Site icon Vistara News

Modi virtual Samvada : ಕರ್ನಾಟಕದ ವಿಕಾಸವೇ ಭಾರತದ ವಿಕಾಸ; ಮೋದಿ ಹೇಳಿದ ಆರು ಸಂಗತಿಗಳು

modi virtual samvada develoment of karnataka is base for indias vikas says pm modi

modi virtual samvada develoment of karnataka is base for indias vikas says pm modi

ಬೆಂಗಳೂರು: “ಮುಂದಿನ ಐದು ವರ್ಷ ಸಶಕ್ತ ಕರ್ನಾಟಕವನ್ನು ನಿರ್ಮಾಣ ಮಾಡುತ್ತೇವೆ. ಕರ್ನಾಟಕದ ವಿಕಾಸವೇ ದೇಶದ ವಿಕಾಸʼʼ ಎಂದು ಪ್ರಧಾನಿ ನರೇಂದ್ರ ಮೋದಿ ನರೇಂದ್ರ ಮೋದಿ ಹೇಳಿದರು. ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮೋದಿ ಅವರು ಗುರುವಾರ ಬೆಳಗ್ಗೆ ದೇಶದ 50 ಲಕ್ಷ ಬಿಜೆಪಿ ಕಾರ್ಯಕರ್ತರ ಜತೆ ನಡೆಸಿದ ವರ್ಚ್ಯುವಲ್‌ ಸಂವಾದ (Modi virtual samvada)ದ ವೇಳೆ ಈ ಮಾತು ಹೇಳಿದರು. ಅವರು ರಾಜ್ಯದಲ್ಲಿ ಚುನಾವಣೆ ಗೆಲ್ಲುವ ಬಗೆ, ಬೂತ್‌ ಮಟ್ಟದಲ್ಲಿ ಆಗಬೇಕಾದ ಕೆಲಸಗಳು, ಡಂಬಲ್‌ ಎಂಜಿನ್‌ ಸರ್ಕಾರದ ಸಾಧನೆಗಳನ್ನು ವಿವರಿಸಿದರು. ಜತೆಗೆ ಕಾಂಗ್ರೆಸ್‌ ಪಕ್ಷ ನೀಡಿದ ಗ್ಯಾರಂಟಿಗಳನ್ನು ಲೇವಡಿ ಮಾಡಿದರು.

ರಾಜ್ಯದ 58,112 ಬೂತ್‍ಗಳಲ್ಲಿ, 1,680 ಜಿಲ್ಲಾ ಪಂಚಾಯತ್ ಮಟ್ಟದಲ್ಲಿ ಈ ಸಂವಾದವನ್ನು ಹಮ್ಮಿಕೊಳ್ಳಲಾಗಿತ್ತು. 24 ಲಕ್ಷ ಮಂದಿ ನಮೋ ಆಪ್‌ ಮೂಲಕ ಸಂವಾದವನ್ನು ವೀಕ್ಷಿಸಿದರು. ಬೆಂಗಳೂರಿನ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಮತ್ತು ಬಿಜೆಪಿ ರಾಜ್ಯ ಉಸ್ತುವಾರಿ ಧರ್ಮೇ ಅವರು ಸಂವಾದದಲ್ಲಿ ಭಾಗವಹಿಸಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹುಬ್ಬಳ್ಳಿಯಿಂದ, ಶಿವಮೊಗ್ಗದಲ್ಲಿ ಕೆ.ಎಸ್‌. ಈಶ್ವರಪ್ಪ ನೇತೃತ್ವದಲ್ಲಿ ಜನ ಸೇರಿದ್ದರು.

