ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಪ್ರವಾಸಕ್ಕೆ ಬೆಂಗಳೂರಿಗೆ ಆಗಮಿಸಿದ್ದಾರೆ. ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಪ್ರಧಾನಿಯವರನ್ನು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಸೇರಿ ಅನೇಕರು ಸ್ವಾಗತಿಸಲಿದ್ದಾರೆ. ಅಲ್ಲಿಂದ ಪ್ರಧಾನಿ ನೇರವಾಗಿ ಭಾರತೀಯ ವಿಜ್ಞಾನ ಮಂದಿರಲ್ಲೆ(ಐಐಎಸ್‌ಸಿ) ತೆರಳಲಿದ್ದಾರೆ.
ಐಐಎಸ್‌ಸಿಯಲ್ಲಿ ಮೊದಲನೆಯದಾಗಿ ₹೨೮೦ ಕೋಟಿ ಮೊತ್ತದ ಸೆಂಟರ್ ಫಾರ್ ಬ್ರೈನ್ ರಿಸರ್ಚ್(ಸಿಬಿಆರ್) ಉದ್ಘಾಟಿಸಲಿದ್ದಾರೆ. ನಂತರ ₹೪೨೫ ಕೋಟಿ ಮೊತ್ತದ ಬಾಗ್ಚಿ-ಪಾರ್ಥಸಾರಥಿ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಯಾವುದೇ ಲಾಭದ ಆಕಾಂಕ್ಷೆಯಿಲ್ಲದೆ ನಡಯುವ ೮೩೨ ಹಾಸಿಗೆಗಳ ಈ ಸುಸಜ್ಜಿತ ಆಸ್ಪತ್ರೆಗೆ ಇಬ್ಬರು ವ್ಯಕ್ತಿಗಳ ₹೪೨೫ ಕೋಟಿ ದಾನ ನೀಡಿದ್ದರು. ತಮ್ಮ ಜೀವಮಾನದ ಅತಿ ದೊಡ್ಡ ಗಳಿಕೆಯನ್ನು ಈ ಇಬ್ಬರು ವ್ಯಕ್ತಿಗಳು ೨೦೨೨ರ ಫೆಬ್ರವರಿಯಲ್ಲಿ ದಾನ ನೀಡಿದ್ದರು.
ದಾನ ನೀಡಿದವರು ಇವರು…
ಐಐಎಸ್‌ಸಿಗೆ ₹೪೨೫ ಕೋಟಿ ದಾನ ನೀಡಿದ ಇಬ್ಬರು ವ್ಯಕ್ತಿಗಳೆಂದರೆ ಸುಬ್ರತೊ ಬಾಗ್ಚಿ ಹಾಗೂ ಎನ್.ಎಸ್. ಪಾರ್ಥಸಾರಥಿ. ಸುಬ್ರತೊ ಬಾಗ್ಚಿ ಜನಿಸಿದ್ದು ಒಡಿಶಾದಲ್ಲಿ. ದೇಶದ ಪ್ರಖ್ಯಾತ ಉದ್ಯಮಿ ಹಾಗೂ ಪ್ರಸಿದ್ಧ ಐಟಿ ಕಂಪನಿ ಮೈಂಡ್ ಟ್ರೀ ಸಹ ಸಂಸ್ಥಾಪಕ. ತಂದೆ ಒಬ್ಬ ಸಾಮಾನ್ಯ ಸರ್ಕಾರಿ ನೌಕರ.
ಸುಬ್ರತೊ ಸಹ ಪ್ರಾರಂಭದಲ್ಲಿ ಒಡಿಶಾ ಸರ್ಕಾರದ ಗುಮಾಸ್ತನಾಗಿದ್ದುಕೊಂಡು ನಂತರ ಖಾಸಗಿ ಕ್ಷೇತ್ರಕ್ಕೆ ಧುಮುಕಿದರು. ವಿಪ್ರೊ, ಲ್ಯೂಸೆಂಟ್ ಕಂಪನಿಗಳಲ್ಲಿ ದಶಕದ ಅನುಭವದ ನಂತರ, ಐಐಎಸ್‌ಸಿಗೆ ದಾನ ನೀಡಿರುವ ಎನ್‌ಎಸ್ ಪಾರ್ಥಸಾರಥಿ ಅವರೂ ಸೇರಿ 9 ಸ್ನೇಹಿತರ ಜತೆಗೆ ಮೈಂಡ್ ಟ್ರೀ ಸ್ಥಾಪಿಸಿದರು.
