Site icon Vistara News

Modi in Karnataka: ಕಾರ್ಯಕರ್ತನ ಕಪಾಳಕ್ಕೇ ಹೊಡೆದವರು ಜನರಿಗೆ ಗೌರವ ನೀಡುತ್ತಾರಾ?: ಸಿದ್ದು ವಿರುದ್ಧ ಮೋದಿ ವಾಗ್ದಾಳಿ

modi in karnataka Those who slapped the worker do not respect the people said Prime Minister Modi

#image_title

ದಾವಣಗೆರೆ: ಯಾವ ಪಕ್ಷದಲ್ಲಿ ತನ್ನ ಕಾರ್ಯಕರ್ತನಿಗೇ ಗೌರವ ನೀಡದೆ ಕಪಾಳಕ್ಕೆ ಹೊಡೆಯಲಾಗುತ್ತದೆಯೋ ಆ ಪಕ್ಷವು ಜನತಾ ಜನಾರ್ದನನಿಗೆ ಹೇಗೆ ಗೌರವ ನೀಡುತ್ತದೆ? ಎಂದು ಪ್ರಶ್ನಿಸುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಕುರಿತು ಪ್ರಧಾನಿ ನರೇಂದ್ರ ಮೋದಿ (Modi in Karnataka) ವಾಗ್ದಾಳಿ ನಡೆಸಿದ್ದಾರೆ.

ದಾವಣಗೆರೆಯ ಜಿಎಂಐಟಿ ಮೈದಾನದಲ್ಲಿ ಆಯೋಜಿಸಲಾಗಿದ್ದ ವಿಜಯ ಸಂಕಲ್ಪ ಯಾತ್ರೆ ಮಹಾ ಸಂಗಮ ಕಾರ್ಯಕ್ರಮದಲ್ಲಿ ನೆರೆದಿದ್ದ ಲಕ್ಷಾಂತರ ಕಾರ್ಯಕರ್ತರನ್ನುದ್ದೇಶಿಸಿ ಮೋದಿ ಮಾತನಾಡಿದರು.

ದಾವಣಗೆರೆಯ ನನ್ನ ಸಹೋದರ ಸಹೋದರಿಯರಿಗೆ ನಮಸ್ಕಾರಗಳು. ಕರ್ನಾಟಕದ ನನ್ನ ಬಿಜೆಪಿ ಕಾರ್ಯಕರ್ತ ಬಾಂಧವರಿಗೆ ನಮಸ್ಕಾರಗಳು ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಮೋದಿ, ನನಗೆ ಯಾವಾಗೆಲ್ಲ ದಾವಣಗೆರೆಗೆ ಆಗಮಿಸುವ ಅವಕಾಶ ಸಿಕ್ಕಿದೆಯೋ, ಆಗೆಲ್ಲ ನಿಮ್ಮ ಆಶೀರ್ವಾದ ಹೆಚ್ಚುತ್ತಲೇ ಇದೆ. ಇಂದು ಕಾರ್ಯಕ್ರಮವನ್ನು ಈ ರೀತಿ ರೂಪಿಸಿರುವುದಕ್ಕೆ ಕರ್ನಾಟಕ ಬಿಜೆಪಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ತ್ಯಾಗ, ತಪಸ್ಸಿನಿಂದ ತುಂಬಿರುವ ಜೀವನ ನಡೆಸುತ್ತಿರುವ ನಿಮ್ಮೆಲ್ಲರ ದರ್ಶನ ಮಾಡುವುದು ನನ್ನ ಸೌಭಾಗ್ಯ. ವಿಜಯ ಮಹೋತ್ಸವದಂತೆ ಈ ವಿಜಯ ಸಂಕಲ್ಪ ರ‍್ಯಾಲಿ ಕಾಣುತ್ತಿದೆ. ವಿಶೇಷವೆಂದರೆ, ಒಂದೆಡೆ ವಿಜಯ ಸಂಕಲ್ಪ ರ‍್ಯಾಲಿ ಆಗುತ್ತಿದೆ, ಮತ್ತೊಂದೆಡೆ ಕರ್ನಾಟಕದ ಕಲಬುರ್ಗಿಯಲ್ಲಿ ಎಐಸಿಸಿ ಅಧ್ಯಕ್ಷರ ಕರ್ಮಭೂಮಿಯಲ್ಲಿ ಬಿಜೆಪಿಯ ಮೇಯರ್‌ ಹಾಗೂ ಉಪ ಮೇಯರ್‌ ಆಯ್ಕೆಯಾಗಿದ್ದಾರೆ. ಎಐಸಿಸಿ ಅಧ್ಯಕ್ಷರ ಮನೆಯಲ್ಲಿ ಬಿಜೆಪಿ ವಿಜಯ ಯಾತ್ರೆ ನಡೆಸಿದೆ. ಇದು ವಿಜಯ ಸಂಕಲ್ಪ ಯಾತ್ರೆಯ ಶುಭ ಸಂಕೇತ. ಕರ್ನಾಟಕದಲ್ಲಿ ಬಿಜೆಪಿ ವಿಜಯ ಯಾತ್ರೆ ಆರಂಭವಾಗಿದೆ.

