ಬೆಂಗಳೂರು: ಮೇ 7ರಂದು ವೈದ್ಯಕೀಯ ಶಿಕ್ಷಣ ಪ್ರವೇಶ ಪರೀಕ್ಷೆ (NEET) ನಡೆಯಲಿರುವುದರಿಂದ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರ ರೋಡ್ ಶೋನಲ್ಲಿ ಬದಲಾವಣೆ ಮಾಡಲಾಗಿದೆ. ಭಾನುವಾರ ಈ ಹಿಂದೆ ನಿಗದಿಯಾಗಿದ್ದ ಸಮಯ ಬೆಳಗ್ಗೆ 10 ಗಂಟೆಯಿಂದ 1.30ರ ಬದಲು 10 ಗಂಟೆಗೆ ಆರಂಭಿಸಿ 11.30ಕ್ಕೇ ರೋಡ್ ಶೋ ಮುಗಿಸಲಾಗುವುದು ಎಂದು ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ (Shobha Karandlaje) ಮತ್ತು ಸಂಸದ ತೇಜಸ್ವಿ ಸೂರ್ಯ ತಿಳಿಸಿದರು. ಇದೇ ವೇಳೆ, ಕಾಂಗ್ರೆಸ್‌ನವರು ಪ್ರಧಾನಿ ರೋಡ್ ಶೋ ನಡುವೆ ಆಂಬ್ಯುಲೆನ್ಸ್ ನುಗ್ಗಿಸುವ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದೂ ಆರೋಪಿಸಿದರು.
ಮೋದಿ ರೋಡ್ ಶೋ ದಿನ, ಸಮಯ ಮತ್ತು ದಾರಿ ಬದಲಾವಣೆಗೆ ಸಂಬಂಧಿಸಿ ಮಾಹಿತಿ ನೀಡಲು ಬಿಜೆಪಿ ಕಚೇರಿಯಲ್ಲಿ ಕರೆದ ಮಾಧ್ಯಮ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ʻಗುರುವಾರದ ಮಾಧ್ಯಮಗೋಷ್ಠಿಯಲ್ಲಿ ಮೇ 6 ಮತ್ತು 7ರಂದು ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ನಡೆಯಲಿದೆ ಎಂದು ಪ್ರಕಟಿಸಿದ್ದೆವು. ಮೇ 7ರಂದು ನೀಟ್ ಪರೀಕ್ಷೆ ಇರುವುದರಿಂದ ರೋಡ್ ಶೋನಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದೆ. ನೀಟ್ ಪರೀಕ್ಷೆ ಇರುವ ಬಗ್ಗೆ ಮೋದಿ ಅವರಿಗೆ ಮಾಹಿತಿ ಕೊಡಲಾಗಿತ್ತು. ಆಗ ಅವರು ಒಬ್ಬ ವಿದ್ಯಾರ್ಥಿಗೂ ತೊಂದರೆ ಆಗಬರದು, ನಮ್ಮ ಕಾರ್ಯಕರ್ತರಿಗೆ ತೊಂದರೆ ಆದರೂ ಪರವಾಗಿಲ್ಲ ಎಂದು ಹೇಳಿದರು. ಮೋದಿ ಅವರು ವಿದ್ಯಾರ್ಥಿಗಳ ಬಗ್ಗೆ ಅಪಾರ ಕಾಳಜಿ ಉಳ್ಳವರು. ಪರೀಕ್ಷಾ ಪೇ ಚರ್ಚಾ ನಡೆಸಿದ್ದಾರೆ. ರೋಡ್ ಶೋನಿಂದ ಒಬ್ಬ ವಿದ್ಯಾರ್ಥಿಗೂ ತೊಂದರೆಯಾಗಬಾರದು, ದಿನ ಬದಲಾವಣೆ ಮಾಡಿ ಎಂದು ಹೇಳಿದರು. ಹೀಗಾಗಿ ಬದಲಾವಣೆ ಮಾಡಿದ್ದೇವೆʼʼ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.
