ಮೈಸೂರು: ಭಾರತೀಯ ಸಂಸ್ಕೃತಿಯ ಮೂಲದಲ್ಲೇ ಪರಿಸರ ಸಂರಕ್ಷಣೆಯ ಭಾವವಿದ್ದು, ಇದೇ ಕಾರಣಕ್ಕೆ ವಿಶ್ವದ ಅನೇಕ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಹುಲಿ ಸಂಖ್ಯೆ ಕಡಿಮೆ ಆಗುತ್ತಿದ್ದರೆ ಭಾರತದಲ್ಲಿ ದುಪ್ಪಟ್ಟಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ಭಾರತದಲ್ಲಿ ಪ್ರಾಜೆಕ್ಟ್ ಟೈಗರ್ ಯೋಜನೆಯ ಆರಂಭದ ಐವತ್ತನೇ ವರ್ಷದ ಸಂಭ್ರಮದ ಸಲುವಾಗಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಿದ ನಂತರ ಮೈಸೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಮಾತನಾಡಿದರು.
ನಮ್ಮ ಕುಟುಂಬದ ವೃದ್ಧಿಯಾಗುತ್ತಿದೆ, ಇದಕ್ಕಾಗಿ ಎಲ್ಲರೂ ಎದ್ದು ನಿಂತು ಚಪ್ಪಾಳೆ ಮೂಲಕ ಹುಲಿಯನ್ನು ಅಭಿನಂದಿಸಬೇಕು ಎಂದು ಪ್ರಧಾನಿ ಹೇಳಿದರು. ಭಾರತವು ಹುಲಿಯನ್ನು ಕೇವಲ ಉಳಿಸಿಲ್ಲ, ಅದು ಮತ್ತಷ್ಟು ಬೆಳೆಯಲು ಉತ್ತಮ ವಾತಾವರಣ ನಿರ್ಮಾಣ ಮಾಡಿದೆ.
ಸ್ವಾತಂತ್ರ್ಯದ 75ನೇ ವರ್ಷವನ್ನು ಪೂರೈಸುತ್ತಿರುವ ಸಮಯದಲ್ಲೇ ವಿಶ್ವದ ಶೇ.70 ಹುಲಿ ಸಂತತಿ ಭಾರತದಲ್ಲೇ ಇರುವುದು ಸಂತಸದ ವಿಚಾರ. ಹುಲಿ ಸಂರಕ್ಷಿತ ಪ್ರದೇಶವೂ ಭಾರತದಲ್ಲೇ ಹೆಚ್ಚಿದೆ. ಈ ಪ್ರಯತ್ನಕ್ಕಾಗಿ ಇಡೀ ದೇಶವನ್ನು ಅಭಿನಂದಿಸುತ್ತೇನೆ ಎಂದರು.
ವಿಶ್ವದ ಅನೇಕ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಅಷ್ಟೇ ಇದೆ ಹಾಗೂ ಕಡಿಮೆ ಆಗುತ್ತಿದೆ. ಆದರೆ ಭಾರತದಲ್ಲಿ ಮಾತ್ರ ಹೆಚ್ಚುತ್ತಿರುವುದಕ್ಕೆ ಕಾರಣ ಏನು ಎಂದು ಅನೇಕರು ಅಚ್ಚರಿಪಡುತ್ತಿದ್ದಾರೆ. ಭಾರತದ ಆಂತರ್ಯದಲ್ಲೇ ಪ್ರಕೃತಿ ಸಂರಕ್ಷಣೆಯ ಸ್ವಭಾವವಿದೆ. ಆರ್ಥಿಕತೆ ಹಾಗೂ ಪರಿಸರ ಸಂರಕ್ಷಣೆಯಲ್ಲಿ ನಮಗೆ ಸಂಘರ್ಷ ಇಲ್ಲ.
