Site icon Vistara News

ಮೋದಿ ಮಂಗಳೂರಿಗೆ ಬರುತ್ತಿರುವುದು ಯಾಕೆ? ಯಾವ್ಯಾವ ಯೋಜನೆಗಳಿಗೆ ಚಾಲನೆ? ಇಲ್ಲಿದೆ Full details

narendra modi

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್‌ ೨ರಂದು ಮಂಗಳೂರಿಗೆ ಆಗಮಿಸಿ ಸುಮಾರು ೩೮೦೦ ಕೋಟಿ ರೂ. ವೆಚ್ಚದ ಯಾಂತ್ರೀಕರಣ, ಕೈಗಾರಿಕೀಕರಣ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಹಾಗಿದ್ದರೆ ಮೋದಿ ಅವರು ಚಾಲನೆ ನೀಡಲಿರುವ ಯೋಜನೆಗಳ ವಿಶೇಷತೆ ಏನು ಎನ್ನುವ ಬಗ್ಗೆ ವಿವರ ಇಲ್ಲಿದೆ.

ನರೇಂದ್ರ ಮೋದಿ ಅವರು ಸೆಪ್ಟೆಂಬರ್‌ ೧ರಂದೇ ದಿಲ್ಲಿಯಿಂದ ಹೊರಟು ಸಂಜೆ ೬ ಗಂಟೆಗೆ ಕೇರಳವನ್ನು ತಲುಪಲಿದ್ದಾರೆ. ಕೊಚ್ಚಿನ್‌ ವಿಮಾನ ನಿಲ್ದಾಣ ಬಳಿಯ ಕಲಾಡಿ ಗ್ರಾಮದಲ್ಲಿರುವ ಆದಿ ಶಂಕರಾಚಾರ್ಯರ ಪವಿತ್ರ ಜನ್ಮಸ್ಥಳವಾದ ಶ್ರೀ ಆದಿಶಂಕರ ಜನ್ಮ ಭೂಮಿ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ. ಮರು ದಿನ ಸೆಪ್ಟೆಂಬರ್ 2ರಂದು ಬೆಳಗ್ಗೆ 9:30ಕ್ಕೆ ಕೊಚ್ಚಿಯ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನಲ್ಲಿ ಯುದ್ಧ ನೌಕೆ ಐಎನ್‌ಎಸ್‌ ವಿಕ್ರಾಂತ್‌ನ್ನು ನೌಕಾಪಡೆಗೆ ಸೇರ್ಪಡೆ ಮಾಡಲಿದ್ದಾರೆ. ಐಎನ್‌ಎಸ್‌ ವಿಕ್ರಾಂತ್‌ ಸಂಪೂರ್ಣವಾಗಿ ಭಾರತದಲ್ಲಿಯೇ ನಿರ್ಮಾಣವಾಗಿರುವ ಅತ್ಯಂತ ಶಸ್ತ್ರಸಜ್ಜಿತ ಹಾಗೂ ಸುಸಜ್ಜಿತ ವಿಮಾನವಾಹಕ ಯುದ್ಧನೌಕೆಯಾಗಿದ್ದು, ಇದರ ಸೇರ್ಪಡೆಯಿಂದ ನೌಕಾಪಡೆಯ ಬಲ ಇನ್ನಷ್ಟು ಹೆಚ್ಚಾಗಲಿದೆ.

