಡಲಿಲ್ಲ. ಇವುಗಳನ್ನು ರಾಷ್ಟ್ರೀಯ ಯೋಜನೆಗಳೆಂದು ಘೋಷಿಸಿ ಎನ್ನುವ ಎಂಬ ರೈತರ ಬೇಡಿಕೆಗೆ ನೀವು ಸಾಂಪ್ರದಾಯಿಕ ಮೌನವನ್ನೇ ಏಕೆ ಪಾಲಿಸಿದ್ದೀರಿ?
  6. ಎಸ್‍ಸಿ/ಎಸ್‍ಟಿ ಸಮುದಾಯಗಳ ಮೀಸಲು ಹೆಚ್ಚಳದ ಕುರಿತು ರಾಜ್ಯದಲ್ಲಿ ಎಲ್ಲ ಪಕ್ಷಗಳೂ ಸೇರಿ ಸರ್ವಾನುಮತದ ತೀರ್ಮಾನ ತೆಗೆದುಕೊಂಡಿದ್ದೇವೆ. ರಾಜ್ಯ ಸರ್ಕಾರ ಕೇಂದ್ರಕ್ಕೆ ಸೂಕ್ತ ಕ್ರಮಕ್ಕಾಗಿ ಕಳಿಸಿದೆ. ಇದನ್ನು ಸಂವಿಧಾನದ 9ನೇ ಶೆಡ್ಯೂಲಿಗೆ ಕೂಡಲೆ ಸೇರಿಸಬೇಕು. ಆದರೆ ಈ ಕುರಿತು ಕೇಂದ್ರದ ನಿಲುವು ಏನು? ನಮ್ಮ ಸರ್ಕಾರವಿದ್ದಾಗ 2013ರಿಂದ 2018 ರ ವರೆಗೆ ಹಲವಾರು ಜಾತಿಗಳನ್ನು ಪ.ಜಾತಿ/ಪ.ಪಂಗಡಕ್ಕೆ ಸೇರಿಸಬೇಕೆಂದು ಶಿಫಾರಸು ಮಾಡಿದ್ದೆವು. ಅವುಗಳ ಕುರಿತು ನಿಮ್ಮ ಸರ್ಕಾರ ಯಾವ ಕ್ರಮ ಕೈಗೊಂಡಿದೆ?
  1. ತುಮಕೂರು-ದಾವಣಗೆರೆ ಮುಂತಾದ ರೈಲ್ವೆ ಯೋಜನೆಗಳಿಗೆ ಅಗತ್ಯವಾದಷ್ಟು ಹಣ ಬಂದಿಲ್ಲ. ಯೋಜನೆಗಳು ಕಾಲು ಮುರಿದುಕೊಂಡು ಬಿದ್ದಲ್ಲಿಯೆ ಇವೆ. ರಾಯಚೂರಿನ ಜನತೆಯ ಏಮ್ಸ್ ಕನಸು ಇನ್ನೂ ಕನಸಾಗಿಯೇ ಉಳಿದಿದೆ. ರಾಜ್ಯದ ಪಾಲಿಗೆ ಒದಗಿ ಬಂದಿದ್ದ ಎರಡು ಸಿಆರ್‍ಪಿಎಫ್ ಬೆಟಾಲಿಯನ್‍ಗಳನ್ನು ಕಿತ್ತು ಉತ್ತರ ಪ್ರದೇಶಕ್ಕೆ ವರ್ಗಾಯಿಸಲಾಯಿತು. ಕೇಂದ್ರದ ಆಯೋಗಗಳು ನಡೆಸುವ ಪ್ರವೇಶ ಪರೀಕ್ಷೆಯಿಂದ ಕನ್ನಡವನ್ನು ಕಿಕ್‍ಔಟ್ ಮಾಡಿ ಕನ್ನಡಿಗರ ಪಾಲಿನ ಉದ್ಯೋಗವನ್ನು ಕಿತ್ತುಕೊಳ್ಳಲಾಗಿದೆ. ಇದಕ್ಕೆ ನಿಮ್ಮ ಉತ್ತರವೇನು.
  2. ನೀವು ಮಹರ್ಷಿ ವಾಲ್ಮೀಕಿ, ನಾಡಪ್ರಭು ಕೆಂಪೇಗೌಡರು, ದಾಸಶ್ರೇಷ್ಠರಾದ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಲು ನೀವು ರಾಜ್ಯಕ್ಕೆ ಬರುತ್ತಿದ್ದೀರಿ. ಇವರೆಲ್ಲಾ ಕನ್ನಡ ಮಣ್ಣಿನ ಸಾಂಸ್ಕøತಿಕ ನಾಯಕರು. ವಿಗ್ರಹಗಳಿಗೆ ಮಾಲಾರ್ಪಣೆ ಮಾಡುತ್ತಾ ಅವರ ವಿಚಾರಗಳನ್ನು ಕೊಲ್ಲುವ ಸಂಪ್ರದಾಯವನ್ನು ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಬೆದರಿಕೆ ಮೂಲಕ ಆಚರಣೆಗೆ ತರುತ್ತಿವೆ. ನೀವೀಗ ಮಾಲಾರ್ಪಣೆ ಮಾಡುವ ಎಲ್ಲಾ ಮಹನೀಯರ ಬಗ್ಗೆ ನಿಜವಾದ ಗೌರವ, ಶ್ರದ್ಧೆ ಇದ್ದರೆ ಇವರನ್ನೆಲ್ಲಾ ರಾಷ್ಟ್ರೀಯ ಸಾಂಸ್ಕøತಿಕ ನಾಯಕರು ಎಂದು ಘೋಷಿಸಿ. ಇವರ ಪ್ರತಿಮೆಗಳನ್ನು ಪಾರ್ಲಿಮೆಂಟಿನ ಮುಂದೆ ಸ್ಥಾಪಿಸುವ ಭರವಸೆಯನ್ನು ಜನರಿಗೆ ನೀಡಿ. ಜಗತ್ತಿಗೆ ರಾಮಾಯಣದಂಥಹ ಶ್ರೇಷ್ಠ ಗ್ರಂಥವನ್ನು ನೀಡಿ ಶ್ರೀರಾಮನಂತಹ ವ್ಯಕ್ತಿತ್ವವನ್ನು ಪರಿಚಯಿಸಿದ ಮಹರ್ಷಿ ವಾಲ್ಮೀಕಿಯವರ ಮಂದಿರವನ್ನು ಅಯೋಧ್ಯೆಯಲ್ಲಿ ಸ್ಥಾಪಿಸುವಂತೆ ನಾನು ಒತ್ತಾಯಿಸುತ್ತೇನೆ.

