ಬೆಂಗಳೂರು: ಭಾರತದಲ್ಲಿ ಪ್ರತಿದಿನ ಆರು ಕೋಟಿ ಜನರು ಪೆಟ್ರೋಲ್ ಪಂಪ್‌ಗಳಲ್ಲಿ ಇಂಧನ ಭರಿಸಿಕೊಳ್ಳುತ್ತಿದ್ದು, ಜಾಗತಿಕ ಇಂಧನ ದರ ಏರಿಳಿಕೆಯಿಂದ ಜನಸಾಮಾನ್ಯರಿಗೆ ತೊಂದರೆ ಆಗದಂತೆ ತಡೆಯುವುದು ಸರ್ಕಾರದ ಗುರಿಯಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದರು. ಬೆಂಗಳೂರಿನ ಹೊರವಲಯದ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ (BIEC) ಭಾರತ ಇಂಧನ ಸಪ್ತಾಹ (India Energy Week) ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಇದು ಭಾರತದ ಮೊಟ್ಟ ಮೊದಲ ಸಮಗ್ರ ಇಂಧನ ಕಾರ್ಯಕ್ರಮ. ಎಲ್ಲ ರೀತಿಯ ಇಂಧನ ರೀತಿಗಳನ್ನೂ ಒಳಗೊಂಡಿರುವ ಈ ಕಾರ್ಯಕ್ರಮವು ಮುಂಬರುವ ಜಿ20 ಸಮ್ಮೇಳನದ ಪ್ರಮುಖ ಭಾಗವಾಗಿದೆ. ಭಾರತದ ಇಂಧನ ಭದ್ರತೆಯನ್ನು ಅಮೃತ ಕಾಲದಲ್ಲಿ ಕಾಪಾಡುತ್ತದೆ. 21ನೇ ಶತಮಾನದ ಜಾಗತಿಕ ಆರ್ಥಿಕತೆಯಲ್ಲಿ ಭಾರತದ ಶಕ್ತಿಯನ್ನು ತೋರ್ಪಡಿಸಲು ಬಹುಮುಖ್ಯವಾಗುತ್ತದೆ. ಭಾರತದಲ್ಲಿ ದಿನವೊಂದಕ್ಕೆ 6 ಕೋಟಿ ಜನರು ಪೆಟ್ರೋಲ್ ಪಂಪ್‌ಗಳಿಗೆ ಭೇಟಿ ನೀಡುತ್ತಾರೆ. ಜಾಗತಿಕ ಏರಿಳಿತಗಳನ್ನು ಲೆಕ್ಕಿಸದೆ, ದರದಿಂದ ಜನಸಾಮಾನ್ಯರಿಗೆ ಆಗುವ ತೊಂದರೆಯನ್ನು ತಗ್ಗಿಸಬೇಕಾಗಿದೆ. ಕಡಿಮೆ ದರದಲ್ಲಿ ಇಂಧನ ಸಿಗುವಂತೆ ಮಾಡುವುದು ನಮ್ಮ ಗುರಿ. ಮಾಲಿನ್ಯವನ್ನು 2030ರ ವೇಳೆಗ ಅತ್ಯಂತ ಕಡಿಮೆ ಮಾಡುವ ಗುರಿಯತ್ತ ಸಾಗಿದೆ.
ಭಾರತವು ಎನರ್ಜಿ ಅಂಜೆಂಡಾ ಸಿದ್ಧಪಡಿಸಿಕೊಂಡಿದೆ. ತೈಲ ಮತ್ತು ಅನಿಲದ ಪ್ರಾಮುಖ್ಯತೆಯನ್ನು ಅರಿತಿದ್ದೇವೆ ಹಾಗೂ ಭವಿಷ್ಯದ ಇಂಧನಗಳ ಕುರಿತೂ ಗಮನಹರಿಸಿದ್ದೇವೆ. ದೇಸಿ ಹೈಡ್ರೊ ಕಾರ್ನ್ ಉತ್ಪದನೆಯತ್ತಲೂ ಗಮನ ನೀಡುತ್ತಿದ್ದೇವೆ ಎಂದರು.
