ಶಿರಹಟ್ಟಿ (ಗದಗ): ಪ್ರಧಾನಿ ನರೇಂದ್ರ ಮೋದಿ ವಿಷದ ಹಾವಿದ್ದಂತೆ ಎಂದು ಹೇಳಿಕೆ ನೀಡಿದ ಬಳಿಕ ಭಾರಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ (Karnataka Election 2023) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ವಿಷಾದ ವ್ಯಕ್ತಪಡಿಸಿದ್ದಾರೆ. “ನಾನು ಯಾವುದೇ ವ್ಯಕ್ತಿಗೆ ನೋವುಂಟು ಮಾಡಬೇಕು, ಆ ವ್ಯಕ್ತಿ ಬಗ್ಗೆಯೇ ಹೇಳಬೇಕು ಎಂದು ಹೇಳಿಕೆ ನೀಡಿಲ್ಲ. ಆದರೂ, ನನ್ನ ಮಾತಿನಿಂದ ಯಾರಿಗಾದರೂ ನೋವುಂಟಾದರೆ, ನಾನು ಖೇದ ವ್ಯಕ್ತಪಡಿಸುತ್ತೇನೆ” ಎಂದು ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿಯಲ್ಲಿ ಹೇಳಿದ್ದಾರೆ. ಆ ಮೂಲಕ ಹೇಳಿಕೆ ಬಳಿಕ ಉಂಟಾದ ವಿವಾದವನ್ನು ತಣ್ಣಗಾಗಿಸುವ ಯತ್ನ ಮಾಡಿದ್ದಾರೆ.
“ನನ್ನ ಮಾತಿನಿಂದ ಯಾರಿಗಾದರೂ ತಪ್ಪು ತಿಳಿವಳಿಕೆಯಾದರೆ, ನನ್ನ ಶಬ್ದ, ನನ್ನ ಹೇಳಿಕೆಯು ತಪ್ಪಾಗಿ ಅರ್ಥ ಆಗಿದ್ದರೆ, ಅದರ ಬಗ್ಗೆ ವಿಶೇಷವಾಗಿ ಖೇದವನ್ನು ವ್ಯಕ್ತಪಡಿಸುತ್ತೇನೆ. ಆದರೆ, ನಾನು ಹೇಳಿರುವುದನ್ನು ಈ ರೀತಿ ತಿರುಚುವುದು ಸರಿಯಲ್ಲ. ಆರ್‌ಎಸ್‌ಎಸ್, ಬಿಜೆಪಿ ವಿರುದ್ಧ, ಅದರ ತತ್ವದ ವಿರುದ್ಧ, ಅದಕ್ಕೆ ಸಪೋರ್ಟ್ ಮಾಡುವ ಜನರ ವಿರುದ್ಧ ನನ್ನ ಹೋರಾಟ ಕಾಯಂ ಆಗಿರುತ್ತದೆ. ಆದರೆ, ನಾನು ಯಾವುದೇ ವ್ಯಕ್ತಿಯ ಬಗ್ಗೆ ಈ ರೀತಿ ಹೇಳಲಾರೆ. ಪ್ರಜಾಪ್ರಭುತ್ವದಲ್ಲಿ ಅದು ಸರಿಯೂ ಅಲ್ಲ” ಎಂದು ಹೇಳಿದರು.
