ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 123 ಸ್ಥಾನಗಳನ್ನು ಗೆದ್ದು, ಅಧಿಕಾರದ ಗದ್ದುಗೆ ಏರಲು ಯೋಜನೆ ರೂಪಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬ್ರಹ್ಮಾಸ್ತ್ರಗಳು ವರ್ಕೌಟ್ ಆಗುವುದಿಲ್ಲ. ಬಿಜೆಪಿ ಅಧಿಕಾರಕ್ಕೆ ಬರುವುದು ಸಾಧ್ಯವೇ ಇಲ್ಲ. ಹಾಗೆಯೇ, ಜೆಡಿಎಸ್ ಅಧಿಕಾರಕ್ಕೆ ಬರುವುದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಶಿವಮೊಗ್ಗ ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಅವರು ಜೆಡಿಎಸ್ ಸೇರ್ಪಡೆಯಾದ ಬಳಿಕ ಎಚ್.ಡಿ.ಕುಮಾರಸ್ವಾಮಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. “ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ಕೇಂದ್ರದ ನಾಯಕರ ಮುಖ ನೋಡಿ ಜನ ಮತ ಹಾಕಬೇಕು ಎಂದು ಕೇಳುತ್ತಿದ್ದಾರೆ. ಸಮಾವೇಶಗಳಿಗೆ 500 ರೂಪಾಯಿ ಕೊಟ್ಟು ಕರೆಸುತ್ತಿದ್ದಾರೆ. ನಾವೇ ದುಡ್ಡು ಕೊಡುತ್ತೇವೆ ಇಲ್ಲಿಂದ ಹೊರಡಿ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.
“ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ನಿಶ್ಚಿತ. ನಾವು 123 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ಖಚಿತ. ನಾನು ಇಟ್ಟಿರುವ ಗುರಿ ತಪ್ಪಲು ಸಾಧ್ಯವೇ ಇಲ್ಲ. ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಡೌನ್ ಆಗುತ್ತದೆ. ಜೆಡಿಎಸ್ ಮೇಲೆ ಹೋಗುತ್ತದೆ. ನನ್ನ ಗುರಿಯಲ್ಲಿ ಯಾವುದೇ ಲೋಪವಿಲ್ಲ” ಎಂದು ಹೇಳಿದರು. “ಆಯಾಸ ಇದ್ದ ಕಾರಣ ಒಂದು ದಿನ ಪ್ರಚಾರ ನಿಲ್ಲಿಸಿದ್ದೇನೆ. ಆದರೆ, ಶನಿವಾರದಿಂದ ಮೇ 8ರ ರಾತ್ರಿವರೆಗೆ ಪ್ರಚಾರ ಮಾಡುತ್ತೇನೆ” ಎಂದು ಹೇಳಿದರು.
ಶಿವಮೊಗ್ಗದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ
ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಅವರು ಕಾಂಗ್ರೆಸ್ ತೊರೆದು, ಜೆಡಿಎಸ್ ಸೇರ್ಪಡೆಯಾಗಿರುವುದು ಶಿವಮೊಗ್ಗದಲ್ಲಿ ಕಾಂಗ್ರೆಸ್‌ಗೆ ಭಾರಿ ಹಿನ್ನಡೆಯಾದಂತಾಗಿದೆ. ಶಿವಮೊಗ್ಗ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಪ್ರಸನ್ನಕುಮಾರ್ ಅವರು ಟಿಕೆಟ್ ಸಿಗದ ಕಾರಣ ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಹಾಗೆಯೇ, ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಅವರಿಗೆ ಬೆಂಬಲ ನೀಡುವುದಾಗಿಯೂ ತಿಳಿಸಿದ್ದಾರೆ. ಇದರ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, “ಕೆ.ಬಿ.ಪ್ರಸನ್ನಕುಮಾರ್ ಅವರು ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದಾರೆ. ಐದು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಉದ್ದೇಶ ಹೊಂದಿದ್ದಾರೆ” ಎಂದಿದ್ದಾರೆ.
ಇದನ್ನೂ ಓದಿ: ಸ್ವರೂಪ್ ಬೆನ್ನಿಗೆ ನಿಂತ ಗೌಡರ ಕುಟುಂಬ; ಮುಸ್ಲಿಂ ಮೀಸಲಾತಿ ಮರುಸ್ಥಾಪನೆ ಎಂದ ಎಚ್‌ಡಿಕೆ