ದಾವಣಗೆರೆ: ಕರ್ನಾಟಕದಲ್ಲಿ ಡಬಲ್ ಇಂಜಿನ್ ಸರ್ಕಾರವಿದ್ದರೆ ಮಾತ್ರ ಅಭಿವೃದ್ಧಿಯಾಗುತ್ತದೆ ಎಂದು ಪುನರುಚ್ಛರಿಸಿರುವ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕದಲ್ಲೂ ನನ್ನ ಸೇವೆಯನ್ನು ಮಾಡಬೇಕು ಎಂದರೆ ಬಿಜೆಪಿ ಪಕ್ಷಕ್ಕೆ ಮತ ನೀಡಿ ಎಂದು ಕರೆ ನೀಡಿದ್ದಾರೆ.
ದಾವಣಗೆರೆಯ ಜಿಎಂಐಟಿ ಮೈದಾನದಲ್ಲಿ ಆಯೋಜಿಸಲಾಗಿದ್ದ ವಿಜಯ ಸಂಕಲ್ಪ ಯಾತ್ರೆ ಮಹಾ ಸಂಗಮ ಕಾರ್ಯಕ್ರಮದಲ್ಲಿ ನೆರೆದಿದ್ದ ಲಕ್ಷಾಂತರ ಕಾರ್ಯಕರ್ತರನ್ನುದ್ದೇಶಿಸಿ ಮೋದಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಅನೇಕ ಯೋಜನೆಗಳನ್ನು ಉದ್ಘಾಟನೆ ಮಾಡಲಾಗಿದೆ. ಕರ್ನಾಟಕದಲ್ಲಿ ಹೊಸದಾಗಿ 40 ಲಕ್ಷ ನಲ್ಲಿ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಈ ಬಾರಿ ಬಜೆಟ್‌ನಲ್ಲಿ 5,300 ಕೋಟಿ ರೂ. ಮೀಸಲಿಟ್ಟಿದೆ. ಇದರ ಬಹುದೊಡ್ಡ ಲಾಭವೂ ಇದೇ ಭಾಗದ ರೈತರಿಗೆ ಆಗುತ್ತದೆ.
ಡಬಲ್ ಇಂಜಿನ್ ಸರ್ಕಾರ ಎಲ್ಲದಿದ್ದರೆ ಏನಾಗುತ್ತದೆ? 2021ರಲ್ಲಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಆರಂಭಿಸಿದಾಗ ಇಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರವಿತ್ತು. ಎಷ್ಟೇ ಒತ್ತಾಯ ಮಾಡಿದರೂ ಅತ್ಯಂತ ಕಡಿಮೆ ರೈತರ ಹೆಸರನ್ನು ಕಳಿಸಿತ್ತು. ಆದರೆ ಬಿಜೆಪಿ ಸರ್ಕಾರ ರಚನೆಯಾದ ನಂತರ ಈ ಯೋಜನೆಗೆ ಆಸಕ್ತಿ ತೋರಿತು. ಇಂದು ಕರ್ನಾಟಕದ ಅರವತ್ತು ಲಕ್ಷ ರೈತರು ಈ ಯೋಜನೆಯಲ್ಲಿ ನೋಂದಾಯಿಸಿಕೊಂಡಿದ್ದಾರೆ. ದಾವಣಗೆರೆಯಲ್ಲೂ ಒಂದೂವರೆ ಲಕ್ಷ ಜನರು ನೋಂದಣಿ ಆಗಿದ್ದಾರೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಗೆ ಕರ್ನಾಟಕ ಸರ್ಕಾರ ಮತ್ತಷ್ಟು ಹಣ ಸೇರಿಸಿ ರೈತರಿಗೆ ಮತ್ತಷ್ಟು ಅನುಕೂಲ ಮಾಡಿಕೊಡುತ್ತದೆ. ಇದೇ ಡಬಲ್ ಇಂಜಿನ್ ಸರ್ಕಾರದ ಡಬಲ್ ಲಾಭ.
