ಕಲಬುರಗಿ: ಮಹಾರಾಷ್ಟ್ರ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಶುಕ್ರವಾರ ಬೆಳಗ್ಗೆ 9.35ಕ್ಕೆ ಕಲಬುರಗಿಗೆ (Modi Welcomed at Kalburgi) ಆಗಮಿಸಿದರು. ರಾಜ್ಯದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸ್ವಾಗತ ಸ್ವೀಕರಿಸಿದ ಅವರು 9.45ಕ್ಕೆ ಕಲಬುರಗಿಯಿಂದ ವಿಶೇಷ ವಿಮಾನದಲ್ಲಿ ಮಹಾರಾಷ್ಟ್ರದ ಸೋಲಾಪುರಕ್ಕೆ ಪ್ರಯಾಣಿಸಿದರು. ಅವರು ಮತ್ತೆ ಮಧ್ಯಾಹ್ನ 1 ಗಂಟೆಗೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಮರಳಿಬಂದು ಬೆಂಗಳೂರಿಗೆ ಪ್ರಯಾಣಿಸಲಿದ್ದಾರೆ (Modi in Karnataka).
ಸರ್ಕಾರದಿಂದ ಮೋದಿ ಅವರಿಗೆ ಸ್ವಾಗತ, ಬಾರದ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ
ದಿಲ್ಲಿಯಿಂದ ವಾಯು ಸೇನೆಯ ವಿಶೇಷ ವಿಮಾನದಲ್ಲಿ ಬೆಳಗ್ಗೆ 7 ಗಂಟೆಗೆ ಹೊರಟಿದ್ದ ಮೋದಿ ಅವರು ಕಲಬುರಗಿ ವಿಮಾನ ನಿಲ್ದಾಣದಲ್ಲಿ ಬಂದು ಇಳಿದಾಗ ಅವರಿಗೆ ಸರ್ಕಾರ, ಜಿಲ್ಲಾಡಳಿತ ಮತ್ತು ಬಿಜೆಪಿ ವತಿಯಿಂದ ಸ್ವಾಗತ ಕೋರಲಾಯಿತು.
ರಾಜ್ಯ ಸರ್ಕಾರದ ಪರವಾಗಿ ಸಚಿವ ಶರಣಪ್ರಕಾಶ್ ಪಾಟೀಲ್ ಅವರು ಪುಷ್ಪಗುಚ್ಛ ನೀಡಿ ಮೋದಿ ಅವರನ್ನು ಸ್ವಾಗತಿಸಿದರು. ಕೇಂದ್ರ ಸಚಿವ ಭಗವಂತ ಖುಬಾ , ಸಂಸದ ಉಮೇಶ್ ಜಾಧವ್ ಉಪಸ್ಥಿತರಿದ್ದರು. ಜಿಲ್ಲಾಡಳಿತದ ಪರವಾಗಿ ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ಬಿ ತರನ್ನುಮ್, ಎಸ್ ಪಿ ಅಡ್ಡೂರು ಶ್ರೀನಿವಾಸಲು ಕೂಡ ಭಾಗಿಯಾಗಿದ್ದರು.
ಬಳಿಕ ಬಿಜೆಪಿ ವತಿಯಿಂದ ಜಿಲ್ಲಾಧ್ಯಕ್ಷರು, ಬಿಜೆಪಿ ಶಾಸಕ ಬಸವರಾಜ್ ಮತ್ತಿಮೂಡ್ , ಪರಿಷತ್ ಸದಸ್ಯ ಬಿ.ಜಿ ಪಾಟೀಲ್ ಸ್ವಾಗತ ಕೋರಿದರು. ಪ್ರಧಾನಿ ಅವರನ್ನು ಶಾಲು ಹೊದಿಸಿ ಹೂಗುಚ್ಛ ನೀಡಿ ಬರಮಾಡಿಕೊಳ್ಳಲಾಯಿತು.
ಪ್ರಧಾನಿ ಅವರ ಸ್ವಾಗತಕ್ಕೆ ಉಸ್ತುವಾರಿ ಸಚಿವರಾಗಿರುವ ಪ್ರಿಯಾಂಕ್ ಖರ್ಗೆ ಬರುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ, ಅವರ ಬದಲಿಗೆ ಡಾ.ಶರಣಪ್ರಕಾಶ್ ಪಾಟೀಲ್ ಹಾಜರಾಗಿದ್ದರು. ಎಐಸಿಸಿ ಅಧ್ಯ ಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಕ್ಷೇತ್ರವಾಗಿರುವ ಕಲಬುರಗಿಯಲ್ಲಿ ಮೋದಿ ಅವರನ್ನು ಸ್ವಾಗತಿಸಲು ಪ್ರಿಯಾಂಕ್ ಖರ್ಗೆ ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ.