ʻʻಹೀಗಾಗಿ ಭಾನುವಾರ ನಡೆಯಬೇಕಿದ್ದ 30 ಕಿಲೋಮೀಟರ್‌ಗಳ ರೋಡ್ ಶೋವನ್ನು ಶನಿವಾರ ನಡೆಸುತ್ತಿದ್ದೇವೆ. ಇದರಲ್ಲಿ ನಾಲ್ಕು ಕಿಲೋ ಮೀಟರ್ ಕಡಿತ ಮಾಡಿ 26 ಕಿಲೋಮೀಟರ್ ಸೀಮಿತಗೊಳಿಸಿದ್ದೇವೆ. ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದಿಂದ ಆರಂಭವಾಗಲಿರುವ ರೋಡ್ ಶೋ ಮಲ್ಲೇಶ್ವರಂನಲ್ಲಿ ಅಂತ್ಯವಾಗಲಿದೆ ಎಂದು ಶೋಭಾ ಕರಂದ್ಲಾಜೆ ವಿವರಿಸಿದರು.
ಶನಿವಾರ ಮತ್ತು ಭಾನುವಾರದ ಕಾರ್ಯಕ್ರಮ ಅದಲುಬದಲು
ಹಿಂದಿನ ವೇಳಾಪಟ್ಟಿಯಂತೆ -ಮೇ 6ರಂದು ಶನಿವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ಹೊಸ ತಿಪ್ಪಸಂದ್ರದ ಕೆಂಪೇಗೌಡ ಪ್ರತಿಮೆಯಿಂದ ಹೊರಟು ಬ್ರಿಗೇಡ್ ರಸ್ತೆಯ ಯುದ್ಧ ಸ್ಮಾರಕದವರೆಗೆ ರೋಡ್ ಶೋ ಇತ್ತು. ಇದು ಸಣ್ಣ ಅಂತರ. ಈಗ ಈ ರೋಡ್ ಶೋವನ್ನು ಭಾನುವಾರಕ್ಕೆ ಶಿಫ್ಟ್ ಮಾಡಲಾಗಿದೆ. ಸಮಯ ಬೆಳಗ್ಗೆ 10 ಗಂಟೆಯಿಂದ 11.30ರವರೆಗೆ ಮಾತ್ರ.
ಮೇ 7ರಂದು ನೀಟ್ ಪರೀಕ್ಷೆ ಇರುವುದರಿಂದ 8 ಕಿಲೋ ಮೀಟರ್ ರೋಡ್ ಶೋ ನಡೆಸಲಾಗುತ್ತದೆ. ಬೆಳಗ್ಗೆ 10 ಗಂಟೆಗೆ ಆರಂಭವಾಗಿ 11.30ಕ್ಕೆ ಮುಕ್ತಾಯವಾಗಲಿದೆ.
ಹಿಂದಿನ ವೇಳಾಪಟ್ಟಿಯಂತೆ ಮೇ 7ರಂದು ಭಾನುವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ರೋಡ್ ಶೋ ಬ್ರಿಗೇಡ್ ರಸ್ತೆಯ ಯುದ್ಧ ಸ್ಮಾರಕದಿಂದ ಹೊರಟು ಮಲ್ಲೇಶ್ವರದ ಸ್ಯಾಂಕಿ ಕೆರೆವರೆಗೆ ರೋಡ್ ಶೋ ಆಯೋಜಿಸಲಾಗಿತ್ತು. ಅದನ್ನು ಈಗ ಶನಿವಾರಕ್ಕೆ ಶಿಫ್ಟ್ ಮಾಡಲಾಗಿದೆ. ಸಮಯ ಕೂಡಾ ಬೆಳಗ್ಗೆ 10 ಗಂಟೆಯಿಂದ 12.30ರವರೆಗೆ ಸೀಮಿತವಾಗಿದೆ.