ಶಿವಮೊಗ್ಗದ (ಶಿವಮೊಗ್ಗ ಗ್ರಾಮಾಂತರ) ವಿರೂಪಾಕ್ಷಪ್ಪ, ಚಿತ್ರದುರ್ಗದ (ಮೊಳಕಾಲ್ಮೂರು) ಫಕ್ಕೀರಪ್ಪ, ವಿಜಯನಗರದ ಚಂದ್ರಶೇಖರ್, ದಕ್ಷಿಣ ಕನ್ನಡದ (ಮಂಗಳೂರು ದಕ್ಷಿಣ) ಅರುಣ್‌ ಶೇಠ್‌ ಮತ್ತು ಬೆಂಗಳೂರಿನ(ಜಯನಗರ) ಕಾರ್ಯಕರ್ತರ ಪ್ರಶ್ನೆಗಳನ್ನು ಪೂರ್ವಭಾವಿಯಾಗಿ ಪಡೆದು ಪ್ರಧಾನಿ ನರೇಂದ್ರ ಮೋದಿ ಉತ್ತರ ನೀಡಿದರು.

1. ಕರ್ನಾಟಕದ ವಿಕಾಸವೇ ಭಾರತದ ವಿಕಾಸ

ಡಬಲ್‌ ಎಂಜಿನ್‌ ಸರ್ಕಾರದಿಂದ ರಾಜ್ಯದಲ್ಲಿ ದೊಡ್ಡ ಮಟ್ಟದ ಅಭಿವೃದ್ಧಿಯಾಗಿದೆ. ಬೆಂಗಳೂರು ಏರ್ಪೋರ್ಟ್ ಆಕರ್ಷಕವಾಗಿದೆ, ಬೆಂಗಳೂರಿನ ರೈಲ್ವೆ ನಿಲ್ದಾಣ ಸಹ ಏರ್ಪೋರ್ಟ್ ರೀತಿಯಲ್ಲೇ ನಿರ್ಮಾಣ ಆಗಿದೆ, ಶಿವಮೊಗ್ಗ, ದರ್ ಸೇರಿದಂತೆ ಹಲವು ಕಡೇ ವಿಮಾನ ನಿಲ್ದಾಣ ಆಗಿದೆ. ಇವೆಲ್ಲವೂ ಸಹ ಡಬಲ್ ಇಂಜಿನ್ ಸರ್ಕಾರದಿಂದ ಸಾಧ್ಯ ಆಗಿದೆ. ಕರ್ನಾಟಕದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಆಗುತ್ತಾ ಇದೆ. ಬೆಂಗಳೂರು -ಮೈಸೂರ್ ಹೆದ್ದಾರಿಯಂತೂ ಅದ್ಭುತವಾಗಿದೆ. ಮುಂದಿನ ಐದು ವರ್ಷಗಳಲ್ಲಿ ರಾಜ್ಯವು ಬಿಜೆಪಿ ಸರ್ಕಾರದ ಆಡಳಿತದಡಿ ಇನ್ನಷ್ಟು ಅಭಿವೃದ್ಧಿಯಾಗಲಿದೆ. ಕರ್ನಾಟಕದ ವಿಕಾಸವೇ ಭಾರತದ ವಿಕಾಸ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

2. ಕನ್ನಡಿಗ ಯುವಕರ ಕೋಡಿಂಗ್‌ ಮತ್ತು ಕುವೆಂಪು ಕವಿತೆ

ಕರ್ನಾಟದಕ ಸಾಂಸ್ಕೃತಿಕವಾಗಿಯೂ ಸಮೃದ್ಧವಾಗಿದೆ. ಕರ್ನಾಟಕ ಭಕ್ತಿ ಹಾಗೂ ಶಕ್ತಿಯ ಕೇಂದ್ರವಾಗಿದೆ. ನನ್ನ ಹಾಗೂ ಕರ್ನಾಟಕದ ಬಾಂಧವ್ಯ ಬಹಳ ಹಳೆಯದು ಎಂದು ಮೋದಿ ನೆನಪಿಸಿಕೊಂಡರು.ಸಿದ ಮೋದಿ.

