ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಭುವನಹಳ್ಳಿಯಲ್ಲಿ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಕೆಂಪೇಗೌಡ ಪೇಟ’ ಧರಿಸಿ ಕಂಗೊಳಿಸಲಿದ್ದಾರೆ.
ಮೈಸೂರಿನಲ್ಲಿ ಸಿದ್ಧವಾಗಿರುವ ಕೆಂಪೇಗೌಡ ಪೇಟ ಹಲವು ವಿಶೇಷತೆಗಳಿಂದ ಕೂಡಿದೆ. ಈ ಪೇಟವನ್ನು ಕೆಂಪೇಗೌಡರ ಪ್ರತಿಮೆಯಲ್ಲಿರುವ ಪೇಟದಂತೆಯೇ ವಿನ್ಯಾಸಗೊಳಿಸಲಾಗಿದೆ. ಮೈಸೂರಿನ ಕಲಾವಿದ ನಂದನ್ ಎಂಬುವವರು ತಯಾರಿಸಿರುವ ಪೇಟ ಇದಾಗಿದೆ.
ಕಲಾವಿದ ನಂದನ್ ಅವರು ಹತ್ತು ದಿನಗಳಲ್ಲಿ ಇದನ್ನು ತಯಾರಿಸಿದ್ದಾರೆ. ಬನಾರಸ್ ರೇಷ್ಮೆ ಬಳಸಿ ಪೇಟವನ್ನು ತಯಾರಿಸಲಾಗಿದೆ. ಕೆಂಪು ಬಣ್ಣದ ಪೇಟದಲ್ಲಿ ರೇಷ್ಮೆ, ಗರಿ, ಮುತ್ತುಗಳು ಸೇರಿ ಸೂಕ್ಷ್ಮ ಕುಸುರಿ ಕೆಲಸ ಗಮನ ಸೆಳೆಯುತ್ತಿದೆ. ಇದೇ ಮೊದಲ ಬಾರಿಗೆ ಈ ಥರದ ಪೇಟ ಮೋದಿಯವರಿಗಾಗಿ ಸಿದ್ಧಪಡಿಸಲಾಗಿದೆ.
ಕಲಾವಿದ ನಂದನ್ ಅವರು ಗುರುವಾರ ಈ ಪೇಟವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲಿಸಿದರು. ಅವರ ಜತೆ ಸಚಿವ ಸಿ.ಎನ್. ಅಶ್ವತ್ಥನಾರಾಯಣ ಅವರು ಕೂಡಾ ಇದ್ದರು.