ನವೀಕೃತ ಇಂಧನದಲ್ಲಿ ಮುಂದೆ
ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಬೆಂಗಳೂರಿನಲ್ಲಿ ಭಾರತ ಇಂಧನ ಸಪ್ತಾಹ ಆಯೋಜನೆ ಮಾಡುತ್ತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಜೀವನದ ಪ್ರತಿ ಹಂತದಲ್ಲೂ ಅನೇಕ ಬದಲಾವಣೆಗಳು ಆಗುತ್ತಿವೆ. ಜೀವನದ ವ್ಯಾಖ್ಯಾನವೇ ಬದಲಾಗುತ್ತಿದೆ. ಹೊಸ ಗುರಿಗಳನ್ನು ನಿಗದಿಪಡಿಸಿಕೊಳ್ಳುವಂತೆ, ಹೊಸ ಮಾರ್ಗದಲ್ಲೂ ಪ್ರಯತ್ನಿಸಬೇಕು.
ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಇಂಧನ ಕ್ಷೇತ್ರದಲ್ಲಿ ನರೇಂದ್ರ ಮೋದಿಯವರು ಸಾಕಷ್ಟು ಬದಲಾವಣೆ ಮಾಡಿದ್ದರು. ಅದೇ ಅನುಭವದ ಆಧಾರದಲ್ಲಿ ದೇಶದ ಇಂಧನ ಕ್ಷೇತ್ರದಲ್ಲೂ ಸ್ಥಿತ್ಯಂತರ ಮಾಡಿದ್ದಾರೆ. ಶೂನ್ಯ ಮಾಲಿನ್ಯದ ಕಡೆಗೆ ಪ್ರಧಾನಿಯವರ ಬದ್ಧತೆಯು ವ್ಯಕ್ತವಾಗುತ್ತಿದೆ. ಈ ಬದಲಾವಣೆಯಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ. ಕರ್ನಾಟಕವು ಅತಿ ಹೆಚ್ಚು ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಮೊದಲ ರಾಜ್ಯವಾಗಿದೆ. ನಮ್ಮ ಅಗತ್ಯತೆಯ ಶೇ.50 ವಿದ್ಯುತ್ತನ್ನು ನವೀಕರಿಸಬಹುದಾದ ಇಂಧನದಿಂದ ಪಡೆಯುತ್ತಿದ್ದೇವೆ. ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ, ಐದು ಕೋಟಿ ರೂ.ಗಿಂತಲೂ ಹೆಚ್ಚು ಹೂಡಿಕೆಯನ್ನು ನವೀಕರಿಸಬಹುದಾದ ಹಾಗೂ ಹಸಿರು ಇಂದನ ಕ್ಷೇತ್ರಕ್ಕೆ ನಿರೀಕ್ಷಿಸಲಾಗಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು ವಿದ್ಯುತ್ ಚಾಲಿತ ವಾಹನಗಳಿವೆ. ಅದಕ್ಕಾಗಿಗೇ ಇವಿ ನೀತಿಯನ್ನು ರೂಪಿಸಿದ್ದೇವೆ.
ಜೈವಿಕ ಇಂಧನ ಕ್ಷೇತ್ರದಲ್ಲೂ ಕರ್ನಾಟಕ ಮುಂದಿದೆ. ಅತಿ ಹೆಚ್ಚು ಸಕ್ಕರೆ ಕಾರ್ಖಾನೆಗಳಿರುವುದರಿಂದ ಎಥೆನಾಲ್ ಉದ್ಯಮದಲ್ಲಿ ಮುಂದಿದ್ದೇವೆ. ಉದ್ಯಮಿ ವಿಜಯ್ ನಿರಾಣಿಯವರು ಅತಿ ಹೆಚ್ಚು ಎಥೆನಾಲ್ ಉತ್ಪಾದನೆ ಮಾಡುತ್ತಿದ್ದಾರೆ. 2025ರ ವೇಳೆಗೆ 25% ಎಥೆನಾಲ್ ಮಿಶ್ರಣದತ್ತ ಸಾಗುತ್ತಿದ್ದೇವೆ.