Site icon Vistara News

Modi security lapse : ಮೋದಿ ರೋಡ್‌ ಶೋ ವೇಳೆ ಭದ್ರತಾಲೋಪ; ಬ್ಯಾರಿಕೇಡ್‌ ಹಾರಿ ನುಗ್ಗಿದ ಯುವಕ, ಪೊಲೀಸರಿಂದ ತಡೆ

security lapse

#image_title

ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸುವ ಕಾರ್ಯಕ್ರಮಗಳಲ್ಲಿ (Modi in Karnataka) ಭದ್ರತೆ ಎಷ್ಟೇ ಬಿಗಿಯಾಗಿದ್ದರೂ ಕೆಲವೊಂದು ಸಣ್ಣಪುಟ್ಟ ಭದ್ರತಾ ಉಲ್ಲಂಘನೆ (Modi security lapse) ಘಟನೆಗಳು ನಡೆಯುತ್ತಲೇ ಇರುತ್ತವೆ. ಕಳೆದ ಜನವರಿಯಲ್ಲಿ ಮೋದಿ ಹುಬ್ಬಳ್ಳಿಗೆ ಬಂದಿದ್ದಾಗ ಒಬ್ಬ ಪುಟ್ಟ ಬಾಲಕ ಬ್ಯಾರಿಕೇಡ್‌ ದಾಟಿ ಬಂದು ಮೋದಿ ಅವರಿಗೆ ಹೂವು ನೀಡಿದ್ದ. ಬಳಿಕ ಆತನ ಹಿನ್ನೆಲೆ, ತಂದೆ -ತಾಯಿ ವಿವರಗಳನ್ನೆಲ್ಲ ಪರಿಶೀಲಿಸಿ ಯಾವುದೇ ಅಪಾಯವಿಲ್ಲ ಎಂದು ನಿಟ್ಟುಸಿರು ಬಿಟ್ಟಿದ್ದರು ಪೊಲೀಸರು.

ಶನಿವಾರ ದಾವಣಗೆರೆಯಲ್ಲಿ ನಡೆದ ಬಿಜೆಪಿಯ ಬೃಹತ್‌ ಸಮಾವೇಶದ ಸಂದರ್ಭದಲ್ಲೂ ಇದೇ ಮಾದರಿಯ ಅಚಾತುರ್ಯವೊಂದು ನಡೆದಿದೆ. ಪ್ರಧಾನಿ ಮೋದಿ ಅವರು ಬೃಹತ್‌ ಪೆಂಡಾಲ್‌ನ ಸುತ್ತ ವಾಹನದಲ್ಲಿ ರೋಡ್‌ ಶೋ ನಡೆಸುತ್ತಿದ್ದರೆ ಯುವಕನೊಬ್ಬ ಬ್ಯಾರಿಕೇರ್‌ ಹಾರಿ ಮೋದಿ ಅವರಿದ್ದ ವಾಹನದತ್ತ ದೌಡಾಯಿಸಿದ್ದ. ಕೂಡಲೇ ಎಚ್ಚೆತ್ತ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.

ರಾಜ್ಯಾದ್ಯಂತ ನಡೆದ ಬಿಜೆಪಿಯ ವಿಜಯ ಸಂಕಲ್ಪ ರಥಯಾತ್ರೆಯ ಸಮಾರೋಪ ಸಮಾರಂಭ ದಾವಣಗೆರೆಯಲ್ಲಿ ಆಯೋಜನೆಯಾಗಿತ್ತು. ಅಲ್ಲಿ ಸುಮಾರು 2 ಲಕ್ಷ ಜನರಿಗೆ ಕುಳಿತುಕೊಳ್ಳಲು ಅವಕಾಶ ನೀಡಲಾಗಿತ್ತು. ಅವರ ಮಧ್ಯೆ ಪ್ರಧಾನಿಯವರು ವಾಹನದ ಮೂಲಕ ರೋಡ್‌ ಶೋ ನಡೆಸಿದರು.

