ಬೆಂಗಳೂರು : ಎರಡು ದಿನಗಳ ಕಾಲ ಕರ್ನಾಟಕಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ (Modi In Karnataka) ಸೋಮವಾರ ಬೆಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಹಿನ್ನಲೆಯಲ್ಲಿ ಪ್ರಧಾನಿ ಸಂಚರಿಸಲಿರುವ ಪ್ರದೇಶಗಳಲ್ಲಿ ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ.
10 ಸಾವಿರದಷ್ಟು ಪೊಲೀಸ್ ಭದ್ರತೆಯಲ್ಲಿ ಮೋದಿ ಸಂಚಾರ ನಡೆಸಲಿದ್ದಾರೆ. ಇಬ್ಬರು ಹೆಚ್ಚುವರಿ ಆಯುಕ್ತರು, ಇಬ್ಬರು ಜಂಟಿ ಪೊಲೀಸ್ ಆಯುಕ್ತರು, 12 ಡಿಸಿಪಿಗಳು, 30 ಎಸಿಪಿಗಳು, 8೦ ಇನ್ಸ್‌ಪೆಕ್ಟರ್‌ಗಳು ಹಾಗೂ ಕೆಎಸ್‌ಆರ್ ಪಿ, ಸಿಎಆರ್‌ಪಡೆ, ಗರುಡ ಪಡೆಗಳನ್ನ ನಿಯೋಜಿಸಲಾಗಿದೆ. 11:15 ಕ್ಕೆ ಯಲಹಂಕ ವಾಯುನೆಲೆಗೆ ಬಂದಿಳಿಯಲಿರುವ ಮೋದಿ, ಮಲ್ಲೇಶ್ವರಂ ಬಳಿಯಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಗೆ ಮೊದಲಿಗೆ ಆಗಮಿಸಲಿದ್ದಾರೆ.
ಇದನ್ನೂ ಓದಿ | ಪ್ರಧಾನಿ ಮೋದಿಯವರ ಎರಡು ದಿನಗಳ ರಾಜ್ಯ ಪ್ರವಾಸ ಇಂದಿನಿಂದ ಆರಂಭ
ನಂತರ ಜ್ಞಾನ ಭಾರತಿ ಡಾ.ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಾಮಿಕ್ಸ್‌ಗೆ ತೆರಳಿ, ಜ್ಞಾನ ಭಾರತಿಯಿಂದ ಕೆಂಗೇರಿ ಸಮೀಪದ ಕೊಮ್ಮಘಟ್ಟದಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಸೇನಾ ನೇಮಕಾತಿ ಯೋಜನೆಯ ಅಗ್ನಿಪಥ್ ವಿರೋಧಿಸಿ ಕೆಲ ಸಂಘಟನೆಗಳು ಭಾರತ್ ಬಂದ್‌ಗೆ ಕರೆಕೊಟ್ಟಿವೆ. ಈ ಹಿನ್ನೆಲೆಯಲ್ಲಿ ಅಹಿತಕರ ಘಟನೆಗೆ ಅವಕಾಶ ನೀಡದಂತೆ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ನೇತೃತ್ವದಲ್ಲಿ 10 ಸಾವಿರ ಪೊಲೀಸರ ಕಣ್ಗಾವಲಿರಲಿದೆ.
ಮೇಖ್ರಿ ಸರ್ಕಲ್ ಬಳಿಯೇ 1 ಸಾವಿರದಷ್ಟು ಪೊಲೀಸರು ಕ್ರೈಂ ವಿಭಾಗದ ಡಿಸಿಪಿ ಶರಣಪ್ಪ ನೇತೃತ್ವದಲ್ಲಿ ಬಂದೋಬಸ್ತ್ ಕೈಗೊಂಡಿದ್ದಾರೆ. ಸ್ಪೆಷಲ್ ವೆಪನ್ ಟ್ಯಾಕ್ಟಿಸ್ ತಂಡವನ್ನ ಕೂಡ ಬಂದೋಬಸ್ತ್‌ಗೆ ಪೊಲೀಸರು ಬಳಸಿಕೊಳ್ಳುತ್ತಿದ್ದಾರೆ. ಸಾರ್ವಜನಿಕರಿಗೂ ಬ್ಯಾರಿಕೇಡ್ ಹಾಕಿ ಮೋದಿ ಆಗಮನವನ್ನ ನೋಡಲು ಅವಕಾಶ ಮಾಡಿಕೊಡಲು ಪೊಲೀಸರು ಮುಂದಾಗಿದ್ದಾರೆ.
ಸಂಚಾರದಲ್ಲಿ ಬದಲಾವಣೆ
ಬೆಳಿಗ್ಗೆ 11 ರಿಂದ 1 ಗಂಟೆಯವರೆಗೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತೆರಳುವ ಮಾರ್ಗ ಬದಲಾಗುತ್ತದೆ. ನಗರಕ್ಕೆ ಬರುವವರು ಕಾವೇರಿ ಜಂಕ್ಷನ್- ಮೇಖ್ರಿ ಸರ್ಕಲ್ – ಹೆಬ್ಬಾಳ ಫ್ಲೈ ಓವರ್ ಬಳಸದೇ ಬೇರೆ ಮಾರ್ಗವಾಗಿ ಸಾಗಬೇಕು. ತುಮಕೂರು ರಸ್ತೆ-ಕೆಆರ್‌ಪುರ, ಯಶವಂತಪುರ-ಯಲಹಂಕ-ದೇವನಹಳ್ಳಿ ಕಡೆ ಸಾಗುವವರು ಮಾರ್ಗ ಬದಲಾವಣೆ ಮಾಡಬೇಕಾಗುತ್ತದೆ.
ಸಂಚಾರ ನಿಷೇಧ
ಮೈಸೂರು ರಸ್ತೆ ಮತ್ತು ನೈಸ್ ಬ್ರಿಡ್ಜ್ ಕಡೆಯಿಂದ ಕೆಂಗೇರಿ ಹಾಗೂ ಉತ್ತರಹಳ್ಳಿ ರಸ್ತೆ ಕಡೆಯಿಂದ ಕೆಂಗೇರಿ ಮತ್ತು ಮೈಸೂರು ರಸ್ತೆಗೆ ಸಂಚಾರ ನಿರ್ಬಂಧವಾಗಿದೆ. ಬೆಳಗ್ಗೆ 9 ರಿಂದ 6 ಗಂಟೆಯವರೆಗೆ ಮೈಸೂರು-ಬೆಂಗಳೂರು ರಸ್ತೆ ಮತ್ತು ವಿಮಾನ ನಿಲ್ದಾಣ ರಸ್ತೆಯಲ್ಲಿ ಭಾರಿ ವಾಹನ ಸಂಚಾರ ನಿಷೇಧಿಸಲಾಗಿದೆ. ಮಧ್ಯಾಹ್ನ 1 ಗಂಟೆಯಿಂದ 3:30 ರವರೆಗೆ ಕೊಮ್ಮಘಟ್ಟ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನ ಭಾರತಿ ಆವರಣಕ್ಕೆ ಸಾರ್ವಜನಿಕರ ಪ್ರವೇಶವನ್ನ ನಿರ್ಬಂಧಿಸಲಾಗಿದೆ.
ಇದನ್ನೂ ಓದಿ | ಸಾಂಸ್ಕೃತಿಕ ನಗರಿ ಮೈಸೂರಿಗೆ 7ನೇ ಬಾರಿಗೆ ಭೇಟಿ ನೀಡುತ್ತಿರುವ ಪ್ರಧಾನಿ ಮೋದಿ