ಅಭಿವೃದ್ಧಿ ಹೊಂದಿದ ಕರ್ನಾಟಕಕ್ಕಾಗಿ ಡಬಲ್‌ ಇಂಜಿನ್‌ ಸರ್ಕಾರಕ್ಕೆ ಕರ್ನಾಟಕದ ಜನರ ಆಶೀರ್ವಾದವಿದೆ. ಇಂದು ಈ ಕಾರ್ಯಕ್ರಮ ನಡೆಯುತ್ತಿರುವ ಸ್ಥಳವು ದಾವಣಗೆರೆ ಹಾಗೂ ಹರಿಹರದ ನಡುವೆ ಇದೆ. ತಾಯಿ ತುಂಗಭದ್ರೆ, ಹರಿಹರೇಶ್ವರರ ಆಶೀರ್ವಾದವಿದೆ. ನಾಲ್ಕು ವಿಜಯ ಸಂಕಲ್ಪ ಯಾತ್ರೆಗಳ ಮಹಾ ಸಂಗಮವಾಗುತ್ತಿದೆ. ಯಾತ್ರೆ ಮಾಡಿ ಬಂದವರ ದರ್ಶನ ಮಾಡಬೇಕು. ಇಂದು ನಿಮ್ಮ ದರ್ಶನ ಮಾಡಿ ನಮಗೂ ಪುಣ್ಯ ಲಭಿಸಿದೆ. ಈ ಸಫಲ ಯಾತ್ರೆಗಳಿಗೆ ಕರ್ನಾಟಕದ ಎಲ್ಲ ಕಾರ್ಯಕರ್ತರಿಗೆ ಅಭಿನಂದನೆಗಳು ಎಂದು ಹೇಳಿದರು.

ನಿರಂತರವಾಗಿ ಈ ಯಾತ್ರೆಗಳ ಕುರಿತು ಮಾಹಿತಿ ಪಡೆಯುತ್ತಿದ್ದೆ. ಈ ಯಾತ್ರೆಗಳಲ್ಲಿ ಲಭಿಸಿರುವ ವಿಶ್ವಾಸ, ಸಮರ್ಥನೆಯು ಅದ್ಭುತವಾಗಿದೆ. ಆದರೆ ನಮ್ಮ ಹೊಣೆ ಈಗ ಆರಂಭವಾಗಿದೆ. ಈ ಯಾತ್ರೆಯಲ್ಲಿ ಸಿಕ್ಕಿರುವ ಉತ್ಸಾಹ ಹಾಗೂ ಜನಸಮರ್ಥನೆಯನ್ನು ಪ್ರತಿ ಬೂತ್‌ಗೆ ತಲುಪಿಸಬೇಕು. ಪ್ರತಿ ಬೂತ್‌ ಗೆಲ್ಲುವ ಸಂಕಲ್ಪ ಮಾಡುತ್ತೀರ? ಎಂದು ನೆರೆದವರನ್ನು ಪ್ರಶ್ನಿಸಿದರು.

ತುಮಕೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕಾರ್ಯಕರ್ತನೊಬ್ಬನ ಕಪಾಳಕ್ಕೆ ಹೊಡೆಯುವ ವಿಡಿಯೋವನ್ನು ಮೋದಿ ಉಲ್ಲೇಖಿಸಿದರು. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಕರ್ನಾಟಕದ ಒಂದು ವಿಡಿಯೋ ನೋಡುತ್ತಿದ್ದೆ. ಒಂದು ಪಕ್ಷದ ದೊಡ್ಡ ನಾಯಕ, ಮಾಜಿ ಮುಖ್ಯಮಂತ್ರಿ, ತಮ್ಮದೇ ಪಕ್ಷದ ಕಾರ್ಯಕರ್ತರ ಕಪಾಳಕ್ಕೆ ಹೊಡೆದದ್ದು ಆ ವಿಡಿಯೊ. ತಮ್ಮ ಕಾರ್ಯಕರ್ತನನ್ನೇ ಗೌರವಿಸಲು ಆಗದವರು ಜನತಾ ಜನಾರ್ದನನ ಗೌರವ ಹೇಗೆ ಮಾಡುತ್ತಾರೆ? ಬಿಜೆಪಿಯಲ್ಲಿ ಯಾರೂ ದೊಡ್ಡವರಲ್ಲ, ಚಿಕ್ಕವರಿಲ್ಲ. ನಾವೆಲ್ಲರೂ ಸಮಾನರು. ಹಾಗಾಗಿ ನಿಮ್ಮೆಲ್ಲರ ದರ್ಶನ ಪಡೆಯುವುದು ನನ್ನ ಸೌಭಾಗ್ಯ ಎಂಬ ಭಾವನೆ ಮೂಡುತ್ತದೆ. ಕರ್ನಾಟಕದ ಪ್ರತಿ ಕಾರ್ಯಕರ್ತ ನನ್ನ ಜತೆಗಾರ, ನನ್ನ ಪರಮ ಮಿತ್ರ ಹಾಘೂ ನನ್ನ ಸಹೋದರ ಇದ್ದಂತೆ ಎಂದರು.

ಭಾರತೀಯ ರಾಜನೀತಿಯಲ್ಲಿ ಆರೋಪಗಳ, ಆಕ್ಷೇಪಗಳ ರಾಜನೀತಿ ನಡೆಯುತ್ತಿದೆ. ಕಳೆದ ಕೆಲವು ವರ್ಷಗಳಿಂದ ಬಿಜೆಪಿ ಈ ಕೊಳಕು ರಾಜನೀತಿಯನ್ನು ಬದಲಿಸಿದೆ. ಕಲ್ಪನೆಗಳ ರಾಜಕೀಯವನ್ನು ಸಾಧನೆಗಳ ರಾಜಕೀಯವಾಗಿ ಬದಲಾಯಿಸಿದೆ ಎಂದರು.

ಇದಕ್ಕೂ ಮುನ್ನ ಮಾತನಾಡಿದ ರಾಷ್ಟ್ರೀಯ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ, ದಾವಣಗೆರೆ ಇತಿಹಾಸದಲ್ಲಿ ಎಂದೂ ಮರೆಯಲಾಗದ ಅದ್ಭುತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಾವು ಬಹುಮತ ಪಡೆದು ಸ್ವಂತ ಶಕ್ತಿ ಮೇಲೆ ಸರ್ಕಾರ ರಚನೆ ಮಾಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಭರವಸೆ ನೀಡಬಹುದೇ? ಎಂದು ನೆರೆದವರನ್ನು ಪ್ರಶ್ನಿಸಿ, ಹೌದು ಎಂಬ ಉತ್ತರ ಪಡೆದರು.