ಕರ್ನಾಟಕದಲ್ಲಿ ಆಂಜನೇಯ ಹುಟ್ಟಿದ ಜಾಗ, ಸಂಪದ್ಭರಿತ ಭಕ್ತಿ ಭಾವನೆ ಹೊಂದಿರುವ ರಾಜ್ಯ ಎಂದು ಹೇಳಿದ ಮೋಡಿ, ಇಲ್ಲಿ ಕನಕದಾಸರ ವಾಣಿ ಇದೆ, ಕರ್ನಾಟಕದ ಜನ ಯುಜನತೆ ಕೋಡಿಂಗ್ ಕೂಡ ಮಾಡ್ತಾರೆ, ಕುವೆಂಪು ಅವರ ಕವಿತೆಯನ್ನೂ ಅರಾಧಿಸ್ತಾರೆ. ಕರ್ನಾಟಕ ಜನರು ದೇಶದ ಭವಿಷ್ಯದ ಜೊತೆ ಬೆಸೆದುಕೊಂಡಿದ್ದಾರೆ ಎಂದು ಹೇಳಿದರು ಮೋದಿ.

ಬೆಂಗಳೂರಿನ ಪ್ರಧಾನ ಕಚೇರಿಯಲ್ಲಿ ಬಿ.ಎಲ್‌. ಸಂತೋಷ್‌, ಶೋಭಾ ಕರಂದ್ಲಾಜೆ ಮತ್ತು ಇತರರು ಭಾಗವಹಿಸಿದ್ದರು.

3. ಭ್ರಷ್ಟಾಚಾರ ನಿಯಂತ್ರಣ ಅಭಿವೃದ್ಧಿಗೆ ವೇಗ

2014ರಲ್ಲಿ ದೇಶದಲ್ಲಿ ಬಿಜೆಪಿ ಸರ್ಕಾರ ಬಂದ ಬಳಿಕ ಭ್ರಷ್ಟಾಚಾರವನ್ನು ನಿಯಂತ್ರಿಸಲಾಗಿದೆ. ಅಭಿವೃದ್ಧಿಯ ವೇಗವನ್ನು ಹೆಚ್ಚಿಸಲಾಗಿದೆ. 2014ರವರೆಗೆ ದೇಶದಲ್ಲಿದ್ದ ಒಟ್ಟು ಏಮ್ಸ್ ಸಂಸ್ಥೆಗಳ ಸಂಖ್ಯೆ ಏಳು. ಈಗ ಮೂರು ಪಟ್ಟು ಹೆಚ್ಚು ಅಂದರೆ ಈಗ 20 ಏಮ್ಸ್ ಸಂಸ್ಥೆಗಳು ಇವೆ ಎಂದರು.

4. ಉಚಿತ ಯೋಜನೆ ದೇಶದ ಅಭಿವೃದ್ಧಿಗೆ ಮಾರಕ

ದಕ್ಷಿಣ ಕನ್ನಡದ ಅರುಣ್ ಸೇಠ್ ಎಂಬುವವರ ಪ್ರಶ್ನೆಗೆ ಉತ್ತರಿಸಿದ ಅವರು, ಕೆಲವರು ರಾಜಕಾರಣವನ್ನು ಭ್ರಷ್ಟಾಚಾರದ ಮಾರ್ಗ ಮಾಡಿಕೊಂಡಿದ್ದಾರೆ. ಇದು ದೇಶದ ಭವಿಷ್ಯ, ಮುಂದಿನ‌ ಪೀಳಿಗೆಗೆ ಮಾರಕ. ಉಚಿತ ಯೋಜನೆಗಳ ರಾಜಕಾರಣ ಭ್ರಷ್ಟಾಚಾರಕ್ಕೆ ದಾರಿ. ಉಚಿತ ಯೋಜನೆಗಳ ಮೂಲಕ ದೇಶ, ಯುವ ಸಮೂಹದ ಭವಿಷ್ಯವನ್ನು ಹಾಳು ಮಾಡಿದ್ದಾರೆ. ಈ ಬಗ್ಗೆ ಅವರಿಗೆ ಚಿಂತೆಯೇ ಇಲ್ಲ ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು. ಉಚಿತ ಘೋಷಣೆಗಳಿಂದ ಸರ್ಕಾರ ನಡೆಯಲ್ಲ ಎಂದು ಹೇಳಿದರು. ʻʻಬಿಜೆಪಿ ಈಥರದ ಶಾರ್ಟ್ ಕಟ್ ದಾರಿಯಲ್ಲಿ ಸಾಗಲ್ಲ. ನಮಗೆ ದೇಶದ ಭವಿಷ್ಯ ಬೇಕು. ನಾವು ಐದು ವರ್ಷ ಅಷ್ಟೇ ಆಡಳಿತ ಗುರಿ ಇಟ್ಟುಕೊಂಡಿಲ್ಲ. ನಮ್ಮ ಕನಸು ದೇಶದ ಭವಿಷ್ಯ ಉತ್ತಮ, ಸುರಕ್ಷಿತವಾಗಿಡುವುದು. ಮುಂದಿನ 25 ವರ್ಷ ದೇಶದ ಚಿತ್ರಣ ಬದಲಾಗಲಿದೆ, ಬದಲಾಗಬೇಕು ಎನ್ನುವುದು ನಮ್ಮ ಗುರಿʼʼ ಎಂದು ಹೇಳುವ ಮೂಲಕ ಮೋದಿ ಅವರು ಕಾಂಗ್ರೆಸ್ ನ ಉಚಿತ ಯೋಜನೆಗಳನ್ನು ಖಂಡಿಸಿದರು.

