ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾಗತಕ್ಕೆ ಬಂದರು ನಗರಿ ಮಂಗಳೂರು ಸಜ್ಜಾಗಿದೆ. ಮೋದಿ ಅವರು ಇಂದು ಮಧ್ಯಾಹ್ನ ೧.೩೦ರಿಂದ ೪.೦೦ ಗಂಟೆವರೆಗೆ ಮಂಗಳೂರಿನಲ್ಲಿ ಇರಲಿದ್ದು, ಈ ಹೊತ್ತಿನಲ್ಲಿ ಅವರು ಓಡಾಡುವ ಮಾರ್ಗವಲ್ಲ ಇಡೀ ನಗರದಲ್ಲಿ ಬಿಗಿ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿದೆ. ಪ್ರಧಾನ ಕಾರ್ಯಕ್ರಮ ನಡೆಯುವ ಕೂಳೂರಿನ ಗೋಲ್ಡ್ ಫಿಂಚ್ ಮೈದಾನವಂತೂ ಅಕ್ಷರಶಃ ಉಕ್ಕಿನ ಕೋಟೆಯಂತಿದೆ. ಮೋದಿ ಭಾಗವಹಿಸುವ ಸಭಾ ಕಾರ್ಯಕ್ರಮ ಮಧ್ಯಾಹ್ನ ೨.೦೦ ಗಂಟೆಗೆ ಆರಂಭವಾಗುವುದಾದರೂ ಕಾರ್ಯಕ್ರಮಕ್ಕೆ ಒಂದು ಗಂಟೆ ಮೊದಲೇ ಸಭಾಂಗಣದಲ್ಲಿ ಬಂತು ಕುಳಿತುಕೊಳ್ಳುವಂತೆ ಸೂಚಿಸಲಾಗಿದೆ. ಒಳಗೆ ಬರುವ ಪ್ರತಿಯೊಬ್ಬರನ್ನು ಪರೀಕ್ಷಿಸಿಯೇ ಬಿಡಲಾಗುತ್ತದೆ.
ಮೋದಿ ಅವರು ಆಗಮಿಸುತ್ತಿರುವುದು ೩೮೦೦ ಕೋಟಿ ರೂ. ಮೊತ್ತದ ಪ್ರಮುಖ ಯೋಜನೆಗಳ ಲೋಕಾರ್ಪಣೆಗಾಗಿ. ಇದರ ಜತೆಗೇ ಮುಂದಿನ ವರ್ಷ ರಾಜ್ಯ ವಿಧಾನಸಭಾ ಚುನಾವಣೆಯೂ ನಡೆಯುತ್ತಿರುವುದರಿಂದ ಅದರ ಪ್ರಚಾರದ ಆರಂಭ ಕಡಲ ನಗರಿಯಿಂದ, ಬಿಜೆಪಿ-ಸಂಘಪರಿವಾರದ ಭದ್ರ ಕೋಟೆಯಿಂದಲೇ ಆರಂಭವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಪ್ರಸಕ್ತ ಕೇರಳದ ಕೊಚ್ಚಿಯಲ್ಲಿರುವ ಪ್ರಧಾನಿ ಮೋದಿ ಅವರು ಅಲ್ಲಿನ ಕಾರ್ಯಕ್ರಮಗಳನ್ನು ಮುಗಿಸಿ ಮಧ್ಯಾಹ್ನ ೧.೩೦ಕ್ಕೆ ಮಂಗಳೂರು ವಿಮಾನ ನಿಲ್ದಾಣ ತಲುಪಲಿದ್ದಾರೆ. ಅಲ್ಲಿಂದ ಮೋದಿ ಅವರ ಮಂಗಳೂರು ಯಾತ್ರೆ ಆರಂಭವಾಗಲಿದ್ದು, ನಾಲ್ಕು ಗಂಟೆಗೆ ಮರಳಿ ವಿಮಾನ ಹತ್ತುವವರೆಗೆ ನಡೆಯಲಿದೆ.