ಸೊಲ್ಲಾಪುರದತ್ತ ಮೋದಿ ಪಯಣ
ಕಲಬುರಗಿಯಿಂದ ಮೋದಿ ಅವರು ವಿಶೇಷ ಸೇನಾ ಹೆಲಿಕಾಪ್ಟರ್ ಮೂಲಕ ಸೋಲ್ಲಾಪುರದತ್ತ ಪಯಣ ಬೆಳೆಸಿದ್ದಾರೆ. ಸೊಲ್ಲಾಪುರದಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿರುವ ಅವರು ಮಧ್ಯಾಹ್ನ 12:10ಕ್ಕೆ ಹೆಲಿಕಾಪ್ಟರ್ ಮೂಲಕ ಸೋಲಾಪುರದಿಂದ ನಿರ್ಗಮಿಸಿ, ಮಧ್ಯಾಹ್ನ 1 ಗಂಟೆಗೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಮಧ್ಯಾಹ್ನ 1:05 ಕ್ಕೆ ವಿಶೇಷ ವಿಮಾನದ ಮೂಲಕ ಕಲಬುರಗಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.
ಮುಂದಿನ ಕಾರ್ಯಕ್ರಮಗಳೇನು?
ಮಧ್ಯಾಹ್ನ 2:10 ಕ್ಕೆ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುವರು. 2:15ಕ್ಕೆ ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗವಾಗಿ ದೇವನಹಳ್ಳಿ ತಾಲೂಕಿನ ಮಾರನಹಳ್ಳಿಗೆ 2:45 ಕ್ಕೆ ತಲುಪಲಿದ್ದಾರೆ. ಅಲ್ಲಿ ಬಿಐಇಟಿಸಿ ಉದ್ಘಾಟನೆ ಮತ್ತು ಬೋಯಿಂಗ್ ಸುಕನ್ಯಾ ಕಾರ್ಯಕ್ರಮ ಲೋಕಾರ್ಪಣೆ ಮಾಡಲಿದ್ದಾರೆ. ಕಾರ್ಯಕ್ರಮ ಮುಗಿಸಿ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಸಂಜೆ 4ಕ್ಕೆ ತಮಿಳುನಾಡು ಕಡೆಗೆ ನಿರ್ಗಮಿಸುವರು.
ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ನಡೆಯುವ ಖೇಲೋ ಇಂಡಿಯಾ ಯೂತ್ ಗೇಮ್ಸ್ ಗೆ ಸಂಜೆ ಸಂಜೆ 6 ಗಂಟೆಗೆ ತಮಿಳುನಾಡಿನ ಚೆನ್ನೈನಲ್ಲಿ ಚಾಲನೆ ನೀಡುವರು.
ಸೋಲಾಪುರದಲ್ಲಿ ಏನೇನು ಕಾರ್ಯಕ್ರಮ?
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸೋಲಾಪುರದಲ್ಲಿ 2000 ಕೋಟಿ ರೂ. ವೆಚ್ಚದ ಎಂಟು ಅಮೃತ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಇದೇ ವೇಳೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಿರ್ಮಾಣವಾಗಿರುವ ಸುಮಾರು 90 ಸಾವಿರ ಮನೆಗಳನ್ನು ಅವರು ಹಸ್ತಾಂತರಿಸಲಿದ್ದಾರೆ. ಜತೆಗೆ ರಾಯನಗರ ಹೌಸಿಂಗ್ ಸೊಸೈಟಿ ಸೋಲಾಪುರದಲ್ಲಿ ನಿರ್ಮಿಸಿರುವ 15,000 ಮನೆಗಳನ್ನು ಕೂಡಾ ಹಸ್ತಾಂತರಿಸುವರು. ಕೈಮಗ್ಗ ಕಾರ್ಮಿಕರು, ವ್ಯಾಪಾರಿಗಳು, ವಿದ್ಯುತ್ ಮಗ್ಗ ಕಾರ್ಮಿಕರು, ಗುಜರಿ ಹೆಕ್ಕುವವರು, ಬೀಡಿ ಕಾರ್ಮಿಕರು, ಚಾಲಕರು ಇದರ ಮಾಲೀಕರಾಗಲಿದ್ದಾರೆ. ಮೋದಿ ಅವರು ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯ ಎರಡನೇ ಕಂತನ್ನು 10 ಸಾವಿರ ಫಲಾನುಭವಿಗಳಿಗೆ ವಿತರಿಸಲಿದ್ದಾರೆ.