ಅಲ್ಲಿಂದ ಮಂಗಳೂರಿಗೆ
ಕೊಚ್ಚಿಯ ಕಾರ್ಯಕ್ರಮ ಮುಗಿಸಿಕೊಂಡು ಅವರು ಮಧ್ಯಾಹ್ನ ೧.೩೦ಕ್ಕೆ ಮಂಗಳೂರು ತಲುಪಲಿದ್ದು, ೨ ಗಂಟೆ ಹೊತ್ತಿಗೆ ಮಂಗಳೂರಿನ ಗೋಲ್ಡ್‌ ಫಿಂಚ್‌ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹಲವು ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ನೆರವೇರಿಸಲಿದ್ದಾರೆ. ಇದರಲ್ಲಿ ನವಮಂಗಳೂರು ಬಂದರು ಕೈಗೆತ್ತಿಕೊಂಡಿರುವ ೧೦೦೦ ಕೋಟಿ ರೂ.ಗಳ ಯೋಜನೆಗಳು ಮತ್ತು ಎಂಆರ್‌ಪಿಎಲ್‌ನ ಎರಡು ಯೋಜನೆಗಳು ಸೇರಿವೆ. ಜತೆಗೆ ಬೃಹತ್‌ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಮೋದಿ ಉದ್ಘಾಟಿಸುವ, ಶಂಕುಸ್ಥಾಪನೆ ಮಾಡಲಿರುವ ಯೋಜನೆಗಳು
೧. ಎನ್‌ಎಂಪಿಟಿಯ ಬರ್ತ್‌ ನಂ. ೧೪ರ ಯಾಂತ್ರೀಕರಣ
ನವಮಂಗಳೂರು ಬಂದರು ಪ್ರಾಧಿಕಾರವು ಕೈಗೆತ್ತಿಕೊಂಡಿರುವ ಕಂಟೈನರ್‌ಗಳು ಮತ್ತು ಇತರ ಸರಕುಗಳನ್ನು ನಿರ್ವಹಿಸಲು ಬರ್ತ್ ನಂ. 14 ರ ಯಾಂತ್ರೀಕರಣಕ್ಕಾಗಿ 280 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಯೋಜನೆಯನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ಯೋಜನೆಯ ಮೊದಲ ಹಂತ ಯಶಸ್ವಿಯಾಗಿ ಪೂರ್ಣಗೊಂಡಿದೆ, ಆ ಮೂಲಕ ನಿರ್ವಹಣೆ ಸಾಮರ್ಥ್ಯಕ್ಕೆ 4.2 MTPA (ವರ್ಷಕ್ಕೆ ಮೆಟ್ರಿಕ್‌ ಟನ್‌) ಹೆಚ್ಚುವರಿಯಾಗಿ ಸೇರಿಸುತ್ತದೆ. ಇದು 2025ರ ವೇಳೆಗೆ 6 MTPA ಗಿಂತ ಹೆಚ್ಚಾಗುತ್ತದೆ.

ನವಮಂಗಳೂರು ಬಂದರು ಪ್ರದೇಶ

೨. ಬಿಟುಮೆನ್‌, ಖಾದ್ಯ ತೈಲ ಸಂಗ್ರಹಣಾಗಾರಗಳಿಗೆ ಅಡಿಪಾಯ
ಎನ್‌ಎಂಪಿಟಿಯಲ್ಲಿರುವ ಸಂಯೋಜಿತ ಎಲ್‌ಪಿಜಿ ಮತ್ತು ಬಲ್ಕ್ ಲಿಕ್ವಿಡ್ ಪಿಓಎಲ್‌ ಸೌಲಭ್ಯವು ಅತ್ಯಾಧುನಿಕ ಕ್ರಯೋಜೆನಿಕ್ ಎಲ್‌ಪಿಜಿ ಸ್ಟೋರೇಜ್ ಟ್ಯಾಂಕ್ ಟರ್ಮಿನಲ್ ಅನ್ನು ಹೊಂದಿದೆ. 45,000 ಟನ್‌ಗಳ ಪೂರ್ಣ ಲೋಡ್ ವಿಎಲ್‌ಜಿಸಿ (ದೊಡ್ಡ ಪ್ರಮಾಣದ ಗ್ಯಾಸ್ ಕ್ಯಾರಿಯರ್‌ಗಳು) ಅನ್ನು ಹೆಚ್ಚು ಪರಿಣಾಮಕಾರಿ ರೀತಿಯಲ್ಲಿ ಇಳಿಸುವ ಸಾಮರ್ಥ್ಯ ಪಡೆದಿದೆ. ಈ ಸೌಲಭ್ಯವು ಈ ಪ್ರದೇಶದಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಉತ್ತೇಜನ ನೀಡುವುದರ ಜೊತೆಗೆ ದೇಶದ ಅಗ್ರ ಎಲ್‌ಪಿಜಿ ಆಮದು ಮಾಡಿಕೊಳ್ಳುವ ಬಂದರುಗಳಲ್ಲಿ ಒಂದಾಗಿ ಬಂದರಿನ ಸ್ಥಾನಮಾನವನ್ನು ಬಲಪಡಿಸುತ್ತದೆ. ಇದಕ್ಕೆ ಆಧಾರವಾಗಲಿರುವ ಶೇಖರಣಾ ತೊಟ್ಟಿಗಳು ಮತ್ತು ಖಾದ್ಯ ತೈಲ ಸಂಸ್ಕರಣಾಗಾರ, ಬಿಟುಮೆನ್ ಸಂಗ್ರಹಣೆ ಮತ್ತು ಸಂಬಂಧಿತ ಸೌಲಭ್ಯಗಳ ನಿರ್ಮಾಣ ಮತ್ತು ಬಿಟುಮೆನ್ ಮತ್ತು ಖಾದ್ಯ ತೈಲ ಸಂಗ್ರಹಣೆ ಮತ್ತು ಸಂಬಂಧಿತ ಸೌಲಭ್ಯಗಳ ನಿರ್ಮಾಣದ ಯೋಜನೆಗಳಿಗೆ ಪ್ರಧಾನ ಮಂತ್ರಿ ಅವರು ಅಡಿಪಾಯ ಹಾಕಲಿದ್ದಾರೆ. ಈ ಯೋಜನೆಗಳು ಬಿಟುಮೆನ್ ಮತ್ತು ಖಾದ್ಯ ತೈಲ ಹಡಗುಗಳ ಟರ್ನ್‌ ಅರೌಂಡ್ ಸಮಯವನ್ನು ಸುಧಾರಿಸುತ್ತದೆ ಮತ್ತು ವ್ಯಾಪಾರಕ್ಕಾಗಿ ಒಟ್ಟಾರೆ ಸರಕು ವೆಚ್ಚವನ್ನು ಕಡಿಮೆ ಮಾಡುತ್ತದೆ. ಪ್ರಧಾನಮಂತ್ರಿಯವರು ಕುಳಾಯಿಯಲ್ಲಿ ಮೀನುಗಾರಿಕೆ ಬಂದರಿನ ಅಭಿವೃದ್ಧಿಗೆ ಅಡಿಪಾಯ ಹಾಕಲಿದ್ದಾರೆ. ಈ ಕೆಲಸವನ್ನು ಸಾಗರಮಾಲಾ ಕಾರ್ಯಕ್ರಮದ ಅಡಿಯಲ್ಲಿ ಕೈಗೊಳ್ಳಲಾಗುವುದು ಮತ್ತು ಮೀನುಗಾರ ಸಮುದಾಯಕ್ಕೆ ಗಮನಾರ್ಹವಾದ ಸಾಮಾಜಿಕ-ಆರ್ಥಿಕ ಪ್ರಯೋಜನಗಳನ್ನು ಉಂಟುಮಾಡಲಿದೆ ಎಂದು ಹೇಳಲಾಗಿದೆ.

