ಮಂಡ್ಯ/ಹುಬ್ಬಳ್ಳಿ: ಅನೇಕ ದಿನಗಳಿಂದ ಕರ್ನಾಟಕ ಬಿಜೆಪಿಯಲ್ಲಿ ಕೇಳಿಬರುತ್ತಿರುವ ಪಕ್ಷಾಂತರ ಚರ್ಚೆಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಬ್ರೇಕ್ ಹಾಕಿತೇ ಎಂಬ ಚರ್ಚೆಗಳು ನಡೆಯುತ್ತಿವೆ.
ಮಂಡ್ಯದ ಗೆಜ್ಜಲಗೆರೆಯಲ್ಲಿ ಆಯೋಜನೆ ಮಾಡಿದ್ದ, 12 ಸಾವಿರ ಕೋಟಿ ರೂ. ಮೊತ್ತದ 210 ಕಿಲೋಮೀಟರ್ ಉದ್ದದ ಎರಡು ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆಯನ್ನು ಮೋದಿ ಮಾಡಿದರು. ಈ ಕಾರ್ಯಕ್ರಮದ ವೇದಿಕೆಯಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್, ಸಿಎಂ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ, ಕೊಡಗು ಹಾಗೂ ಮೈಸೂರು ಸಂದ ಪ್ರತಾಪ್ ಸಿಂಹ ಉಪಸ್ಥಿತರಿದ್ದರು.
ಇವರೆಲ್ಲರ ಜತೆಗೆ ವೇದಿಕೆಯಲ್ಲಿದ್ದವರು ಕೆ.ಆರ್. ಪೇಟೆ ಶಾಸಕ ಕೆ.ಸಿ. ನಾರಾಯಣಗೌಡ. ಈ ಕಾರ್ಯಕ್ರಮ ನಡೆದದ್ದು ಮಂಡ್ಯ ವಿಧಾನಸಭೆ ಕ್ಷೇತ್ರದಲ್ಲಿ. ಆ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಕೆ.ಆರ್. ಪೇಟೆ ಹೊರತುಪಡಿಸಿ ಮಂಡ್ಯದ ಉಳಿದ ಎಲ್ಲ ಕ್ಷೇತ್ರಗಳಲ್ಲೂ ಜೆಡಿಎಸ್ ಶಾಸಕರೇ ಇದ್ದಾರೆ. ಕೆ. ಆರ್. ಪೇಟೆ ಶಾಸಕರ ಹೊರತಾಗಿ ಬೇರೆ ಯಾರೂ ವೇದಿಕೆಯಲ್ಲಿರಲಿಲ್ಲ. ನಾರಾಯಣ ಗೌಡ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಾರೆ ಎಂಬ ಮಾತುಗಳು ಇತಚತೀಚೆಗೆ ಬಲವಾಗಿ ಕೇಳಿಬರುತ್ತಿವೆ.
ಕಾರ್ಯಕ್ರಮದಲ್ಲಿ ನಾರಾಯಣಗೌಡರನ್ನು ಜತೆಗೆ ಕೂರಿಸಿಕೊಂಡ ಮೋದಿ, ಅವರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ಹಾಗೂ ಅವರು ಬಿಜೆಪಿಯನ್ನು ತೊರೆಯದಂತೆ ಸಂದೇಶ ನೀಡಿದ್ದಾರೆ, ಮಾತುಕತೆ ನಡೆಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಮಂಡ್ಯದ ಕಾರ್ಯಕ್ರಮದ ನಂತರ ಹುಬ್ಬಳ್ಳಿಯಲ್ಲಿ ಮೋದಿ ಭಾಗವಹಿಸಿದರು. ಐಐಟಿ ಧಾರವಾಡ ಲೋಕಾರ್ಪಣೆ ಸೇರಿ ಅನೇಖ ಯೋಜನೆಗಳಿಗೆ ಚಾಲನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು. ಈ ವೇದಿಕೆಯಲ್ಲಿ ಅಚ್ಚರಿಯೆಂಬಂತೆ ವಸತಿ ಸಚಿವ ವಿ. ಸೋಮಣ್ಣ ಭಾಗವಹಿಸಿದ್ದರು.
ಸೋಮಣ್ಣ ಹಾಗೂ ಇತರೆ ಸಚಿವರ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಿದ್ಧಾರೂಢರ ಪ್ರತಿಮೆಯನ್ನು ಉಡುಗೊರೆಯಾಗಿ ಕೊಡಿಸಲಾಯಿತು. ವಿ. ಸೋಮಣ್ಣ ಕಾಂಗ್ರೆಸ್ ಸೇರುತ್ತಾರೆ ಎಂಬ ಮಾತು ಇತ್ತೀಚೆಗೆ ಕೇಳಿಬರುತ್ತಿದೆ. ಬಿಜೆಪಿಯಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ ಎಂಬ ಕಾರಣಕ್ಕೆ ಹಾಗೂ ಪುತ್ರನಿಗೆ ಟಿಕೆಟ್ ಬೇಕೆಂಬ ಕಾರಣಕ್ಕೆ ಕಾಂಗ್ರೆಸ್ ಸೇರಲಿದ್ದಾರೆ ಎನ್ನಲಾಗಿತ್ತು.
ಸೋಮಣ್ಣ ಅವರ ಮನೆಗೇ ಈ ಹಿಂದೆ ಅಮಿತ್ ಶಾ ತೆರಳಿ ಅರ್ಧ ಗಂಟೆ ಮಾತುಕತೆ ನಡೆಸಿದ್ದರು. ಇದೀಗ ಸ್ವತಃ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಆಹ್ವಾನಿಸಿ ವೇದಿಕೆ ಹಂಚಿಕೊಂಡಿದ್ದಾರೆ. ಈ ಮೂಲಕ ಸೋಮಣ್ಣ ಅವರ ಅಸಮಾಧಾನವನ್ನೂ ತಣಿಸಿ ಪಕ್ಷದಲ್ಲೇ ಉಳಿಯುವಂತೆ ಮಾಡಲಾಗಿದೆ ಎಂಬ ಚರ್ಚೆ ನಡೆಯುತ್ತಿದೆ.
ಇದನ್ನೂ ಓದಿ: V. Somanna: ಕಾಂಗ್ರೆಸ್‌ಗೆ ವಿ. ಸೋಮಣ್ಣ ಸೇರುವುದು ಬೇಡವೇ ಬೇಡ: ವೀರಶೈವ ಲಿಂಗಾಯತ ಮುಖಂಡರ ಒತ್ತಾಯ