ಪಾರ್ಥಸಾರಥಿ ಸಹ ವಿಪ್ರೊದಲ್ಲಿ ಬಾಗ್ಚಿ ಅವರ ಜತೆಗೆ ಕೆಲಸ ಮಾಡಿದ್ದರು. ಐಐಎಸ್‌ಸಿ ಇತಿಹಾಸದಲ್ಲೆ ದೊಡ್ಡ ದಾನ ಇದು. ಸುಸ್ಮಿತಾ-ಸುಬ್ರತೊ ಬಾಗ್ಚಿ ಮತ್ತು ರಾಧಾ-ಎನ್.ಎಸ್. ಪಾರ್ಥಸಾರಥಿ ದಂಪತಿಗಳು ಒಟ್ಟಾಗಿ ₹425 ಕೋಟಿ ದೇಣಿಗೆ ನೀಡಿದ್ದರು. ಐಐಎಸ್‌ಸಿ ಸ್ಥಾಪನೆಯಾದ ನಂತರ ಇಷ್ಟು ದೊಡ್ಡ ಮೊತ್ತದ ಖಾಸಗಿ ದೇಣಿಗೆ ಪಡೆದಿರಲಿಲ್ಲ. ದೇಣಿಗೆ ನೀಡಿದವರ ಹೆಸರಿನಲ್ಲೆ, ನೂತನ ಆಸ್ಪತ್ರೆಗೆ “ಬಾಗ್ಚಿ – ಪಾರ್ಥಸಾರಥಿ ಆಸ್ಪತ್ರೆ” ನಾಮಕರಣ ಮಾಡಲಾಗುತ್ತಿದೆ.
ಮೋದಿ ಶಂಕುಸ್ಥಾಪನೆ ನೆರವೇರಿಸಿದ ನಂತರ ಆಸ್ಪತ್ರೆ ಕಾಮಗಾರಿ ಆರಂಭವಾಗಲಿದ್ದು, 2024ಕ್ಕೆ ಪೂರ್ಣಗೊಳ್ಳಲಿದೆ. ಬಾಗ್ಚಿ- ಪಾರ್ಥಸಾರಥಿ ಆಸ್ಪತ್ರೆಯು ರೋಗಪರೀಕ್ಷೆ, ಚಿಕಿತ್ಸೆ ಮತ್ತು ಸಂಶೋಧನೆಗೆ ಸುಧಾರಿತ ಸೌಲಭ್ಯಗಳನ್ನು ಒಳಗೊಂಡಿರಲಿದೆ. ಹೃದ್ರೋಗ, ಕ್ಯಾನ್ಸರ್ ಚಿಕಿತ್ಸೆ, ನರವಿಜ್ಞಾನ, ಎಂಡೋಕ್ರಿನಾಲಜಿ, ಗ್ಯಾಸ್ಟ್ರೋಎಂಟರಾಲಜಿ, ನ್ಯೂರಾಲಜಿ, ಯುರಾಲಜಿ, ಚರ್ಮರೋಗ ಮತ್ತು ಪ್ಲಾಸ್ಟಿಕ್ ಸರ್ಜರಿ, ಅಂಗಾಂಗ ಕಸಿ, ರೊಬಾಟಿಕ್ ಶಸ್ತ್ರ ಚಿಕಿತ್ಸೆ, ನೇತ್ರವಿಜ್ಞಾನ ಸೇರಿ ಹಲವು ವಿಷಯ ವಿಭಾಗಗಳನ್ನು ಹೊಂದಿರಲಿದೆ. ಎಂಡಿ, ಎಂಎಸ್ ಮತ್ತು ಡಿಎಂ, ಎಂಸಿಎಚ್ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಅವರ ತರಗತಿ ಮತ್ತು ಪ್ರಯೋಗಾಲಯ ತರಬೇತಿಯೊಂದಿಗೆ ಆಸ್ಪತ್ರೆಯ ಸೂಕ್ತ ವಿಭಾಗಗಳ ತರಬೇತಿಯನ್ನು ನೀಡಲಾಗುತ್ತದೆ.
ಸಮಗ್ರ ವಿದ್ಯುನ್ಮಾನ ವೈದ್ಯಕೀಯ ದಾಖಲೆ ವ್ಯವಸ್ಥೆ ಮತ್ತು ಹ್ಯಾಪ್ಟಿಕ್ಸ್ ಇಂಟೇಸ್‌ಗಳು, ಸಮಗ್ರ ಟೆಲಿಮೆಡಿಸಿನ್ ವ್ಯವಸ್ಥೆಯೊಂದಿಗೆ ಡಿಜಿಟಲ್ ತಂತ್ರಜ್ಞಾನ ಮತ್ತು ಪರಿಹಾರಗಳನ್ನು ಒಳಗೊಂಡಿರಲಿದೆ.
ಇದನ್ನೂ ಓದಿ | ಪ್ರಧಾನಿ ಮೋದಿ ಉದ್ಘಾಟಿಸಲಿರುವ ʼಬೇಸ್ʼ ಕ್ಯಾಂಪಸ್ ಸಂಪೂರ್ಣ ವಿವರ ಇಲ್ಲಿದೆ