೩. ಎಂಆರ್‌ಪಿಎಲ್‌ಗೆ ಸಂಬಂಧಿಸಿದ ಎರಡು ಯೋಜನೆ
ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌ (ಎಂಆರ್‌ಪಿಎಲ್‌) ಕೈಗೆತ್ತಿಕೊಂಡ ಎರಡು ಯೋಜನೆಗಳಾದ ಬಿಎಸ್ -4 ಅಪ್‌ ಗ್ರೆಡೇಶನ್ ಪ್ರಾಜೆಕ್ಟ್ ಮತ್ತು ಸೀ ವಾಟರ್ ಡಿಸ್ಯಾಲಿನೇಶನ್ ಪ್ಲಾಂಟ್ (ಸಮುದ್ರ ನೀರಿನಿಂದ ಉಪ್ಪು ತೆಗೆದು ಶುದ್ಧಗೊಳಿಸುವ ಸ್ಥಾವರ) ಅನ್ನು ಉದ್ಘಾಟಿಸಲಿದ್ದಾರೆ.

ಸುಮಾರು 1830 ಕೋಟಿ ರೂಪಾಯಿ ಮೌಲ್ಯದ BS ೪ ಉನ್ನತೀಕರಣ ಯೋಜನೆಯು ಅಲ್ಟ್ರಾ-ಶುದ್ಧ ಪರಿಸರ ಸ್ನೇಹಿ BS-೬ ದರ್ಜೆಯ ಇಂಧನ (10 PPM ಗಿಂತ ಕಡಿಮೆ ಸಲ್ಫರ್ ಅಂಶದೊಂದಿಗೆ) ಉತ್ಪಾದನೆಯನ್ನು ಸುಲಭಗೊಳಿಸುತ್ತದೆ.

