ಶಿವಮೊಗ್ಗ: ಸುಡಾನ್‌ನಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ (Sudan Violence) ಸಿಲುಕಿ ಕೊನೆಗೆ ಭಾರತ ಸರ್ಕಾರ ನಡೆಸಿದ ಆಪರೇಷನ್ ಕಾವೇರಿ (Operation cauvery) ಕಾರ್ಯಾಚರಣೆಯಿಂದಾಗಿ ರಕ್ಷಿಸಲ್ಪಟ್ಟ ಮಲೆನಾಡು ಭಾಗದ ಹಕ್ಕಿಪಿಕ್ಕಿ ಜನಾಂಗದ (Hakkipikki community) ಜನರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾನುವಾರ ಧನ್ಯವಾದ ಹೇಳಿದರು.
ಶಿವಮೊಗ್ಗದ ಆಯನೂರಿನಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಲು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿದ್ದ ಮೋದಿ ಅವರು ಅಲ್ಲಿ ಸುಡಾನ್‌ನಿಂದ ರಕ್ಷಿಸಲ್ಪಟ್ಟ ಜನರೊಂದಿಗೆ ಸಂವಾದ ನಡೆಸಿದರು.
ಶಿವಮೊಗ್ಗ, ದಾವಣಗೆರೆ ಜಿಲ್ಲೆಯ 40ಕ್ಕೂ ಹೆಚ್ಚು ಅದಿವಾಸಿ ಬುಡಕಟ್ಟು ಸಮುದಾಯವರಾದ ಹಕ್ಕಿಪಿಕ್ಕಿ ಜನಾಂಗದವರು ವಿಮಾನ ನಿಲ್ದಾಣದಲ್ಲಿ ಮೋದಿ ಅವರಿಗಾಗಿ ಕಾದು ಕುಳಿತಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಅವರನ್ನು ಭೇಟಿ ಮಾಡಿ ಕುಶಲೋಕಪರಿ ವಿಚಾರಿಸಿದರು.
ಎಷ್ಟು ವರ್ಷದಿಂದ ಸುಡಾನ್‌ಗೆ ಹೋಗುತ್ತಿದ್ದೀರಿ, ಅಲ್ಲಿ ಹೇಗೆ ವಾಸಿಸುತ್ತೀರಿ, ಆವತ್ತು ಏನಾಯಿತು ಎಂದೆಲ್ಲ ಪ್ರಶ್ನೆಗಳನ್ನು ಕೇಳಿದ ಪ್ರಧಾನಿಯವರು ಉತ್ತರಗಳನ್ನು ಪಡೆದುಕೊಂಡರು. ಆವತ್ತು ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಂಡಾಗಲೂ ನಮ್ಮನ್ನು ಭಾರತ ಸರ್ಕಾರ ರಕ್ಷಣೆ ಮಾಡುತ್ತದೆ, ಡಬಲ್ ಎಂಜಿನ್ ಸರ್ಕಾರ ನಮ್ಮನ್ನು ಕಾಪಾಡುತ್ತದೆ ಎಂಬ ನಂಬಿಕೆ ತಮಗಿತ್ತು ಎಂದು ಅಲ್ಲಿದ್ದವರ ಪ್ರತಿನಿಧಿಯಾಗಿ ಒಬ್ಬರು ಹೇಳಿದಾಗ ಮೋದಿ ಖುಷಿಯಾದರು.
ಜಗತ್ತಿನ ಯಾವುದೇ ಭಾಗದಲ್ಲಾದರೂ ಸರಿ, ಭಾರತೀಯರು ಸಂಕಷ್ಟದಲ್ಲಿದ್ದರೆ ಅವರ ರಕ್ಷಣೆಗೆ ಸರ್ಕಾರ ಕಟಿಬದ್ಧವಾಗಿರುತ್ತದೆ ಎಂದು ಅವರು ಘೋಷಿಸಿದರು ಪ್ರಧಾನಿ ಮೋದಿ. ಹಕ್ಕಿಪಿಕ್ಕಿ ಸಮುದಾಯದವರ ಜೊತೆ ಮಾತನಾಡುತ್ತಾ ಅವರು ಹಾಡಿದ ಹಾಡು ಕೇಳುತ್ತಾ ಖುಷಿಯಾದರು.