ದಾವಣಗೆರೆಯು ಸಂತ ಸೇವಾಲಾಲ್‌ರ ಜನ್ಮಭೂಮಿ. ಇದೇ ವರ್ಷ ಬೊಮ್ಮಾಯಿ ಅವರ ನೇತೃತ್ವದಲ್ಲಿ ಬಂಜಾರಾ ಸಮುದಾಯಕ್ಕೆ ಹಕ್ಕುಪತ್ರ ನೀಡಲು ಆರಂಭಿಸಿದೆ. ದಲಿತರು, ಆದಿವಾಸಿಗಳು, ವನವಾಸಿಗಳು, ಮಹಿಳೆಯರು ಸೇರಿ ಎಲ್ಲ ರೀತಿಯ ವಂಚಿತರಿಗೆ ಪ್ರಾತಿನಿಧ್ಯವು ನಮ್ಮ ಸಂಕಲ್ಪವನ್ನು ತೋರಿಸುತ್ತದೆ. ಕರ್ನಾಟಕವು ಅವಕಾಶವಾದಿ ಹಾಗೂ ಸ್ವಾರ್ಥ ಮೈತ್ರಿ ಸರ್ಕಾರಗಳನ್ನು ನೋಡಿದೆ. ಇಂತಹ ಸರ್ಕಾರಗಳಿಂದ ಕರ್ನಾಟಕಕ್ಕೆ ಯಾವಾಗಲೂ ನಷ್ಟವೇ ಆಗಿದೆ. ಹೀಗಾಗಿ ಕರ್ನಾಟಕದ ವೇಗದ ವಿಕಾಸಕ್ಕಾಗಿ ಬಿಜೆಪಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದು, ಸ್ಥಿರ ಸರ್ಕಾರ ರಚಿಸುವುದು ಅನಿವಾರ್ಯವಾಗಿದೆ.
ಯಾರಿಗೂ ಬಹುಮತ ಸಿಗದಿದ್ದರೆ ಕರ್ನಾಟಕದ ಸ್ಥಿತಿ ಕೆಟ್ಟದಾಗುತ್ತದೆ. ಕರ್ನಾಟಕವನ್ನು ಈ ಒಡೆಯುವ ಅಂಟಿಸುವ ರಾಜಕಾರಣದಿಂದ ಹೊರಗೆ ತರಬೇಕು. ಎಲ್ಲರೂ ಬಿಜೆಪಿಗೆ ಮತ ನೀಡಬೇಕು. ಕರ್ನಾಟಕದ ಉಜ್ವಲ ಭವಿಷ್ಯಕ್ಕಾಗಿ ಇದು ಇಂದಿನ ಸಮಯದ ಅವಶ್ಯಕತೆ. ನಾನು ನಿಮ್ಮ ಸೇವೆ ಮಾಡಬೇಕೆಂದು ಕರ್ನಾಟಕ ಬಯಸುತ್ತದೆಯೇ? ಎಂದು ಪ್ರಶ್ನಿಸಿದ ಮೋದಿ, ಹೌದು ಎಂದು ಉತ್ತರ ಪಡೆದರು.
