ಚಾಮರಾಜ ನಗರ: ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 8 ಮತ್ತು 9ರಂದು ಮೈಸೂರು ಮತ್ತು ಚಾಮರಾಜನಗರಕ್ಕೆ ಭೇಟಿ (Modi in Karnataka) ನೀಡಲಿದ್ದು, ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಹುಲಿ ಯೋಜನೆಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅವರು ಇತ್ತೀಚಿನ ಹುಲಿ ಗಣತಿ ವರದಿಯನ್ನು ಸಹ ಬಿಡುಗಡೆ ಮಾಡುವುದು ಪ್ರಧಾನಿಯವರ ಪ್ರಧಾನ ಕಾರ್ಯಕ್ರಮ. ಅದರ ಜತೆಗೆ ಹುಲಿ ಸಂರಕ್ಷಣೆಗಾಗಿ ಸರ್ಕಾರದ ದೃಷ್ಟಿಕೋನ ಮತ್ತು ಕಾರ್ಯಕ್ರಮದ ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡಲಿದ್ದಾರೆ.
ಏಪ್ರಿಲ್ 8ರ ರಾತ್ರಿ 8 ಗಂಟೆಗೆ ಮೈಸೂರಿಗೆ ಬಂದಿಳಿಯಲಿರುವ ಪ್ರಧಾನಿ ಮೋದಿ ಅವರು, ರ‍್ಯಾಡಿಸನ್ ಬ್ಲೂ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಏಪ್ರಿಲ್ 9ರ ಬೆಳಗ್ಗೆ ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಬಂಡೀಪುರಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಬೆಳಗ್ಗೆ 7.30ಕ್ಕೆ ಬಂಡೀಪುರಕ್ಕೆ ಭೇಟಿ ನೀಡಿ ಸಫಾರಿ ಮಾಡಲಿದ್ದಾರೆ. 10 ಗಂಟೆಯ ಸುಮಾರಿ ನೀಲಗಿರೀಸ್‌ಗೆ ಭೇಟಿ ನೀಡಲಿದ್ದು, ಬೆಳಗ್ಗೆ 10.30ರ ಹೊತ್ತಿಗೆ ಮೈಸೂರಿಗೆ ವಾಪಸಾಗಲಿದ್ದಾರೆ.
ಅಲ್ಲಿಂದ ಮುಕ್ತ ವಿವಿ ಘಟಿಕೋತ್ಸವ ಭವನಕ್ಕೆ ಆಗಮಿಸುವ ಅವರು, 11 ಗಂಟೆಗೆ ಹುಲಿ ಯೋಜನೆಯ ಐವತ್ತನೇ ವರ್ಷದ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 12.30ಕ್ಕೆ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ಜೀಪ್‌ನಲ್ಲಿ ಹುಲಿ ಸಫಾರಿ
ಪ್ರಧಾನಿ ಮೋದಿ ಅವರು ಜೀಪ್‌ನಲ್ಲಿ ಕುಳಿತು ಸುಮಾರು ಎರಡು ಗಂಟೆ ಕಾಲ ಹುಲಿ ಸಫಾರಿ ನಡೆಸಲಿದ್ದಾರೆ. ಬಂಡೀಪುರ ಉದ್ಯಾನದಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಜತೆ ಅವರು ಮಾತುಕತೆ ನಡೆಸಲಿದ್ದಾರೆ. ಬಳಿಕ ಮೋದಿ ಅವರು ತಮಿಳುನಾಡಿನಲ್ಲಿರುವ ತೆಪ್ಪ ಕಾಡು ಆನೆ ಶಿಬಿರಕ್ಕೆ ಭೇಟಿ ನೀಡಲಿದ್ದಾರೆ. ಇಲ್ಲಿ ಆಸ್ಕರ್ ಪ್ರಶಸ್ತಿ ವಿಜೇತ ಡಾಕ್ಯುಮೆಂಟರಿ ಚಿತ್ರ ಎಲಿಫೆಂಟ್ ವಿಸ್ಪರರ್ಸ್‌ನ ಹೀರೊಗಳಾದ ಬೊಮ್ಮನ್ ಮತ್ತು ಬೆಳ್ಳಿ ಅವರ ಜತೆ ಮೋದಿ ಮಾತನಾಡಲಿದ್ದಾರೆ.