ಹಕ್ಕಿಪಿಕ್ಕಿ ಜನಾಂಗದ ಸಾಹಿತಿಯಾಗಿರುವ ಕುಮುದ ಅವರ ಪುತ್ರಿ ರಾಜೇಶ್ವರಿ ಅವರು ʻಹಕ್ಕಿಪಿಕ್ಕಿಯರ ಇತಿಹಾಸ – ಹುಡುಕಾಟ ಮತ್ತು ಮಂಡನೆʼ ಎಂಬ ಪುಸ್ತಕವನ್ನು ಉಡುಗೊರೆಯಾಗಿ ಮೋದಿಯವರಿಗೆ ನೀಡಿದರು.
ಮೋದಿ ಸೀರೆ ಉಟ್ಟು ಬಂದು ಗಮನ ಸೆಳೆದ ಗೃಹಿಣಿ
ಶಿವಮೊಗ್ಗದ ಆಯನೂರಿನಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿದ್ದ ಸುಷ್ಮಾ ಸುರೇಶ್ ಶೆಣೈ ಅವರು ಮೋದಿ ಸೀರೆ ಉಟ್ಟು ಗಮನ ಸೆಳೆದರು. ಇವತ್ತು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾದ ಅವರು ತಮಗೆ ಭಾರಿ ಖುಷಿಯಾಗಿದೆ ಎಂದು ಹೇಳಿದರು. ಎರಡು ವರ್ಷದ ಹಿಂದೆ ಗುಜರಾತ್‌ನಿಂದ ತರಿಸಿಕೊಂಡಿದ್ದ ಸೀರೆ ಇದು ಎಂದರು.
ಈಶ್ವರಪ್ಪ ಮತ್ತು ಬಿಎಸ್‌ವೈ ಜತೆ ಆತ್ಮೀಯ ನಡೆ
ಶಿವಮೊಗ್ಗ ಸಮಾವೇಶದಲ್ಲಿ ನರೇಂದ್ರ ಮೋದಿ ಅವರು ಬಿ.ಎಸ್. ಯಡಿಯೂರಪ್ಪ ಮತ್ತು ಕೆ.ಎಸ್. ಈಶ್ವರಪ್ಪ ಅವರ ಜತೆ ಆತ್ಮೀಯವಾಗಿ ನಡೆದುಕೊಂಡರು. ಬಿ.ಎಸ್ ಯಡಿಯೂರಪ್ಪ ಅವರನ್ನು ಕೈಹಿಡಿದು ಗೌರವಿಸಿದ ಅವರು ಈಶ್ವರಪ್ಪ ಅವರ ಬೆನ್ನು ತಟ್ಟಿದರು. ಇಬ್ಬರು ನಾಯಕರು ಖುಷಿಯಿಂದ ಮೋದಿ ಅವರ ಅಭಿನಂದನೆ ಸ್ವೀಕರಿಸಿದರು. ಸಮಾರಂಭದಲ್ಲಿ ಮಾತನಾಡುವ ವೇಳೆ ಕೂಡಾ ಮೋದಿ ಅವರು ಯಡಿಯೂರಪ್ಪ ಅವರನ್ನು ಪದೇಪದೆ ಉಲ್ಲೇಖಿಸಿದರು.
ಇದನ್ನೂ ಓದಿ : Karnataka Election 2023: ರಾಜ್ಯದಲ್ಲಿ ಬಿಜೆಪಿ ಸರ್ಕಾರದಿಂದ ಪ್ರತಿ ವರ್ಷ 13 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ ಎಂದ ಪ್ರಧಾನಿ ಮೋದಿ