ಬಿಜೆಪಿಯ ದುರಾಡಳಿತದ ವಿರುದ್ಧ ನಾಡಿನ ಜನತೆ ರೊಚ್ಚಿಗೆದ್ದಿದ್ದಾರೆ. ನಿಮ್ಮ ಎಲ್ಲ ಭರವಸೆಗಳು ಕೇವಲ ಭರವಸೆಗಳಾಗಿಯೆ ಉಳಿದಿವೆ. ಎಲ್ಲ ಭರವಸೆಗಳನ್ನು ಈಡೇರಿಸಿದ ಮೇಲೆ ನೀವು ಉಳಿದ ಮಾತುಗಳನ್ನು ಆಡಬೇಕಾಗಿದೆ. ಇಲ್ಲದಿದ್ದರೆ ಬಿಜೆಪಿಯೆಂದರೆ ಕೇವಲ ‘ಬೊಗಳೆ ಜನರ ಪಕ್ಷ’, ‘ಭ್ರಷ್ಟ ಜನರ ಪಕ್ಷವೆಂದು’ ವೆಂದು ಕರೆಯಬೇಕಾಗುತ್ತದೆಂದು ತಮಗೆ ತಿಳಿಸಬಯಸುತ್ತೇನೆ.

ಆದ್ದರಿಂದ ಕೇಂದ್ರ ಸರ್ಕಾರವು ಕೂಡಲೆ ರಾಜ್ಯದ ಕುರಿತಾದ ತಾರತಮ್ಯವನ್ನು ನಿಲ್ಲಿಸಬೇಕು. ಮೇಲೆ ಹೇಳಿದ ಎಲ್ಲ ವಿಷಯಗಳ ಕುರಿತು ಕೂಡಲೇ ಕ್ರಮ ತೆಗೆದುಕೊಂಡು ಅನುಷ್ಠಾನ ಮಾಡಬೇಕು. ಭ್ರಷ್ಟ ಬಿಜೆಪಿಯ ಸಚಿವರುಗಳ ವಿರುದ್ಧ ಐಟಿ, ಇಡಿ, ಸಿಬಿಐ ತನಿಖೆಗಳನ್ನು ಮಾಡಿಸಬೇಕು. ಯಾವ್ಯಾವ ಸಚಿವರುಗಳ ವಿರುದ್ಧ ವಿಚಾರಣೆ ನಡೆಯುತ್ತಿದೆಯೊ ಅವರನ್ನೆಲ್ಲ ಕೂಡಲೆ ವಜಾ ಮಾಡಬೇಕು. ರಾಜ್ಯವನ್ನು ಭ್ರಷ್ಟಾಚಾರದಿಂದ, ದ್ವೇಷ, ಹಿಂಸೆಯ ಕೋಮುವಾದಿ ರಾಜಕಾರಣದಿಂದ ಬಿಡುಗಡೆ ಮಾಡಬೇಕೆಂದು ತಮ್ಮನ್ನು ಆಗ್ರಹಿಸುತ್ತೇನೆ. ಹಾಗೂ ತಾವು ರಾಜ್ಯಕ್ಕೆ ಬರುವಾಗ ರಾಜ್ಯದ ಜನರ ಹಿತಕ್ಕಾಗಿ ಯೋಜನೆಗಳನ್ನು ತರಬೇಕೆ ಹೊರತು, ನಿಮ್ಮ ಪಕ್ಷದ ಹಿತಕ್ಕಾಗಿ ಕೇವಲ ಪ್ರವಾಸ ಬರಬಾರದೆಂದು ಒತ್ತಾಯಿಸುತ್ತೇನೆ.- ಎಂದು ಸಿದ್ದರಾಮಯ್ಯ ತಮ್ಮ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ | Modi in Bengaluru | ಕನಕ, ವಾಲ್ಮೀಕಿ ಪ್ರತಿಮೆ ನಮ್ಮದು, ಹಾರ ಮಾತ್ರ ಅವರದು ಎಂದ ಸಿದ್ದರಾಮಯ್ಯ

Exit mobile version