ಹಾಗಿದ್ದರೆ ಮೋದಿ ಅವರು ಇಂದು ಮಂಗಳೂರಿನಲ್ಲಿ ಏನೇನು ಮಾಡ್ತಾರೆ? ಎಲ್ಲೆಲ್ಲ ಹೋಗ್ತಾರೆ? ಏನಿದು ಹಲವು ಯೋಜನೆಗಳ ಉದ್ಘಾಟನೆ ಎನ್ನುವುದರ ಬಗ್ಗೆ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ಇದು ಮೋದಿ ಅವರ ಟ್ರಾವೆಲ್ ರಿಪೋರ್ಟ್
ಮಧ್ಯಾಹ್ನ 1.30- ಕೊಚ್ಚಿಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮನ
ಮಧ್ಯಾಹ್ನ 1.35- ಮಂಗಳೂರು ಏರ್ ಪೋರ್ಟ್‌ನಿಂದ ಹೆಲಿಕಾಪ್ಟರ್ ಮೂಲಕ ನಿರ್ಗಮನ
ಮಧ್ಯಾಹ್ನ 1.50- ಎನ್ಎಂಪಿಎ ಹೆಲಿಪ್ಯಾಡ್(ಬರ್ತ್ ನಂ.4)ನಲ್ಲಿ ಲ್ಯಾಂಡಿಂಗ್
ಮಧ್ಯಾಹ್ನ 1.54- ಹೆಲಿಪ್ಯಾಡ್ ನಿಂದ ರಸ್ತೆ ಮಾರ್ಗವಾಗಿ ನಿರ್ಗಮನ
ಮಧ್ಯಾಹ್ನ 2.00- ಸಮಾವೇಶ ನಡೆಯುವ ಗೋಲ್ಡ್ ಫಿಂಚ್ ಮೈದಾನ ತಲುಪಲಿರುವ ಮೋದಿ
ಮಧ್ಯಾಹ್ನ 3.35- ವೇದಿಕೆಯಿಂದ ನಿರ್ಗಮಿಸಿ ಹೆಲಿಪ್ಯಾಡ್ ತಲುಪಲಿದ್ದಾರೆ.
ಸಂಜೆ ೪.೦೦- ವಿಮಾನ ಮೂಲಕ ನಿರ್ಗಮನ
========
೪೫ ನಿಮಿಷಗಳ ಭಾಷಣ
ಮಂಗಳೂರು ಹೊರವಲಯದ ಕೂಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದ ವಿವರದ ಇಲ್ಲಿದೆ.
ಮಧ್ಯಾಹ್ನ 2.00- ಎನ್.ಎಂ.ಪಿ.ಎ ಹೆಲಿಪ್ಯಾಡ್‌ನಿಂದ ಮೈದಾನಕ್ಕೆ ಮೋದಿ ಆಗಮನ
ಮಧ್ಯಾಹ್ನ 2.10 – ವೇದಿಕೆಗೆ ಆಗಮನ, ಗಣ್ಯರು ಮತ್ತು ಅಧಿಕಾರಿಗಳಿಂದ ಸ್ವಾಗತ
ಮಧ್ಯಾಹ್ನ 2.13- ಕೇಂದ್ರ ಸಚಿವ ಸರ್ಬಾನಂದ್ ಸೋನಾವಾಲಾರಿಂದ 5 ನಿಮಿಷ ಸ್ವಾಗತ ಭಾಷಣ
ಮಧ್ಯಾಹ್ನ 2.18- ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರಿಂದ 5 ನಿಮಿಷ ಭಾಷಣ