ನಾನು ನಿಮ್ಮ ಸೇವೆ ಮಾಡಬೇಕೆಂದರೆ ನನಗೆ ಕರ್ನಾಟಕದಲ್ಲಿ ಬಿಜೆಪಿಯ ಸದೃಢ ಸರ್ಕಾರ ಬೇಕು. ನೀವು ಬಿಜೆಪಿಯನ್ನು ಇದಕ್ಕಾಗಿ ಗೆಲ್ಲಿಸಬೇಕು. ಇದಕ್ಕಾಗಿ ಮನೆಮನೆಗೆ ಹೋಗಬೇಕು. ಅಭಿವೃದ್ಧಿ ಹೊಂದಿದ ದೇಶದ ಚಾಲನಾ ಶಕ್ತಿಯನ್ನಾಗಿ ಕರ್ನಾಟಕವನ್ನು ಮಾಡಲು ಬಿಜೆಪಿ ಬಯಸುತ್ತಿದೆ. ಆದರೆ ಕರ್ನಾಟಕವನ್ನು ಕಾಂಗ್ರೆಸ್ ಎಟಿಎಂ ಆಗಿ ಬಳಸುತ್ತದೆ. ಪ್ರತಿ ಬಾರಿ ಚುನಾವಣೆಗೂ ಮುನ್ನ ಕಾಂಗ್ರೆಸ್ ನಕಲಿ ಗ್ಯಾರಂಟಿ ನೀಡುತ್ತದೆ.
ಹಿಮಾಚಲದಲ್ಲಿ ಇತ್ತೀಚೆಗೆ ಚುನಾವಣೆ ನಡೆದಿದೆ. ಉದ್ಯೋಗ, ಉಚಿತ ಗ್ಯಾರಂಟಿಗಳನ್ನು ಹೇಳಿ ಜನರನ್ನು ಮೋಸಗೊಳಿಸಿದರು. ಆದರೆ ಇತ್ತೀಚೆಗೆ ಹಿಮಾಚಲ ಪ್ರದೇಶದ ಬಜೆಟ್ ಹೊರಬಂದಾಗ, ಅವರ ಘೋಷಣೆಗಳು ಇರಲೇ ಇಲ್ಲ. ಇಂತಹ ಕಾಂಗ್ರೆಸನ್ನು ನಂಬಲು ಆಗುವುದಿಲ್ಲ. ಕರ್ನಾಟಕದ ಜನರೂ ಎಚ್ಚರದಿಂದ ಇರಬೇಕು. ಇಂತಹದ್ದೇ ಆಟವಾಡಲು ಕಾಂಗ್ರೆಸ್‌ಗೆ ಅವಕಾಶ ನೀಡಬೇಡಿ.
ಇಂದು ಕಾಂಗ್ರೆಸ್ ಬಳಿ ದೇಶಕ್ಕೆ ಹಾಗೂ ಕರ್ನಾಟಕಕ್ಕೆ ಕೊಡಲು ಯಾವುದೇ ಧನಾತ್ಮಕ ಅಜೆಂಡಾ ಇಲ್ಲ. ಅದಕ್ಕಾಗಿಯೇ ಕಾಂಗ್ರೆಸ್ ಕನಸು ಕಾಣುತ್ತಿದೆ. ಏನು ಕನಸು ಕಾಣುತ್ತಿದೆ? ಮೋದಿಯನ್ನು ಹತ್ಯೆ ಮಾಡುತ್ತೇವೆ ಎಂದು ಕಾಂಗ್ರೆಸಿಗರು ಹೇಳುತ್ತಿದ್ದಾರೆ. ಆದರೆ ಮೋದಿ ಕಮಲ ಅರಳುತ್ತದೆ ಎಂದು ಕರ್ನಾಟಕದ ಜನರು ಸಂಕಲ್ಪ ಮಾಡಿದ್ದಾರೆ ಎನ್ನುವುದು ಕಾಂಗ್ರೆಸಿಗರಿಗೆ ತಿಳಿದಿಲ್ಲ. ಕಮಲ ಅರಳುವುದರಲ್ಲೇ ಜನರ ವಿಶ್ವಾಸವಿದೆ.
