ಮೈಸೂರು: ನರೇಂದ್ರ ಮೋದಿ (Modi in Karnataka) ಅವರು ಈ ದೇಶ ಕಂಡ ಅತ್ಯಂತ ಯಶಸ್ವಿ ಪ್ರಧಾನಮಂತ್ರಿ ಎಂದು ಹಾಡಿಹೊಗಳಿರುವ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು, ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಈ ಇಳಿ ವಯಸ್ಸಿನಲ್ಲೂ ತಾವು ರಾಜ್ಯದೆಲ್ಲೆಡೆ ಪ್ರಚಾರ ಮಾಡಲು ಸಿದ್ಧ ಎಂದು ಸಾರಿದ್ದಾರೆ.
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಭಾನುವಾರ ಸಂಜೆ ನಡೆದ ವಿಜಯ ಸಂಕಲ್ಪ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರೇ ನೀವು ಎಲ್ಲಿ ಕರೆದರೂ ನಾನು ಪ್ರಚಾರಕ್ಕೆ ಬರುತ್ತೇನೆ. ನರೇಂದ್ರ ಮೋದಿ ಅವರೇ, ಈ ರಾಜ್ಯದಿಂದ ಕನಿಷ್ಠ 24 ಸ್ಥಾನಗಳನ್ನು ಎನ್‌ಡಿಎದಿಂದ ಗೆದ್ದು ನಿಮಗೆ ಕೊಡುತ್ತೇವೆ. ಈ ದೇಶವನ್ನು ಆರ್ಥಿಕವಾಗಿ ಐದನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ತರುವ ನಿಮ್ಮ ಸಂಕಲ್ಪವನ್ನು ನನಸು ಮಾಡುವ ಸಂಬಂಧ ರಾಜ್ಯದಲ್ಲಿ ಹೆಚ್ಚಿನ ಸೀಟುಗಳನ್ನು ನಿಮಗೆ ಉಡುಗೊರೆಯಾಗಿ ಕೊಡುತ್ತೇವೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಭರವಸೆ ನೀಡಿದರು.
ಇದನ್ನೂ ಓದಿ | BJP Manifesto: 5 ವರ್ಷ ಉಚಿತ ಪಡಿತರ, ಹಿರಿಯರಿಗೆ ಉಚಿತ ಚಿಕಿತ್ಸೆ; ಇಲ್ಲಿವೆ ಮೋದಿ ಗ್ಯಾರಂಟಿಗಳು
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಭಾನುವಾರ ಸಂಜೆ ಏರ್ಪಡಿಸಲಾಗಿದ್ದ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ದೇವೇಗೌಡರು, 140 ಕೋಟಿ ಜನರನ್ನು ಪ್ರತಿನಿಧಿಸುವ ನರೇಂದ್ರ ಮೋದಿಯಂಥ ಧೀಮಂತ ಪ್ರಧಾನಿಯ ಬಗ್ಗೆ ಹಗುರವಾಗಿ ಮಾತನಾಡುವ ಸಿಎಂ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು.
ರಾಜ್ಯದಲ್ಲಿ ಜೆಡಿಎಸ್ ಕೇವಲ ಮೂರು ಕ್ಷೇತ್ರಗಳಲ್ಲಿ ನಿಂತಿರಬಹುದು. ಆದರೆ 28ಕ್ಕೆ 28 ಕ್ಷೇತ್ರದಲ್ಲೂ ಜೆಡಿಎಸ್ ಅಭ್ಯರ್ಥಿಗಳಿದ್ದಾರೆ ಎಂಬ ಭಾವನೆಯಿಂದಲೇ ನಾವು ಪ್ರಚಾರ ಮಾಡಿ ಮೋದಿಯವರ ಗೆಲುವಿಗೆ ಶಕ್ತಿ ಮೀರಿ ಪ್ರಯತ್ನಿಸುತೇವೆ ಎಂದರು. ನನ್ನ ಮನವಿಯನ್ನು ಕರ್ನಾಟಕದ ಎಲ್ಲ ಜನತೆಯೂ ಮಾನ್ಯ ಮಾಡಬೇಕು ಎಂದು ಮನವಿ ಮಾಡಿದರು.
ಬಿಜೆಪಿಗೆ ಬೆಂಬಲ ನನ್ನದೇ ನಿರ್ಧಾರ
ನಾನು ಕಳೆದ 60 ವರ್ಷಗಳಿಂದ ರಾಜಕೀಯ ರಂಗದಲ್ಲಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯುತ್ತಮ ಆಡಳಿತವನ್ನು ನಡೆಸಿಕೊಂಡು ಬರುತ್ತಿದ್ದಾರೆ. ನಾನು ನನ್ನ ಈ 91ನೇ ವಯಸ್ಸಿನಲ್ಲಿ, ಎನ್‌ಡಿಎ ಜತೆ ಮೈತ್ರಿ ಮಾಡಿಕೊಳ್ಳುವಂತೆ ಎಚ್.ಡಿ. ಕುಮಾರಸ್ವಾಮಿಗೆ ಹೇಳಿದೆ. ದುಷ್ಟ ಕಾಂಗ್ರೆಸ್ ಅನ್ನು ಅಧಿಕಾರದಿಂದ ಹೊರಗಿಡಬೇಕು, ಮೋದಿಯಂಥ ದಕ್ಷ ಪ್ರಧಾನಿ ಆಡಳಿತ ಈ ದೇಶಕ್ಕೆ ಇನ್ನೂ ಬೇಕು ಎನ್ನುವುದು ನನ್ನ ಉದ್ದೇಶ. ಈ ದೇಶದ ಅಭಿವೃದ್ಧಿಯಾಗಬೇಕಾದರೆ ಎನ್‌ಡಿಎ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು. ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕು. ಆ ಕಾರಣಕ್ಕಾಗಿಯೇ ನಾನು ಈ ಬಾರಿ ಅವರೊಂದಿಗೆ ಕೈಜೋಡಿಸಿದ್ದೇನೆ ಎಂದು ಎಚ್.ಡಿ. ದೇವೇಗೌಡ ಹೇಳಿದರು.
ಇದನ್ನೂ ಓದಿ | BJP Manifesto: ಯುಸಿಸಿ, ಒಂದು ಚುನಾವಣೆ, ವಿಶ್ವಸಂಸ್ಥೆ ಕಾಯಂ ಸ್ಥಾನ; ಮೋದಿ ಗ್ಯಾರಂಟಿಗಳ ಪಟ್ಟಿ ಇಲ್ಲಿದೆ
ವೇದಿಕೆಯಲ್ಲಿ ಜೆಡಿಎಸ್ ನಾಯಕರಾದ ಎಚ್ ಡಿ ಕುಮಾರಸ್ವಾಮಿ ಮತ್ತು ಎಚ್ ಡಿ ರೇವಣ್ಣ ಅವರು ನರೇಂದ್ರ ಮೋದಿ ಜತೆ ಆತ್ಮೀಯವಾಗಿ ಬಹಳ ಹೊತ್ತು ಮಾತನಾಡಿದ್ದು ಗಮನ ಸೆಳೆಯಿತು.