ಮಧ್ಯಪ್ರದೇಶ, ಕೇಂದ್ರೀಯ ಭಾರತದ ಭಾರ್ಯ, ಮಹಾರಾಷ್ಟ್ರದ ವರ್ಲಿಯಂತಹ ಅನೇಕ ಸಮುದಾಯಗಳು ಹುಲಿಯನ್ನು ಪೂಜಿಸುತ್ತವೆ. ನಮ್ಮ ಅನೇಕ ಜನಜಾತಿಗಳಲ್ಲಿ ಹುಲಿಯನ್ನು ಬಂಧು, ಸಹೋದರ ಎಂದು ಭಾವಿಸಲಾಗುತ್ತದೆ. ದುರ್ಗಾ ಮಾತೆ ಹಾಗೂ ಅಯ್ಯಪ್ಪನ ವಾಹನವೇ ಆಗಿವೆ.
ಪರಿಸರ ಸಂರಕ್ಷಣೆಯು ಭಾರತದ ಸಂಸ್ಕೃತಿಯ ಅವಿಭಾಜ್ಯ ಅಂಗ. ವಿಶ್ವದ ಕೇವಲ ಶೇ.2.4 ರಷ್ಟು ಮಾತ್ರ ಭೂಮಿ ಹೊಂದಿರುವ ಭಾರತವು ವಿಶ್ವದ ಶೇ.8ವೈವಿಧ್ಯತೆಯನ್ನು ಹೊಂದಿದೆ. ವನ್ಯಜೀವಿಗಳಷ್ಟೆ ಅಲ್ಲದೆ, ವೃಕ್ಷಗಳ ಪ್ರಮಾಣದಲ್ಲೂ ಏರಿಕೆ ಆಗುತ್ತಿದೆ. ಕಳೆದ 10 ವರ್ಷದಲ್ಲಿ ಸಮುದಾಯ ಸಂರಕ್ಷಿತ ಪ್ರದೇಶಗಳ ಸಂಖ್ಯೆ 43ರಿಂದ 100ಕ್ಕೆ ಏರಿದೆ.
ಗುಜರಾತ್‌ನ ನನ್ನ ಅನುಭವವೂ ನನಗೆ ಲಭ್ಯವಾಗಿದೆ. ಗುಜರಾತ್‌ನಲ್ಲಿ ಸಿಂಹಗಳ ಸಂರಕ್ಷಣೆ ಮೇಲೆ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಕೆಲಸ ಮಾಡಿದ್ದೆ. ಕೇವಲ ಒಂದು ಗಡಿಯನ್ನು ನಿರ್ಮಿಸಿ ಸಂರಕ್ಷಣೆ ಮಾಡಲಾಗುವುದಿಲ್ಲ. ಸ್ಥಳೀಯ ಜನರು ಹಾಗೂ ವನ್ಯಜೀವಿಗಳ ಜತೆಗೆ ಒಂದು ಸಂಬಂಧವನ್ನು ಏರ್ಪಡಿಸಬೇಕಾಗುತ್ತದೆ ಎನ್ನುವುದು ಆಗ ತಿಳಿಯಿತು. ಸಿಂಹವಿದ್ದರೆ ಮಾತ್ರ ನಾವು, ನಾವಿದ್ದರೆ ಮಾತ್ರ ಸಿಂಹ ಎಂಬ ಭಾವನೆಯನ್ನು ಮೂಡಿಸಿದ್ದರಿಂದ ಸಾಕಷ್ಟು ಸಫಲತೆ ಸಿಕ್ಕಿದೆ.
ಪ್ರಾಜೆಕ್ಟ್ ಟೈಗರ್‌ನಿಂದಲೂ ಅನೇಕ ಲಾಭಗಳಾಗಿವೆ. ಇದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಯಿತು, ಸ್ಥಳೀಯ ಆರ್ಥಿಕತೆಗೆ ಶಕ್ತಿ ಸಿಕ್ಕಿತು, ಮಾನವ-ಪ್ರಾಣಿ ಸಂಘರ್ಷವೂ ಕಡಿಮೆಯಾಯಿತು. ವನ್ಯಜೀವಿ ಸಂರಕ್ಷಣೆಗೆ ಅಂತಾರಾಷ್ಟ್ರೀಯ ಸಹಕಾರದ ಅವಶ್ಯಕತೆಯಿರುತ್ತದೆ. ಇದಕ್ಕೆ ಪ್ರಾಜೆಕ್ಟ್ ಚೀತಾ ಉದಾಹರಣೆ.