ಕಮಲದಲ್ಲಿ ಸಮೃದ್ಧಿಯ, ಸಂಪನ್ನತೆಯ, ಹೂಡಿಕೆಯ, ಮುನ್ನಡೆಯುವ ಸದೃಢ ವಿಶ್ವಾಸವಿದೆ. ವಿಶ್ವ ಇಂದು ಭಾರತದ ಕಡೆಗೆ ನೋಡುತ್ತಿದೆ. ಹಾಗೂ ಭಾರತವು ಕರ್ನಾಟಕದ ಕಡೆಗೆ ನೋಡುತ್ತಿದೆ. ಕರ್ನಾಟಕದಲ್ಲಿ ಹೂಡಿಕೆಯನ್ನು ಆಕರ್ಷಿಸಲು ಬೆಂಗಳೂರಿನಂತಹ ಅನೇಕ ಹಬ್‌ಗಳು ಆಗಬೇಕು ಎನ್ನುವುದು ಬಿಜೆಪಿ ಕನಸು. ಇದೇ ಕಾರಣಕ್ಕೆ ಕರೊನಾ ಸಮಯದಲ್ಲೂ ವಿದೇಶಿ ಹೂಡಿಕೆ ನಡೆದಿದೆ. ಇದಕ್ಕಾಗಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಅವರ ತಂಡಕ್ಕೆ ಅಭಿನಂದಿಸುತ್ತೇನೆ.
ದಾವಣಗೆರೆಯು ಟೆಕ್ಸ್‌ಟೈಲ್ ಕೇಂದ್ರವಾಗಿದೆ. ದೇಶದಲ್ಲಿ ಏಳು ಮೆಗಾ ಟೆಕ್ಸ್‌ಟೈಲ್ ಹಬ್ ಮಾಡುತ್ತಿದ್ದೇವೆ. ಇದರಲ್ಲಿ ಒಂದು ಕರ್ನಾಟಕದಲ್ಲಿ ಆಗಲಿದೆ. ಇಂತಹ ವಿಚಾರಗಳನ್ನು ಪ್ರತಿ ಬೂತ್‌ಗೆ ತಲುಪಿಸಬೇಕಿದೆ. ಇಂದು ವಿಶ್ವಾದ್ಯಂತ ಭಾರತವನ್ನು ಕೊಂಡಾಡುತ್ತಿವೆ. ಇದಕ್ಕೆ ಕಾರಣವೇನು? ಎಂದು ನೆರೆದವರನ್ನು ಪ್ರಶ್ನಿಸಿದರು. ಆಗ ನೆರೆದವರೆಲ್ಲರೂ, ಮೋದಿ ಎಂದು ಉತ್ತರಿಸಿದರು. ನಿಮ್ಮ ಉತ್ತರ ತಪ್ಪು ಎಂದ ಮೋದಿ, ನೀವು ನೀಡಿದ ಒಂದು ಮತ ಇದಕ್ಕೆಲ್ಲ ಕಾರಣ. ದೇಶಾದ್ಯಂತ ಕರ್ನಾಟಕದ ಪ್ರಶಂಸೆ ಆಗಬೇಕೆಂದರೆ ಇಲ್ಲಿನ ಜನರಲ್ಲಿ ಜಾಗೃತಿ ಮೂಡಿಸಿ ಮತ ನೀಡಬೇಕು ಎಂದರು.
ಎಲ್ಲರೂ ಮೊಬೈಲ್ ಫ್ಲಾಷ್‌ಲೈಟ್ ಹೊತ್ತಿಸಿ ಎಂದ ಮೋದಿ, ಈ ವಿಜಯ ಸಂಕಲ್ಪದ ಜ್ಯೋತಿಯನ್ನು ಎಲ್ಲ ಕುಟುಂಬಕ್ಕೂ ತಲುಪಿಸಬೇಕು ಎಂದರು.
ಇದನ್ನೂ ಓದಿ: Modi in Karnataka: ಕಾರ್ಯಕರ್ತನ ಕಪಾಳಕ್ಕೇ ಹೊಡೆದವರು ಜನರಿಗೆ ಗೌರವ ನೀಡುತ್ತಾರಾ?: ಸಿದ್ದು ವಿರುದ್ಧ ಮೋದಿ ವಾಗ್ದಾಳಿ