ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ (Karnataka Election 2023) ಕೇವಲ ಒಂದು ವಾರ ಮಾತ್ರ ಬಾಕಿ ಉಳಿದಿದೆ. ಇರುವ ಅವಧಿಯಲ್ಲಿ ಬೆಂಗಳೂರಿನಲ್ಲಿ ಗರಿಷ್ಠ ಸ್ಥಾನ ಪಡೆದುಕೊಳ್ಳುವ ಮೆಗಾ ಪ್ಲ್ಯಾನ್ ಹಾಕಿದಂತಿದೆ ಪ್ರಧಾನಿ ನರೇಂದ್ರ ಮೋದಿ. ವಾರದ ಹಿಂದಷ್ಟೇ ನಗರಕ್ಕೆ ಬಂದಿದ್ದ ಮೋದಿ ಏಳು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪರವಾಗಿ ರೋಡ್ ಶೋ ನಡೆಸಿದ್ದರು. ಇದೀಗ ಮತ್ತೊಮ್ಮೆ ಮೇ 6ರಂದು ನಗರದಲ್ಲಿ ಮತ್ತೆ ರೋಡ್ ಶೋ ನಡೆಸಲಿರುವ ಮೋದಿ, 18ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮೋಡಿ ಮಾಡಲು ಪ್ಲ್ಯಾನ್ ಹೊಂದಿರುವಂತಿದೆ.
ಮೇ 6ರಂದು ಬೆಳಗ್ಗೆ 10ರಿಂದ 1 ಗಂಟೆಯವರೆಗೆ 1ನೇ ರೋಡ್ ಶೋ ನಡೆಯಲಿದ್ದರೆ, ಮಧ್ಯಾಹ್ನ 3ರಿಂದ 8.30ರವರೆಗೆ 2ನೇ ರೋಡ್ ಶೋ ನಡೆಯಲಿದೆ.
ಯಾವ ಯಾವ ಕ್ಷೇತ್ರಗಳಲ್ಲಿ ಮೋದಿ ಸಂಚಾರ?
ಮೋದಿ ನಡೆಸುವ 1ನೇ ರೋಡ್ ಶೋನಲ್ಲಿ ಮಹದೇವಪುರ, ಕೆ.ಆರ್ ಪುರಂ, ಸಿ.ವಿ ರಾಮನ್ ನಗರ, ಶಿವಾಜಿ ನಗರ ಹಾಗು ಶಾಂತಿ ನಗರ ಕ್ಷೇತ್ರಗಳು ಕವರ್ ಆಗಲಿವೆ.
ಮೋದಿ ನಡೆಸುವ 2ನೇ ರೋಡ್ ಶೋನಲ್ಲಿ ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ, ಜಯನಗರ, ಪದ್ಮನಾಭನಗರ, ಬಸವನಗುಡಿ, ಚಿಕ್ಕಪೇಟೆ, ಚಾಮರಾಜ ಪೇಟೆ, ಗಾಂಧಿ ನಗರ, ಮಹಾಲಕ್ಷ್ಮೀ ಲೇಔಟ್, ವಿಜಯನಗರ,
ಗೋವಿಂದರಾಜ ನಗರ, ರಾಜಾಜಿ ನಗರ, ಮಲ್ಲೇಶ್ವರಂ ಕ್ಷೇತ್ರಗಳು ಕವರ್ ಆಗಲಿದೆ.
10 ಲಕ್ಷಕ್ಕೂ ಹೆಚ್ಚಿನ ಮಂದಿ ವೀಕ್ಷಣೆ
ಮೇ 6ರ ಬೆಳಿಗ್ಗೆ ಬೆಂಗಳೂರು ಈಶಾನ್ಯ ಮತ್ತು ಬೆಂಗಳೂರು ಪೂರ್ವ ವಲಯಗಳಲ್ಲಿ ಹಾಗೂ ಮಧ್ಯಾಹ್ನದಿಂದ ರಾತ್ರಿವರೆಗೂ ಬೆಂಗಳೂರು ದಕ್ಷಿಣ ಭಾಗದಲ್ಲಿ ರೋಡ್ ಶೋ ನಡೆಸಲಿದ್ದಾರೆ. ಬೆಂಗಳೂರು ಉತ್ತರ ಭಾಗದಲ್ಲಿನ 5 ಕ್ಷೇತ್ರಗಳಾದ ಮಹದೇವಪುರ, ಕೆಆರ್‌ಪುರಂ, ಸಿವಿ ರಾಮನ್ ನಗರ, ಶಿವಾಜಿನಗರ ಹಾಗು ಶಾಂತಿನಗರ 3 ಗಂಟೆಗಳ ಕಾಲ ರೋಡ್ ಶೋ ನಡೆಸಲಿದ್ದಾರೆ.