೬೮೦ ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾದ ಸಮುದ್ರದ ನೀರಿನ ಶುದ್ಧೀಕರಣ ಘಟಕ ಲೋಕಾರ್ಪಣೆ ಆಗಲಿದೆ ಶುದ್ಧ ನೀರಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು, ಸಮುದ್ರದ ನೀರನ್ನೇ ಬಳಸಿಕೊಳ್ಳಲು ಇದು ಸಹಾಯ ಮಾಡುತ್ತದೆ ಮತ್ತು ವರ್ಷವಿಡೀ ಹೈಡ್ರೋಕಾರ್ಬನ್‌ಗಳು ಮತ್ತು ಪೆಟ್ರೋಕೆಮಿಕಲ್‌ಗಳ ನಿಯಮಿತ ಪೂರೈಕೆಯನ್ನು ಖಚಿತಪಡಿಸುತ್ತದೆ. ದಿನಕ್ಕೆ 30 ಮಿಲಿಯನ್ ಲೀಟರ್ (MLD) ಸಾಮರ್ಥ್ಯವನ್ನು ಹೊಂದಿರುವ ಸ್ಥಾವರವು ಸಮುದ್ರದ ನೀರನ್ನು ಶುದ್ಧೀಕರಣ ಪ್ರಕ್ರಿಯೆಗಳಿಗೆ ಅಗತ್ಯವಿರುವ ನೀರಾಗಿ ಪರಿವರ್ತಿಸುತ್ತದೆ.

ಯೋಜನೆಗಳ ಮುಖ್ಯಾಂಶಗಳು
-281 ಕೋಟಿ ರೂ. ವೆಚ್ಚದಲ್ಲಿ ನವ ಮಂಗಳೂರು ಬಂದರಿನ 14ನೇ ಬರ್ತ್ ಯಾಂತ್ರೀಕರಣ, ಹಡಗಿನ ಮೂಲಕ ಬರುವ ಕಂಟೈನರ್ ಸರಕು ನಿರ್ವಹಣೆ ಪ್ರಮುಖ ಯೋಜನೆ
– 100 ಕೋಟಿ ರೂ. ವೆಚ್ಚದಲ್ಲಿ ಬಿಟುಮಿನ್(ಡಾಮರ್) ಸಂಗ್ರಹಾಗಾರ ನಿರ್ಮಾಣ. ಇದು ಎಸ್ಎಸ್ ಪಿಪಿ ಪೆಟ್ರೋ ಪ್ರಾಡಕ್ಟ್ಸ್ ಕಂಪೆನಿಯ ಮಹತ್ವದ ಯೋಜನೆ. 40 ಸಾವಿರ ಟನ್ ಬಿಟುಮಿನ್(ಡಾಮರ್) ಸಂಗ್ರಹ ಸಾಮರ್ಥ್ಯ.
-ಸುಮಾರು 200 ಕೋಟಿ ವೆಚ್ಚದ ಕುಳಾಯಿ ಮೀನುಗಾರಿಕಾ ಜೆಟ್ಟಿ ನಿರ್ಮಾಣ
– 100 ಕೋಟಿ ವೆಚ್ಚದಲ್ಲಿ ನವಮಂಗಳೂರು ಬಂದರಿನಲ್ಲಿ ಸಂತೋಷಿ ಮಾತಾ ಕಂಪೆನಿಯ ಖಾದ್ಯ ತೈಲ ಸಂಗ್ರಹಗಾರ
– ಎಂಆರ್‌ಪಿಎಲ್‌ನಲ್ಲಿ 677 ಕೋಟಿ ವೆಚ್ಚದಲ್ಲಿ ರಾಜ್ಯದ ಮೊದಲ ಡಿಸ್ಯಾಲಿನೇನ್ ಪ್ಲಾಂಟ್ ಗೆ ಚಾಲನೆ. ಇದರ ಮೂಲಕ 30 ಎಂಎಲ್ ಡಿ ನೀರು ಒದಗಿಸುವ ಯೋಜನೆ.
– 1829 ಕೋಟಿ ಮೊತ್ತದ ಬಿಎಸ್6 ಇಂಧನ ಸ್ಥಾವರ: ಭಾರತ ಬಿಎಸ್6 ಇಂಧನಕ್ಕೆ ಅಪ್ ಗ್ರೇಡ್ ಆಗಿದ್ದು, ಹೀಗಾಗಿ ಎಂಆರ್‌ಪಿಎಲ್‌ನಲ್ಲಿ ಬಿಎಸ್ 6 ಗ್ರೇಡ್ ಇಂಧನ ಉತ್ಪಾದನಾ ಘಟಕ
– 500 ಕೋಟಿ ವೆಚ್ಚದ ಎಲ್ ಪಿಜಿ ಸ್ಟೋರೇಜ್ ವ್ಯವಸ್ಥೆ ಘಟಕ

Exit mobile version