ವಿದೇಶದಿಂದ ಆಗಮಿಸಿರುವ ಅತಿಥಿಗಳು ಇನ್ನೊಂದು ಲಾಭ ಪಡೆಯಬಹುದು. ಸಹ್ಯಾದ್ರಿಯ ತಪ್ಪಲಿನಲ್ಲಿ, ಪಶ್ಚಿಮ ಘಟ್ಟದಲ್ಲಿ ಅನೇಕ ಬುಡಕಟ್ಟು ಸಮುದಾಯಗಳು ವಾಸಿಸುತ್ತವೆ. ಪರಿಸರ ಸಂರಕ್ಷಣೆಯನ್ನು ಹೇಗೆ ಮಾಡುತ್ತಿದ್ದಾರೆ ಎನ್ನುವುದು ಅವರನ್ನು ನೋಡುವುದರಿಂದ ತಿಳಿಯುತ್ತದೆ. ಪರಿಸರ ಹಾಗೂ ಪ್ರಾಣಿಯ ನಡುವಿನ ಅದ್ಭುತ ಸಂಬಂಧವನ್ನು ಎಲಿಫೆಂಟ್ ವಿಸ್ಪರರ್ಸ್ ಸಾಕ್ಷ್ಯಚಿತ್ರದಿಂದ ತಿಳಿಯುತ್ತದೆ. ಅಂತಹ ಸಿನಿಮಾಕ್ಕೆ ಆಸ್ಕರ್ ಲಭಿಸಿರುವುದು ಸಂತಸದ ವಿಚಾರ. ಇಂತಹ ಅನೇಕ ವಿಚಾರಗಳನ್ನು ಇಲ್ಲಿಂದ ಪಡೆದು ಹೋಗಬೇಕು ಎಂದು ಮನವಿ ಮಾಡಿದರು.
ಕೇಂದ್ರ ಸಚಿವ ಭೂಪೇಂದ್ರ ಯಾದವ್ ಮಾತನಾಡಿ, 9 ಕಡೆಗಳಲ್ಲಿ ಹುಲಿ ಸಂರಕ್ಷಣೆ ಆರಂಭವಾಗಿದ್ದು ಇದೀಗ 53 ಕಡೆಗಳಲ್ಲಿ ನಡೆಯುತ್ತಿದೆ. ಇದೀಗ 23 ಹುಲಿ ಸಂರಕ್ಷಿತ ಪ್ರದೇಶಗಳಿಗೆ ಅಂತಾರಾಷ್ಟ್ರೀಯ ಮಾನ್ಯತೆ ಸಿಕ್ಕಿದೆ. ವಿಶ್ವದ ಶೇ.70 ಹುಲಿಗಳು ಭಾರತದಲ್ಲಿ ವಾಸಿಸುತ್ತಿವೆ ಎನ್ನುವುದು ನಮಗೆ ಹೆಮ್ಮೆ. ಪ್ರಧಾನಿಯವರ ನೇತೃತ್ವದಲ್ಲಿ ಪ್ರಾಜೆಕ್ಟ್ ಚೀತಾ ಆರಂಭಿಸಿರುವುದಕ್ಕೆ ವಿಶ್ವಾದ್ಯಂತ ಶ್ಲಾಘನೆ ವ್ಯಕ್ತವಾಗಿದೆ. ಹುಲಿ ಸಂರಕ್ಷಿತ ಪ್ರದೇಶಗಳಿಂದ ಅನೇಕ ನದಿಗಳು ಉಗಮವಾಗುತ್ತಿದ್ದು, ಹುಲಿ ಸಂರಕ್ಷಣೆಯ ಜತೆಗೆ ನದಿಗಳ ಸಂರಕ್ಷಣೆಯೂ ಆಗುತ್ತಿದೆ ಎಂದರು.
ಇದನ್ನೂ ಓದಿ: Modi in Karnataka: ಬಂಡೀಪುರ ಕಾಡಲ್ಲಿ 22 ಕೀ.ಮೀ. ದೂರ 2 ಗಂಟೆ ಸುತ್ತಿದರೂ ಮೋದಿಗೆ ಕಾಣದ ಹುಲಿ!