ಹೊರಗಿನ ಆವರಣದಲ್ಲೂ ಲಕ್ಷಾಂತರ ಜನರು ಸೇರಿದ್ದು, ಅವರಿಗೂ ಕೈಬೀಸುವುದಕ್ಕಾಗಿ ಮೋದಿ ಅವರು ಹೊರಾವರಣದಲ್ಲೂ ಒಂದು ಸುತ್ತು ಹೊಡೆದರು. ಆಗ ವೇದಿಕೆಯ ಹಿಂಭಾಗದಲ್ಲಿ ಸಾಕಷ್ಟು ಜನರು ಸೇರಿದ್ದರು. ಅವರು ಮುಂದೆ ಬರಲಾಗದಂತೆ ಬ್ಯಾರಿಕೇಡ್‌ ಅಳವಡಿಸಲಾಯಿತು. ಒಂದು ಹಂತದಲ್ಲಿ ಜನರ ಒತ್ತಡದಿಂದ ಬ್ಯಾರಿಕೇಡ್‌ ಮುರಿದುಬಿತ್ತು. ಆಗ ಒಬ್ಬ ಯುವಕ ಒಳಗೆ ಓಡಿಬಂದಿದ್ದ. ಅಷ್ಟು ಹೊತ್ತಿಗೆ ಸರಿಯಾಗಿ ಮೋದಿ ಅವರ ವಾಹನವೂ ಅದೇ ಜಾಗಕ್ಕೆ ಬಂದಿತ್ತು. ಇದರಿಂದ ಸ್ವಲ್ಪ ಹೊತ್ತು ಆತಂಕ ಸೃಷ್ಟಿಯಾಯಿತು. ಕೂಡಲೇ ಅಲ್ಲಿದ್ದ ಪೊಲೀಸರು ಯುವಕನನ್ನು ಹಿಡಿದುಕೊಂಡರು. ಬಳಿಕ ಆತನ ಹಿನ್ನೆಲೆಯನ್ನು ವಿಚಾರಿಸಿ ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದೆ.

ಭದ್ರತಾ ಲೋಪ ಆಗಿಲ್ಲ ಎಂದ ದಾವಣಗೆರೆ ಎಸ್ಪಿ

ಈ ಘಟನೆಯ ಬಗ್ಗೆ ದಾವಣಗೆರೆಯ ಎಸ್ಪಿ ರಿಷ್ಯಂತ್‌ ಅವರು ಪ್ರತಿಕ್ರಿಯಿಸಿ ಈ ಘಟನೆಯನ್ನು ಭದ್ರತಾ ಲೋಪ ಎನ್ನುವ ಹಾಗಿಲ್ಲ ಎಂದಿದ್ದಾರೆ. ಹಾಗೇನಾದರು ಇದ್ದಿದ್ದರೆ ಎಸ್‌ಪಿಜಿಯವರು ನಮ್ಮ ಗಮನಕ್ಕೆ ತರುತ್ತಿದ್ದರು ಎಂದು ಹೇಳಿದ್ದಾರೆ.

ದೊಡ್ಡ ಗುಂಪು ಬ್ಯಾರಿಕೇಡ್‌ ಮುರಿದ ಪರಿಣಾಮ ವ್ಯಕ್ತಿ ಮೋದಿಯತ್ತ ನುಗ್ಗಿದ್ದ. ಇದನ್ನು ಭದ್ರತಾ ಲೋಪ ಎನ್ನುವ ಹಾಗಿಲ್ಲ. ವ್ಯಕ್ತಿಯನ್ನು ಅಲ್ಲಿಂದ ಹೊರಗೆ ಹಾಕಲಾಗಿದೆ. ಅವನನ್ನು ಯಾವುದೇ ರೀತಿ ವಿಚಾರಣೆ ಮಾಡಿಲ್ಲ ಎಂದು ರಿಷ್ಯಂತ್‌ ಹೇಳಿದರು.

ಇದನ್ನೂ ಓದಿ : Modi in Karnataka: ದಾವಣಗೆರೆ ಮಹಾ ಸಂಗಮದ ಆವರಣದಲ್ಲೇ ಮೋದಿ ರೋಡ್‌ ಶೋ ನಡೆಸಿದ್ದೇಕೆ?

Exit mobile version