Site icon Vistara News

Modi in Karnataka | ಮೋದಿಗೆ ಕೊಡುವ ಸ್ಮರಣಿಕೆ ಕನ್ನಡದಲ್ಲಿ ಏಕಿಲ್ಲ?

Modi In Karnataka

ಮೈಸೂರು: ಯೋಗ ದಿನಾಚರಣೆಗೆ ಆಗಮಿಸಲಿರುವ ಪ್ರಧಾನಿ ಮೋದಿ ಅವರಿಗೆ ಮೈಸೂರಿನ ಪರವಾಗಿ ನೀಡಲಿರುವ ಸ್ಮರಣಿಕೆಯನ್ನು ಸಂಸದ ಪ್ರತಾಪ್‌ ಸಿಂಹ ಪ್ರದರ್ಶಿಸಿದ್ದಾರೆ. ಈ ಸ್ಮರಣಿಕೆ ಸಂಪೂರ್ಣ ಹಿಂದಿಯಲ್ಲಿದ್ದು, ಕನ್ನಡದಲ್ಲಿ ಇರಬೇಕಿತ್ತು ಎಂದು ಸಾರ್ವಜನಿಕ ವಲಯದಲ್ಲಿ ಆಕ್ಷೇಪಣೆ ಕೇಳಿ ಬರುತ್ತಿದೆ.

ಇದನ್ನೂ ಓದಿ | Modi Karnataka Visit | ಪ್ರಧಾನಿ ಮೋದಿಯವರ ಎರಡು ದಿನಗಳ ರಾಜ್ಯ ಪ್ರವಾಸ ಇಂದಿನಿಂದ ಆರಂಭ

ಅತ್ಯಂತ ಸುಂದರವಾಗಿರುವ ಸ್ಮರಣಿಕೆಯಲ್ಲಿ ಒಂದು ಬದಿಯಲ್ಲಿ ಮೈಸೂರು ಅರಮನೆಯ ಚಿತ್ರವಿದೆ. ಅದರ ಮೇಲ್ಭಾಗದಲ್ಲಿ ಮೊದಲು ಹಿಂದಿಯಲ್ಲಿ ಹಾಗೂ ನಂತರ ಇಂಗ್ಲಿಷ್‌ನಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಎಂದು ಬರೆಯಲಾಗಿದೆ. ಇನ್ನೊಂದು ಬದಿಯಲ್ಲಿ ಹಿಂದಿಯಲ್ಲಿ ಬರೆಯಲಾಗಿದೆ. “ಆದರಣೀಯ ಪ್ರಧಾನಮಂತ್ರಿ ನರೇಂದ್ರ ಮೋದಿ ಜೀ, ಮೈಸೂರು ಯೋಗದ ಬಹುದೊಡ್ಡ ಕೇಂದ್ರ. ಯೋಗವನ್ನು ವಿಶ್ವಾದ್ಯಂತ ಪ್ರಸಾರ ಮಾಡಿದ ಅನೇಕ ಯೋಗಗುರುಗಳು ಮೈಸೂರಿನಲ್ಲಿದ್ದರು. ಈ ಸ್ಥಳದಲ್ಲಿ ೮ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ ಮಾಡಲು ತಾವು ನಮ್ಮ ಪ್ರಸ್ತಾವನೆಯನ್ನು ಸ್ವೀಕರಿಸಿದ್ದೀರಿ. ಇದು ಸಮಸ್ತ ಮೈಸೂರುವಾಸಿಗಳಿಗೆ ಹೆಮ್ಮೆಯ ವಿಚಾರ. ತಮ್ಮ ಈ ಸ್ನೇಹವನ್ನು ನಾವು ಹೃದಯದಿಂದ ಅಭಿನಂದಿಸುತ್ತೇವೆʼ ಎಂದು ಹಿಂದಿಯಲ್ಲಿ ಬರೆಯಲಾಗಿದೆ. ಎಲ್ಲಿಯೂ ಕನ್ನಡದ ಸುಳಿವಿಲ್ಲ.

ಪ್ರಧಾನಿ ಮೋದಿ ಅವರಿಗೆ ಕನ್ನಡದ ಮುತ್ತಿನಂಥ ಅಕ್ಷರಗಳಲ್ಲಿ ಬರೆದಿರುವ ಸ್ಮರಣಿಕೆ ಕೊಟ್ಟಿದ್ದರೆ ಸೊಗಸಾಗಿರುತ್ತಿತ್ತು. ಕನ್ನಡದಲ್ಲಿ ಬರೆದು ನಂತರ ಕೆಳಗೆ ಹಿಂದಿಯಲ್ಲೂ ಬರೆಯಬಹುದಿತ್ತು. ಮೋದಿಯವರಿಗೆ ಸಾವಿರಾರು ಸ್ಮರಣಿಕೆ ನೀಡಲಾಗಿರುತ್ತದೆ. ಅದರ ಮಧ್ಯೆ ಕರ್ನಾಟಕದ್ದು ಎಂದು ತೋರಲು, ಕನ್ನಡದ ಅಕ್ಷರಗಳಿದ್ದರೆ ತಾನೇ ಅದರ ಅಸ್ಮಿತೆ ಉಳಿಯುವುದು ಎಂದು ಸಾರ್ವಜನಿಕರ ವಲಯದಲ್ಲಿ ಚರ್ಚೆಗಳಾಗುತ್ತಿವೆ.

ಅದಕ್ಕಿಂತಲೂ ಮಿಗಿಲಾಗಿ, ಕರ್ನಾಟಕಕ್ಕೆ ಆಗಮಿಸುತ್ತಿರುವುದಾಗ ಹಾಗೂ ಇಲ್ಲಿನ ಕಾರ್ಯಕ್ರಮಗಳ ಕುರಿತು ಸ್ವತಃ ಮೋದಿ ಅವರೇ ಕನ್ನಡದಲ್ಲಿ ಟ್ವೀಟ್‌ ಮಾಡಿದ್ದಾರೆ. ಅವರು ಭಾಷಣದಲ್ಲೂ ಅನೇಕ ಬಾರಿ ಕನ್ನಡ ಶಬ್ದಗಳನ್ನು ಬಳಸುತ್ತಾರೆ. ಅಂತಹದ್ದರಲ್ಲಿ ಕನ್ನಡಿಗರೇ ಕನ್ನಡವನ್ನು ಮರೆಯುತ್ತಿರುವುದು ಏಕೆ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.

ಇದನ್ನೂ ಓದಿ | Modi Karnataka Visit | ಸಾಂಸ್ಕೃತಿಕ ನಗರಿ ಮೈಸೂರಿಗೆ 7ನೇ ಬಾರಿಗೆ ಮೋದಿ ಭೇಟಿ

Exit mobile version