ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಮಂಗಳೂರಿಗೆ ಆಗಮಿಸಿದ್ದು, ಇಡೀ ಕರಾವಳಿಯಲ್ಲಿ ಸಂಭ್ರಮ ಆವರಿಸಿದೆ. ಕರಾವಳಿಯ ನಾನಾ ಮೂಲೆಗಳಿಂದ ಲಕ್ಷಾಂತರ ಮಂದಿ ಮೋದಿ ಅವರನ್ನು ನೋಡುವುದಕ್ಕಾಗಿ, ಅವರ ಮಾತು ಕೇಳುವುದಕ್ಕಾಗಿ ಮಂಗಳೂರಿಗೆ ಆಗಮಿಸಿದ್ದಾರೆ.
ಪ್ರಧಾನಿ ಅವರಿಗೆ ಘಮಘಮಿಸುವ ಮಲ್ಲಿಗೆ ಹಾರ ಹಾಕಿ, ಪೇಟ ತೊಡಿಸಿ ಗೌರವಿಸಲಾಯಿತು. ಕರಾವಳಿಯನ್ನು ಪರಶುರಾಮ ಕ್ಷೇತ್ರವೆಂದು ಕರೆಯಲಾಗುತ್ತದೆ. ಇದನ್ನು ನೆನಪಿಸುವಂತೆ ಪ್ರಧಾನಿಗಳಿಗೆ ಪರಶುರಾಮನ ಮೂರ್ತಿಯನ್ನು ನೀಡಲಾಯಿತು.
ಮೋದಿ ಮೋದಿ ಘೋಷಣೆ
ಪ್ರಧಾನಿ ನರೇಂದ್ರ ಮೋದಿ ಅವರು ಬರುತ್ತಿದ್ದಂತೆಯೇ ಮೋದಿ ಮೋದಿ ಎಂಬ ಸದ್ದು ಇಡೀ ಸಭಾಂಗಣವನ್ನು ತುಂಬಿತು. ಕೇಂದ್ರ ಸಚಿವ ಸರ್ಬಾನಂದ ಸೋನಾವಾಲಾ ಅವರು ಮಾತನಾಡಲು ನಿಂತಾಗಲೂ ಸುಮಾರು ಎರಡು ನಿಮಿಷ ಮೋದಿ ಮೋದಿ ಎಂದು ಜನ ಭೋರ್ಗರೆದರು. ಕೊನೆಗೆ ಪ್ರಧಾನಿ ಮೋದಿ ಅವರೇ ಸಾಕು ಎಂದು ಹೇಳಬೇಕಾಯಿತು!
ಎಲ್ಲೆಡೆ ಕೇಸರಿ ಸಂಭ್ರಮ
ಸಮಾರಂಭಕ್ಕೆ ಆಗಮಿಸಿರುವ ಬಿಜೆಪಿ ಕಾರ್ಯಕರ್ತರಲ್ಲಿ ಹೆಚ್ಚಿನವರು ಕೇಸರಿ ಶಾಲುಗಳನ್ನು ಧರಿಸಿ ಬಂದಿದ್ದರು. ಹೀಗಾಗಿ ಎಲ್ಲೆಡೆ ಕೇಸರಿಮಯ ವಾತಾವರಣ ನಿರ್ಮಾಣವಾಗಿತ್ತು.
ವೇದಿಕೆಗೆ ಬರುವ ಮುನ್ನ ಪ್ರಧಾನಿ ಮೋದಿ ಅವರು ಎನ್‌ಎಂಪಿಟಿ ಪ್ರಸ್ತುತಪಡಿಸಿದ ಯೋಜನೆಗಳ ವಿವರಣೆಗಳನ್ನು ಗಮನಿಸಿದರು.