Site icon Vistara News

Modi In Karnataka: ಮೋದಿಯೆದುರು ಸಿಎಂ ಬೊಮ್ಮಾಯಿ ಹೇಳಿದ ಯುವ ಉದ್ಯಮಿ ವಿಜಯ್‌ ನಿರಾಣಿ ಯಾರು? ಅವರ ಸಾಧನೆ ಏನು?

modi-in-karnataka-who is Vijay Nirani

#image_title

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿ, ಬೆಂಗಳೂರಿನಲ್ಲಿ ಭಾರತ ಇಂಧನ ಸಪ್ತಾಹಕ್ಕೆ ಚಾಲನೆ ದೊರೆತಿದೆ. ದೇಶವಿದೇಶಗಳ ಗಣ್ಯರು ಭಾಗವಹಿಸಿದ್ದ ಬೃಹತ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕರ್ನಾಟಕದ ಯುವ ಉದ್ಯಮಿ ಕುರಿತು ಉಲ್ಲೇಖಿಸಿ ಸಂತಸ ವ್ಯಕ್ತಪಡಿಸಿದರು.

ಇಂಧನದಲ್ಲಿ ಎಥೆನಾಲ್‌ ಮಿಶ್ರಣದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ ಎಂದ ಸಿಎಂ ಬಸವರಾಜ ಬೊಮ್ಮಾಯಿ, ಶೇ.25 ಎಥೆನಾಲ್‌ ಮಿಶ್ರಣದತ್ತ ದಾಪುಗಾಲು ಹಾಕುತ್ತಿದ್ದೇವೆ. ನಮ್ಮಲ್ಲಿ ಅತಿ ಹೆಚ್ಚು ಸಕ್ಕರೆ ಕಾರ್ಖಾನೆಗಳಿರುವುದು ಇದಕ್ಕೆ ಪೂರಕವಾಗಿದೆ ಎಂದರು. ಈ ಸಮಯದಲ್ಲಿ, ಕರ್ನಾಟಕದ ಯುವ ಉದ್ಯಮಿ ವಿಜಯ್‌ ನಿರಾಣಿ, ದೇಶದಲ್ಲೆ ಅತಿ ಹೆಚ್ಚು ಎಥೆನಾಲ್‌ ಉತ್ಪಾದಿಸುತ್ತಿದ್ದಾರೆ ಎಂದು ಹೇಳಲು ಸಂತಸವಾಗುತ್ತದೆ ಎಂದರು.

ರಾಜಕೀಯದ ದಾಳ?

ಸಿಎಂ ಬಸವರಾಜ ಬೊಮ್ಮಾಯಿ ಉಲ್ಲೇಖಿಸಿದ ವಿಜಯ್‌ ನಿರಾಣಿ ಮತ್ಯಾರೂ ಅಲ್ಲ, ರಾಜ್ಯ ಸರ್ಕಾರದ ಸಚಿವ ಮುರುಗೇಶ್‌ ನಿರಾಣಿ ಅವರ ಪುತ್ರ. ಸದ್ಯ ಮೂವತ್ತು ವರ್ಷದ ಆಸುಪಾಸಿನಲ್ಲಿರುವ ವಿಜಯ್‌ ನಿರಾಣಿ, ಸದ್ಯ ಮುರುಗೇಶ್‌ ನಿರಾಣಿ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರೂ ಹೌದು.

ತಮ್ಮ ಕಾರ್ಖಾನೆಯಲ್ಲಿ ಪ್ರತಿದಿನ 18-20 ಲಕ್ಷ ಲೀಟರ್‌ ಎಥೆನಾಲ್‌ ಅನ್ನು ಉತ್ಪಾದನೆ ಮಾಡಲಾಗುತ್ತಿದೆ. ಭಾರತದಲ್ಲೆ ಅತಿ ಹೆಚ್ಚು ಎಥೆನಾಲ್‌ ಉತ್ಪಾದಿಸುವ ಸಂಸ್ಥೆ ಇದು. ಟ್ರು ಆಲ್ಟ್‌ ಬಯೋ ಎನರ್ಜಿ ಎಂಬ ಕಂಪನಿಯ ಮೂಲಕ ಪರ್ಯಾಯ ಇಂಧನ ಕ್ಷೇತ್ರದಲ್ಲಿ ದೇಶದಲ್ಲೆ ಮುಂಚೂಣಿಯಾಗಲು ಶ್ರಮಿಸಲಾಗುತ್ತಿದೆ. ಮನೆ, ವಾಹನದಿಂದ ವಿಮಾನದವರೆಗೆ ಇಂಧನ ಪೂರೈಸುವ ಮಹತ್ವಾಕಾಂಕ್ಷೆ ಹೊಂದಲಾಗಿದೆ.