1 ಗಂಟೆಗೆ ರೋಡ್ ಶೋ ಮುಕ್ತಾಯವಾದ ನಂತರ ರಾಜಭವನದಲ್ಲಿ ಕೆಲ ಕಾಲ ವಿಶ್ರಾಂತಿ ಪಡೆಯಲಿದ್ದಾರೆ. ನಂತರ 2ನೇ ಸುತ್ತಿನ ರೋಡ್ ಶೋವನ್ನು ಮಧ್ಯಾಹ್ನ ಗಂಟೆಯ ನಂತರ ಆರಂಭಿಸಲಿದ್ದಾರೆ. 3 ಗಂಟೆಗೆ ಬ್ರಿಗೇಡ್ ಮಿಲೇನಿಯಂನಿಂದ ಆರಂಭವಾಗೋ ರ‍್ಯಾಲಿ ಸುಮಾರು 8.30ಕ್ಕೆ ಸ್ಯಾಂಕಿ ಕೆರೆ ಬಳಿ ಅಂತ್ಯವಾಗಲಿದೆ.
2ನೇ ರೋಡ್ ಶೋನಲ್ಲಿ, ಐದೂವರೆ ಗಂಟೆಗಳಲ್ಲಿ 13 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡಲಿದ್ದಾರೆ. ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ, ಜಯನಗರ, ಪದ್ಮನಾಭನಗರ, ಬಸವನಗುಡಿ, ಚಿಕ್ಕಪೇಟೆ, ಚಾಮರಾಜಪೇಟೆ, ಗಾಂಧಿನಗರ, ಮಹಾಲಕ್ಷ್ಮೀಲೇಔಟ್, ವಿಜಯನಗರ, ಗೋವಿಂದರಾಜನಗರ, ರಾಜಾಜಿನಗರ, ಮಲ್ಲೇಶ್ವರಂ ಕ್ಷೇತ್ರಗಳಲ್ಲಿ ರೋಡ್ ಶೋ ನಡೆಯಲಿದೆ.
ರೋಡ್ ಶೋನಿಂದ ಸಿಲಿಕಾನ್ ಸಿಟಿ ಮಂದಿಗೆ ಕಿರಿಕಿರಿ ಖಚಿತ
ಮೋದಿ ರೋಡ್ ಶೋನಿಂದ ನಗರದ ಪೊಲೀಸರಿಗೆ ಟಾಸ್ಕ್ ಹೆಚ್ಚಲಿದೆ, ಜನರಿಗೆ ಕಿರಿಕಿರಿ ಆಗೋದೂ ಖಚಿತ. ಸಾಮಾನ್ಯವಾಗಿಯೇ ಬೆಂಗಳೂರು ಟ್ರಾಫಿಕ್ ಸಿಟಿ ಆಗೋಗಿದೆ. ಹೀಗಿರೋವಾಗ ಮೋದಿ ರೋಡ್ ಶೋನಿಂದ ಟ್ರಾಫಿಕ್ ಲೆಕ್ಕಾಚಾರ ಬುಡಮೇಲಾಗೋದಂತೂ ಕಟ್ಟಿಟ್ಟಬುತ್ತಿಯಾಗಿದೆ.
ಕೆಲವೇ ದಿನಗಳ ಹಿಂದಷ್ಟೇ ಕೇವಲ ಅರ್ಧ ಗಂಟೆಗಳ ಕಾಲ ಸುಮ್ಮನಹಳ್ಳಿ ಬಳಿ ನಡೆದ ರೋಡ್ ಶೋನಿಂದಾಗಿಯೇ ನಾಲ್ಕಾರು ಗಂಟೆಗಳ ಕಾಲ ಟ್ರಾಫಿಕ್ ಸಮಸ್ಯೆಯಾಗಿತ್ತು. ಮದುವೆಗೆ ಹೋಗಬೇಕಿದ್ದ ವಧುವರರಿಗೆ, ಆಸ್ಪತ್ರೆಗಳಿಗೆ ಹೋಗಬೇಕಿದ್ದ ಗರ್ಭಿಣಿಯರಿಗೂ ತೀವ್ರ ಸಮಸ್ಯೆ ಎದುರಾಗಿತ್ತು. ಆದ್ರೆ ಮೇ 6ರಂದು ಇಡೀ ಬೆಂಗಳೂರೇ ಸ್ತಬ್ಧವಾಗೋ ಸಾಧ್ಯತೆಯಿದ್ದು, ಅದನ್ನು ಪೊಲೀಸರು ಹೇಗೆ ನಿಭಾಯಿಸುತ್ತಾರೆ ಅನ್ನುವುದೇ ಪ್ರಶ್ನೆಯಾಗಿದೆ.
ಇದನ್ನೂ ಓದಿ : Karnataka Election 2023: ಬಿಜೆಪಿ ದಿಗ್ಗಜರಿಂದ ಎಲೆಕ್ಷನ್ ಕ್ಯಾಂಪೇನ್; 3 ದಿನದ ಮೋದಿ ಮೆಗಾ ರೋಡ್ ಶೋ ಎಲ್ಲೆಲ್ಲಿ?