ಮಕ್ಕಳಿಗೆ ಸಮಸ್ಯೆ ಆಗದಂತೆ ನೋಡಿಕೊಳ್ತೀವಿ
ಭಾನುವಾರ ನಡೆಯುವ ನೀಟ್ ಪರೀಕ್ಷೆಗೆ ಹೋಗುವ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ. ಭಾನುವಾರ ರೋಡ್ ಶೋ ನಡೆಯುವ ರೂಟ್ ನಲ್ಲಿ ಕಡಿಮೆ ಪರೀಕ್ಷಾ ಕೇಂದ್ರಗಳಿವೆ. ಒಂದು ವೇಳೆ ಯಾರಾದರೂ ಬೇಗನೆ ಪರೀಕ್ಷಾ ಕೇಂದ್ರಕ್ಕೆ ಹೋಗುವುದಿದ್ದರೂ ವಿದ್ಯಾರ್ಥಿಗಳು ಹಾಲ್ ಟಿಕೆಟ್ ತೋರಿಸಿದರೆ ಪೊಲೀಸರು ಪರೀಕ್ಷಾ ಕೇಂದ್ರಕ್ಕೆ ಹೋಗಲು ಅವಕಾಶ ನೀಡಲಿದ್ದಾರೆ. ಪೊಲೀಸರಿಗೆ ಸಹಕರಿಸುವಂತೆ ಸೂಚನೆ ಕೊಡಲಾಗಿದೆ ಎಂದು ಶೋಭಾ ಹೇಳಿದರು.
ಆಂಬ್ಯುಲೆನ್ಸ್ ಬಿಟ್ಟು ಷಡ್ಯಂತ್ರ ಮಾಡುತ್ತಾ ಕಾಂಗ್ರೆಸ್?
ಈ ನಡುವೆ, ಕಾಂಗ್ರೆಸ್ ಮೋದಿ ರೋಡ್ ಶೋ ಬಗ್ಗೆ ಅಪಪ್ರಚಾರ ಮಾಡುತ್ತಿದೆ. ರೋಡ್ ಶೋನಿಂದ ಸಾರ್ವಜನಿಕರಿಗೆ ಭಾರಿ ತೊಂದರೆಯಾಗುತ್ತಿದೆ ಎಂದು ಬಿಂಬಿಸುವುದಕ್ಕಾಗಿ ಕಾಂಗ್ರೆಸ್‌ನವರು ಕೆಲವೊಂದು ಕಡೆ ರೋಡ್ ಶೋ ಮಧ್ಯೆ ಆಂಬ್ಯುಲೆನ್ಸ್ ನುಗ್ಗಿಸುವ ಸಂಚು ನಡೆಸಿದೆ ಎಂದು ಶೋಭಾ ಆರೋಪಿಸಿದರು.
ʻʻಯಾವುದೇ ಆಂಬ್ಯುಲೆನ್ಸ್‌ಗೂ ಭಂಗ ಮಾಡದೆ ಹೋಗಲು ಅವಕಾಶ ಇದೆ. ಆದರೆ ಆಂಬ್ಯುಲೆನ್ಸ್‌ಗಳಲ್ಲಿ ರೋಗಿ ಇದಾರಾ, ಇಲ್ವಾ ಅಂತ ತಪಾಸಣೆ ಮಾಡುವಂತೆ ಪೊಲೀಸರಿಗೆ ಸೂಚಿಸಲಾಗಿದೆʼʼ ಎಂದು ಶೋಭಾ ಹೇಳಿದರು.
ಇದನ್ನೂ ಓದಿ : Karnataka Election : ಬಜರಂಗ ಗಲಾಟೆ ನಡುವೆ ಮೋದಿ ಪತ್ನಿ ವಿಷಯ ಪ್ರಸ್ತಾಪ; ಎಲ್ಲಿ ಬಿಟ್ಟಿದ್ದೀರಿ ಎಂದು ಪ್ರಶ್ನಿಸಿದ ಉಗ್ರಪ್ಪ