ವಿಜಯ್‌ ನಿರಾಣಿ ಹೆಸರನ್ನು ಮಾತ್ರವೇ ಸಿಎಂ ಹೇಳಿದ್ದೇಕೆ ಎಂಬ ಚರ್ಚೆ ಆರಂಭವಾಗಿದೆ. ಸದ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯದ ಮುಖಂಡರಾಗಿಯೂ ಮುರುಗೇಶ್‌ ನಿರಾಣಿ ಗುರುತಿಸಿಕೊಂಡಿದ್ದಾರೆ. ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಒಂದೆಡೆ ನಾಯಕತ್ವಕ್ಕೆ ಬಸನಗೌಡ ಪಾಟೀಲ್‌ ಯತ್ನಾಳ್‌ ಪ್ರಯತ್ನಿಸುತ್ತಿದ್ದರೆ ಮತ್ತೊಂದೆಡೆ ಮುರುಗೇಶ್‌ ನಿರಾಣಿ, ಬಿಜೆಪಿಗೆ ಈ ವಿಚಾರ ನೆಗೆಟಿವ್‌ ಆಗಬಾರದು ಎಂದು ಪ್ರಯತ್ನಿಸುತ್ತಿದ್ದಾರೆ. ಪ್ರಧಾನಿ ಎದುರು ಮಾತನಾಡುವಾಗ ಈ ಹೆಸರನ್ನು ಮಾತ್ರವೇ ಉಲ್ಲೇಖಿಸುವ ಮೂಲಕ ರಾಜ್ಯ ರಾಜಕಾರಣದ ಯಾವ ದಾಳವನ್ನು ಸಿಎಂ ಬೊಮ್ಮಾಯಿ ಉರುಳಿಸಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ.

ವಿಜಯ್‌ ನಿರಾಣಿ ರಾಜಕಾರಣಕ್ಕೆ ಆಗಮಿಸುವ ಸಾಧ್ಯತೆಗಳನ್ನು ಸ್ವತಃ ತಂದೆ ಮುರುಗೇಶ್‌ ನಿರಾಣಿ ಅನೇಕ ಬಾರಿ ತಳ್ಳಿ ಹಾಕಿದ್ದಾರೆ. ಸದ್ಯ ಮುರುಗೇಶ್‌ ನಿರಾಣಿ ಶಾಸಕರಾಗಿದ್ದರೆ ಸಹೋದರ ಹನುಮಂತ್​​ ನಿರಾಣಿ ವಿಧಾನ ಪರಿಷತ್‌ ಸದಸ್ಯರಾಗಿದ್ದಾರೆ. ವಿಜಯ್‌ ನಿರಾಣಿ ಹಾಗೂ ಮುರುಗೇಶ್‌ ನಿರಾಣಿಯವರ ಮತ್ತೊಬ್ಬ ಸಹೋದರ ಸಂಗಮೇಶ ನಿರಾಣಿ ಉದ್ಯಮ ನಿಭಾಯಿಸುತ್ತಿದ್ದಾರೆ. ಎಲ್ಲರೂ ರಾಜಕಾರಣಕ್ಕೆ ಬಂದರೆ ಉದ್ಯಮ ನಿಭಾಯಿಸುವುದು ಸಾಧ್ಯವಿಲ್ಲ. ಉದ್ಯಮದಲ್ಲಿ ದೇಶದಲ್ಲೆ ನಂಬರ್‌ ಒನ್‌ ಸ್ಥಾನಕ್ಕೆ ಹೋಗುವತ್ತ ಮುನ್ನುಗ್ಗುತ್ತಿದ್ದೇವೆ. ಹಾಗೊಂದು ವೇಳೆ ಅವರು ರಾಜಕಾರಣಕ್ಕೆ ಬರುವುದೇ ಆದರೆ ನಾವು ಉದ್ಯಮ ನೋಡಿಕೊಳ್ಳಲು ಹೋಗುತ್ತೇವೆ ಎಂದು ಮುರುಗೇಶ್‌ ನಿರಾಣಿ ಅನೇಕ ಬಾರಿ ತಿಳಿಸಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ನರೇಂದ್ರ ಮೋದಿ ಎದುರು ತಮ್ಮ ಹೆಸರು ಉಲ್ಲೇಖಿಸಿದ್ದಕ್ಕೆ ವಿಜಯ್‌ ನಿರಾಣಿ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಕುರಿತು ಫೇಸ್‌ಬುಕ್‌ನಲ್ಲಿ ವಿಡಿಯೋ ಹಂಚಿಕೆ ಮಾಡಿಕೊಂಡಿರುವ ವಿಜಯ್‌ ನಿರಾಣಿ, “ಇದೊಂದು ಹೆಮ್ಮೆಯ ಕ್ಷಣ. ನನಗೆ ಮಾಥ್ರವಲ್ಲ, ನಮ್ಮ ಜತೆಗೆ ತೊಡಗಿಸಿಕೊಂಡಿರುವ ಮೂರು ಲಕ್ಷಕ್ಕೂ ಹೆಚ್ಚು ರೈತರ ಕುಟುಂಬಗಳು, 70 ಸಾವಿರಕ್ಕೂ ಹೆಚ್ಚು ನೌಕರರಿಗೆ ಹೆಮ್ಮೆಯ ವಿಚಾರ. ಟ್ರುಆಲ್ಟ್‌ ಬಯೊ ಎನರ್ಜಿ ಹಾಗೂ ಒಟ್ಟಾರೆ ವ್ಯವಸ್ಥೆಯ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಅವರ ಉಲ್ಲೇಖವು ಭಾರತದ ನವೀಕರಿಸಬಹುದಾದ ಇಂಧನ ಬೆಳವಣಿಗೆಯನ್ನು ಮತ್ತಷ್ಟು ವೇಗವಾಗಿಸುತ್ತದೆ” ಎಂದಿದ್ದಾರೆ.

Exit mobile version