ಶಿವಮೊಗ್ಗದಲ್ಲಿ ನಡೆದ ಸಂವಾದ ಪ್ರಸಾರದಲ್ಲಿ ಬಿಜೆಪಿ ನಾಯಕರು.

5. ಕಾಂಗ್ರೆಸ್‌ನ ವಾರಂಟಿಯೇ ಮುಗಿದಿದೆ!

ಕಾಂಗ್ರೆಸ್‌ ಎಂದರೆ ಸುಳ್ಳಿನ ಗ್ಯಾರಂಟಿ, ಕಾಂಗ್ರೆಸ್‌ ಎಂದರೆ ಭ್ರಷ್ಟಾಚಾರದ ಗ್ಯಾರಂಟಿ ಎಂದು ಹೇಳಿದ ಮೋದಿ ಅವರು ಕಾಂಗ್ರೆಸ್‌ನವರು ಯಾವ ಗ್ಯಾರಂಟಿಯನ್ನೂ ನೀಡುವ ಸ್ಥಿತಿಯಲ್ಲಿಲ್ಲ, ಅದನ್ನು ಈಡೇರಿಸುವ ಸ್ಥಿತಿಯಲ್ಲಂತೂ ಮೊದಲೇ ಇಲ್ಲ ಎಂದು ಹೇಳಿದರು. ಕಾಂಗ್ರೆಸ್‌ ಪಕ್ಷದ ವಾರಂಟಿಯೇ ಎಕ್ಸ್‌ಪೈರಿ ಆಗಿದೆ. ಹಾಗಿರುವ ಅದು ಕೊಡುವ ಗ್ಯಾರಂಟಿಗಳಿಗೆ ಎಲ್ಲಿದೆ ವಾರಂಟಿ ಎಂದು ಕೇಳಿದರು.

ಕಾಂಗ್ರೆಸ್‌ ಪಕ್ಷ ರಾಜಸ್ಥಾನದಲ್ಲಿ ಹಲವಾರು ಭರವಸೆಗಳನ್ನು ಕೊಟ್ಟಿತ್ತು. ಅಲ್ಲಿ ಸರ್ಕಾರ ಬಂದು ನಾಲ್ಕು ವರ್ಷಗಳಾದವು, ಯಾವ ಭರವಸೆಯಾದರೂ ಈಡೇರಿದೆಯಾ? ಹಿಮಾಚಲ ಪ್ರದೇಶದಲ್ಲಿ ಸರ್ಕಾರ ಬಂದು ಎಷ್ಟು ಕಾಲವಾಯಿತು? ಅಲ್ಲಿನ ಭರವಸೆಗಳು ಈಡೇರಿದವಾ ಎಂದು ಪ್ರಶ್ನಿಸಿದರು. ಅಲ್ಲಿನ ಜನ ಕಾಂಗ್ರೆಸ್‌ನ ಭರವಸೆಗಳಿಂದ ಭ್ರಮ ನಿರಶನಗೊಂಡಿದ್ದಾರೆ ಎಂದು ಮೋದಿ ಹೇಳಿದರು.