ಮೋದಿಯವರು ದೇಶವಿದೇಶ ಸುತ್ತಿ ಬಂದರೂ ಒಂದು ದಿನವೂ ವಿಶ್ರಾಂತಿ ತೆಗೆದುಕೊಂಡಿಲ್ಲ. ಹಾಗಾಗಿ ನಾವು ಇನ್ನೆರಡು ತಿಂಗಳು ವಿಶ್ರಾಂತಿ ತೆಗೆದುಕೊಳ್ಳದೆ ಮೋದಿಯವರು ಹಾಗೂ ಬೊಮ್ಮಾಯಿ ಅವರ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸೋಣ. ಹಣಬಲ ಹಾಗೂ ತೋಳ್ಬಲದ ಆಧಾರದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂಬ ವಿಚಾರ ಈ ಹಿಂದೆ ಇತ್ತು ಎನ್ನುವುದನ್ನು ಕಾಂಗ್ರೆಸ್‌ನವರು ತಿಳಿಯಬೇಕು. ಆದರೆ ಈಗ ಜನರು ಜಾಗೃತರಾಗಿದ್ದಾರೆ. ಜನರ ಬಳಿಗೆ ತೆರಳಿ ವಿಚಾರ ತಿಳಿಸಬೇಕು. ಇದು ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಅಲ್ಲ, ಇದು ವಿಜಯ ಯಾತ್ರೆಯ ಆರಂಭ.

ಕಾಂಗ್ರೆಸ್‌ ಪಕ್ಷ ಈಗ ಗ್ಯಾರಂಟಿ ಕಾರ್ಡ್‌ ನೀಡುತ್ತಿದ್ದಾರೆ. ಎಪ್ಪತ್ತು ವರ್ಷ ಏನು ಕಡುಬು ತಿನ್ನುತ್ತಾ ಇದ್ದಿರ? ನಾವು ಈಗಾಗಲೆ ಅನೇಕ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಕಾಂಗ್ರೆಸ್‌ನವರು ಎಪ್ಪತ್ತು ವರ್ಷದಲ್ಲಿ ಏನೂ ಮಾಡದೆ ಭರವಸೆ ನೀಡುತ್ತಿದ್ದಾರೆ ಎಂದರು.

ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಮಾತನಾಡಿ, ನಾಲ್ಕೂ ದಿಕ್ಕಿನಿಂದ ಹೊರಟ ಯಾತ್ರೆ ಜನಮನ್ನಣೆಯನ್ನು ಗೆದ್ದಿದೆ. ಹಳ್ಳಿಹಳ್ಳಿಗಳ ಮೂಲಕ ಸಾಗಿ ಜನಪ್ರಿಯತೆ ಗಳಿಸಿದೆ. ಇತರೆ ಪಕ್ಷಗಳ ಹತ್ತಾರು ಕಾರ್ಯಕರ್ತರು ಬಿಜೆಪಿ ಸೇರಿದ್ದಾರೆ. ರಾಜ್ಯ ಸರ್ಕಾರ ಅತಿ ದೊಡ್ಡ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿರುವುದಕ್ಕೆ ಅಭಿನಂದಿಸುತ್ತೇನೆ. ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಯೋಜನೆಯ ಸ್ಥಾನ ನೀಡಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಇದು ಜನಜಾತ್ರೆಯಲ್ಲ, ಸಾಗರದ ಅಲೆಗಳು. ಈ ಮೂಲಕ ರಾಜ್ಯದಲ್ಲಿ ಬಿಜೆಪಿ 150 ಸ್ಥಾನ ಗೆಲ್ಲುತ್ತದೆ ಎಂದರು.

ಇದನ್ನೂ ಓದಿ: Modi in Karnataka: ಮೆಟ್ರೊ ರೈಲು ಮಾರ್ಗ ಉದ್ಘಾಟಿಸಿ ಸಾಮಾನ್ಯರಂತೆ ಪ್ರಯಾಣಿಸಿದ ಪ್ರಧಾನಿ ಮೋದಿ

Exit mobile version