ಬೆಂಗಳೂರಿನಲ್ಲಿ ಏನೇನು ಕಾರ್ಯಕ್ರಮ?
ಬೆಂಗಳೂರಿನ ದೇವನಹಳ್ಳಿ ಸಮೀಪ ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಸೆಂಟರ್ (BIETC) ಕ್ಯಾಂಪಸನ್ನು ಮೋದಿ ಅವರು ಉದ್ಘಾಟಿಸಲಿದ್ದಾರೆ. ಇದು ಸುಮಾರು 1600 ವೆಚ್ಚದಲ್ಲಿ 43 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಕ್ಯಾಂಪಸ್ ಆಗಿದೆ. ಅಮೆರಿಕವನ್ನು ಹೊರತುಪಡಿಸಿ ಬೇರೆ ದೇಶದಲ್ಲಿ ನಿರ್ಮಾಣವಾದ ಅತಿ ದೊಡ್ಡ ಕ್ಯಾಂಪಸ್ ಇದು. ಇದು ಸ್ಟಾರ್ಟಪ್‌ಗಳಿಗೆ ಪ್ರೋತ್ಸಾಹ ನೀಡುವ ಒಂದು ವಿಶೇಷ ವ್ಯವಸ್ಥೆಯಾಗಲಿದೆ. ಮುಂದಿನ ಪೀಳಿಗೆಯ ಉತ್ಪನ್ನಗಳು, ಜಾಗತಿಕ ಏರೋಸ್ಪೇಸ್ ಮತ್ತು ರಕ್ಷಣಾ ಉದ್ಯಮಗಳಿಗೆ ಬೇಕಾಗುವ ಸೇವೆಗಳಿಗೆ ಅನುಕೂಲವಾಗುವ ಸ್ಟಾರ್ಟಪ್‌ಗಳು ಇಲ್ಲಿ ತೆರೆದುಕೊಳ್ಳಲಿವೆ.
ಬೋಯಿಂಗ್ ಸುಕನ್ಯಾ ಯೋಜನೆ ಉದ್ಘಾಟನೆ
ಪ್ರಧಾನಿ ಮೋದಿ ಅವರು ಇದೇ ಕಾರ್ಯಕ್ರಮದಲ್ಲಿ ಬೋಯಿಂಗ್ ಸುಕನ್ಯಾ ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಇದು ಹೆಚ್ಚು ಹೆಚ್ಚು ಹೆಣ್ಮಕ್ಕಳು ರಾಷ್ಟ್ರದಲ್ಲಿ ಬೆಳೆಯುತ್ತಿರುವ ವಿಮಾನಯಾನ ಕ್ಷೇತ್ರಕ್ಕೆ ಪ್ರವೇಶಿಸಲು ಉತ್ತೇಜನ ನೀಡುವ ಕಾರ್ಯಕ್ರಮವಾಗಿದೆ. ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (STEM) ಕ್ಷೇತ್ರಗಳಲ್ಲಿ ಅತ್ಯಂತ ಕಠಿಣವಾದ ಸ್ಕಿಲ್‌ಗಳನ್ನು ಕಲಿಯಲು ಹೆಣ್ಮಕ್ಕಳು ಮತ್ತು ಮಹಿಳೆಯರಿಗೆ ಇಲ್ಲಿ ಅವಕಾಶ ಸಿಗಲಿದೆ. ಹೆಣ್ಮಕ್ಕಳನ್ನು ವಿಮಾನ ಯಾನ ಕ್ಷೇತ್ರದ ನಾನಾ ಉದ್ಯೋಗಗಳಿಗೆ ಸಿದ್ಧಪಡಿಸುವ ಕೆಲಸ ಇಲ್ಲಿ ಆಗಲಿದೆ. ದೇಶದ ಸುಮಾರು 150 ಕಡೆಗಳಲ್ಲಿ STEM ಲ್ಯಾಬ್‌ಗಳನ್ನು ಆರಂಭಿಸಲಾಗುತ್ತಿದ್ದು, ಇವು STEM ಕ್ಷೇತ್ರದಲ್ಲಿ ಮಹಿಳೆಯರು ಆಸಕ್ತರಾಗುವಂತೆ ಮಾಡಲಿದೆ. ಈ ಯೋಜನೆಯ ಅಡಿಯಲ್ಲಿ ಪೈಲಟ್ ಗಳಾಗಲು ತರಬೇತಿ ಪಡೆಯುವ ಮಹಿಳೆಯರಿಗೆ ವಿದ್ಯಾರ್ಥಿ ವೇತನ ಕೂಡಾ ಸಿಗಲಿದೆ.