ಪ್ರಲ್ಹಾದ್ ಜೋಶಿ ಆಕ್ರೋಶ
ಖರ್ಗೆ ಕ್ಷಮೆಯಾಚನೆಗೆ ಜೋಶಿ ಪಟ್ಟು
ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದ, ಕೂಡಲೇ ಖರ್ಗೆ ಅವರು ಕ್ಷಮೆಯಾಚಿಸಬೇಕು ಎಂದು ಪಟ್ಟುಹಿಡಿದಿದ್ದಾರೆ. “ಮಲ್ಲಿಕಾರ್ಜುನ ಖರ್ಗೆ ಅವರು ನರೇಂದ್ರ ಮೋದಿ ಅವರ ಬಗ್ಗೆ ಕ್ಷುಲ್ಲಕವಾಗಿ, ಚಿಲ್ಲರೆಯಾಗಿ ಮಾತನಾಡಿದ್ದಾರೆ. ಪ್ರಧಾನಿ ಹುದ್ದೆಗೆ ಗೌರವ ಕೊಡದೆ, ಲೋ ಲೆವೆಲ್ ಭಾಷೆ ಬಳಸಿದ್ದಾರೆ. ದೇಶದ ಹಳೆಯ ಪಾರ್ಟಿ ಎಂದು ಹೇಳುವವರಿಗೆ ಇದು ಖಂಡಿತವಾಗಿಯೂ ಶೋಭೆ ತರುವುದಿಲ್ಲ. ಇದಕ್ಕೂ ಮೊದಲು ಸೋನಿಯಾ ಗಾಂಧಿ ಅವರು ಮೋದಿ ಅವರನ್ನು ಸಾವಿನ ವ್ಯಾಪಾರಿ ಎಂದು ಕರೆದಿದ್ದರು. ಅದಕ್ಕೆ ಗುಜರಾತ್ ಜನ ಉತ್ತರ ಕೊಟ್ಟಿದ್ದರು. ಮೋದಿ ಅವರ ಬಗ್ಗೆ ರಾಹುಲ್ ಗಾಂಧಿ ಹೇಳಿಕೆ ನೀಡಿ ಈಗ ಶಿಕ್ಷೆ ಅನುಭವಿಸುವಂತಾಗಿದೆ. ಈಗ ಖರ್ಗೆಯವರು ಕೂಡ ಮೋದಿ ಬಗ್ಗೆ ಕ್ಷುಲ್ಲಕವಾಗಿ ಮಾತನಾಡಿದ್ದಾರೆ. ಜನರ ತೀರ್ಪಿಗೆ ಅಪಮಾನ ಮಾಡಿದ ಖರ್ಗೆಯವರು ಕ್ಷಮೆಯಾಚಿಸಬೇಕು” ಎಂದು ಜೋಶಿ ಒತ್ತಾಯಿಸಿದ್ದಾರೆ.
ಖರ್ಗೆ ಹೇಳಿದ್ದೇನು?
ಗುರುವಾರ ಮಧ್ಯಾಹ್ನ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದಲ್ಲಿ ನಡೆದ ಕಾಂಗ್ರೆಸ್‌ನ ಬಹಿರಂಗ ಸಭೆಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ನರೇಂದ್ರ ಮೋದಿ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು. ʻʻಮೋದಿ ಒಬ್ಬರು ವಿಷದ ಹಾವಿದ್ದಂತೆ. ಹಾಗಂತ ವಿಷ ಇದೆಯಾ ಅಂತ ಏನಾದರೂ ನೆಕ್ಕಲು ಹೋದರೆ ಅವನು ಸತ್ತಂತೆ. ಯಾವ ಕಾರಣಕ್ಕೂ ನೆಕ್ಕಲು ಹೋಗಬೇಡಿ, ಒಳ್ಳೆ ಮನುಷ್ಯ ಇರ್ಬೋದಾ ನೋಡೋಣ ಅಂತ ಪ್ರಯತ್ನ ಮಾಡಬೇಡಿ, ನೆಕ್ಕಲು ಹೋದರೆ ನೀವು ಮಲಗೇ ಬಿಡ್ತೀರಿʼʼ ಎಂದು ಹೇಳಿದ್ದರು.
ಇದನ್ನೂ ಓದಿ: Karnataka Election : ಮೋದಿ ವಿಷದ ಹಾವಿದ್ದಂತೆ ಅಂತ ನಾನು ಹೇಳೇ ಇಲ್ಲ ಎಂದ ಖರ್ಗೆ, ವಿವಾದಕ್ಕೆ ಸಿಲುಕಿದ ತಕ್ಷಣ ಪ್ಲೇಟ್ ಬದಲು