ಏಪ್ರಿಲ್ 6ರಿಂದಲೇ ಸಫಾರಿ ಬಂದ್
ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 9ರಂದು ಬಂಡೀಪುರಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಬಂಡೀಪುರದಲ್ಲಿ ಏಪ್ರಿಲ್ 6ರಿಂದಲೇ ಸಫಾರಿ ಬಂದ್ ಆಗಲಿದೆ. ಇದರ ಜತೆಗೆ ಬಂಡೀಪುರ ವ್ಯಾಪ್ತಿಯ ಎಲ್ಲಾ ಹೋಂ ಸ್ಟೇ, ರೆಸಾರ್ಟ್, ಲಾಡ್ಜ್ ಗಳು ಸಹ ಬಂದ್ ಆಗಲಿವೆ ಎಂದು ಚಾಮರಾಜ ನಗರ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಆದೇಶ ಹೊರಡಿಸಿದ್ದಾರೆ.
ಏ.6 ರಿಂದ 9 ರವರಗೆ ಪ್ರವಾಸಿಗರಿಗೆ ಸಫಾರಿ, ಬಂಡೀಪುರ ವ್ಯಾಪ್ತಿಯ ಎಲ್ಲಾ ಹೋಂಸ್ಟೇ, ರೆಸಾರ್ಟ್, ಲಾಡ್ಜ್ ಗಳಲ್ಲಿ ಪ್ರವಾಸಿಗರ ವಾಸ್ತವ್ಯಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ತಿಳಿಸಲಾಗಿದೆ.
ಆರೋಪ ಹೊತ್ತ ಅಧಿಕಾರಿ ವೇದಿಕೆಯಲ್ಲಿ ಬೇಡ
ಈ ನಡುವೆ ಭ್ರಷ್ಟಾಚಾರ ಆರೋಪ ಹೊತ್ತ ಬಂಡೀಪುರ ಅರಣ್ಯಸಂರಕ್ಷಣಾಧಿಕಾರಿ ರಮೇಶ್ ಕುಮಾರ್ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ವೇದಿಕೆ ಹಂಚಿಕೊಳ್ಳುವುದಕ್ಕೆ ಅವಕಾಶ ನೀಡಬಾರದು ಎಂದು ಆಮ್ ಆದ್ಮಿ ಪಾರ್ಟಿ ಹೇಳಿದೆ.
ರಮೇಶ್ ಕುಮಾರ್ ವಿರುದ್ಧ ಇಲಾಖಾ ತನಿಖೆ ನಡೆಯುತ್ತಿದೆ. ರಮೇಶ್ ಭ್ರಷ್ಟಾಚಾರದ ಆರೋಪ ಹೊತ್ತ ಅಧಿಕಾರಿ. ಆರೋಪ ಹೊತ್ತ ಅಧಿಕಾರಿ ಪ್ರಧಾನಿ ಸ್ವಾಗತ ಮಾಡಿದರೆ ತಪ್ಪು ಸಂದೇಶ ಹೋಗುತ್ತದೆ. ರಮೇಶ್ ಕುಮಾರ್ ಅವರನ್ನು ಅಮಾನತಿನಲ್ಲಿಟ್ಟು ಕಾರ್ಯಕ್ರಮ ಮಾಡಲಿ ಎಂದು ಚಾಮರಾಜ ನಗರ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಡಾ.ಗುರುಪ್ರಸಾದ್ ಆಗ್ರಹಿಸಿದ್ದಾರೆ.
ಇದರ ಜತೆ ಪ್ರಧಾನಿ ಭೇಟಿಯೇ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ. ಚುನಾವಣಾ ಸಂದರ್ಭದಲ್ಲಿ ಪ್ರಧಾನಿ ಭೇಟಿ ಪ್ರಭಾವ ಬೀರಲಿದೆ. ಹೀಗಾಗಿ ಪ್ರಧಾನಿ ಭೇಟಿಯನ್ನೇ ರದ್ದುಪಡಿಸಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : Tiger Safari: ಬಿಳಿಗಿರಿ ರಂಗನಾಥ ಸ್ವಾಮಿ ಬೆಟ್ಟದಲ್ಲಿ ಕಾಣಿಸಿಕೊಂಡ 3 ಹುಲಿ; ಪ್ರವಾಸಿಗರು ಫುಲ್ ಖುಷ್