ಮಧ್ಯಾಹ್ನ 2.23- ಮೋದಿ ಅವರಿಂದ ಭೂಮಿ ಪೂಜೆ, ಶಿಲಾನ್ಯಾಸದ ವರ್ಚುವಲ್ ಲೋಕಾರ್ಪಣೆ- 22 ನಿಮಿಷಗಳ ಕಾರ್ಯಕ್ರಮ
ಮಧ್ಯಾಹ್ನ 2.23- ಫಲಾನುಭವಿಗಳಿಗೆ ಕಿಸಾನ್ ಕಾರ್ಡ್, ಆಳ ಸಮುದ್ರ ಮೀನುಗಾರಿಕೆ ಅನುಮತಿ ಪತ್ರ ವಿತರಣೆ (5 ನಿಮಿಷ)
ಮಧ್ಯಾಹ್ನ 2.28- ನವಮಂಗಳೂರು ಬಂದರಿನ(ಎನ್.ಎಂ.ಪಿ.ಎ) ಯೋಜನೆಗಳ ಕಿರುಚಿತ್ರ ಪ್ರದರ್ಶನ (4 ನಿಮಿಷ)
ಮಧ್ಯಾಹ್ನ 2.32- ಬಟನ್ ಒತ್ತುವ ಮೂಲಕ 281 ಕೋ. ರೂ. ವೆಚ್ಚದ ನವ ಮಂಗಳೂರು ಬಂದರಿನ 14ನೇ ಬರ್ತ್ ಯಾಂತ್ರೀಕರಣ ಕಾಮಗಾರಿಗೆ ಚಾಲನೆ
1) 100 ಕೋಟಿ ವೆಚ್ಚದಲ್ಲಿ ಬಿಟುಮಿನ್(ಡಾಮರ್) ಸಂಗ್ರಹಗಾರ ನಿರ್ಮಾಣ
2) 100 ಕೋಟಿ ವೆಚ್ಚದಲ್ಲಿ ಸಂತೋಷಿ ಮಾತಾ ಕಂಪೆನಿಯ ಖಾದ್ಯ ತೈಲ ಸಂಗ್ರಹಗಾರ
3) 500 ಕೋಟಿ ವೆಚ್ಚದ ಎಲ್ ಪಿಜಿ ಸ್ಟೋರೇಜ್ ವ್ಯವಸ್ಥೆ ಘಟಕದ ಕಾಮಗಾರಿಗೆ ಚಾಲನೆ
ಮಧ್ಯಾಹ್ನ 2.38- ಕುಳಾಯಿ ಮೀನುಗಾರಿಕಾ ಜೆಟ್ಟಿ ನಿರ್ಮಾಣದ ಭೂಮಿ ಪೂಜೆ(ವರ್ಚುವಲ್)
ಮಧ್ಯಾಹ್ನ 2.40- ಎಂ.ಆರ್.ಪಿ.ಎಲ್ ನ ಯೋಜನೆಗಳ ಕಿರು ಚಿತ್ರ ಪ್ರದರ್ಶನ (3 ನಿಮಿಷ)
ಮಧ್ಯಾಹ್ನ 02.43- ಎಂಆರ್‌ಪಿಎಲ್‌ನ ಎರಡು ಯೋಜನೆಗಳಿಗೆ ಚಾಲನೆ
1) 677 ಕೋಟಿ ವೆಚ್ಚದಲ್ಲಿ ರಾಜ್ಯದ ಮೊದಲ ಡಿಸ್ಯಾಲಿನೇಷನ್ ಪ್ಲಾಂಟ್ ಗೆ ಚಾಲನೆ
2) 1829 ಕೋಟಿ ಮೊತ್ತದ ಬಿಎಸ್6 ಇಂಧನ ಸ್ಥಾವರಕ್ಕೆ ಶಂಕುಸ್ಥಾಪನೆ
ಮಧ್ಯಾಹ್ನ 2.45- ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಷಣ( 45 ನಿಮಿಷ)