6. ಬೂತ್‌ ವಿಜಯದಿಂದ ರಾಜ್ಯದ ವಿಜಯ

ಬಿಜೆಪಿ ಕಾರ್ಯಕರ್ತರು ಪಕ್ಷವನ್ನು ಬೂತ್‌ ಮಟ್ಟದಿಂದ ಗಟ್ಟಿಗೊಳಿಸಬೇಕು. ಆಗ ಪಕ್ಷದ ವಿಜಯಕ್ಕೆ ದೊಡ್ಡ ಬುನಾದಿ ಆಗುತ್ತದೆ ಎಂದ ಮೋದಿ ಅವರು ಬೂತ್‌ ಮಟ್ಟದಲ್ಲಿ ಮನೆ ಮನೆಗೆ ಭೇಟಿ ನೀಡಿ ಆತ್ಮೀಯತೆ ಬೆಳೆಸಿಕೊಳ್ಳುವ ವಿಧಾನವನ್ನು ವಿವರಿಸಿದರು.

10 ಪುರುಷರು ಮತ್ತು 10 ಮಹಿಳೆಯರ ತಂಡವೊಂದನ್ನು ಕಟ್ಟಿಕೊಳ್ಳಿ. ನಿಮ್ಮ ಬಳಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳ ಸಮಗ್ರ ಮಾಹಿತಿ ಇರಲಿ. ಅದು ನಿಮ್ಮ ಮೊಬೈಲ್‌ನಲ್ಲಿರಲಿ, ಅದು ನಿಮ್ಮ ಡೈರಿಯಲ್ಲಿರಲಿ, ಅದಕ್ಕಿಂತಲೂ ಹೆಚ್ಚಾಗಿ ನಿಮ್ಮ ತಲೆಯಲ್ಲಿರಲಿ. ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಿಳೆಯರು, ಯುವಕರು, ಹಿರಿಯರು, ಬೇರೆ ಬೇರೆ ಉದ್ಯೋಗಿಗಳು, ಬೇರೆ ಬೇರೆ ವೃತ್ತಿಪರರಿಗೆ ಏನೇನು ಸಹಾಯ ಮಾಡಿದೆ ಎನ್ನುವುದನ್ನು ಸ್ಪಷ್ಟವಾಗಿ ದಾಖಲಿಸಿಕೊಳ್ಳಿ.

ನೀವು ಒಬ್ಬ ಪುರುಷ ಮತ್ತು ಒಬ್ಬ ಮಹಿಳೆ ಜತೆಯಾಗಿ ಪ್ರತಿಯೊಂದು ಮನೆಗೂ ಹೋಗಿ. ಒಂದೊಂದು ಮನೆಯಲ್ಲಿ ಕನಿಷ್ಠ ಒಂದು ಗಂಟೆಯಾದರೂ ಕುಳಿತುಕೊಳ್ಳಿ. ಅವರ ಜತೆ ಅವರ ಕುಟುಂಬ, ಸಮಸ್ಯೆಗಳು, ಸಾಧನೆಗಳ ಬಗ್ಗೆ ಮಾತನಾಡಿ. ಅಲ್ಲಿನ ಮಕ್ಕಳನ್ನು ಪ್ರೀತಿಸಿ. ನೀವು ಅವರ ಕುಟುಂಬಕ್ಕೆ ಸರ್ಕಾರ ಏನು ಮಾಡಬಹುದು ಎನ್ನುವುದನ್ನು ತಿಳಿಸಿ ಹೇಳಿ. ನೀವು ಒಂದೊಂದು ಮನೆಯನ್ನು ಗೆಲ್ಲುವ ಮೂಲಕ ಬೂತ್‌ನ್ನು ಗೆಲ್ಲುವುದು ಕಷ್ಟವೇನಲ್ಲ- ಎಂದು ಮೋದಿ ವಿವರಿಸಿದರು.

ಇದನ್ನೂ ಓದಿ : Modi Virtual samvada: ಕಾಂಗ್ರೆಸ್‌ನ ವಾರಂಟಿಯೇ ಮುಗಿದಿದೆ, ಇನ್ನು ಗ್ಯಾರಂಟಿ ಕಥೆ ಏನು?; ಮೋದಿ ಪ್ರಶ್ನೆ

Exit mobile version