ಮಧ್ಯಾಹ್ನ 3.30- ಗೋಲ್ಡ್ ಫಿಂಚ್ ಮೈದಾನದಿಂದ ಪ್ರಧಾನಿ ನರೇಂದ್ರ ಮೋದಿ ನಿರ್ಗಮನ
=========================
ಮೋದಿ ಅವರು ಉದ್ಘಾಟಿಸಲಿರುವ ಚಾಲನೆ ನೀಡಲಿರುವ ಪ್ರಮುಖ ಯೋಜನೆಗಳು
-281 ಕೋಟಿ ರೂ. ವೆಚ್ಚದಲ್ಲಿ ನವ ಮಂಗಳೂರು ಬಂದರಿನ 14ನೇ ಬರ್ತ್ ಯಾಂತ್ರೀಕರಣ, ಹಡಗಿನ ಮೂಲಕ ಬರುವ ಕಂಟೈನರ್ ಸರಕು ನಿರ್ವಹಣೆ ಪ್ರಮುಖ ಯೋಜನೆ
– 100 ಕೋಟಿ ರೂ. ವೆಚ್ಚದಲ್ಲಿ ಬಿಟುಮಿನ್(ಡಾಮರ್) ಸಂಗ್ರಹಾಗಾರ ನಿರ್ಮಾಣ. ಇದು ಎಸ್ಎಸ್ ಪಿಪಿ ಪೆಟ್ರೋ ಪ್ರಾಡಕ್ಟ್ಸ್ ಕಂಪೆನಿಯ ಮಹತ್ವದ ಯೋಜನೆ. 40 ಸಾವಿರ ಟನ್ ಬಿಟುಮಿನ್(ಡಾಮರ್) ಸಂಗ್ರಹ ಸಾಮರ್ಥ್ಯ.
-ಸುಮಾರು 200 ಕೋಟಿ ವೆಚ್ಚದ ಕುಳಾಯಿ ಮೀನುಗಾರಿಕಾ ಜೆಟ್ಟಿ ನಿರ್ಮಾಣ
– 100 ಕೋಟಿ ವೆಚ್ಚದಲ್ಲಿ ನವಮಂಗಳೂರು ಬಂದರಿನಲ್ಲಿ ಸಂತೋಷಿ ಮಾತಾ ಕಂಪೆನಿಯ ಖಾದ್ಯ ತೈಲ ಸಂಗ್ರಹಗಾರ
– ಎಂಆರ್‌ಪಿಎಲ್‌ನಲ್ಲಿ 677 ಕೋಟಿ ವೆಚ್ಚದಲ್ಲಿ ರಾಜ್ಯದ ಮೊದಲ ಡಿಸ್ಯಾಲಿನೇನ್ ಪ್ಲಾಂಟ್ ಗೆ ಚಾಲನೆ. ಇದರ ಮೂಲಕ 30 ಎಂಎಲ್ ಡಿ ನೀರು ಒದಗಿಸುವ ಯೋಜನೆ.
– 1829 ಕೋಟಿ ಮೊತ್ತದ ಬಿಎಸ್6 ಇಂಧನ ಸ್ಥಾವರ: ಭಾರತ ಬಿಎಸ್6 ಇಂಧನಕ್ಕೆ ಅಪ್ ಗ್ರೇಡ್ ಆಗಿದ್ದು, ಹೀಗಾಗಿ ಎಂಆರ್‌ಪಿಎಲ್‌ನಲ್ಲಿ ಬಿಎಸ್ 6 ಗ್ರೇಡ್ ಇಂಧನ ಉತ್ಪಾದನಾ ಘಟಕ
– 500 ಕೋಟಿ ವೆಚ್ಚದ ಎಲ್ ಪಿಜಿ ಸ್ಟೋರೇಜ್ ವ್ಯವಸ್ಥೆ ಘಟಕ
ಇದನ್ನೂ ಓದಿ | ಮೋದಿ in Mangaluru | ನಳಿನ್ ಕುಮಾರ್ ಕಟೀಲು ʼಪುನರ್‌ಪ್ರತಿಷ್ಠಾಪನೆʼ ಘೋಷಿಸುವರೇ ನಮೋ?